ಅನಗತ್ಯ ವಿವಾದ ಭಾರತದಲ್ಲಿ ಲೈಂಗಿಕ ಅಪರಾಧಗಳು ದಿನನಿತ್ಯದ ವಿದ್ಯಮಾನ ಗಳಾಗಿವೆ. ಶಿಕ್ಷಾ ಭಯವೇ ಇಲ್ಲದ ಸ್ಥಿತಿ ರಾಷ್ಟ್ರ­ದಲ್ಲಿದೆ. ಇಂತಹ ಸಂದರ್ಭದಲ್ಲಿ ದೆಹಲಿ ವಿದ್ಯಾರ್ಥಿನಿ ಮೇಲಿನ ಸಾಮೂ­ಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಬ್ರಿಟಿಷ್ ಸಾಕ್ಷ್ಯಚಿತ್ರ ‘ಇಂಡಿ­ಯಾಸ್ ಡಾಟರ್’ ವಿವಾದವನ್ನು ಸೃಷ್ಟಿಸಿದೆ. ಅಂತರ್ಜಾಲ ಸೇರಿದಂತೆ ಯಾವುದೇ ಮಾಧ್ಯಮ­ಗಳಲ್ಲಿ ಈ ಚಿತ್ರದ ಪ್ರಸಾರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಆದರೆ ಬರಲಿರುವ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನ­ದಂದು ಪ್ರಸಾರ ಮಾಡಬೇಕಾಗಿದ್ದ ಈ ಚಿತ್ರವನ್ನು ಈ ವಿವಾದ ಸೃಷ್ಟಿಯಾದ ನಂತರ ನಿಗದಿತ ದಿನಾಂಕಕ್ಕೆ ಮೊದಲೇ ಬಿಬಿಸಿ ಪ್ರಸಾರ ಮಾಡಿದೆ. ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಅಗತ್ಯವಾದ ಎಲ್ಲಾ ಅನುಮೋದನೆಗಳನ್ನು ಕೇಂದ್ರ ಗೃಹ ಸಚಿ­ವಾ­ಲಯ ಹಾಗೂ ಜೈಲು ಅಧಿಕಾರಿಗಳಿಂದ ಪಡೆದುಕೊಂಡಿರುವುದಾಗಿ ಸಾಕ್ಷ್ಯ­ಚಿತ್ರ ನಿರ್ದೇಶಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ. 2012ರ ಡಿಸೆಂಬರ್ 16ರಂದು ದೆಹಲಿಯಲ್ಲಿ ಚಲಿಸುವ ಬಸ್‌ನಲ್ಲಿ ಬರ್ಬರವಾಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ, ನಂತರ ಸಿಂಗಪುರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ರಾಷ್ಟ್ರದಾದ್ಯಂತ ಪ್ರತಿಭಟನೆಯ ಅಲೆ ಉಕ್ಕಿ­ಸಿತ್ತು. ರಾಷ್ಟ್ರದಲ್ಲಿ ಅತ್ಯಾಚಾರ ವಿರುದ್ಧದ ಕಾನೂನುಗಳನ್ನು ಬಿಗಿಗೊಳಿ­ಸಲು ಈ ಘಟನೆ ಪ್ರೇರಕವಾಗಿತ್ತು. ಈಗ ಈ ಪ್ರಕರಣದ ನಾಲ್ವರು ಅತ್ಯಾ­ಚಾರಿ­ಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದೆ. ಈ ಅತ್ಯಾಚಾರಿಗಳ ಪೈಕಿ ಒಬ್ಬನಾದ ಮುಕೇಶ್ ಸಿಂಗ್ ಸಂದರ್ಶನವನ್ನು ಈ ಸಾಕ್ಷ್ಯಚಿತ್ರದಲ್ಲಿ ಬಳಸಿಕೊಂಡಿ­ರು­ವುದು ವಿವಾದಕ್ಕೆ ಕಾರಣವಾಗಿದೆ. ಅದರಲ್ಲೂ ಬರ್ಬರ ಅತ್ಯಾಚಾರಕ್ಕೆ, ಸಂತ್ರಸ್ತೆ ತೋರಿದ ಪ್ರತಿರೋಧವೇ ಕಾರಣ ಎಂದು ಮುಕೇಶ್ ಸಿಂಗ್ ದೂಷಿಸಿ­ರು­ವುದು ಆಕ್ರೋಶ ಸೃಷ್ಟಿಸಿದೆ. ‘ಒಳ್ಳೆಯ’ ಹುಡುಗಿಯರು ರಾತ್ರಿ­ವೇಳೆ ಬಾಯ್ ಫ್ರೆಂಡ್ ಜೊತೆ ಬೀದಿಯಲ್ಲಿ ಓಡಾಡುವುದಿಲ್ಲ ಎಂಬ ಮಾತು­ಗಳನ್ನೂ ಅತ್ಯಾಚಾರಿ ಹೇಳಿದ್ದಾನೆ. ಅತ್ಯಾಚಾರಿಯ ಇಂತಹ ಮಾತುಗಳಿಗೆ ವೇದಿಕೆ ಏಕೆ ಕಲ್ಪಿಸಿಕೊಡಬೇಕು? ಇದು ಅತ್ಯಾಚಾರ ವಿಷಯವನ್ನು ಅತಿರಂಜಿ­ತ­ಗೊಳಿಸುವಂತಹದ್ದು ಎಂಬಂತಹ ವಾದಗಳಿಂದಾಗಿ ವಿವಾದ ತೀವ್ರ­ಗೊಂಡಿದೆ. ಆದರೆ ಈ ವಾದ ನಮ್ಮೊಳಗಿನ ಆಷಾಢಭೂತಿತನಕ್ಕೆ ಪ್ರತೀಕ. ಅತ್ಯಾ­ಚಾರಿ ಹೇಳಿದ ಇಂತಹದೇ ಮಾತುಗಳನ್ನು ನಮ್ಮ ಗೌರವಾನ್ವಿತ ರಾಜಕೀಯ ನೇತಾ­ರರು, ಉನ್ನತ ಪೊಲೀಸ್ ಅಧಿಕಾರಿಗಳೂ ವಿವಿಧ ಸಂದರ್ಭಗಳಲ್ಲಿ ಹೇಳಿರುವುದನ್ನು ಮರೆಯಲಾಗದು. ಜೊತೆಗೆ ‘ನನ್ನ ಮಗಳು ರಾತ್ರಿ ಹೊತ್ತು ಬಾಯ್ ಫ್ರೆಂಡ್ ಜೊತೆ ತಿರುಗುತ್ತಿದ್ದರೆ ಆಕೆಯನ್ನು ಜೀವಂತ ಸುಟ್ಟು­ಬಿಡುತ್ತಿದ್ದೆ’ ಎಂದು ಸ್ವತಃ ಅತ್ಯಾಚಾರಿ ಪರ ವಕೀಲರೂ ಹೇಳಿದ್ದಾರೆ. ಅತ್ಯಾ­ಚಾರಕ್ಕೆ ಹೆಣ್ಣುಮಕ್ಕಳನ್ನೇ ದೂಷಿಸುವ ಇಂತಹ ವ್ಯವಸ್ಥೆ­ಯನ್ನು ಸರಿಪಡಿ­ಸುವುದು ಹೇಗೆ ಎಂಬಂಥ ಮೂಲ ಪ್ರಶ್ನೆಯನ್ನು ಎತ್ತುವುದು ಇಲ್ಲಿ ಮುುಖ್ಯ. ಅಪರಾಧದ ಸಮಾಜಶಾಸ್ತ್ರೀಯ ಆಯಾಮಗಳನ್ನು ಗ್ರಹಿಸಬೇಕಾದುದು ಇಂದಿನ ಅಗತ್ಯ. ಮಹಿಳೆಯ ಸ್ವಾತಂತ್ರ್ಯವನ್ನು ಹತ್ತಿಕ್ಕಲು ನಡೆಸುವ ಈ ಹಿಂಸಾ­ತ್ಮಕ ಆಕ್ರಮಣಗಳ ಹಿಂದಿನ ಮನೋಧರ್ಮಗಳು ಬದಲಾಗಬೇಕಿವೆ. ಈ ಬಗ್ಗೆ ಸಮಾಜದಲ್ಲಿ ಸಂವೇದನಾಶೀಲತೆ ಮೂಡಬೇಕು. ಆದರೆ, ಇದನ್ನು ಅರಿತು­ಕೊಳ್ಳದೆ ಸಂಸತ್ ಸದಸ್ಯೆಯರೂ ಸಂಸತ್ತಿನಲ್ಲಿ ಸಾಕ್ಷ್ಯಚಿತ್ರದ ವಿರುದ್ಧ ಪ್ರತಿ­ಭಟಿ­ಸಿರುವುದು ವಿಷಾದನೀಯ. ಸಾಕ್ಷ್ಯಚಿತ್ರವನ್ನು ಪೂರ್ಣ ವೀಕ್ಷಿಸದೆ ಅದರ ಪ್ರಸಾರಕ್ಕೆ ತಡೆ ಒಡ್ಡಿದ್ದು ಸರಿಯಲ್ಲ. ಇಂತಹ ಸಾಕ್ಷ್ಯಚಿತ್ರದಿಂದ ಅಂತರ­ರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಕುಂದಾಗುತ್ತದೆ ಎನ್ನುತ್ತಾ ‘ನಮ್ಮಲ್ಲಿ ಸಮಸ್ಯೆಯೇ ಇಲ್ಲ’ ಎಂದು ನಾವು ನಟಿಸಲಾಗದು. ಸಾಕ್ಷ್ಯಚಿತ್ರ ವೀಕ್ಷಿಸಿದ ನಂತರ ವಿವಿಧ ಆಯಾಮಗಳ ವಿಶ್ಲೇಷಣೆಗೆ ಅವಕಾಶ ಇದ್ದೇ ಇರು­ತ್ತಿತ್ತು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ಪ್ರಜಾಸತ್ತಾತ್ಮಕ ರಾಷ್ಟ್ರದಲ್ಲಿ ನಿಷೇಧ ಹೇರಿದ್ದು ತಪ್ಪುಸಂದೇಶ ರವಾನಿಸುವಂತಹದ್ದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.