ವೃತ್ತಿಧರ್ಮ ಪಾಲಿಸಿ ಖಾಸಗಿ ಔಷಧ ಕಂಪೆನಿಯೊಂದರ ಹಣದಲ್ಲಿ ವಿದೇಶ ಪ್ರವಾಸ ಮಾಡಿ ಬಂದ ಮಧ್ಯಪ್ರದೇಶದ 11 ವೈದ್ಯರ ಪರವಾನಗಿಯನ್ನು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಆರು ತಿಂಗಳ ಮಟ್ಟಿಗೆ ಅಮಾ­ನತು ಮಾಡಿದೆ. ಈ ಅವಧಿಯಲ್ಲಿ ಅವರು ಯಾವುದೇ ರೀತಿಯಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಔಷಧ ತಯಾರಕರ ಪ್ರಲೋಭನೆಗೆ ಒಳಗಾದ ವೈದ್ಯರಿಗೆ ಕಠೋರ ಶಿಕ್ಷೆ ವಿಧಿಸಿದ ವಿರಳಾತಿ ವಿರಳ ಪ್ರಕರಣ ಇದು. ವೃತ್ತಿಧರ್ಮ ಮೀರಿ ನಡೆದವರಿಗೆ ಮಂಡಳಿ ಈ ಮೂಲಕ ಸರಿಯಾಗಿಯೇ ಚುರುಕು ಮುಟ್ಟಿಸಿದೆ. ಇಡೀ ವೈದ್ಯ ಸಮು­ದಾಯಕ್ಕೆ ಇದೊಂದು ಎಚ್ಚರಿಕೆಯ ಗಂಟೆ. ತನ್ನ ಔಷಧಗಳೇ ಹೆಚ್ಚು ಖರ್ಚಾ­ಗುವಂತೆ ಮಾಡಲು ವೈದ್ಯರಿಗೆ ವಿದೇಶ ಪ್ರವಾಸದ ಗಾಳ ಹಾಕಿದ್ದ ಇಂಟಾಸ್ ಫಾರ್ಮಾಗೂ ಬಿಸಿ ತಟ್ಟಿದರೆ ಉಳಿದವರಾದರೂ ಎಚ್ಚೆತ್ತುಕೊಂಡಾರು. ವೈದ್ಯರು­–ಔಷಧ ತಯಾರಕರ ಅಪವಿತ್ರ ಮೈತ್ರಿ ಮುರಿಯಲು ಇಂಥ ಕ್ರಮದ ಅಗತ್ಯವಿತ್ತು. ವೈದ್ಯರ ಅನೈತಿಕ ನಡೆಯ ಬಗ್ಗೆ ಮಂಡಳಿಗೆ ದೂರು ಸಲ್ಲಿಸಿದ ಸ್ವಯಂಸೇವಾ ಸಂಸ್ಥೆ ‘ಸ್ವಾಸ್ತ್ಯ ಅಧಿಕಾರ ಮಂಚ್’ ನಡೆಸಿದ ಅವಿರತ ಹೋರಾಟಕ್ಕೆ ಫಲ ಸಿಕ್ಕಿರುವುದು ಗಮನಾರ್ಹ. ‘ವೈದ್ಯೊ ನಾರಾಯಣೊ ಹರಿ’ ಎಂದು ವೈದ್ಯರನ್ನು ದೇವರ ಸಮಾನ­ವಾಗಿ ಕಾಣುತ್ತ ಬಂದ ಪರಂಪರೆ ನಮ್ಮದು. ಇಂಥ ಅಪರೂಪದ ಗೌರವಕ್ಕೆ ಪಾತ್ರ­ರಾದ ವೈದ್ಯರು ಪಾಲಿಸಬೇಕಾದ ವೃತ್ತಿ ಧರ್ಮದ ಬಗ್ಗೆ ಚರ್ಚೆಗಳು ಬಹಳ ಹಿಂದಿನಿಂದಲೂ ನಡೆಯುತ್ತಲೇ ಬಂದಿವೆ. ಅದಕ್ಕಾಗಿಯೇ ಎಂಸಿಐ ತನ್ನ ವೃತ್ತಿ ಬಾಂಧವರಿಗೆ ಶಿಷ್ಟಾಚಾರ ಮತ್ತು ನೀತಿಸಂಹಿತೆ ರೂಪಿಸಿದೆ. ಇದರ ಮುಖ್ಯ­ವಾದ ಅಂಶ ಎಂದರೆ, ‘ಔಷಧ ಕಂಪೆನಿಗಳ ಉಡುಗೊರೆ, ಆತಿಥ್ಯ ಸ್ವೀಕರಿ­ಸ­­ಬಾರದು, ಅವುಗಳ ಖರ್ಚಿನಲ್ಲಿ ದೇಶ- ವಿದೇಶ ಪ್ರವಾಸಕ್ಕೆ ಹೋಗ­ಬಾರದು’. ಏಕೆಂದರೆ, ಇವೆಲ್ಲ ತಾವು ತಯಾರಿಸಿದ ಔಷಧಗಳನ್ನು ಹೆಚ್ಚು ಹೆಚ್ಚು ಮಾರಾಟ­ವಾಗುವಂತೆ ಮಾಡಲು, ಆ ಮೂಲಕ ಅಪಾರ ಲಾಭ ದೋಚಲು ವೈದ್ಯರ ಮೇಲೆ ಕಂಪೆನಿಗಳು ಹೂಡುವ ಬಂಡವಾಳ ಇದ್ದಂತೆ. ‘ಔಷಧ ತಯಾರಕರ ಮುಲಾಜಿಗೆ ವೈದ್ಯರೇನಾದರೂ ಒಳಗಾದರೆ, ಪ್ರತಿಫಲ­ವಾಗಿ ಅವಕ್ಕೆ ಲಾಭ ಮಾಡಿಕೊಡುವತ್ತಲೇ ಹೆಚ್ಚು ಆಸಕ್ತರಾಗುತ್ತಾರೆ, ಚಿಕಿತ್ಸೆಗೆ ಬರುವ ಅಮಾಯಕ ರೋಗಿಗಳಿಗೆ ಅಗತ್ಯ ಇಲ್ಲದೇ ಇದ್ದರೂ ಇದೇ ಕಂಪೆನಿಯ ಔಷಧಗಳನ್ನೇ ಬರೆದುಕೊಡುತ್ತಾರೆ’ ಎನ್ನುವ ಆತಂಕ, ಆರೋಪ­ಗಳು ಇದ್ದೇ ಇವೆ. ದುರಾಸೆ, ಧನದಾಹಕ್ಕಿಂತಲೂ ಇದು ಹೆಚ್ಚು ಅಪಾಯ­ಕಾರಿ. ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಟ್ರಾನ್ಸ್ ಪರೆನ್ಸಿ ಇಂಟರ್‌­ನ್ಯಾಷನಲ್ ವರದಿಯ ಪ್ರಕಾರ ‘ಭಾರತದಲ್ಲಿ ಪೊಲೀಸ್ ವ್ಯವಸ್ಥೆ­ಯನ್ನು ಬಿಟ್ಟರೆ ಅತ್ಯಂತ ಭ್ರಷ್ಟಗೊಂಡಿರುವ ಕ್ಷೇತ್ರ ವೈದ್ಯಕೀಯ’. ನಮ್ಮ ಸುತ್ತಲಿನ ವಿದ್ಯಮಾನಗಳನ್ನು ನೋಡಿದರೆ ಇದರಲ್ಲೇನೂ ಉತ್ಪ್ರೇಕ್ಷೆ ಕಾಣು­ತ್ತಿಲ್ಲ. ಹಾಗೆಂದು ಎಲ್ಲ ವೈದ್ಯರೂ ಭ್ರಷ್ಟರಲ್ಲ. ಮಾನವೀಯತೆಯ ತುಡಿತ, ಸೇವಾ ಮನೋಭಾವ ಉಳ್ಳವರು ಬೇಕಾದಷ್ಟಿದ್ದಾರೆ. ಅವರಿಂದಲೇ ವೈದ್ಯ ವೃತ್ತಿಯ ಘನತೆ, ಗೌರವ ಉಳಿದುಕೊಂಡಿದೆ. ವೃತ್ತಿಯ ಶುದ್ಧೀಕರಣಕ್ಕೆ ಈಗ ವೈದ್ಯ ವಲ­ಯವೇ ಮುಂದಾಗಬೇಕು. ನೀತಿ ಸಂಹಿತೆಯನ್ನು ಕಟ್ಟುನಿಟ್ಟು ಪಾಲಿಸ­ಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.