ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ನಿಯಮ ಉಲ್ಲಂಘಿಸಿ ರಾಜ್ಯದಾದ್ಯಂತ ನಗರ ಪ್ರದೇಶಗಳಲ್ಲಿ ನಿರ್ಮಿಸಿ­ರುವ ಕಟ್ಟಡಗಳು ಮತ್ತು ಅಕ್ರಮ ನಿವೇಶನಗಳ ಸಕ್ರಮಕ್ಕೆ ಸಂಬಂಧಿಸಿ­ದಂತೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅಕ್ರಮ -ಸಕ್ರಮ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕಳೆದ ತಿಂಗಳು ವಜಾ­ಗೊಳಿಸಿದ್ದ ಹೈಕೋರ್ಟ್, ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿತ್ತು. ಹೀಗಾಗಿ ಈಗ ರಾಜ್ಯದ 213 ನಗರ ಸ್ಥಳೀಯ ಸಂಸ್ಥೆಗಳು ಈ ಯೋಜನೆ ವ್ಯಾಪ್ತಿಗೆ ಬರಲಿವೆ. ಅಕ್ರಮ ಸಕ್ರಮದಿಂದ ಬೊಕ್ಕ­ಸಕ್ಕೆ ಸುಮಾರು ₨ 6000 ಕೋಟಿ ಸಂದಾಯ­ವಾಗುವ ನಿರೀಕ್ಷೆಯಿದೆ. ಈ ಹಣವನ್ನು ಉದ್ಯಾನ ಹಾಗೂ ಮೂಲ­ಸೌಕರ್ಯ­ಗಳ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಸರ್ಕಾರ ಹೇಳಿದೆ. ದೀರ್ಘಕಾಲ­ದಿಂದ ಜಾರಿಗೊಳ್ಳದೆ ಉಳಿದಿದ್ದ ಯೋಜನೆ ಇದು. ಈ ಬಗ್ಗೆ ವಿವಿಧ ರಾಜಕೀಯ ಪಕ್ಷಗಳ ಅನೇಕ ಮುಖ್ಯಮಂತ್ರಿಗಳು ನೀಡಿದ್ದ ಭರವಸೆ ಕಡೆಗೂ ಈಡೇರುತ್ತಿದೆ. ಇದರಿಂದ ರಾಜ್ಯದ ಅನೇಕ ಬಡ ಹಾಗೂ ಮಧ್ಯಮ­ವರ್ಗಗಳ ಕುಟುಂಬಗಳಿಗೆ ಅನುಕೂಲವಾಗಲಿದೆ. ತಮಗೊಂದು ಸೂರು ಬೇಕೆಂದು ಕಂದಾಯ ನಿವೇಶನ ಅಥವಾ ನಿವೇಶನಗಳಾಗಿ ಪರಿವರ್ತನೆ­ಯಾಗದ ಕೃಷಿ ಭೂಮಿ ಖರೀದಿಸಿ ಜನ ಮನೆ ಕಟ್ಟಿಕೊಂಡಿದ್ದರೆ ಅದಕ್ಕೆ ಸರ್ಕಾರವೇ ಹೊಣೆ. ಬಿಡಿಎ, ಕರ್ನಾಟಕ ಗೃಹ ಮಂಡಳಿ ಅಥವಾ ರಾಜ್ಯದ ಇತರ ನಗರ, ಪಟ್ಟಣಗಳಲ್ಲಿ ಆಯಾ ನಗರಸಭೆ, ಪುರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರಗಳು ನಿವೇಶನ ಹಂಚಲು ವಿಫಲವಾಗಿರುವುದೇ ಈ ಸಮಸ್ಯೆಯ ಮೂಲ. ಈ ಸಂಸ್ಥೆಗಳು ಸಮರ್ಥವಾಗಿ ಹಾಗೂ ಪ್ರಾಮಾ­ಣಿಕವಾಗಿ ಕಾರ್ಯ ನಿರ್ವಹಿಸಿ ನಿವೇಶನ ಅಥವಾ ಮನೆಗಳನ್ನು ಹಂಚಿ­ದ್ದಲ್ಲಿ ಈ ಅಕ್ರಮ ವಹಿವಾಟು ಮುಂದುವರಿಯುವುದು ಸಾಧ್ಯ­ವಿರುತ್ತಿರ­ಲಿಲ್ಲ ಎಂಬ ಸತ್ಯವನ್ನು ಸರ್ಕಾರ ಮನಗಾಣಬೇಕು. ಹಾಗೆಯೇ ಇಂತಹ ನಿವೇಶನಗಳಲ್ಲಿ ಕಟ್ಟಿದ ಮನೆಗಳಿಂದ ತೆರಿಗೆ ಸಂಗ್ರಹಿಸಿಕೊಂಡೇ ಬರುತ್ತಿರುವ ಸರ್ಕಾರ ಅವು ಅಕ್ರಮ ಎಂದು ಹೇಳುವುದು ನೈತಿಕ ಹೊಣೆಗಾರಿಕೆಯಿಂದ ತಪ್ಪಿಸಿ­ಕೊಂಡಂ­ತಾ­ಗು­ತ್ತದೆ. ವಸತಿ ಸೌಲಭ್ಯ ಒದಗಿಸದ ವಿವಿಧ ಅಂಗಸಂಸ್ಥೆಗಳ ವೈಫಲ್ಯ ಹಾಗೂ ಈ ವೈಫಲ್ಯದಿಂದ ಸಿಕ್ಕ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಹಣ, ಅಧಿಕಾರ ಮತ್ತು ತೋಳ್ಬಲ ಉಳ್ಳ ರಿಯಲ್ ಎಸ್ಟೇಟ್ ದಂಧೆ ನಡೆ­ಸುವ ಮಂದಿಯೂ ಈ ಅಕ್ರಮಗಳಿಗೆ ಹೊಣೆಗಾರರು. ಇಂತಹ ಬಹುತೇಕ ಮಂದಿ ಇಂದು ವಿಧಾನಮಂಡಲ ಹಾಗೂ ಸ್ಥಳೀಯ ಸಂಸ್ಥೆಗಳ ಆಡಳಿತ ವ್ಯವಸ್ಥೆಯ ಭಾಗವಾಗಿರುವುದು ದುರದೃಷ್ಟಕರ. ವಸತಿ ಉದ್ದೇಶದ ಆಸ್ತಿಗಳಲ್ಲಿ ಶೇ 50ರಷ್ಟು ಹಾಗೂ ವಾಣಿಜ್ಯ ಉದ್ದೇ­ಶದ ಆಸ್ತಿಗಳಲ್ಲಿನ ಶೇ 25ರಷ್ಟು ಉಲ್ಲಂಘನೆಗಳನ್ನು ಸಕ್ರಮಗೊಳಿಸುವುದಕ್ಕೆ ನಿಯಮ­ಗಳಲ್ಲಿ ಅವಕಾಶ ಇದೆ ಎಂದು ಸರ್ಕಾರ ಹೇಳಿದೆ. ಆದರೆ ಶೇ 100­ರಷ್ಟು ಉಲ್ಲಂಘನೆ ಮಾಡಿರುವ ಪ್ರಕರಣಗಳಲ್ಲಿ ಸರ್ಕಾರ ಏನು ಕ್ರಮ ಕೈಗೊಳ್ಳ­ಲಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಈ ಅಕ್ರಮವನ್ನು ಸಕ್ರಮಗೊಳಿಸುವ ವ್ಯವಹಾರ ಮತ್ತಷ್ಟು ಅಕ್ರಮಗಳಿಗೆ ದಾರಿ ಮಾಡಿಕೊಡದಂತೆ ಸರ್ಕಾರ ಎಚ್ಚರ ವಹಿಸಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಅನೇಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸನಿಹ­ದಲ್ಲೇ ಇವೆ. ಹೀಗಾಗಿ ರಾಜಕೀಯ ಲಾಭ ಗಳಿಕೆ ದೃಷ್ಟಿಗಿಂತ ಜನರ ಹಿತ ಆದ್ಯತೆ ಪಡೆಯಬೇಕು. ಹೆಚ್ಚಿದ ಜನಸಂಖ್ಯೆಯ ಬೇಡಿಕೆಗೆ ಅನುಗುಣವಾಗಿ ನಿವೇಶನ ಅಥವಾ ಮನೆಗಳನ್ನು ಹಂಚಲು ಸಮರ್ಪಕ ವ್ಯವಸ್ಥೆ ರೂಪಿಸಬೇಕು. ಏಕೆಂದರೆ ರಾಜ್ಯದ ನಗರಗಳು ಯೋಜಿತ ರೀತಿಯಲ್ಲಿ ಬೆಳವಣಿಗೆ ಹೊಂದು­ವುದು ಅಗತ್ಯ. ಅಕ್ರಮ ಕಟ್ಟಡಗಳ ನಿರ್ಮಾಣಗಳಿಂದ ನಗರಗಳು ಯದ್ವಾ­ತದ್ವಾ ಬೆಳೆಯುವುದಕ್ಕೆ ಆಸ್ಪದ ಇರಬಾರದು. ಇಂತಹದರ ವಿರುದ್ಧ ಇನ್ನು ಮುಂದಾ­ದರೂ ಕಟ್ಟುನಿಟ್ಟಿನ ಕ್ರಮಗಳನ್ನು ಪ್ರಾಮಾಣಿಕವಾಗಿ ಕೈಗೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.