ಪ್ರಚೋದನಕಾರಿ ಹೇಳಿಕೆ ಬೇಡ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿ­ಕೊಂಡಾಗಿನಿಂದ ಬಿಜೆಪಿ ನಾಯಕರೂ ಸೇರಿದಂತೆ ಹಿಂದೂ ತೀವ್ರವಾದಿಗಳು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ಮುಂದು­ವರಿಸಿ­ದ್ದಾರೆ. ‘ರಾಮಮಂದಿರ ನಿರ್ಮಾಣ ವಿಚಾರದಿಂದ ಬಿಜೆಪಿ ವಿಮುಖ­ವಾಗಿಲ್ಲ. ಇದು ಪಕ್ಷದ ಗೌರವ ಹಾಗೂ ಪ್ರತಿಷ್ಠೆಯ ವಿಚಾರ’ ಎಂಬಂತಹ ಹೇಳಿಕೆಯನ್ನು ಸ್ವತಃ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಹನ್ಸರಾಜ್ ಗಂಗಾರಾಮ್ ಅಹಿರ್ ನೀಡಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿಯವರು, ‘ಭಾರತದ ಸಂವಿಧಾನವಷ್ಟೇ ಭಾರತದ ಏಕೈಕ ಧಾರ್ಮಿಕ ಗ್ರಂಥ’ ಎಂದು ಹೇಳಿದ ನಂತರವೂ ಇಂತಹ ಮಾತು­ಗಳಿಗೆ ತಡೆ ಬಿದ್ದಿಲ್ಲದಿರುವುದು ವಿಷಾದನೀಯ. ಇಂತಹ ಮಾತು­ಗಳು ಜನಮಾನಸದಲ್ಲಿ ಸಂಶಯ, ಅಭದ್ರತೆ ಮೂಡಿಸುತ್ತವೆ. ಈ ಬಗ್ಗೆ ಮೋದಿ ಬಹುಕಾಲ ಮೌನವನ್ನೇ ತಾಳಿದ್ದರು. ಅವರ ಮೌನ ಟೀಕೆಗಳಿಗೂ ಗುರಿಯಾಗಿತ್ತು. ಆ ನಂತರ ಮೌನ ಮುರಿದಿದ್ದ ಪ್ರಧಾನಿ, ‘ಸಮಾಜದಲ್ಲಿ ದ್ವೇಷ ಪ್ರಚೋದಿಸಲು ಪ್ರಯತ್ನಿ­ಸುವ ಯಾವುದೇ ಧಾರ್ಮಿಕ ಪಂಗಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಚರ್ಚ್ ಸಂಘಟನೆ­ಯೊಂದರ ಕಾರ್ಯಕ್ರಮ­ದಲ್ಲಿ ಎಚ್ಚರಿಸಿದ್ದರು. ನಾಗರಿಕರ ಆಯ್ಕೆಯ ಹಕ್ಕಾಗಿ­ರುವ ಧಾರ್ಮಿಕ ಸ್ವಾತಂತ್ರ್ಯ­ವನ್ನು ರಕ್ಷಿಸುವುದಾಗಿಯೂ ಭರವಸೆ ನೀಡಿ­ದ್ದರು. ಆಮೇಲೆ, ಸಂಸತ್ತಿನಲ್ಲೂ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿ­ಸುವ ನಿರ್ಣಯದ ಮೇಲೆ ಮಾತನಾಡುತ್ತಾ ‘ಭಾರತವೇ ಮೊದಲು ನಮ್ಮ ಏಕೈಕ ಧರ್ಮ ಹಾಗೂ ಸಂವಿಧಾನವೇ ಏಕೈಕ ಧಾರ್ಮಿಕ ಗ್ರಂಥ’ ಎಂದು ಘೋಷಿಸಿದ್ದರು. ರಾಷ್ಟ್ರದ ಆಡಳಿತ ಸೂತ್ರ ಹಿಡಿದ ನಾಯಕ ಬಾಯಿಬಿಟ್ಟು ಹೇಳಬೇಕಾದ ಹೇಳಿಕೆಗಳಲ್ಲ ಇವು. ಆದರೆ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ವಿವಿಧ ಧರ್ಮಗಳ ಬಗ್ಗೆ ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳು ಹಾಗೂ ‘ಘರ್ ವಾಪಸಿ’ಯಂತಹ ಕಾರ್ಯಕ್ರಮಗಳು ಇಂತಹ ವಿಪ­ರ್ಯಾಸದ ಸ್ಥಿತಿಯನ್ನು ಹುಟ್ಟುಹಾಕಿವೆ. ‘ಧರ್ಮದ ಆಧಾರದಲ್ಲಿ ಅವ­ಹೇಳನ­­ಕಾರಿ ಹೇಳಿಕೆ ನೀಡುವುದನ್ನು ತಡೆಯುವುದು ಪ್ರಧಾನಿಯಾಗಿರುವ ನನ್ನ ಪ್ರಾಥಮಿಕ ಕರ್ತವ್ಯವಾಗಿದೆ’ ಎಂದು ಮೋದಿ ಘೋಷಿಸಿದ್ದಾರೆ. ಸಂಸತ್ತಿನಲ್ಲಿ ಪ್ರಧಾನಿ­ಯವರ ಈ ಹೇಳಿಕೆಗಳು ಸರ್ಕಾರದ ನೀತಿಯನ್ನು ಪ್ರತಿ­ನಿಧಿಸುವಂತಹವು. ಹೀಗಿದ್ದೂ ಕೋಮುಭಾವನೆ ಬಿತ್ತುವ ರೀತಿಯಲ್ಲಿ ಬಿಜೆಪಿ ನಾಯಕರು ಹಾಗೂ ಸಂಘಪರಿವಾರದ ಉಗ್ರ ಹಿಂದುತ್ವ ನಾಯಕರು ಪ್ರಚೋದನ­ಕಾರಿ ಮಾತುಗಳನ್ನಾಡುವುದು ನಿಂತಿಲ್ಲ. ಸಮಾಜದಲ್ಲಿನ ಸೌಹಾರ್ದ ವಾತಾ­ವರಣ­ವನ್ನು ಹದಗೆಡಿಸುವ ಈ ಶಕ್ತಿಗಳನ್ನು ಸರ್ಕಾರ ಎಷ್ಟರ­ಮಟ್ಟಿಗೆ ಪರಿಣಾಮ­ಕಾರಿಯಾಗಿ ಮಟ್ಟ ಹಾಕುತ್ತದೆ ಎಂಬುದು ಮುಖ್ಯ. ಇಂತಹ ಮಾತುಗಳ ನಿಯಂತ್ರಣಕ್ಕೆ ನೆಲದ ಕಾನೂನುಗಳನ್ನೂ ಸಮರ್ಪಕವಾಗಿ ಬಳಸಬೇಕು. ಸಂಘ ಪರಿವಾರ ಹಾಗೂ ಬಿಜೆಪಿಯ ಹಿಂದುತ್ವ ಸಿದ್ಧಾಂತ, ಮೋದಿ­ಯವರು ಪ್ರತಿಪಾದಿಸಿಕೊಂಡು ಬಂದ ಅಭಿವೃದ್ಧಿ ಕಾರ್ಯಸೂಚಿಯನ್ನು ಬುಡ­ಮೇಲು ಮಾಡುವಂತಹದ್ದು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ, ಕೇಂದ್ರ­ದಲ್ಲಿ ಆಡಳಿತ ಸೂತ್ರ ಹಿಡಿದಾಗಲಿಂದ ಸಂಘ ಪರಿವಾರದ ಶಕ್ತಿಗಳು ವಿವಾದಾ­ತ್ಮಕ ವಾತಾವರಣ ಸೃಷ್ಟಿಸುವುದು ಮುಂದುವರಿದಿದೆ. ಹಿಂದುತ್ವ ಪ್ರತಿಪಾದನೆ­ಯಿಂದ ಲಾಭ ಗಳಿಸುವ ರಾಜಕಾರಣ ಸರಿಯಲ್ಲ. ಸಮಾಜ­ವನ್ನು ಧರ್ಮದ ಆಧಾರದ ಮೇಲೆ ಧ್ರುವೀಕರಿಸುವ ಇಂತಹ ಶಕ್ತಿಗಳು ಬೆಳೆಯ­ದಂತೆ ಬಗ್ಗುಬಡಿಯಬೇಕು, ಇಲ್ಲದಿದ್ದಲ್ಲಿ ಮತಾಂಧಶಕ್ತಿಗಳ ಕರಿ­ನೆರಳು, ಅಭಿವೃದ್ಧಿ ಮಂತ್ರ ಜಪಿಸುತ್ತಿರುವ ಮೋದಿ ನೇತೃತ್ವದ ಸರ್ಕಾರದ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.