ಚರ್ಚೆ ನಡೆಯಲಿ ಅತ್ಯಾಚಾರ ಮತ್ತು ಕೊಲೆಯಂತಹ ಗಂಭೀರ ಆರೋಪಗಳನ್ನು ಹೊತ್ತ ಮಕ್ಕಳನ್ನು ದೊಡ್ಡವರಂತೆಯೇ ವಿಚಾರಣೆಗೆ ಒಳಪಡಿಸಲು ‘ಬಾಲ ನ್ಯಾಯ ಕಾಯ್ದೆ’ಗೆ ತರಲು ಉದ್ದೇಶಿಸಿದ್ದ ಬದಲಾವಣೆಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿ ತಳ್ಳಿಹಾಕಿದೆ. ಕಳೆದ ವರ್ಷ ಕೇಂದ್ರ ಸಂಪುಟದ ಅಂಗೀಕಾರ ಪಡೆದ ಬಾಲ ನ್ಯಾಯ (ಮಕ್ಕಳ ಆರೈಕೆ ಹಾಗೂ ರಕ್ಷಣೆ) ಮಸೂದೆ 2014ರ ಪ್ರಕಾರ, ಹೇಯ ಕೃತ್ಯಗಳಲ್ಲಿ ಪಾಲ್ಗೊಂಡ ಬಾಲಾರೋಪಿಗಳು ಅಥವಾ ಪದೇ ಪದೇ ಗಂಭೀರ ಅಪರಾಧ­ಗಳನ್ನು ಎಸಗುವ 16– 18 ವರ್ಷದೊಳಗಿನ ಮಕ್ಕಳ ವಿಚಾರಣೆಯನ್ನು, ನಿಯ­ಮಿತವಾದ ವಯಸ್ಕರ ಅಪರಾಧ ನ್ಯಾಯಾಲಯಗಳಲ್ಲೇ ನಡೆಸಬೇಕು ಮತ್ತು ಅವರನ್ನೂ ವಯಸ್ಕರಂತೆಯೇ ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಮಕ್ಕಳಿಗೆ ಜೀವಾವಧಿ ಅಥವಾ ಮರಣದಂಡನೆ ವಿಧಿಸುವ ಪ್ರಸ್ತಾವ ಇಲ್ಲ­ವಾದರೂ, ವಯಸ್ಕರನ್ನು ಬಂಧಿಸಿಟ್ಟ ಜೈಲುಗಳಲ್ಲೇ ಅವರನ್ನೂ ಇರಿಸ­ಬೇಕಾಗು­ತ್ತದೆ. ಈ ಉದ್ದೇಶಿತ ಮಸೂದೆಗೆ ಪ್ರೇರಣೆಯಾದದ್ದು 2012ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಎಂಬುದನ್ನು ಇಲ್ಲಿ ಸ್ಮರಿಸಬೇಕು. ಈ ಪ್ರಕರಣದ ಆರು ಆರೋಪಿ­ಗಳಲ್ಲಿ ಒಬ್ಬಾತ ಬಾಲಕನಾಗಿದ್ದು ಆತನೇ ಹೆಚ್ಚು ಪೈಶಾಚಿಕವಾಗಿ ವರ್ತಿಸಿದ್ದ ಎಂಬುದು ಸಾರ್ವಜನಿಕರಲ್ಲಿ ಸಹಜವಾಗಿಯೇ ತೀವ್ರ ಆಕ್ರೋಶ ಹುಟ್ಟಿಸಿತ್ತು. ಹೀಗಾಗಿ, ಹೇಯ ಅಪರಾಧಗಳಲ್ಲಿ ತೊಡಗುವ ಹದಿಹರೆಯ­ದವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಸರ್ಕಾರ ಈ ಮಸೂದೆಯನ್ನು ರೂಪಿಸಿದೆ. ಆದರೆ ಮಕ್ಕಳ ವಯಸ್ಸಿನ ವ್ಯಾಖ್ಯೆಯನ್ನು 18ರಿಂದ 16ಕ್ಕೆ ಇಳಿಸುವುದು ಮಕ್ಕಳ ಹಕ್ಕುಗಳನ್ನು ಕುರಿತಾದ ಅಂತರ­ರಾಷ್ಟ್ರೀಯ ಒಡಂಬಡಿಕೆಗಳಿಗೆ ವಿರುದ್ಧವಾಗುತ್ತದೆ ಎಂಬಂಥ ಟೀಕೆಗಳೂ ವ್ಯಕ್ತವಾಗಿದ್ದವು. ಅತ್ಯಾಚಾರ ಕಾನೂನು ತಿದ್ದುಪಡಿ ಕುರಿತಂತೆ ನೇಮಕ­ಗೊಂಡಿದ್ದ ನ್ಯಾಯಮೂರ್ತಿ ವರ್ಮ ಆಯೋಗವೂ ಮಕ್ಕಳ ವಯಸ್ಸಿನ ವ್ಯಾಖ್ಯೆ­ಯನ್ನು 16ಕ್ಕೆ ಇಳಿಸುವುದಕ್ಕೆ ವಿರೋಧ ತೋರಿತ್ತು. ಇಂತಹ­ದೊಂದು ಸಂದರ್ಭದಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು, ದೇಶದಲ್ಲಿ ನಡೆ­ಯುವ ಅತ್ಯಾಚಾರಗಳಲ್ಲಿ ಪಾಲ್ಗೊಳ್ಳುವವರಲ್ಲಿ ಶೇ 50ರಷ್ಟು ಬಾಲಕರು ಎಂಬಂಥ ಉತ್ಪ್ರೇಕ್ಷಿತ ಅಂಕಿಅಂಶಗಳನ್ನು ನೀಡಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸ್ಥಾಯಿ ಸಮಿತಿಯು ಛೀಮಾರಿ ಹಾಕಿದೆ. ವಾಸ್ತವವಾಗಿ ಅಧಿಕೃತ ಅಂಕಿಅಂಶಗಳ ಪ್ರಕಾರ ಈ ಪ್ರಮಾಣ ಶೇ 6. ಮಕ್ಕಳನ್ನು ಸಂರಕ್ಷಿಸುವ ಹೊಣೆ ಹೊತ್ತ ಸಚಿವಾಲಯವೇ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದು ದುರದೃಷ್ಟಕರ. ಇದೇನೇ ಇರಲಿ ಕಳ್ಳತನ, ದರೋಡೆಗಳಂತಹ ಸಣ್ಣಪುಟ್ಟ ಅಪರಾಧಗಳನ್ನು ಮಾಡುವ ಮಕ್ಕಳು ಹಾಗೂ ಅತ್ಯಾಚಾರ, ಕೊಲೆಯಂತಹ ಹೇಯ ಅಪರಾಧಗಳನ್ನು ಮಾಡುವ ಮಕ್ಕಳಿಗೆ ಬೇರೆಯದೇ ಮಾನದಂಡಗಳನ್ನು ನಿಗದಿಪಡಿಸುವುದು ಈಗಿನ ಅವಶ್ಯಕತೆ. ಅತ್ಯಾಚಾರ ಅಥವಾ ಕೊಲೆಯಂತಹ ಹೇಯ ಅಪರಾಧಗಳನ್ನೆಸಗಿದಾಗಲೂ ಸಣ್ಣಪುಟ್ಟ ಅಪರಾಧ ಮಾಡಿದ ಮಕ್ಕಳಂತೆ ಹಗುರ ಶಿಕ್ಷೆಗಳಿಂದ ಪಾರಾಗುವುದು ಸಲ್ಲದು. ಸಮಕಾಲೀನ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಿದ್ದು, ತಮ್ಮ ಮುಗ್ಧತೆಯನ್ನು ಬೇಗನೇ ಕಳೆದುಕೊಳ್ಳುವಂತಹ ಅನುಭವಗಳಿಗೆ ಮಕ್ಕಳು ಒಳಗಾಗುತ್ತಿದ್ದಾರೆ. ಅನೇಕ ಮಕ್ಕಳು ಎಸಗುತ್ತಿರುವ ಅಪರಾಧಗಳು ತೀವ್ರತರದ್ದಾಗಿದ್ದು ಸಮಸ್ಯೆ ಸಂಕೀರ್ಣವಾಗುತ್ತಿದೆ. ಇದನ್ನು ನಿರ್ವಹಿಸುವ ಬಗ್ಗೆ ಹೆಚ್ಚಿನ ವಾಗ್ವಾದ ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.