ದಿಟ್ಟ ಹೆಜ್ಜೆ ಇಡಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಆಡಳಿತದ ಜವಾಬ್ದಾರಿ­ಯನ್ನು ಮತ್ತೆ ವಹಿಸಿಕೊಂಡಿರುವ ಜಗಮೋಹನ್‌ ದಾಲ್ಮಿಯ ಅವರು ‘ಕಳಂಕಿತ’ ಮಂಡಳಿಯ ಶುದ್ಧೀಕರಣ ಪ್ರಕ್ರಿಯೆಗೆ ಒತ್ತು ನೀಡಬಹು­ದೆಂಬ ನಿರೀಕ್ಷೆ ಇದೆ. ಐಪಿಎಲ್‌ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣ­ದಿಂದಾಗಿ ಈ ನಾಡಿನ ಕ್ರಿಕೆಟ್‌ ಅಭಿಮಾನಿಗಳು ಆಟದ ಬಗ್ಗೆಯೇ ನಂಬಿಕೆ ಕಳೆದುಕೊಳ್ಳುವಂತಹ ಸ್ಥಿತಿ ಬಂದಿದೆ. ಇಂತಹ ಸಂದಿಗ್ಧದಲ್ಲಿ ಸ್ವತಃ ಸುಪ್ರೀಂ ಕೋರ್ಟ್‌ ಮುತುವರ್ಜಿ ವಹಿಸಿ, ಬಿಸಿಸಿಐ ಆಡಳಿತವನ್ನು ಪರಿಶುದ್ಧ­ಗೊಳಿ­ಸುವ ನಿಟ್ಟಿನಲ್ಲಿ ದಿಟ್ಟ ತೀರ್ಮಾನಗಳನ್ನು ತೆಗೆದುಕೊಂಡಿತು. ಹೀಗಾಗಿ ಐಪಿಎಲ್‌ ಹಗರಣದ ಕಳಂಕವನ್ನು ಮೈಗೆ ಅಂಟಿಸಿಕೊಂಡಿರುವ ಬಿಸಿಸಿಐನ ಹಿಂದಿನ ಅಧ್ಯಕ್ಷ ಎನ್‌.ಶ್ರೀನಿವಾಸನ್‌ ಈ ಸಲ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸು­ವಂತಿರಲಿಲ್ಲ. ಬಿಸಿಸಿಐ ನಿಯಮದ ಅನ್ವಯ ಪೂರ್ವ ವಲಯ­ದವರೇ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯ ಹೆಸರನ್ನು ಸೂಚಿಸಬೇಕಿತ್ತು. ಇದರ ಲಾಭವನ್ನು ಸಹಜವಾಗಿಯೇ ಬಂಗಾಳ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ದಾಲ್ಮಿಯ ಪಡೆದುಕೊಂಡರು. ಕಳೆದ ಎರಡು ವರ್ಷಗಳಲ್ಲಿ ಬಿಸಿಸಿಐನಲ್ಲಿ ನಡೆದಿದ್ದ ಏಳು­ಬೀಳು­ಗಳ ರಾಜಕಾರಣದಲ್ಲಿ ದಾಲ್ಮಿಯ ಎಚ್ಚರಿಕೆಯ ಹೆಜ್ಜೆಗಳನ್ನಿ­ಡುತ್ತಾ ಬಂದವರು. ಶ್ರೀನಿವಾಸನ್‌ ಬೆಂಬಲಕ್ಕೆ ನಿಂತ ಅವರ ಲೆಕ್ಕಾಚಾರಕ್ಕೆ ಇದೀಗ ಫಲ ಸಿಕ್ಕಿದೆ. ಈ ಮೂಲಕ ಶರದ್‌ ಪವಾರ್‌ ನೇತೃತ್ವದ ತಮ್ಮ ವಿರೋಧಿ ಬಣದ ಮಹದಾಸೆಗೆ ತಣ್ಣೀರು ಎರಚಿದ್ದಾರೆ. ಇದೀಗ ನಡೆದ ಚುನಾವಣೆ­ಯಲ್ಲಿ ಬಹುತೇಕ ಶ್ರೀನಿವಾಸನ್‌ ಬಣದವರೇ ಆಯ್ಕೆಯಾಗಿ­ರು­ವುದು ನಿಜ. ವೃತ್ತಿ ರಾಜಕಾರಣಿ ಪವಾರ್‌ ಅವರ ಬಣ ಇಲ್ಲಿ ದುರ್ಬಲ­ಗೊಂಡಿರು­ವುದರ ಜತೆಗೆ, ಕೋರ್ಟ್‌ ಶ್ರೀನಿವಾಸನ್‌ ಅವರ ಕೈಯನ್ನೂ ಕಟ್ಟಿ ಹಾಕಿದೆ. ಹೀಗಾಗಿ, ದಾಲ್ಮಿಯ ಅವರು ಬಿಸಿಸಿಐನ ಆಡಳಿತವನ್ನು ಪಾರದರ್ಶಕಗೊಳಿಸುವುದಕ್ಕೆ ಮುಕ್ತ ಅವಕಾಶಗಳಿವೆ. ಈ ದಿಸೆಯಲ್ಲಿ ಅವರು ಹೊಸ ಹೆಜ್ಜೆಗಳನ್ನಿರಿಸಿದರೆ ಅದು ಚಾರಿತ್ರಿಕ ಮಹತ್ವ ಪಡೆದುಕೊಳ್ಳುತ್ತದೆ. ಕೋಲ್ಕತ್ತದ ಶ್ರೀಮಂತ ಉದ್ಯಮಿ ದಾಲ್ಮಿಯ, ಕ್ರಿಕೆಟ್‌ ಆಡಳಿತದಲ್ಲಿ ನುರಿತವರು. 1979ರಷ್ಟು ಹಿಂದೆಯೇ ಬಿಸಿಸಿಐ ಆಡಳಿತ ಮಂಡಳಿಯೊಳಗೆ ಹೆಜ್ಜೆ ಇಟ್ಟ ಇವರು, 1983ರಲ್ಲಿ ಮಂಡಳಿಯ ಖಜಾಂಚಿಯಾಗಿದ್ದರು. ಪಶ್ಚಿಮ ಬಂಗಾಳದ ಕ್ರಿಕೆಟ್‌ ಆಡಳಿತದ ಮೇಲೆ ದೀರ್ಘಕಾಲದ ಹಿಡಿತ ಹೊಂದಿರುವ ಇವರು ಆ ಭದ್ರಬುನಾದಿಯ ಮೇಲೆ ನಿಂತು ಬಿಸಿಸಿಐನ ಅಧ್ಯಕ್ಷ­ರಾ­ಗಿಯೂ ಕಾರ್ಯ ನಿರ್ವಹಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಅಧ್ಯಕ್ಷ ಪಟ್ಟಕ್ಕೇರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯೂ ಇವರ­ದಾಗಿದೆ. ವಿಶ್ವ ಕ್ರಿಕೆಟ್‌ ಆಡಳಿತದಲ್ಲಿ ದಕ್ಷತೆಯಿಂದ ಕಾರ್ಯ­ನಿರ್ವಹಿ­ಸಿದ್ದ ಇವರು ಭಾರತದ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಕ್ರಿಕೆಟ್‌ ಆಡಳಿತದೊಳಗೆ ಶರದ್‌ ಪವಾರ್‌ ಪ್ರವೇಶದ ನಂತರ ದಾಲ್ಮಿಯ ಸಂಕಷ್ಟಕ್ಕೆ ಸಿಲುಕಿದರು. ಪವಾರ್‌ ರಾಜಕೀಯ ಪಟ್ಟು­ಗಳಿಗೆ ಸಿಲುಕಿದ ಇವರು, ಸಂಪೂರ್ಣ ಮೂಲೆಗುಂಪಾದಂತೆ ಕಂಡುಬಂದರು. ಇದೀಗ ದಾಲ್ಮಿಯ ಅವರು ಫೀನಿಕ್ಸ್‌ನಂತೆ ಎದ್ದು ಬಂದಿದ್ದಾರೆ. ಪವಾರ್‌ ಪಟ್ಟುಗಳಿಗೆ ತಿರುಗೇಟು ನೀಡಿದ್ದಾರೆ. ನಿಧಾನವಾಗಿ ಶ್ರೀನಿವಾಸನ್‌ ಹಿಡಿತ­ವನ್ನೂ ಸಡಿಲಗೊಳಿಸಿ ಎಲ್ಲವನ್ನೂ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಜಾಣ್ಮೆ ದಾಲ್ಮಿಯ ಅವರಿಗಿದೆ. ಇಂತಹ ಸುವರ್ಣಾವಕಾಶದಲ್ಲಿ ಅವರು ಬಿಸಿಸಿಐಗೆ ಅಂಟಿದ ಕೊಳೆಯನ್ನು ತೊಳೆದು ಜನರಲ್ಲಿ ಮತ್ತೆ ನಂಬಿಕೆಯ ಹೆಮ್ಮರವನ್ನು ಬೆಳೆಸುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.