ಸೌರಶಕ್ತಿ ಬಳಕೆಯ ಪ್ರಯೋಗಗಳು ಹೆಚ್ಚಲಿ ಸೂರ್ಯನ ಬೆಳಕು ನಮಗೆ ಲಭ್ಯವಿರುವ ಅತ್ಯಂತ ಮೂಲರೂಪದ ಶಕ್ತಿ. ಮನುಷ್ಯ ಸೇರಿದಂತೆ ಎಲ್ಲ ಜೀವಿಗಳೂ ಬದುಕುಳಿಯಲು ಅವಲಂಬಿಸಿರುವುದು ವಿಪುಲವಾಗಿ ಸಿಗುವ ಈ ಶಕ್ತಿ ಮೂಲವನ್ನೇ. ಹೀಗಾಗಿ ಮಾನವ ನಿರ್ಮಿತ ಯಂತ್ರಗಳನ್ನು ಸೌರಶಕ್ತಿಯಿಂದ ಚಲಾಯಿಸುವ ಕಲ್ಪನೆ ಪ್ರಾಚೀನ ಕಾಲದಿಂದಲೂ ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಲೇ ಬಂದಿವೆ. ಇದಕ್ಕೆ ಸೌರಶಕ್ತಿ ಚಾಲಿತ ವಿಮಾನ ಇತ್ತೀಚಿನ ವರ್ಷಗಳ ಕೊಡುಗೆ. ಸ್ಟಿಟ್ಜರ್ಲೆಂಡ್‌ನ ಸೋಲಾರ್‌ ಇಂಪಲ್ಸ್ ಎಂಬ ಕಂಪೆನಿ ವಿನ್ಯಾಸಪಡಿಸಿರುವ ಜಗತ್ತಿನ ಈ ಮೊದಲ ಸೌರ ವಿಮಾನದ ಪ್ರಾಯೋಗಿಕ ಪರೀಕ್ಷೆಗಳು ಈಗಾಗಲೇ ಯಶಸ್ವಿಯಾಗಿರುವುದರಿಂದ, ಈಗ ಈ ವಿಮಾನ ವಿಶ್ವ ಪರ್ಯಟನೆಗೆ ಮುಂದಾಗಿದೆ. ಸೌರ ವಿಮಾನದ ಯೋಜನೆಯನ್ನು ಕಂಪೆನಿ ಕೈಗೆತ್ತಿಕೊಂಡದ್ದು 2003ರಲ್ಲಿ. 70 ತಂತ್ರಜ್ಞರನ್ನೊಳಗೊಂಡ ತಂಡ ಶ್ರಮವಹಿಸಿ ಸೋಲಾರ್‌ ಇಂಪಲ್ಸ್– 2 ಎಂಬ ಹೆಸರಿನ ಈ ವಿಮಾನವನ್ನು ರೂಪಿಸಿದೆ. ಕಂಪೆನಿಯ ಸ್ಥಾಪಕ ಬರ್ಟ್ರಾಂಡ್ ಪಿಕಾರ್ಡ್ ಹಾಗೂ ಸಿಇಒ ಆಂಡ್ರೆ ಬೋರ್ಶ್‌ಬರ್ಗ್ 2013ಕ್ಕೆ ನಿಗದಿಪಡಿಸಿದ್ದ ವಿಶ್ವ ಪರ್ಯಟನೆಯ ಗುರಿ ಈಗ ಈಡೇರುತ್ತಿದೆ. ಅಬುಧಾಬಿಯಿಂದ ಹೊರಟಿರುವ ವಿಮಾನ ಈಗ ಭಾರತದ ಅಹಮದಾಬಾದ್‌ನಲ್ಲಿದ್ದು ವಾರಾಣಸಿಗೆ ತೆರಳುವ ಸಿದ್ಧತೆಯಲ್ಲಿದೆ. ಒಟ್ಟು 5 ತಿಂಗಳುಗಳ ಕಾಲ 35,200 ಕಿ.