ವಿಭಜಕ ನೀತಿ ಸಲ್ಲದು ಮಹಾರಾಷ್ಟ್ರ ಸರ್ಕಾರ ಮೀಸಲಾತಿ ಮತ್ತು ಗೋಮಾಂಸಕ್ಕೆ ಸಂಬಂಧಿ­ಸಿದಂತೆ ಇತ್ತೀಚೆಗೆ ಕೈಗೊಂಡಿರುವ ನಿರ್ಧಾರಗಳು ಪಕ್ಷ­ಪಾತಿ­ಯಾಗಿದ್ದು, ರಾಜಕೀಯವಾಗಿ ಅದರ ವಿಭಜಕ ಧೋರಣೆಯನ್ನು ಹೊರಗೆ­ಡವಿವೆ. ಬಿಜೆಪಿ– ಶಿವಸೇನಾ ಸರ್ಕಾರದ ಈ ನಿರ್ಧಾರದ ಹಿಂದೆ ಕೋಮು ಉದ್ದೇಶ ಇರುವುದು ಸುಸ್ಪಷ್ಟ. ಶಿಕ್ಷಣ, ಉದ್ಯೋಗದಲ್ಲಿ ಮರಾಠಿಗರಿಗೆ ಮೀಸಲಾತಿಯನ್ನು ಮುಂದುವರಿಸಿರುವ ಸರ್ಕಾರ, ಮುಸ್ಲಿಮರಿಗೆ ಈ ಸೌಲಭ್ಯವನ್ನು ನಿರಾಕರಿಸಿದೆ. ಮತ್ತೊಂದು ನಿರ್ಣಯದಲ್ಲಿ, ರಾಜ್ಯದಲ್ಲಿ ಈಗಾ­ಗಲೇ ಗೋಹತ್ಯೆಯ ಮೇಲಿದ್ದ ನಿಷೇಧವನ್ನು ಎತ್ತು, ಹೋರಿಗಳಿಗೂ ಅನ್ವಯಿ­ಸಲಾಗಿದೆ. ಸರ್ಕಾರಗಳು ಸಾಮಾನ್ಯವಾಗಿ ತಮ್ಮ ತಪ್ಪು ನಿರ್ಧಾರ­ಗ­ಳಿಗೆ ಸದುದ್ದೇಶದ ಸಮರ್ಥನೆ ಕೊಟ್ಟುಕೊಳ್ಳುತ್ತವೆ, ಇಲ್ಲವೇ ಕಾನೂನು ಅಥವಾ ತಾಂತ್ರಿಕ ಕಾರಣಗಳನ್ನು ಒಡ್ಡುತ್ತವೆ. ಆದರೆ ಮಹಾರಾಷ್ಟ್ರ ಸರ್ಕಾರಕ್ಕೆ ಮಾತ್ರ ತನ್ನ ನಿರ್ಣಯಗಳ ಸಮರ್ಥನೆಗೆ ಯಾವ ಸಕಾರಣವೂ ಇಲ್ಲ. ಅದರ ಪರಿಣಾಮ ಅಥವಾ ಪ್ರಭಾವವನ್ನೂ ಅದು ಗಣನೆಗೆ ತೆಗೆದುಕೊಂಡಂತಿಲ್ಲ. ಹಿಂದಿನ ಕಾಂಗ್ರೆಸ್‌– ಎನ್‌ಸಿಪಿ ಸರ್ಕಾರ ಶಿಕ್ಷಣ, ಉದ್ಯೋಗದಲ್ಲಿ ಮರಾಠ ಸಮುದಾಯಕ್ಕೆ ಶೇ 16 ಹಾಗೂ ಮುಸ್ಲಿಮರಿಗೆ ಶೇ 5ರಷ್ಟು ಮೀಸಲಾತಿ­ಯನ್ನು ಘೋಷಿಸಿತ್ತು. ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೆ ತರ­ಲಾಗಿತ್ತು. ಇದು ಈ ಎರಡೂ ಸಮುದಾಯಗಳನ್ನು ಓಲೈಸಲು ಒಡ್ಡಿದ್ದ ಚುನಾವಣಾ ಪೂರ್ವ ಆಮಿಷವಾಗಿತ್ತು. ಯಾವ ದೃಷ್ಟಿಯಿಂದಲೂ ಹಿಂದುಳಿ­ದಿಲ್ಲದ ಮರಾಠ ಸಮುದಾಯ ಮೀಸಲಾತಿ ಪಡೆಯಲು ಅರ್ಹವಲ್ಲ. ಹೀಗಾಗಿ ಅವರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿದ್ದ ಕೋರ್ಟ್‌, ಶಿಕ್ಷಣದಲ್ಲಿ ಮುಸ್ಲಿಮರಿಗಿದ್ದ ಮೀಸಲಾತಿಯನ್ನು ಮುಂದುವರಿಸಿತ್ತು. ಆದರೆ ಈಗ ಮರಾಠ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಹಾಗೂ ಮುಸ್ಲಿಮರಿಗೆ ಮೀಸಲಾತಿ ನಿರಾಕರಿಸುವ ಮಸೂದೆಗೆ ವಿಧಾನಸಭೆಯ ಅಂಗೀಕಾರ ಪಡೆದುಕೊಂಡಿದೆ. ಇದನ್ನು ಕೋರ್ಟ್‌ ಮತ್ತೊಮ್ಮೆ ರದ್ದುಗೊಳಿಸುವ ಸಾಧ್ಯತೆಯೇ ಹೆಚ್ಚು. ಅದು ಗೊತ್ತಿ­ದ್ದರೂ, ಮರಾಠ ಸಮುದಾಯದ ಪರ ಎಂಬ ಭಾವನೆ ಮೂಡಿಸಿ ರಾಜಕೀಯ ಲಾಭ ಪಡೆಯುವ ಉದ್ದೇಶ ಈಡೇರಿದಂತಾಗುತ್ತದೆ. ಮುಸ್ಲಿಮರಿಗೆ ಸೌಲಭ್ಯ ನಿರಾಕರಿಸಿದ್ದರ ಹಿಂದೆಯೂ ತೋರಿಕೆಯ ಹುನ್ನಾರ ಇರಬಹುದು. ಹೀಗಾಗಿಯೇ ಅದು ತನ್ನ ನಿರ್ಧಾರಗಳಿಗೆ ಸೂಕ್ತ ಕಾರಣ ಕೊಡುವ ಗೋಜಿಗೂ ಹೋಗಿಲ್ಲ. ಎರಡು ದಶಕಗಳ ಹಿಂದೆ ವಿಧಾನಸಭೆಯಿಂದ ಅನುಮೋದನೆ­ಗೊಂಡಿದ್ದ ಮಸೂದೆಗೆ ರಾಷ್ಟ್ರಪತಿ ಅಂಕಿತ ದೊರೆತ ಬಳಿಕ ಎಲ್ಲ ಬಗೆಯ ದನದ ಮಾಂಸದ ಮೇಲಿನ ನಿಷೇಧ ಕಠೋರವಾಗಿದೆ. ಇದರ ಅನ್ವಯ, ಗೋಮಾಂಸ ತಿಂದರೆ ಅಥವಾ ಇಟ್ಟುಕೊಂಡಿದ್ದರೂ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಭಾರಿ ಮೊತ್ತದ ದಂಡ ವಿಧಿಸಬಹುದು. ಗೋಮಾಂಸ ಹಿಂದೂಗಳಿಗೆ ನಿಷಿದ್ಧ ಎಂಬುದಕ್ಕೆ ಯಾವ ಐತಿಹಾಸಿಕ ಬೆಂಬಲವೂ ಇಲ್ಲ. ಆದರೂ ಇದು ಹಿಂದುತ್ವಕ್ಕೆ ಸಂಬಂಧಿಸಿದ ಹಳೆಯ ಬೇಡಿಕೆ. ಅನೇಕ ಹಿಂದೂಗಳ ಆಹಾರವಾಗಿರುವ ಇದು, ಇತರ ಮಾಂಸಗಳಿಗಿಂತ ಅಗ್ಗ. ಜನರ ಆಹಾರಾಭ್ಯಾಸಗಳಲ್ಲಿ ಮಧ್ಯಪ್ರವೇಶಿಸುವ ಹಕ್ಕು ಸರ್ಕಾರಗಳಿಗೆ ಇಲ್ಲ. ಹೀಗಾಗಿ ಸರ್ಕಾರದ ನಿರ್ಧಾರ ಗಂಭೀರವಾದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳಿಗೆ ಎಡೆ ಮಾಡುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.