ಸ್ಮಾರಕಗಳ ಧ್ವಂಸ ಖಂಡನೀಯ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರರ ಕ್ರೌರ್ಯ ದಿನೇ ದಿನೇ ಹೊಸ ಸ್ವರೂಪ ಪಡೆಯುತ್ತಿದೆ. ವಿದೇಶಿ ಒತ್ತೆಯಾಳುಗಳ ಹತ್ಯೆ ಹಾಗೂ ಅಲ್ಪಸಂಖ್ಯಾತ ಯಾಜಿದಿ ಸಮುದಾಯದ ಮಹಿಳೆಯರ ಮೇಲೆ ನಡೆಸುತ್ತಿ­ರುವ ದೌರ್ಜನ್ಯಗಳು ಈ ಸರಣಿಗೆ ಈಗ ಹೊಸದಾಗಿ ಸೇರ್ಪಡೆ­ಯಾಗಿವೆ. ಜತೆಗೆ ಸಾಂಸ್ಕೃತಿಕ ಕುರುಹುಗಳ ಮೇಲೂ ಈಗ ದಾಳಿ ನಡೆದಿದೆ. ಈ ದಾಳಿಗಳಲ್ಲಿ ಇರಾಕಿನ ಪಾರಂಪರಿಕ ನಗರ ಹಾಗೂ ಕಟ್ಟಡಗಳು ನೆಲಸಮ­ವಾಗಿವೆ. 2900 ವರ್ಷಗಳಷ್ಟು ಹಿಂದೆ ನಿರ್ಮಾಣವಾಗಿದ್ದ ನಿಮೃದ್ ನಗರ­ದಲ್ಲಿರುವ ಪುರಾತನ ಕಟ್ಟಡಗಳು ಹಾಗೂ ಅಮೂಲ್ಯ ಸ್ಮಾರಕಗಳನ್ನು ಉಗ್ರರು ಧ್ವಂಸ­ಮಾಡಿರುವುದು ಖಂಡನೀಯ. ಪಾರಂಪರಿಕ ನಗರ, ಕಟ್ಟಡಗಳನ್ನೆಲ್ಲಾ ನಾಶ­ಪಡಿ­ಸುವ ಪ್ರಕಟಣೆಯನ್ನು ಇತ್ತೀಚೆಗೆ ಉಗ್ರರು ಹೊರಡಿಸಿದ್ದರು. ಇದು ಮಾನ­ವನ ಗತವನ್ನು ನಾಶಪಡಿಸಲು ಉಗ್ರರು ಸಾರಿರುವ ಯುದ್ಧ. ಆಕ್ರಮ­ಣದ ಮೂಲಕ ಕೈವಶಪಡಿಸಿಕೊಂಡಿರುವ ಪ್ರದೇಶ­ಗಳ ಸಾಂಸ್ಕೃತಿಕ ಬೇರುಗ­ಳನ್ನು ನಾಶ ಮಾಡುವ ಮಧ್ಯಕಾಲದ ಆಕ್ರಮಣಕಾರಿ ಶೈಲಿಯ ಮುಂದುವರಿಕೆ. ‘ಉಗ್ರರು ವ್ಯವಸ್ಥಿತವಾಗಿ ನಮ್ಮ ಇತಿಹಾಸವನ್ನು ಅಳಿಸಿಹಾಕುತ್ತಿದ್ದಾರೆ’ ಎಂದು ಇರಾಕಿನ ಪುರಾತತ್ವ ತಜ್ಞರೊಬ್ಬರು ಹೇಳಿರುವುದು ಸರಿಯಾಗಿದೆ. ಉಗ್ರರ ವಶದಲ್ಲಿರುವ ಇರಾಕಿನ ಮೋಸುಲ್‌ನಲ್ಲಿ ನಡೆದಿರುವ ಪೈಶಾಚಿಕ ಕೃತ್ಯ­ದಲ್ಲಿ, ವಿಗ್ರಹಗಳು ಮತ್ತು ಕಲಾಕೃತಿಗಳನ್ನು ನಾಶಗೊಳಿಸಲು ಬೃಹತ್‌ ಯಂತ್ರಗಳನ್ನು ಬಳಸಲಾಗಿದೆ. ಈಗ ಅಳಿದು ಹೋಗಿರುವ ಅಸ್ಸೀರಿ­ಯಾದ ನಾಗರಿಕತೆಯ ಕುರುಹುಗಳಾದ ಈ ಸ್ಮಾರಕಗಳ ನಾಶ, ಕಲೆ ಹಾಗೂ ಇತಿಹಾಸಲೋಕಕ್ಕಾದ ದೊಡ್ಡ ನಷ್ಟ. ಕಲೆ, ಮಾನವನ ಸೃಜನಶೀಲ ಅಭಿವ್ಯಕ್ತಿ. ಜೀವಗಳೊಡನೆ ಆಟವಾಡುವ ಉಗ್ರರಿಗೆ ಈ ಯಾವ ಸೂಕ್ಷ್ಮಗಳೂ ತಿಳಿಯು ವುದಿಲ್ಲ. ಈ ಸ್ಮಾರಕ, ಕಲಾಕೃತಿಗಳು ಇರಾಕ್‌ನಲ್ಲಿದ್ದರೂ ಅವು ಇಡೀ ವಿಶ್ವಕ್ಕೆ ಸೇರಿದಂಥವು. ಇಸ್ಲಾಂ ಧಾರ್ಮಿಕ ಚಿಂತನೆಯ ಉಗಮಕ್ಕೂ ಹಿಂದಿನ ಈ ಕಲಾಕೃತಿಗಳ ಕುರಿತು ಉಗ್ರರಿಗೆ ಇರುವ ತೀವ್ರ ವಿರೋಧವನ್ನು ಈ ಕಾರ್ಯಾ­ಚರಣೆ ಧ್ವನಿಸುತ್ತದೆ. ಇಂದಿನ ನಾಗರಿಕ ಜೀವನ ಮತ್ತು ಹಿಂದಿನ ಪರಂಪರೆ ಎರಡರ ಮೇಲೂ ನಡೆದಂಥ ಹಲ್ಲೆ ಇದು. ವಿಗ್ರಹಾರಾಧನೆ ಪ್ರಚಲಿತವಿರುವ ಸಂಸ್ಕೃತಿಗಳ ಯಾವುದೇ ಅಭಿವ್ಯಕ್ತಿಯನ್ನು ಸಹಿಸದ ಉಗ್ರರ ಮನೋಭಾವಕ್ಕೆ ಕನ್ನಡಿ ಹಿಡಿದಿರುವ ಈ ಪ್ರಕರಣ, ಕೆಲವು ವರ್ಷಗಳ ಹಿಂದೆ ಆಫ್ಘಾನಿಸ್ತಾನ­ದ­ಲ್ಲಿದ್ದ 1700 ವರ್ಷಗಳಷ್ಟು ಪುರಾತನ ಬೌದ್ಧ ಸ್ಮಾರಕಗಳನ್ನು ತಾಲಿಬಾನ್‌ ಉಗ್ರರು ನಾಶಪಡಿಸಿದ್ದನ್ನು ನೆನಪಿಸುವಂತಿದೆ. ಇತಿಹಾಸ, ಸಂಸ್ಕೃತಿ ಯಾವುದೋ ಒಂದು ನಿಗದಿತ ದಿನಾಂಕದಿಂದ ಶುರುವಾಗುವುದಿಲ್ಲ. ವರ್ತ­ಮಾನವು ಭೂತಕಾಲದ ಮುಂದುವರಿಕೆ. ಈಗ ನಾಶವಾಗಿರುವುದು ನಾಗರಿಕತೆಯ ಹೆಜ್ಜೆ ಗುರುತನ್ನು ತೆರೆದಿಡುತ್ತಿದ್ದ ಚಿಹ್ನೆಗಳು. ಇದರಿಂದ ಮಾನವ ಲೋಕದ ಒಂದು ಕೊಂಡಿ ತುಂಡಾಗಿದೆ. ಗತವನ್ನು ಮರುರಚಿಸಲು ಪುರಾತತ್ವ ಸಂಶೋಧಕರು ಹೆಣಗುತ್ತಿದ್ದರೆ, ಉಗ್ರರು ನಡೆಸಿರುವ ಈ ಕೃತ್ಯ­ಗಳು ಅದನ್ನು ಧ್ವಂಸಗೊಳಿಸಲು ಹೊರಟಿವೆ. ಇಂತಹ ‘ಸಾಂಸ್ಕೃತಿಕ ಕುರುಹು­ಗಳ ಅಳಿಸುವ ಕಾರ್ಯಾಚರಣೆ’ (ಕಲ್ಚರಲ್‌ ಕ್ಲಿನ್ಸಿಂಗ್‌) ಯುದ್ಧ ಅಪರಾಧ ಎಂದು ವಿಶ್ವಸಂಸ್ಥೆ ಹೇಳಿರುವುದು ಸರಿಯಾಗಿದೆ. ಗತದ ಒಂದು ಮುಖ್ಯ ತುಣುಕು ಶಾಶ್ವತವಾಗಿ ನಾಶವಾಗಿದೆ. ಜಗತ್ತು ಇಂಥ ದಾಳಿಗಳಿಂದ ಮತ್ತೆ ಮಧ್ಯಕಾಲಕ್ಕೆ ಮರಳುವುದನ್ನು ವಿಶ್ವ ಸಮುದಾಯ ತಡೆಗಟ್ಟಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.