ಆರ್ಥಿಕ ಸ್ವಾಯತ್ತತೆಗೆ ಇಂಬು ಕೇಂದ್ರ ಸರ್ಕಾರದ ತೆರಿಗೆ­ ಹಣದಲ್ಲಿ ರಾಜ್ಯಗಳಿಗೆ ನೀಡುವ ಪಾಲನ್ನು ದಾಖಲೆಯ ಶೇ 10ರಷ್ಟು (ಶೇ 32­ರಿಂದ ಶೇ 42ಕ್ಕೆ) ಹೆಚ್ಚಿಸುವ, 14ನೇ ಹಣಕಾಸು ಆಯೋಗದ ಶಿಫಾರಸನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಂಗೀಕರಿಸಿದೆ. ರಾಜ್ಯಗಳ ಪಾಲಿಗೆ ಇದು ಬಹು ಮುಖ್ಯ ಕೊಡುಗೆ­. ಹಿಂದೆಲ್ಲಾ ಇಂತಹ ಏರಿಕೆಗೆ ಹಣಕಾಸು ಆಯೋಗ ಶಿಫಾರಸು ಮಾಡಿದಾಗ ಅದು ಕೇವಲ ಶೇ 1–2ರ ಆಸುಪಾಸಿನಲ್ಲಿರುತ್ತಿತ್ತು. ಒಂದೇ ಬಾರಿಗೆ ಇಷ್ಟು ಪ್ರಮಾಣದ ಏರಿಕೆಯಿಂದ ರಾಜ್ಯಗಳ ಆರ್ಥಿಕ ಸ್ವಾಯತ್ತತೆ ಹೆಚ್ಚಾಗಲಿದೆ. ರಾಜ್ಯಗಳ ಅಭಿವೃದ್ಧಿಗೆ ಅಗತ್ಯ ಸ್ವಾತಂತ್ರ್ಯ ಹಾಗೂ ಅವಕಾಶ ನೀಡಿದಂತಾಗಿದೆ. ಕೇಂದ್ರೀಕೃತ ಯೋಜನೆ ವ್ಯವಸ್ಥೆಗೆ ವಿದಾಯ ಹೇಳುವಂತಹ ಈ ಕ್ರಮ ಬಹುಮುಖ್ಯ ಪರಿವರ್ತನೆಗೆ ಕಾರಣವಾಗುವಂತ­ಹದ್ದು. ದೀರ್ಘಾವಧಿ ಅಭಿವೃದ್ಧಿಯಲ್ಲಿ ರಾಜ್ಯಗಳನ್ನು ಸಹವರ್ತಿಗಳಾಗಿ ಪರಿ­ಗಣಿಸುವ ಭರವಸೆಯನ್ನು ಮೋದಿ ನೇತೃತ್ವದ ಸರ್ಕಾರ ಈಡೇರಿಸಿ­ದಂತಾ­ಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್‌ ವೈ.ವಿ. ರೆಡ್ಡಿ ನೇತೃತ್ವದ ಹಣಕಾಸು ಆಯೋಗದ ಈ ಶಿಫಾರಸುಗಳು ಐದು ವರ್ಷ ಜಾರಿ­ಯಲ್ಲಿರುತ್ತವೆ. ಕೇಂದ್ರ­ದಿಂದ ವಿತ್ತೀಯ ಸ್ವಾತಂತ್ರ್ಯ ಪಡೆಯಲಿ­ರುವ ರಾಜ್ಯ ಸರ್ಕಾರಗಳು, ತೆರಿಗೆಯ ಪಾಲು ಹೆಚ್ಚಳದಿಂದ ಸಿಗುವ ಹೆಚ್ಚು­ವರಿ ಹಣವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ರೂಪಿಸುವ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳ­ಬಹು­ದಾಗಿದೆ. ಇದು ‘ಸಹಕಾರ ಒಕ್ಕೂಟ ವ್ಯವಸ್ಥೆ’ಯ ಹೊಸ ಚಿಂತ­ನೆಗೆ ಪೂರಕ­ವಾಗಿದೆ. 