ಮೀಸಲು ನೀತಿಯ ತರ್ಕ ತೃಣೀಕರಿಸದಿರಿ ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಜಾಟ್ ಸಮುದಾಯದ ಸೇರ್ಪಡೆಯನ್ನು ಸುಪ್ರೀಂಕೋರ್ಟ್ ಅನೂರ್ಜಿತಗೊಳಿಸಿದೆ. ಬಿಹಾರ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಮಧ್ಯಪ್ರದೇಶ, ರಾಜಸ್ತಾನ, ಉತ್ತರಪ್ರದೇಶ ಮುಂತಾದ ಒಂಬತ್ತು ರಾಜ್ಯಗಳಲ್ಲಿ ಪ್ರಭಾವಶಾಲಿಯಾಗಿರುವ ಜಾಟ್ ಸಮುದಾಯವನ್ನು ಸಂಪ್ರೀತಗೊಳಿಸಲು ಕೈಗೊಳ್ಳಲಾದ ನಿರ್ಧಾರಕ್ಕೆ ಕೋರ್ಟ್ ಮನ್ನಣೆ ನೀಡಿಲ್ಲ. ಇಂತಹ ‘ಮತಬ್ಯಾಂಕ್ ರಾಜಕಾರಣ’ಕ್ಕೆ ಸುಪ್ರೀಂಕೋರ್ಟ್ ಸರಿಯಾಗಿಯೇ ಚಾಟಿ ಬೀಸಿದೆ. ಇಂತಹದೊಂದು ನಿರ್ಧಾರ, ಮೀಸಲು ನೀತಿಯ ಹಿಂದಿರುವ ತರ್ಕವನ್ನೇ ಕ್ಷುಲ್ಲಕೀಕರಣಗೊಳಿಸುವಂತಹದ್ದು. ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ 2014ರ ಮಾರ್ಚ್ 4ರಂದು ಆಗ ಆಡಳಿತದಲ್ಲಿದ್ದ ಯುಪಿಎ ಸರ್ಕಾರ ಕೈಗೊಂಡ ಆತುರದ ನಿರ್ಧಾರ ಇದು. ಈ ಬಗ್ಗೆ ಕೇಂದ್ರ ಅಧಿಸೂಚನೆ ಹೊರಡಿಸಿದ ಮರುದಿನವೇ ಮಾರ್ಚ್ 5ರಂದು ಮಾದರಿ ನೀತಿ ಸಂಹಿತೆ ಜಾರಿಯಾಗಿತ್ತು. ಚುನಾವಣೆಯಲ್ಲಿ ರಾಜಕೀಯ ಲಾಭ ಗಳಿಸುವ ಉದ್ದೇಶದಿಂದ ಅನುಸರಿಸಿದ ಈ ಕಾರ್ಯತಂತ್ರ ಫಲ ನೀಡಲಿಲ್ಲ. ಜಾಟ್ ಸಮುದಾಯ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿಗಳು ಗೆದ್ದುಬರಲಿಲ್ಲ. ಆದರೆ ಈ ವಿಚಾರದಲ್ಲಿ 2014ರ ಮೇ ತಿಂಗಳಲ್ಲಿ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಿದ ಎನ್‌ಡಿಎ ಸರ್ಕಾರವೂ ಭಿನ್ನ ನಿಲುವನ್ನೇನೂ ಹೊಂದಿಲ್ಲ. ಕೋರ್ಟ್‌ನಲ್ಲಿ ಈ ವಿಚಾರಕ್ಕೆ ಅದು ಬೆಂಬಲ ತೋರಿದೆ. ಈಗ ಕೋರ್ಟ್ ತೀರ್ಪು ಹೊರಬಿದ್ದ ನಂತರ, ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಬೇಕೆಂದು ಪಕ್ಷಭೇದ ಮರೆತು ಜಾಟ್ ಸಮುದಾಯದ 27 ಸಂಸತ್ ಸದಸ್ಯರು ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಆದರೆ ಇಂತಹ ರಾಜಕಾರಣ ಸಾಮಾಜಿಕ, ಆರ್ಥಿಕ ನ್ಯಾಯಕ್ಕಾಗಿ ನೀಡುವ ಮೀಸಲು ನೀತಿಯನ್ನು ದುರ್ಬಲಗೊಳಿಸುವಂತಹದ್ದು. ಹೀಗಾಗಿಯೇ ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವೂ (ಎನ್‌ಸಿಬಿಸಿ) ಈ ನಿರ್ಧಾರಕ್ಕೆ ವಿರೋಧ ತೋರಿತ್ತು. ಇಂತಹದೊಂದು ನಿರ್ಧಾರದಿಂದ ಕೇಂದ್ರ ಸರ್ಕಾರದ ಹುದ್ದೆ ಹಾಗೂ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ‘ರಾಜಕೀಯವಾಗಿ ಸಂಘಟಿತ’ವಾಗಿರುವ ಜಾಟ್ ಸಮುದಾಯಕ್ಕೆ ಶೇ 27ರಷ್ಟು ಮೀಸಲು ಸಾಧ್ಯವಾಗುತ್ತಿತ್ತು. ಇದರಿಂದ ಅತಿ ಹಿಂದುಳಿದ ವರ್ಗಗಳಿಗೆ ಅವಕಾಶಗಳು ನಷ್ಟವಾಗುತ್ತವೆ ಎಂಬ ಕಳಕಳಿಯನ್ನು ಎನ್‌ಸಿಬಿಸಿ ವ್ಯಕ್ತಪಡಿಸಿತ್ತು. ಒಬಿಸಿ ವರ್ಗದಡಿ ಜಾಟ್ ಸಮುದಾಯದ ಸೇರ್ಪಡೆಗೆ ಮುಖ್ಯ ಮಾನದಂಡ ಆಗಿದ್ದುದು ಅವರ ಶೈಕ್ಷಣಿಕ ಹಿಂದುಳಿಯುವಿಕೆ. ಆದರೆ ಭೂಒಡೆತನ ಹೊಂದಿದ್ದು ರಾಜಕೀಯವಾಗಿ ಸಂಘಟಿತವಾಗಿರುವ ಜಾಟ್ ಸಮುದಾಯದ ಪ್ರಾಬಲ್ಯವನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿರಲಿಲ್ಲ. ಹೀಗಾಗಿ ಇಂತಹ ನಿರ್ಣಯವನ್ನು ‘ಹಿನ್ನಡೆಯ ಆಡಳಿತ’ ಎಂದು ಸುಪ್ರೀಂಕೋರ್ಟ್ ಬಣ್ಣಿಸಿರುವುದು ಸರಿಯಾದದ್ದು. ಸಮುದಾಯವೊಂದಕ್ಕೆ ಹಿಂದುಳಿದ ಸ್ಥಾನಮಾನ ನೀಡಲು ‘ಜಾತಿ’ ಹಾಗೂ ‘ಗತ ಇತಿಹಾಸದಲ್ಲಿ ನಡೆದುಹೋದ ಅನ್ಯಾಯ’ಗಳಷ್ಟೇ ಪರಿಗಣನೆಗಳಾಗಬಾರದು ಎಂಬ ಅಭಿಪ್ರಾಯವನ್ನೂ ಈ ತೀರ್ಪು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ವ್ಯಕ್ತಪಡಿಸಿರುವುದು ಹೊಸ ಚರ್ಚೆಗಳಿಗೆ ನಾಂದಿಯಾಗುವಂತಹದ್ದು. ಹೊಸದಾಗಿ ಉದಯವಾಗುತ್ತಿರುವ ಸಮುದಾಯಗಳನ್ನೂ ಮೀಸಲು ನೀತಿಗೆ ಪರಿಗಣಿಸುವುದು ಅವಶ್ಯವಿದೆ ಎಂದು ಹೇಳಿರುವ ಸುಪ್ರೀಂಕೋರ್ಟ್ ಈ ಸಂಬಂಧದಲ್ಲಿ ಉದಾಹರಣೆಯಾಗಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಉಲ್ಲೇಖಿಸಿದೆ. ಲೈಂಗಿಕ ಅಲ್ಪಸಂಖ್ಯಾತರನ್ನು ಒಬಿಸಿ ವರ್ಗಕ್ಕೆ ಸೇರ್ಪಡೆಗೊಳಿಸುವ ಕುರಿತಂತೆ ಈ ಹಿಂದೆ ನೀಡಲಾಗಿದ್ದ ಸುಪ್ರೀಂಕೋರ್ಟ್ ತೀರ್ಪನ್ನೂ ಈ ಸಂದರ್ಭದಲ್ಲಿ ಪ್ರಸ್ತಾಪಿಸಲಾಗಿದೆ. ಹೊಸದಾಗಿ ಹೊರಹೊಮ್ಮುತ್ತಿರುವ ಹಿಂದುಳಿದ ವರ್ಗಗಳನ್ನು ಗುರುತಿಸಲು ಹೊಸ ನಿಯಮಗಳನ್ನು ರೂಪಿಸುವ ಅಗತ್ಯವನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿರುವುದು ಸರಿ. ‘ಸಕಾರಾತ್ಮಕ ತಾರತಮ್ಯ’ದ (ಅಫರ್ಮೇಟಿವ್ ಆ್ಯಕ್ಷನ್) ಪರಿಕಲ್ಪನೆಯನ್ನು ಪುನರ್ವಿಮರ್ಶಿಸುವ ಅಗತ್ಯದ ಬಗ್ಗೆ ಸುಪ್ರೀಂಕೋರ್ಟ್ ಸಲಹೆ ಸ್ವಾಗತಾರ್ಹ. ಹೀಗಿದ್ದೂ ಜಾತಿ ಎಂಬುದು ಈ ನೆಲದ ವಾಸ್ತವ ಎಂಬುದನ್ನು ಮರೆಯಲಾಗದು. ಆಧುನಿಕ ಭಾರತದಲ್ಲೂ ಜಾತಿ ತಾರತಮ್ಯ, ಜಾತಿ ವೈಷಮ್ಯ ಹಾಗೂ ಜಾತಿ ಕಾರಣಕ್ಕಾಗಿಯೇ ದಮನಗೊಳ್ಳುವ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಹೀಗಾಗಿ ಒಬಿಸಿ ವರ್ಗಗಳಲ್ಲಿರುವ ಸಮಾಜೋ ಆರ್ಥಿಕ ಸ್ಥಾನಮಾನ ಪುನರ್ವಿಮರ್ಶೆ ಆಗಬೇಕು. ಒಬಿಸಿ ವರ್ಗಕ್ಕೆ ಸೇರ್ಪಡೆಯಾಗಲು ಸಮುದಾಯಗಳಿಗಿರುವ ಅರ್ಹತೆ ಅಳೆಯುವುದು ಸಾಧ್ಯವಾಗಬೇಕು. ಇಂತಹ ವಿಚಾರಗಳ ಬಗ್ಗೆ ರಾಜ್ಯದಲ್ಲಿ ನಡೆಯಲಿರುವ ಜಾತಿ ಜನಗಣತಿ ಬೆಳಕು ಚೆಲ್ಲುವಂತಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.