ಪ್ರಯಾಣಿಕಸ್ನೇಹಿ ‘ಕಾಯಕಲ್ಪ’ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ಮೊದಲ ರೈಲ್ವೆ ಬಜೆಟ್‌ನಲ್ಲಿ ಯಾವುದೇ ಹೊಸ ರೈಲುಗಳನ್ನು ಘೋಷಿಸಿಲ್ಲ. ರಾಜಕೀಯ ಕಾರಣ­ಗಳಿಗಾಗಿ ಹೊಸ ರೈಲುಗಳನ್ನು ಪ್ರಕಟಿಸುವ ಪರಿಪಾಠದಿಂದ ಈ ಬಾರಿ ಹೊರಬಂದಿರುವುದು ಭಿನ್ನವಾದ ನಡೆ. ಜೊತೆಗೆ ರೈಲು ಪ್ರಯಾಣ ದರದಲ್ಲಿ ಏರಿಕೆ ಇಲ್ಲ. ಆದರೆ ಪ್ರಯಾಣಿಕರ ಸೌಕರ್ಯಕ್ಕಾಗಿ ಅನೇಕ ಯೋಜನೆಗಳನ್ನು ಪ್ರಕಟಿಸಿರುವುದು ಈ ಬಜೆಟ್‌ನ ಮುಖ್ಯ ತಿರುಳು. ಪ್ರಧಾನಿ ನರೇಂದ್ರ ಮೋದಿಯವರ ಅಚ್ಚುಮೆಚ್ಚಿನ ಯೋಜನೆಗಳಾದ ‘ಸ್ವಚ್ಛ ಭಾರತ’, ‘ಡಿಜಿಟಲ್ ಇಂಡಿಯಾ’ ಹಾಗೂ ‘ಭಾರತದಲ್ಲೇ ತಯಾರಿಸಿ’ ಯೋಜನೆಗಳ ಆಶಯ ಈ ಬಜೆಟ್‌ನಲ್ಲೂ ಅನುರಣನಗೊಂಡಿದೆ. ಮೂಲ ಸೌಕರ್ಯಗಳು ಹಾಗೂ ಸುರಕ್ಷತೆಗೆ ಒತ್ತು ನೀಡಲಾಗಿದೆ. ಒಂಬತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕಾರ್ಯನಿರ್ವಹಣಾ ವೆಚ್ಚ ಅನುಪಾತ ಕಡಿಮೆ­ಯಾಗಲಿರುವುದು ಮತ್ತೊಂದು ಮುಖ್ಯ ಅಂಶ. 2014–15ರಲ್ಲಿ ಶೇ 92.5 ರಷ್ಟಿದ್ದ ಈ ಅನುಪಾತವನ್ನು ಶೇ 88.5ಕ್ಕೆ ಇಳಿಸುವ ಗುರಿ ಹೊಂದಲಾಗಿದೆ. ರಾಜಕೀಯಕ್ಕೆ ಬರುವ ಮೊದಲು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದ ಸಚಿವ ಸುರೇಶ್ ಪ್ರಭು ಅವರು 4 ಗುರಿಗಳನ್ನು 5 ಚಾಲಕಶಕ್ತಿಗಳ ಮೂಲಕ ಸಾಧಿಸುವ ವಿಶ್ವಾಸವನ್ನು ಹೊಂದಿದ್ದಾರೆ. ಗ್ರಾಹಕ ಸೌಲಭ್ಯಗಳ ನಿರಂತರ ಸುಧಾರಣೆ, ಸುರಕ್ಷತೆ, ವಿಸ್ತರಣೆ ಹಾಗೂ ಸ್ವಯಂ ನಿರ್ವಹಣೆಯ ಗುರಿಗಳನ್ನು ಚಾಲಕ ಶಕ್ತಿಗಳಾದ ಯೋಜನೆ, ಸಹಭಾಗಿತ್ವ, ಹೆಚ್ಚುವರಿ ಸಂಪನ್ಮೂಲ, ನಿರ್ವಹಣೆ ವಿಧಾನಗಳ ಪುನಶ್ಚೇತನ ಹಾಗೂ ಉನ್ನತ ಗುಣಮಟ್ಟದ ಆಡಳಿತ, ಪಾರದರ್ಶಕತೆಯ ಮೂಲಕ ಸಾಧನೆಗೆ ಪ್ರಯತ್ನಿಸುವ ದೃಷ್ಟಿಯನ್ನು ಮುಂದಿಟ್ಟಿದ್ದಾರೆ. ರಾಜಕೀಯ ಹೇಳಿಕೆಗಳಿಗೆ ಹೊರತಾದ ಈ ನುಡಿಗಟ್ಟುಗಳನ್ನು ವಾಸ್ತವದಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಳಿಸಲಾಗುತ್ತದೆ ಎಂಬುದು ಮುಂದಿನ ಸವಾಲು. ರೈಲ್ವೆ, ಭಾರತೀಯರ ದಿನನಿತ್ಯದ ಬದುಕಿನ ಜೀವನಾಡಿ. ಉದ್ಯೋಗ ಅವಕಾಶ ಹಾಗೂ ಪರಿಸರ ಸಂರಕ್ಷಣೆ ಕಾರಣಗಳಿಗಾಗಿ ರೈಲಿನಲ್ಲಿ ಹಣ ಹೂಡಿಕೆ ಮುಖ್ಯವಾದುದು. ರಾಷ್ಟ್ರದಲ್ಲಿ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ 2.3 ಕೋಟಿ ಇದೆ. ಇದನ್ನು 3 ಕೋಟಿಗೇರಿಸುವ ಗುರಿ ಸರಿಯಾದುದು. ಇದಕ್ಕಾಗಿ ಭಾರತೀಯ ರೈಲ್ವೆಯ ‘ಪರಿವರ್ತನೆ’ಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ರೈಲ್ವೆಸೇವೆ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಜಾಗತಿಕ ಮಾನದಂಡಗಳಿಗೆ ಅನುಸಾರವಾಗಿ ಆಧುನೀಕರಿಸುವ ದೀರ್ಘಾವಧಿ ದೃಷ್ಟಿಕೋನ ಸ್ವಾಗತಾರ್ಹ. ಅಪಘಾತಗಳ ತಡೆಗೆ ಐದು ವರ್ಷಗಳ ಸುರಕ್ಷತಾ ಯೋಜನೆ ಇದೆ. 9 ಅತಿವೇಗದ ರೈಲುಗಳು, 400 ರೈಲು ನಿಲ್ದಾಣಗಳಲ್ಲಿ ವೈ -–ಫೈ ಸೌಲಭ್ಯದ ಜೊತೆಗೆ ರೈಲುಗಳಲ್ಲಿನ ಪ್ರಯಾಣದ ಅವಧಿಯನ್ನು ಮುಂದಿನ ಎರಡು ವರ್ಷಗಳಲ್ಲಿ ಶೇ 20ರಷ್ಟು ಕಡಿಮೆಗೊಳಿಸುವ ಗುರಿಯಿದೆ. ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ರೋಗಿಗಳಿಗೆ ಆಧುನಿಕ ಸೌಲಭ್ಯ ಕಲ್ಪಿಸುವ ಯೋಜನೆಗಳಿವೆ. ಹೊಸದಾಗಿ ತಯಾರಿಸುವ ಎಲ್ಲಾ ನೂತನ ಬೋಗಿಗಳಲ್ಲಿ ಬ್ರೈಲ್ ತಂತ್ರಜ್ಞಾನ ಅಳವಡಿಕೆ ಪ್ರಸ್ತಾವ ಮುಖ್ಯವಾದುದು. ತಂತ್ರಜ್ಞಾನ ಮೇಲ್ದರ್ಜೆಗೇರಿಸುವುದಲ್ಲದೆ ಭಾರತೀಯ ರೈಲ್ವೆಯಲ್ಲಿ ಹೊಸತನ ಹಾಗೂ ಪ್ರಯೋಗಶೀಲತೆ ತುಂಬುವುದಕ್ಕಾಗಿ ‘ಕಾಯಕಲ್ಪ’ ಮಂಡಳಿ ರಚನೆಯ ಪ್ರಸ್ತಾವವನ್ನೂ ಬಜೆಟ್‌ನಲ್ಲಿ ಮುಂದಿಡಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ‘ನಿರ್ಭಯಾ ನಿಧಿ’ ಬಳಸಿಕೊಳ್ಳುವುದಾಗಿ ಹೇಳಲಾಗಿದೆ. ಎರಡು ವರ್ಷಗಳ ಹಿಂದೆ ಸ್ಥಾಪಿಸಲಾದ ₹1000 ಕೋಟಿಯ ‘ನಿರ್ಭಯಾ ನಿಧಿ’ ಈವರೆಗೆ ವ್ಯಯವಾಗಿಲ್ಲ. ಈಗಲಾದರೂ ಆ ಹಣದ ಸ್ವಲ್ಪಭಾಗವನ್ನು ಬಳಸಲು ಸರ್ಕಾರ ಮುಂದಾಗಿದೆ. ಆದರೆ ಎಷ್ಟು ಹಣ ಹೇಗೆ ಬಳಕೆ­ಯಾಗಲಿದೆ ಎಂಬ ವಿವರಗಳಿಲ್ಲ. ಭಾರತೀಯ ರೈಲುಗಳಲ್ಲಿ ಸ್ವಚ್ಛತೆಯದೇ ಸಮಸ್ಯೆ. ಇದಕ್ಕಾಗಿ 17,000 ಜೈವಿಕ ಶೌಚಾಲಯಗಳ ನಿರ್ಮಾಣದ ಗುರಿ ಸದ್ಯದ ಅಗತ್ಯವೇ ಆಗಿದೆ. ರೈಲ್ವೆಯನ್ನು ಆಧುನೀಕರಿಸುವ ಯೋಜನೆಗಳ ‘ಪಯಣ’ದ ಮಾರ್ಗವನ್ನು ಬಜೆಟ್‌ನಲ್ಲಿ ಬಿಡಿಸಿಡಲಾಗಿದೆ. ಆದರೆ ಈ ಪಯಣ ಗುರಿಮುಟ್ಟಲು ಅನುಷ್ಠಾನದ ಗತಿಯೂ ತೀವ್ರಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.