ಕರಿನೆರಳು ಆಗದಿರಲಿ ಶ್ರೀಲಂಕಾದ ಜಲ ಗಡಿ ಪ್ರವೇಶಿಸುವ ಭಾರತದ ಮೀನುಗಾರರ ಮೇಲೆ ತಮ್ಮ ನೌಕಾಪಡೆ ಗುಂಡು ಹಾರಿಸುವುದು ತಪ್ಪಲ್ಲ ಎಂದು ಹೇಳಿ­ರುವ ಅಲ್ಲಿನ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ. ದ್ವಿಪಕ್ಷೀಯ ಬಾಂಧವ್ಯ ಸುಧಾರಣೆ ಯತ್ನಗಳು ಆರಂಭ­ವಾಗಿರುವ ಬೆನ್ನಲ್ಲೇ ಅವರು ನೀಡಿರುವ ಇಂತಹ ಹೇಳಿಕೆ ತೀರಾ ಅನಿರೀಕ್ಷಿತ. 25 ವರ್ಷಗಳ ಬಳಿಕ ಭಾರತದ ಪ್ರಧಾನಿ ಶ್ರೀಲಂಕಾಗೆ ಭೇಟಿ ನೀಡಲು ಇನ್ನು ಕೆಲ ದಿನಗಳಷ್ಟೇ ಬಾಕಿ ಇರುವಾಗ ಮತ್ತು ಈ ಭೇಟಿಗೆ ಪೂರಕವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಅದಾಗಲೇ ದ್ವೀಪರಾಷ್ಟ್ರಕ್ಕೆ ಅಡಿ ಇಟ್ಟಿದ್ದಾಗ ಅಲ್ಲಿನ ಪ್ರಧಾನಿ ಹೇಳಿರುವ ಮಾತು ಕಡೆಗಣಿಸುವಂಥದ್ದಲ್ಲ. ಹದಗೆಟ್ಟಿರುವ ಬಾಂಧವ್ಯ ಸುಧಾರಣೆ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಭೇಟಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ನಿಕಟಪೂರ್ವ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಚೀನಾ ಪರ ಒಲವು ಮತ್ತು ಶ್ರೀಲಂಕಾ ವಿರುದ್ಧ ಅಮೆರಿಕ ವಿಶ್ವಸಂಸ್ಥೆ­ಯಲ್ಲಿ ಮಂಡಿಸಿದ ಯುದ್ಧಾಪರಾಧ ನಿರ್ಣಯವನ್ನು ಭಾರತ ಬೆಂಬಲಿಸಿದ ನಂತರ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಸಾಕಷ್ಟು ಹಳಸಿತ್ತು. ಆದರೆ ಇದೇ ಜನವರಿಯಲ್ಲಿ ಮೈತ್ರಿಪಾಲ ಸಿರಿಸೇನ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಉಭಯ ದೇಶಗಳ ನಡುವೆ ಹೊಸ ಶಕೆ ಆರಂಭದ ಲಕ್ಷಣಗಳು ಗೋಚರಿಸಿದ್ದವು. ಅಧ್ಯಕ್ಷರಾದ ನಂತರ ಮೊದಲ ವಿದೇಶ ಭೇಟಿಗೆ ಸಿರಿಸೇನ ಅವರು ಭಾರತವನ್ನೇ ಆಯ್ದುಕೊಂಡಿದ್ದು ಬಾಂಧವ್ಯ ಸುಧಾರಣೆ ನಡೆಗೆ ಪೂರಕವಾಗಿತ್ತು. ಹಿಂದಿನಿಂದಲೂ ದ್ವಿಪಕ್ಷೀಯ ಸಂಬಂಧ ಹದಗೆಡುವಲ್ಲಿ ಮೀನುಗಾರರ ಸಮಸ್ಯೆ ಇತರ ವಿಷಯಗಳಷ್ಟೇ ಪ್ರಮುಖವಾಗಿದೆ. ತಮ್ಮ ಜಲ ಗಡಿ ಪ್ರವೇಶಿಸುವ ಭಾರತದ ಮೀನುಗಾರರತ್ತ ಶ್ರೀಲಂಕಾ ಸೈನಿಕರು ಗುಂಡು ಹಾರಿಸು­ವುದು ಸಾಕಷ್ಟು ಬಾರಿ ಸರ್ಕಾರಗಳ ನಡುವೆ ವಾಗ್ಯುದ್ಧಕ್ಕೆ ಕಾರಣ­ವಾಗಿದೆ. ಆದರೆ ಇಂತಹ ಸೂಕ್ಷ್ಮ ಸಂಗತಿಗಳು ಬಗೆಹರಿಯದೆ ಬಾಂಧವ್ಯ ವರ್ಧನೆ ಅಸಾಧ್ಯ ಎಂಬ ವಾಸ್ತವಪ್ರಜ್ಞೆಯಿಂದ, ಸಿರಿಸೇನ ಭಾರತ ಭೇಟಿಗೆ ಮುನ್ನ ಸ್ನೇಹ ಸಂಕೇತವಾಗಿ, ಶ್ರೀಲಂಕಾ ವಶದಲ್ಲಿದ್ದ 81 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದ್ದರು. ಪ್ರಧಾನಿ ಮೋದಿ ಭೇಟಿ ವೇಳೆ ನಿಗದಿಯಾಗಿರುವ ಮಾತುಕತೆ ಪಟ್ಟಿಯಲ್ಲಿ ಮೀನುಗಾರರ ಸಮಸ್ಯೆಯೂ ಇದೆ. ಹೀಗಿರುವಾಗ, ಗಡಿ ಉಲ್ಲಂಘಿಸುವ ಮೀನುಗಾರರನ್ನು ಕೊಲ್ಲುವುದು ಮಾನವ ಹಕ್ಕು ಉಲ್ಲಂಘನೆಯಲ್ಲ, ಅಂತಹ ಹತ್ಯೆಗಳಿಗೆ ಕಾನೂನಿನ ಬೆಂಬಲವಿದೆ ಎಂಬ ವಿಕ್ರಮಸಿಂಘೆ ಅವರ ಸಮರ್ಥನೆ ನಿರ್ದಯವಾದುದು. ಅರಿಯದೇ ಗಡಿ ಉಲ್ಲಂಘಿಸುವ ಅಮಾಯಕ ಮೀನುಗಾರರ ಸಮಸ್ಯೆ ಒಂದು ಭಾವನಾತ್ಮಕ ಸಂಗತಿ. ಇಂತಹ ವಿಷಯಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕು. ರಾಜತಾಂತ್ರಿಕ ಮಟ್ಟದಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಉಭಯ ದೇಶಗಳ ಮೀನುಗಾರರ ಸಂಘಗಳ ಸಭೆ ನಡೆಸಿ ಮೀನುಗಾರರಲ್ಲಿ ಜಾಗೃತಿ ಮೂಡಿಸಬೇಕು. ಮೋದಿ ಭೇಟಿ ಇಂತಹ ಸಮಸ್ಯೆಗಳಿಗೆ ಪರಿಹಾರ ದೊರಕಿಸಬಲ್ಲದು ಎಂಬ ಆಶಾಭಾವನೆ ಇದೆ. ಹೀಗಾಗಿ ಅವರ ಭೇಟಿಗೆ ಪೂರ್ವಭಾವಿಯಾಗಿ ಆ ದೇಶದ ಪ್ರಮುಖರು ನೀಡುವ ಹೇಳಿಕೆಗಳು ಸೌಹಾರ್ದ ಸಂಬಂಧಕ್ಕೆ ವೇದಿಕೆ ಕಲ್ಪಿಸುವಂತೆ ಇರಬೇಕೇ ಹೊರತು ಕರಿನೆರಳಿನಂತೆ ಅಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.