ಮೀ. ಕ್ರಮಿಸಿ ಭೂಮಿಯನ್ನು ಈ ವಿಮಾನ ಸುತ್ತಿ ಬರಲಿದೆ. ಮಾನವನ ಅವಿರತ ಅನ್ವೇಷಣೆಯ ತವಕದ ಪ್ರತೀಕ ಇದು. ಸೋಲಾರ್‌ ಇಂಪಲ್ಸ್– 2 ರೆಕ್ಕೆಗಳಲ್ಲಿ ಸಾವಿರಾರು ಸೌರಕೋಶಗಳಿವೆ. ಹಗಲಿನಲ್ಲಿ ಇಲ್ಲಿ ಸಂಚಯವಾಗುವ ಸೌರಶಕ್ತಿಯಿಂದ ರಾತ್ರಿ ವೇಳೆಯೂ ಸುಗಮ ಸಂಚಾರ ಸಾಧ್ಯವಾಗಲಿದೆ. ಗಂಟೆಗೆ 80 ಕಿ.ಮೀ. ಕ್ರಮಿಸುವ ವಿಮಾನದ ವೇಗ ಸದ್ಯಕ್ಕೆ ಬೈಸಿಕಲ್‌ಗಳು ಮತ್ತು ಕೆಲವು ಪಕ್ಷಿಗಳನ್ನಷ್ಟೇ ಹಿಂದಿಕ್ಕಬಲ್ಲದು. ಒಬ್ಬ ಪೈಲಟ್‌ ಕೂರುವಷ್ಟು ಸ್ಥಳಾವಕಾಶ ಮಾತ್ರವಿರುವ ಕ್ಯಾಬಿನ್‌ ತೀರಾ ಇಕ್ಕಟ್ಟಾಗಿದ್ದು, ಪ್ರವಾಸ ಪ್ರಯಾಸಕರವೇ ಆಗಿರುತ್ತದೆ. ಇಬ್ಬರು ಪೈಲಟ್‌ಗಳು ಪ್ರವಾಸದುದ್ದಕ್ಕೂ ಸರದಿಯಂತೆ ವಿಮಾನ ಚಾಲನೆ ಮಾಡಲಿ ದ್ದಾರೆ. ಭೂಮಿ ಮತ್ತು ಸಮುದ್ರಗಳಲ್ಲಿ ಈ ಹಿಂದೆ ನಡೆದಿರುವ ಶ್ರಮದಾಯಕ ಸಾಹಸದಂತೆ ಇದು ಸಹ ಧೈರ್ಯ, ಬಲ, ಅವಿರತ ಶ್ರಮ ಹಾಗೂ ಕೌಶಲವನ್ನು ಬೇಡುತ್ತದೆ. ಇಷ್ಟಾದರೂ ಇದು ಸೌರಶಕ್ತಿಯಿಂದ ವಿಮಾನ ಚಾಲನೆ ಸಾಧ್ಯ ಎಂಬುದನ್ನು ಮನಗಾಣಿಸುವ ಪ್ರಯೋಗಾರ್ಥ ವಿಮಾನ ಅಷ್ಟೆ. ಮಳೆಗಾಲದಲ್ಲಿ, ಮೋಡ ಕವಿದಿದ್ದಾಗ ಅಥವಾ ಸೂರ್ಯನ ಬೆಳಕು ಕಡಿಮೆ ಇದ್ದಾಗ ಸೌರಶಕ್ತಿಯ ಸಮರ್ಪಕ ಬಳಕೆ ಸಾಧ್ಯತೆಗೆ ಜಗತ್ತಿನಲ್ಲಿ ಇನ್ನೂ ಸಮರ್ಪಕ ಉತ್ತರ ಲಭ್ಯವಾಗಿಲ್ಲ. ಹಾಗೆ ನೋಡಿದರೆ, ಸೌರಶಕ್ತಿ ಬಳಸಿ ಕಾರ್ಯ ನಿರ್ವಹಿಸುವ ಎಲ್ಲ ಯಂತ್ರಗಳ ದೊಡ್ಡ ಮಿತಿಯೇ ಇದು. ರೈಟ್‌ ಸಹೋದರರು ಮೊತ್ತ ಮೊದಲ ಬಾರಿಗೆ ವಿಮಾನವನ್ನು ಕಂಡುಹಿಡಿದಾಗ ಜನರಿಗೆ ವಾಸ್ತವದಲ್ಲಿ ಇಂತಹದ್ದೊಂದು ವಾಹನದ ಬಳಕೆಯೇ ಅಸಾಧ್ಯ ಎನಿಸಿತ್ತು. ಆದರೆ ಅದು ಮುಂದೆ ವೈಮಾನಿಕ ಕ್ಷೇತ್ರಕ್ಕೆ ಭದ್ರ ಬುನಾದಿಯಾಯಿತು. ಅದೇ ರೀತಿ ಈಗಲೂ ಸೋಲಾರ್‌ ಇಂಪಲ್ಸ್– 2 ತನಗಿರುವ ಮಿತಿಗಳನ್ನೆಲ್ಲ ದಾಟಿ ಮುನ್ನಡೆದಿದ್ದೇ ಆದರೆ, ಅದರ ಯಶಸ್ಸು ಉತ್ತಮ ಹಾಗೂ ಅತ್ಯಾಧುನಿಕ ವಿಮಾನಗಳ ಅಭಿವೃದ್ಧಿಗೆ ದಾರಿಯಾಗಬಲ್ಲದು. ಪಳೆಯುಳಿಕೆ ಇಂಧನಚಾಲಿತ ವಿಮಾನಗಳು ಸಾಕಷ್ಟು ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಇದರಿಂದಾಗಿ ಪರ್ಯಾಯ ಇಂಧನ ಮೂಲಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೂ ಹಲವಾರು ಅರೆಕೊರೆಗಳಿಂದಾಗಿ ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಸಾಧ್ಯವಾಗಿಲ್ಲ. ಇಂತಹ ಸ್ಥಿತಿಯಲ್ಲಿ, ಸೌರ ವಿಮಾನವು ವಿಶ್ವ ಪರ್ಯಟನೆಗೆ ಹೊರಟಿದೆ ಎಂಬ ಸಂಗತಿಯೇ ವಿಮಾನಯಾನದ ಸಾಹಸಗಾಥೆ ಹಾಗೂ ಶುದ್ಧ ಇಂಧನದ ಶೋಧನೆಯಲ್ಲಿ ಐತಿಹಾಸಿಕ ಸಂಗತಿ. ಸೌರಶಕ್ತಿ ಚಾಲಿತ ವಿಮಾನ ವಾಣಿಜ್ಯ ಬಳಕೆಗೂ ಮುಂದೆ ಲಭ್ಯವಾದಲ್ಲಿ ಅದು ಅಗ್ಗವಾಗಿರುತ್ತದೆ. ಅದಕ್ಕಾಗಿ ನಾವು ಪರಿಸರದ ಬೆಲೆಯನ್ನಂತೂ ತೆರಬೇಕಾಗಿರುವುದಿಲ್ಲ. ಹೀಗಾಗಿ ಈ ವಿಮಾನದ ಪ್ರಗತಿಯನ್ನು ಇಡೀ ವಿಶ್ವ ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿದೆ. ಇದು ಯಶಸ್ವಿಯಾಗಿ, ವಾಣಿಜ್ಯ ಬಳಕೆ ಉದ್ದೇಶದ ವಿಮಾನವನ್ನು ಅಭಿವೃದ್ಧಿಪಡಿಸುವುದು ಸಾಧ್ಯವಾದಲ್ಲಿ ವಿಮಾನಯಾನ ಕ್ಷೇತ್ರದಲ್ಲಿ ಹಸಿರು ಭವಿಷ್ಯಕ್ಕೆ ಮುನ್ನಡಿ ಇಟ್ಟಂತಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.