ದುರ್ನಡತೆ ಸರಿಯಲ್ಲ ವಾರದ ಹಿಂದೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿ ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಜನರ ಸಮ್ಮುಖದಲ್ಲೇ ಮಾಜಿ ಸೈನಿಕರೊಬ್ಬರ ಮೇಲೆ ಹಲ್ಲೆ ನಡೆಸಿರುವುದು ಹಾಗೂ ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ಮಫ್ತಿಯಲ್ಲಿದ್ದ ಇಬ್ಬರು ಪೊಲೀಸರು ಸೈನಿಕ­ರೊ­ಬ್ಬ­ರನ್ನು ಥಳಿಸಿದ್ದು ವರದಿಯಾಗಿದೆ. ಪೊಲೀಸರ ಈ ವರ್ತನೆ ಯಾವ ದೃಷ್ಟಿ­ಯಿಂದ ನೋಡಿದರೂ ಸಮರ್ಥನೀಯವೇ ಅಲ್ಲ. ಆಗಾಗ ನಡೆಯುವ ಈ ರೀತಿಯ ಘಟನೆಗಳು ಇಡೀ ಪೊಲೀಸ್ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಗ್ರಹಿಕೆ ಬೆಳೆಸುತ್ತವೆ. ಗಲಾಟೆಗಳು ನಡೆದಾಗ ಪೊಲೀಸರಿಗೆ ಜನರು ಸಹಕಾರ ನೀಡದೇ ಇರುವುದಕ್ಕೆ, ಎಷ್ಟೋ ಸಲ ಪೊಲೀಸರನ್ನು ವೈರಿಗಳಂತೆ ಕಾಣುವುದಕ್ಕೆ ಇವುಗಳ ಕೊಡುಗೆಯೂ ಕಡಿಮೆಯೇನಲ್ಲ. ಬೆಂಗಳೂರಿನ ಪ್ರಕರಣದಲ್ಲಂತೂ ಎಸ್ಐ, ಮಾನವೀಯತೆ ಮರೆತು ದರ್ಪ ತೋರಿಸಿದ್ದಾರೆ. ಸಂಚಾರ ದಟ್ಟಣೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಆಂಬುಲೆನ್‌್ಸಗೆ ದಾರಿ ಮಾಡಿ­ಕೊಡಲು ಬ್ಯಾರಿಕೇಡ್ ಸರಿಸಿದ ಮಾಜಿ ಸೈನಿಕರೊಬ್ಬರ ಮೇಲೆ ತಮ್ಮ ದರ್ಪ ಪ್ರದರ್ಶಿಸಿದ್ದಾರೆ. ಎಷ್ಟೋ ಸಲ ಇಂಥ ಪ್ರಸಂಗಗಳಲ್ಲಿ, ‘ನಮ್ಮ ಮೇಲೆಯೇ ಹಲ್ಲೆ ನಡೆಯಿತು, ಕರ್ತವ್ಯಕ್ಕೆ ಅಡ್ಡಿಪಡಿಸಲಾಯಿತು’ ಎಂದು ಕಥೆ ಕಟ್ಟಿ ಜನರ ಮೇಲೆಯೇ ಮೊಕದ್ದಮೆ ಹೂಡಿ ತಮ್ಮ ತಪ್ಪು ಮುಚ್ಚಿಕೊಳ್ಳುವ ಚಾಳಿಯನ್ನು ಅನೇಕ ಪೊಲೀಸರು ಬೆಳೆಸಿಕೊಂಡಿದ್ದಾರೆ. ಇದು ಬಹಳಷ್ಟು ಜನರ ಸ್ವಾನು­ಭವವೂ ಹೌದು. ಆದರೆ ಇಲ್ಲಿ ಇಡೀ ಘಟನೆ ಕ್ಯಾಮೆರಾದಲ್ಲಿ ದಾಖಲಾ­ಗಿತ್ತು. ಮಾಧ್ಯಮಗಳಲ್ಲಿ ಪ್ರಸಾರವೂ ಆಯಿತು. ಹಿರಿಯ ಅಧಿಕಾರಿಗಳೂ ತಕ್ಷಣ ಎಚ್ಚೆತ್ತು ತಪ್ಪಿತಸ್ಥ ಎಸ್ಐಯನ್ನು ಅಮಾನತು ಮಾಡಿದರು. ಸಾರ್ವ­ಜನಿಕರ ಕ್ಷಮೆ ಕೋರಿ ದೊಡ್ಡತನ ಮೆರೆದರು. ಆದರೆ ಮುದ್ದೇಬಿಹಾಳದ ಘಟನೆಯಲ್ಲಿ ಕೊನೇ ಪಕ್ಷ ತನಿಖೆ ನಡೆಸುವ ಮಾತೂ ಕೇಳಿಬರಲಿಲ್ಲ. ಅಪರಾಧ ಕೃತ್ಯಗಳ ಪತ್ತೆ, ನಿಯಂತ್ರಣ, ರಸ್ತೆ ಸಂಚಾರ ನಿಯಂತ್ರಣ ಇತ್ಯಾದಿ ಕಾರ್ಯಗಳಲ್ಲಿ ಪೊಲೀಸರ ಜೊತೆ ನಾಗರಿಕರ ಸಹಭಾಗಿತ್ವ ನಡೆದು­ಕೊಂಡೇ ಬಂದಿದೆ. ಇಂತಹ ಸಹಭಾಗಿತ್ವವನ್ನು ಮತ್ತಷ್ಟು ವೃದ್ಧಿಸುವಂಥ ನಡೆ ರೂಢಿಸಿಕೊಳ್ಳಲು ಪೊಲೀಸರನ್ನು ಪ್ರೇರೇಪಿಸಬೇಕು. ಖಾಕಿ ಸಮವಸ್ತ್ರ ಎನ್ನು­ವುದು ಜನಸೇವೆಗಾಗಿ ಸಿಕ್ಕ ಅವಕಾಶವೇ ಹೊರತು ಜನರ ಮೇಲೆ ದರ್ಪ, ದೌರ್ಜನ್ಯಕ್ಕೆ ಕೊಟ್ಟ ಪರವಾನಗಿ ಅಲ್ಲ. ತಮ್ಮ ಪ್ರತಿಯೊಂದು ನಡೆಯನ್ನೂ ಸಾವಿರಾರು ಕಣ್ಣುಗಳು ಗಮನಿಸುತ್ತಲೇ ಇರುತ್ತವೆ ಎಂಬ ಎಚ್ಚರ ಪೊಲೀಸ­ರಲ್ಲಿ ಸದಾ ಇದ್ದರೆ ಇಂಥ ಪ್ರಸಂಗಗಳು ನಡೆಯುವುದಿಲ್ಲ. ಆದರೆ ಕೆಲಸದ ಒತ್ತಡ ಮತ್ತು ಅದರಿಂದ ಆಗುವ ಮಾನಸಿಕ, ದೈಹಿಕ ಆರೋಗ್ಯದ ಏರು­ಪೇರುಗಳು, ಕುಟುಂಬದಿಂದ ಹೆಚ್ಚು ಕಾಲ ದೂರ ಇರುವ ಅನಿವಾರ್ಯ, ಸರಿ­ಯಾಗಿ ರಜೆ ಸಿಗದೇ ಇರುವುದು, ಮೇಲಧಿಕಾರಿಗಳು ನಡೆಸಿಕೊಳ್ಳುವ ರೀತಿ ಮತ್ತಿತರ ಸಂಗತಿಗಳು ಕೆಳಸ್ತರದಲ್ಲಿನ ಪೊಲೀಸರ ನಡವಳಿಕೆ ಮೇಲೆ ಪರಿಣಾಮ ಬೀರುತ್ತವೆ. ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಇನ್‌ಸ್ಪೆಕ್ಟರ್‌ವರೆಗಿನ ಸಿಬ್ಬಂದಿ ಜತೆ ಜನಸಾಮಾನ್ಯರ ಸಂಪರ್ಕ ಹೆಚ್ಚು. ಆದ್ದರಿಂದ ಸಾರ್ವಜನಿಕರ ಜತೆ ಮಾನವೀಯವಾಗಿ ನಡೆದುಕೊಳ್ಳಬೇಕಾದ ರೀತಿ ರಿವಾಜುಗಳ ಬಗ್ಗೆ ಈ ಸಿಬ್ಬಂದಿಗೆ ನಿರಂತರ ತರಬೇತಿ ಕೊಡಬೇಕು. ದುರ್ನಡತೆ ಸಹಿಸುವುದಿಲ್ಲ ಎಂಬ ಕಟ್ಟುನಿಟ್ಟು ಸಂದೇಶ ರವಾನೆಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.