2015–16ನೇ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ ಹೆಚ್ಚು­ವರಿಯಾಗಿ ₹ 1.78 ಲಕ್ಷ ಕೋಟಿ ಮತ್ತು 5 ವರ್ಷಗಳಲ್ಲಿ ₹ 39.48 ಲಕ್ಷ ಕೋಟಿ ಅನುದಾನ ದೊರೆಯಲಿದೆ. ಪಂಚಾಯತ್‌ ಮತ್ತು ಸ್ಥಳೀಯ ಪೌರ ಸಂಸ್ಥೆಗಳಿಗೂ ಮುಂದಿನ 5 ವರ್ಷಗಳ ಅವಧಿಗೆ ₹ 2.88 ಲಕ್ಷ ಕೋಟಿಗಳಷ್ಟು ಅನುದಾನ ನಿಗದಿ ಮಾಡಿರುವುದೂ ಅವುಗಳ ಬಲವ­ರ್ಧನೆಗೆ ನೆರವಾಗಲಿದೆ. ಹಣಕಾಸು ಆಯೋಗದ ಈ ಶಿಫಾರಸು­ಗಳ ಫಲವಾಗಿ ಕೇಂದ್ರ ಸರ್ಕಾರದ ಹಲವಾರು ಸಚಿವಾಲ­ಯಗಳು ಇನ್ನು ಮುಂದೆ ತಮ್ಮ ಪ್ರಸ್ತುತತೆ ಮತ್ತು ಪ್ರಭಾವಕ್ಕೆ ಎರವಾಗ­ಲಿವೆ. ಜತೆಗೆ ಕೇಂದ್ರ ಸರ್ಕಾರದ ಕೆಲ ಯೋಜನೆಗಳನ್ನೂ ಕೈಬಿಡಬೇಕಾಗಬಹುದು. ರಾಷ್ಟ್ರೀಯ ಕೃಷಿ ವಿಕಾಸ್‌ ಯೋಜನೆಯಂತಹ ರಾಷ್ಟ್ರೀಯ ಮಹತ್ವದ ಯೋಜನೆಗಳನ್ನು ರಾಜ್ಯಗಳ ಸಹಕಾರದಲ್ಲಿ ಕಾರ್ಯಗತ­ಗೊಳಿಸಲು ಕೆಲವು ಸಮಸ್ಯೆ­ಗಳನ್ನು ಕೇಂದ್ರ ಎದುರಿಸಬೇಕಾ­ಗ­ಬಹುದು. ಇಂತಹ ಸಮಸ್ಯೆ­ಗಳ ಹೊರತಾಗಿಯೂ ಒಟ್ಟಾರೆ ವಿತ್ತೀಯ ಗುಣ­ಮಟ್ಟ ಸುಧಾರಿಸಲಿ­ರುವುದು ದೇಶಿ ಅರ್ಥ ವ್ಯವಸ್ಥೆಯ ಪಾಲಿಗೆ ಒಳ್ಳೆಯ ಬೆಳವಣಿಗೆ­ಯಾಗಲಿದೆ. ಹೆಚ್ಚುವರಿ ಅನುದಾನ ಪಡೆಯುವುದರಿಂದ ರಾಜ್ಯ­ಗಳ ಹೊಣೆ­ಗಾರಿಕೆಯು ಸಹಜವಾಗಿಯೇ ಇನ್ನಷ್ಟು ಹೆಚ್ಚಲಿದೆ. ಸಂಪನ್ಮೂಲ­ಗಳ ಸರಿಯಾದ ಬಳಕೆಯ ಸವಾಲು ರಾಜ್ಯಗಳ ಮೇಲಿರುತ್ತದೆ. ಇನ್ನು ಮುಂದೆ ರಾಜ್ಯಗಳು ಕೇಂದ್ರದ ಮರ್ಜಿಗೆ ಕಾಯಬೇಕಾದ, ಅನುದಾನಕ್ಕೆ ಅವಲಂಬಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ತಮ್ಮ ಅಗತ್ಯಗಳಿಗೆ ಪೂರಕವಾದ ಯೋಜನೆ­ಗಳನ್ನು ರೂಪಿಸಿ, ಮೇಲ್ವಿಚಾರಣೆ ಮಾಡಿ, ಕಾರ್ಯ­ಗತ­ಗೊಳಿಸುವ ಹೊಣೆ­ಯನ್ನು ರಾಜ್ಯಗಳೇ ಸಮರ್ಥವಾಗಿ ನಿಭಾಯಿಸು­ವಂತಾದರೆ ಮಾತ್ರ ಹಣ­ಕಾಸು ಆಯೋಗದ ‘ತೆರಿಗೆ ವಿಕೇಂದ್ರೀ­ಕರಣ ಮತ್ತು ವಿತ್ತೀಯ ಸ್ವಾಯ­ತ್ತತೆ’ಯ ಆಶಯಗಳು ಈಡೇರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.