ಅಸಂಸದೀಯ ನಡವಳಿಕೆ ಪ್ರಜಾಸತ್ತೆಗೆ ಕಳಂಕ ನೆರೆಯ ಕೇರಳದಲ್ಲಿ ಮಾರ್ಚ್ 13ರಂದು ರಾಜ್ಯ ಬಜೆಟ್ ಮಂಡನೆಯ ಭಾಷಣ ಕೇವಲ 6 ನಿಮಿಷದಲ್ಲಿ ಮುಗಿದಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರದ ಪ್ರಮುಖ ಅಂಗಪಕ್ಷವಾಗಿರುವ ಕೇರಳ ಕಾಂಗ್ರೆಸ್ (ಎಂ) ನಾಯಕ ಹಾಗೂ ಹಣಕಾಸು ಸಚಿವ ಕೆ.ಎಂ. ಮಣಿ ಅವರು ಮಂಡಿಸಿದ ದಾಖಲೆಯ 13ನೇ ಬಜೆಟ್ ಇದು. ಆದರೆ ಆರ್ಥಿಕ ವಿಚಾರಕ್ಕಿಂತ ರಾಜಕೀಯ ವಿಚಾರಗಳೇ ಮೇಲುಗೈ ಸಾಧಿಸಿದ ವಿದ್ಯಮಾನದಿಂದಾಗಿ ಅಂದು ಕೇರಳ ವಿಧಾನಸಭೆಯಲ್ಲಿ ನಡೆದ ದಾಂದಲೆ ಪ್ರಜಾತಂತ್ರದ ಕಗ್ಗೊಲೆಗೆ ಪ್ರತೀಕವಾಗಿತ್ತು. ಸದನದಲ್ಲಿ ಮನ ಬಂದಂತೆ ವರ್ತಿಸಿರುವ ಶಾಸಕರು, ಸ್ಪೀಕರ್ ಅವರ ಮೇಜು, ಕುರ್ಚಿಗಳನ್ನೂ ಎತ್ತಿ ಹಾಕಿ ಧ್ವಂಸಗೊಳಿಸಿದ್ದು ಆಘಾತಕಾರಿ. ಮೈಕು ಹಾಗೂ ಕಂಪ್ಯೂಟರ್‌ಗಳನ್ನು ಜಖಂಗೊಳಿಸಿ ನಡೆಸಿರುವ ದುಂಡಾವರ್ತನೆ, ವಿಧಾನಸಭೆಯ ಗೌರವಕ್ಕೆ ಮಸಿ ಬಳಿಯುವಂತಹದ್ದು. ವಿರೋಧವನ್ನು ಸೂಚಿಸಲು ಸಂಸದೀಯ ವ್ಯವಸ್ಥೆಯಲ್ಲಿ ಅನೇಕ ಮಾರ್ಗಗಳಿವೆ ಎಂಬುದನ್ನು ಮರೆತಂತೆ ಈ ಶಾಸಕರು ವರ್ತಿಸಿರುವುದು ಖಂಡನೀಯ. ಹಣಕಾಸು ಸಚಿವ ಮಣಿ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಸುಮಾರು ನಾಲ್ಕು ತಿಂಗಳಿಂದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸರ್ಕಾರ ಅಲ್ಲಗಳೆದುಕೊಂಡೇ ಬಂದಿದೆ. ಬಾರ್ ಲೈಸೆನ್ಸ್‌ಗಳ ನವೀಕರಣಕ್ಕೆ ಹಣ ಪಡೆದ ಆರೋಪವನ್ನು ಹಣಕಾಸು ಸಚಿವರು ಎದುರಿಸುತ್ತಿದ್ದಾರೆ. ಜಾಗೃತ ಹಾಗೂ ಭ್ರಷ್ಟಾಚಾರ ವಿರೋಧಿ ಬ್ಯೂರೊ ಈ ಸಂಬಂಧದಲ್ಲಿ ಮೊಕದ್ದಮೆಯನ್ನೂ ಹೂಡಿದೆ. ಇನ್ನೊಂದು ದಶಕದಲ್ಲಿ ಕೇರಳದಲ್ಲಿ ಸಂಪೂರ್ಣ ಪಾನನಿಷೇಧ ಜಾರಿಗೆ ಮುಂದಾಗಿರುವ ಸಂದರ್ಭ ಇದು ಎಂಬುದನ್ನು ನೆನಪಿಸಿಕೊಳ್ಳಬೇಕು. ಆದರೆ ಮಣಿ ನೇತೃತ್ವದ ಕೇರಳ ಕಾಂಗ್ರೆಸ್(ಎಂ) ಪಕ್ಷವನ್ನು ದೂರ ಮಾಡಿಕೊಳ್ಳುವ ಸ್ಥಿತಿಯಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಲ್ಲ. ಆ ಪಕ್ಷದ 9 ಶಾಸಕರ ಬೆಂಬಲ ಚಾಂಡಿ ಸರ್ಕಾರದ ಉಳಿವಿಗೆ ಅಗತ್ಯ. ಹೀಗಾಗಿ ಅಲ್ಪಾವಧಿಯ ರಾಜಕೀಯ ಹಿತಾಸಕ್ತಿ ಮೇಲುಗೈ ಸಾಧಿಸಿರುವುದು ಸ್ಪಷ್ಟ. ಈ ಪ್ರಕರಣದ ವಿಚಾರಣೆ ಇನ್ನೂ ಪೂರ್ಣವಾಗಿಲ್ಲ. ಅಪರಾಧ ಸಾಬೀತಾಗುವವರೆಗೆ ಅವರು, ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಲು ಸಾಂವಿಧಾನಿಕವಾಗಿ ಹಕ್ಕಿದೆ ಎಂಬುದೂ ನಿಜ. ಆದರೆ ನೈತಿಕತೆಯ ನೆಲೆಯಲ್ಲಿ ಪ್ರಶ್ನೆಗಳೇಳುತ್ತವೆ. ಈ ಪ್ರಶ್ನೆಗಳನ್ನೆತ್ತಲು ಪ್ರತಿಪಕ್ಷ ಗಳು ಅನುಸರಿಸಿದ ಮಾರ್ಗ ಸಭ್ಯತೆಯ ಎಲ್ಲೆಯನ್ನು ಮೀರಿದೆ. ಎಡಪಕ್ಷದ ಶಾಸಕಿಯೊಬ್ಬರು ಕಾಂಗ್ರೆಸ್ ಶಾಸಕರೊಬ್ಬರಿಗೆ ಕಚ್ಚಿದ ಆರೋಪವನ್ನೂ ಹೊರಿಸಲಾಗಿದೆ. ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚೆ, ವಾಗ್ವಾದಗಳಿಗೆ ಅವಕಾಶವಿದೆ ಎಂಬುದನ್ನೇ ಮರೆತು ಸದನದಲ್ಲಿ ಇಂತಹ ಅರಾಜಕತೆಗೆ ಕಾರಣರಾಗಿದ್ದು ಸರ್ವಥಾ ಸರಿಯಲ್ಲ. ಈ ದಾಂದಲೆಯಿಂದಾಗಿ, ಬಜೆಟ್‌ನಲ್ಲಿರುವ ವಿಚಾರಗಳಿಗಿಂತ ಕೇರಳ ಶಾಸನಸಭೆಯ ಒಳಗೆ ಹಾಗೂ ಹೊರಗೆ ನಡೆದ ಹಿಂಸಾತ್ಮಕ ಘಟನಾವಳಿಗಳೇ ಕಪ್ಪು ಚುಕ್ಕೆಯಾಗಿ ಜನರ ನೆನಪಲ್ಲಿ ದಾಖಲಾಗಲಿವೆ. ಅದೂ ಅತಿ ಹೆಚ್ಚು ಸಾಕ್ಷರತೆ ಹಾಗೂ ರಾಜಕೀಯ ಜಾಗೃತಿ ಇರುವ ರಾಜ್ಯದಲ್ಲಿ ಇಂತಹ ಅರಾಜಕತೆ ಏರ್ಪಟ್ಟಿದ್ದು ವಿಷಾದನೀಯ. ಇತ್ತೀಚಿನ ದಿನಗಳಲ್ಲಿ ಸಂಸದೀಯ ಅಥವಾ ಶಾಸನಸಭೆಯ ಕಲಾಪಗಳಿಗೆ ಅಡ್ಡಿಪಡಿಸುವ ವಿದ್ಯಮಾನಗಳು ನಿಯಮಿತವಾಗಿ ಜರುಗುತ್ತಿವೆ. ಆದರೆ ಕಳೆದ ವಾರ ತಿರುವನಂತಪುರದಲ್ಲಿ ಶಾಸಕಿಯರೂ ಸೇರಿದಂತೆ ವಿಧಾನಸಭಾ ಸದಸ್ಯರು ನಡೆಸಿದ ದುಂಡಾವರ್ತನೆಗಳು, ಪ್ರದರ್ಶಿಸಿದ ಅನಾಗರಿಕ ವರ್ತನೆಗಳು ಜನಪ್ರತಿನಿಧಿಗಳ ಗೌರವಕ್ಕೆ ಚ್ಯುತಿ ತಂದಿವೆ. ಪ್ರಜಾತಂತ್ರದ ಮೌಲ್ಯಗಳನ್ನು ಗೌರವಿಸುವುದನ್ನು ಜನಪ್ರತಿನಿಧಿಗಳು ಮೊದಲು ಕಲಿಯಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.