ಶ್ರವಣಶಕ್ತಿಗೆ ಕುಂದಾಗದಿರಲಿ ಇಯರ್ ಫೋನ್ ಅಥವಾ ಹೆಡ್ ಫೋನ್‌ಗಳ ಮೂಲಕ ಕಿವಿಗಡಚಿಕ್ಕು­ವಂತಹ ಸಂಗೀತ ಆಲಿಸುವುದು ಶ್ರವಣಶಕ್ತಿಗೆ ಕುಂದು ತರಬಹುದು. ಈ ಪ್ರವೃತ್ತಿ­ಯಿಂದ ವಿಶ್ವದಾದ್ಯಂತ 100 ಕೋಟಿ ಯುವಜನರು ಶ್ರವಣ ಸಮಸ್ಯೆಗೆ ಒಳಗಾಗಬಹುದಾದ ಅಪಾಯಕ್ಕೆ ಸಿಲುಕಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿ ಎಚ್ಚರಿಸಿದೆ. ಕ್ಲಬ್‌, ಬಾರ್, ಪಬ್‌ಗಳಲ್ಲಿ ಅಬ್ಬರಿಸುವ ಸಂಗೀತ ಅಥವಾ ಕ್ರೀಡಾಕೂಟಗಳಂತಹ ಸಮಾ­ವೇಶ­­ಗಳಲ್ಲಿನ ಮೈಕಾಸುರನ ಅರ್ಭಟಗಳಿಂದಲೂ ಜನರ ಕೇಳುವ ಶಕ್ತಿ ಸೊರಗುತ್ತಿದೆ ಎನ್ನುವುದು ವಿಶ್ವ ಆರೋಗ್ಯ ಸಂಸ್ಥೆಯು ಕಂಡುಕೊಂಡಿ­ರುವ ಸತ್ಯ. ಶ್ರವಣ ಶಕ್ತಿಗೆ ಇದರಿಂದ ಆಗುವ ಹಾನಿ ತಾತ್ಕಾಲಿಕವಾದದ್ದೂ ಇರ­ಬಹುದು ಅಥವಾ ಶಾಶ್ವತವೂ ಆಗಿರಬಹುದು. ಇದು ಕೇವಲ ಶ್ರವಣ ಶಕ್ತಿಗೆ ಮಾತ್ರ­ವಲ್ಲ, ಹೃದಯದ ಕಾಯಿಲೆಗೂ ಕಾರಣವಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಎಚ್ಚರಿಸಿದೆ. ಶಬ್ದಮಾಲಿನ್ಯದ ಬಗ್ಗೆ ನಮ್ಮಲ್ಲಿ ನಾಗರಿಕ ಪ್ರಜ್ಞೆ ಇನ್ನೂ ಜಾಗೃತವಾಗಿಲ್ಲ ಎನ್ನುವುದು ನಿಜ. ಯಾವುದೇ ಹಬ್ಬವಾದರೂ ಊರು ತುಂಬಾ ಕೇಳಿಸು­ವಂತೆ ಮೈಕಾಸುರನ ಅರ್ಭಟ ಜನಜೀವನದ ಸಹಜ ಶೈಲಿಯೇ ಆಗಿದೆ. ಹಬ್ಬದ ಸಂದರ್ಭಗಳಲ್ಲಿ, ವಿಜಯೋತ್ಸವದ ಸಂದರ್ಭಗಳಲ್ಲಿ ಸಿಡಿಸುವ ಪಟಾಕಿ­ಗಳ ಶಬ್ದವಂತೂ ನಮ್ಮಲ್ಲಿ ಬಹಳ ದೊಡ್ಡ ಪಿಡುಗು. ಇದರಿಂದ ಸಾರ್ವಜನಿಕರಿಗೆ, ರೋಗಿಗಳಿಗೆ, ಗರ್ಭಿಣಿಯರಿಗೆ, ವಯೋವೃದ್ಧರಿಗೆ ಆಗುವ ತೊಂದರೆಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ರಾಷ್ಟ್ರದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕಾಗಿ 2005ರಲ್ಲಿ ಸುಪ್ರೀಂಕೋರ್ಟ್ ಮಾರ್ಗದರ್ಶಿ­ಸೂತ್ರ­ಗಳನ್ನು ಪ್ರಕಟಿಸಿತ್ತು. ಸಾರ್ವಜನಿಕ ಸ್ಥಳಗಳಲ್ಲಿಲೌಡ್ ಸ್ಪೀಕರ್‌ಗಳ ಬಳಕೆ, ವಾಹನಗಳಲ್ಲಿ ಜೋರಾಗಿ ಹಾರ್ನ್ ಮಾಡುವುದೂ ಸೇರಿದಂತೆ ಅನೇಕ ವಿಚಾರಗಳಿಗೆ ನಿಯಮಗಳನ್ನು ಸುಪ್ರೀಂಕೋರ್ಟ್ ರೂಪಿಸಿತ್ತು. ಆದರೆ ಈ ನಿಯಮಗಳು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಶಬ್ದಮಾಲಿನ್ಯ­ದಿಂದ ಜನರ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮದ ಬಗ್ಗೆ ಹೆಚ್ಚಿನವರಿಗೆ ತಿಳಿವಳಿಕೆಯೂ ಇಲ್ಲವಾಗಿದೆ. ಶೇ 50ರಷ್ಟು ಕಿವಿಯ ತೊಂದರೆಗಳನ್ನು ಬರದಂತೆ ತಡೆಯ­ಬಹುದು ಎಂಬ ಬಗ್ಗೆ ಜಾಗೃತಿ ಮೂಡಬೇಕಾಗಿದೆ. ಸಂಗೀತ-–ನೃತ್ಯ ಉತ್ಸವ­ಗಳಲ್ಲಿ ಅಬ್ಬರದ ಧ್ವನಿಯನ್ನು ಸಹನೀಯವಾಗುವಂತೆ ಕಡಿಮೆ ಮಾಡುವ ಮೂಲಕ, ಇಯರ್‌ಫೋನ್‌ ಇಟ್ಟುಕೊಂಡು ಸಂಗೀತ ಕೇಳುವವರು ತಮ್ಮ ಕಿವಿಯ ತಮಟೆಗೆ ತೊಂದರೆಯಾಗದಂತೆ ಸಣ್ಣ ಧ್ವನಿಯಲ್ಲಿ ಸಂಗೀತವನ್ನು ಆಸ್ವಾದಿಸುವ ಮೂಲಕ ಶ್ರವಣ ದೋಷಕ್ಕೆಡೆಯಾಗದಂತೆ ತಡೆಯಬಹುದು. ಮನೆಯಲ್ಲಿ ಟಿ.ವಿ ಧ್ವನಿಯ ಪ್ರಮಾಣವನ್ನು ಕಡಿಮೆ ಮಾಡುವುದು, ಕಾರಿನ ಸ್ಪೀಕರ್‌ನಲ್ಲಿ ಸಂಗೀತ ಕೇಳುವಾಗ ಮೆಲುಸ್ವರದಲ್ಲಿ ಆಸ್ವಾದಿಸುವುದು, ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಅನಗತ್ಯವಾಗಿ ಹಾರ್ನ್‌ ಬಾರಿಸ­ದಿರುವುದರ ಬಗ್ಗೆ ಜನರಲ್ಲಿ ಸಂವೇದನಾಶೀಲತೆ ಮೂಡಬೇಕು. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಸಂಘಟಿತವಾಗಿ ಆಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.