ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಸಿಬಿಐ ತನಿಖೆ ಸ್ವಾಗತಾರ್ಹ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಾನ್ವೆಂಟ್ ಶಾಲೆಯೊಂದರಲ್ಲಿ ಕ್ರೈಸ್ತ ಸನ್ಯಾಸಿನಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಹಿಸಿದ್ದಾರೆ. ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಪರಿಗಣಿಸಿ ಸಿಬಿಐ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ ಎಂದವರು ಹೇಳಿದ್ದಾರೆ. ಆದರೆ ಈ ಪ್ರಕರಣದ ಗಾಂಭೀರ್ಯ ಅವರಿಗೆ ಅರ್ಥವಾಗಲು ಐದು ದಿನಗಳು ಬೇಕಾದವು ಎನ್ನುವುದು ವಿಪರ್ಯಾಸ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿತ್ತು. ಜೊತೆಗೆ, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಪಶ್ಚಿಮ ಬಂಗಾಳದಲ್ಲಿ ರೂಪುಗೊಂಡ ಜನಾಗ್ರಹ, ಮುಖ್ಯಮಂತ್ರಿಗಳ ಹಟಮಾರಿ ನಿಲುವನ್ನು ಸಡಿಲಗೊಳಿಸಲು ಪ್ರಮುಖ ಕಾರಣವಾಯಿತು. ಎಪ್ಪತ್ತೊಂದು ವರ್ಷದ ವೃದ್ಧ ಸನ್ಯಾಸಿನಿಯ ಮೇಲೆ ಅತ್ಯಾಚಾರ ನಡೆದ ಕ್ರೌರ್ಯ ಪ್ರಕರಣ ಲೋಕಸಭೆಯಲ್ಲಿ ಪಕ್ಷಭೇದ ಮರೆತು ಖಂಡನೆಗೊಳಗಾದುದು ಕೂಡ ಗಮನಾರ್ಹ. ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಮಮತಾ ಬ್ಯಾನರ್ಜಿ ಹೇಳಿರುವುದು ಸ್ವಾಗತಾರ್ಹ. ಅದು ಅವರ ಕರ್ತವ್ಯ ಕೂಡ. ಈ ತನಿಖೆಯಿಂದ ಪ್ರಕರಣಕ್ಕೆ ಸಂಬಂಧಿಸಿದ ಅನೇಕ ಸತ್ಯಗಳು ಹೊರಬರಬೇಕಾಗಿವೆ. ಇದು ಡಕಾಯಿತಿಯ ಕ್ರೌರ್ಯವೋ ಅಥವಾ ಕೋಮುದ್ವೇಷ ಪ್ರೇರಿತ ಘಟನೆಯೋ ಎನ್ನುವುದು ತಿಳಿಯಬೇಕಾಗಿದೆ. ತನಿಖೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವುದರ ಜೊತೆಗೆ, ಇಂಥ ಘಟನೆಗಳನ್ನು ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಬೇಕಾದ ಜರೂರತ್ತು ಸರ್ಕಾರದ ಮೇಲಿದೆ. ದೈನಂದಿನ ಆಗುಹೋಗುಗಳಂತೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಬರೀ ಖಂಡಿಸಿದರಷ್ಟೇ ಸಾಲದು. ತನಿಖೆಯ ಔಪಚಾರಿಕ ವಿಧಿಗಳನ್ನು ನಡೆಸಿ ಸರ್ಕಾರ ಕೈ ತೊಳೆದುಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವ ಅನಿಸಿಕೆ ಜನರಲ್ಲಿದೆ. ಈ ಅಪನಂಬಿಕೆಯನ್ನು ಹೋಗಲಾಡಿಸುವ ಸವಾಲು ಕೂಡ ಸರ್ಕಾರದ ಮುಂದಿದೆ. ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕೋಮು ದ್ವೇಷಕ್ಕೆ ಪ್ರೇರಣೆ ನೀಡು ವಂತಹ ಪ್ರಕರಣಗಳು ಸತತವಾಗಿ ನಡೆಯುತ್ತಿವೆ. ಹರಿಯಾಣದಲ್ಲಿ ಚರ್ಚ್‌ ಮೇಲೆ ನಡೆದ ದಾಳಿ, ‘ಮಸೀದಿಗಳು ಧಾರ್ಮಿಕ ಕೇಂದ್ರಗಳಲ್ಲ, ಅವುಗಳನ್ನು ನೆಲಸಮ ಮಾಡಬಹುದು’ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರು ಅಸ್ಸಾಂನಲ್ಲಿ ನೀಡಿದ ಹೇಳಿಕೆ, ಭಗವದ್ಗೀತೆ ರಾಷ್ಟ್ರೀಯ ಗ್ರಂಥ ಆಗಬೇಕು ಎನ್ನುವ ಚರ್ಚೆಗಳು ಹಾಗೂ ‘ಘರ್‌ ವಾಪಸಿ’ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಭಾರತದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಗೆ ಒದಗಿರುವ ಆತಂಕಕ್ಕೆ ಉದಾಹರಣೆ ಗಳಾಗಿವೆ. ಸಂಸ್ಕೃತಿ–ಧರ್ಮದ ರಕ್ಷಣೆಯ ಕಾವಲು ಗಾರರಂತೆ ವರ್ತಿಸುತ್ತಿರುವ ಕೆಲವರು ಸಂವಿಧಾನಕ್ಕೆ ಅತೀತರಂತೆ ವರ್ತಿಸುತ್ತಿರುವುದು ಹಾಗೂ ತಮ್ಮದಲ್ಲದ ಸಂಪ್ರದಾಯ–ಧರ್ಮಗಳನ್ನು ಅಸಹನೆ ಯಿಂದ ನೋಡುತ್ತಿರುವುದು ಭಾರತ ಗಣತಂತ್ರದ ಆಶಯಕ್ಕೆ ಧಕ್ಕೆ ತರುವಂತಿದೆ. ‘ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ನಮ್ಮ ಸರ್ಕಾರ ಕಟಿಬದ್ಧವಾಗಿದ್ದು, ಭಾರತದಲ್ಲಿ ಪ್ರತಿಯೊಬ್ಬರೂ ತಾವು ಬಯಸಿದ ಧರ್ಮ ಅನುಸರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ತಿಂಗಳಷ್ಟೇ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಬೆನ್ನಿನಲ್ಲೇ ಹರಿಯಾಣ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ದುಷ್ಕೃತ್ಯಗಳು ಪ್ರಧಾನಿ ಅವರ ಮಾತುಗಳನ್ನು ಅಣಕಿಸುವಂತಿವೆ. ಸಂಘ ಪರಿವಾರದ ನಾಯಕರಂತೂ ಕೋಮುದ್ವೇಷದ ಮಾತುಗಳನ್ನು ನಿರ್ಭಿಡೆಯಿಂದ ಆಡುತ್ತಿದ್ದಾರೆ. ಆರ್ ಎಸ್‌ಎಸ್‌ ಪಾಲಿಗೆ ‘ಅಲ್ಪಸಂಖ್ಯಾತ’ ಎನ್ನುವ ಪರಿಕಲ್ಪನೆಯೇ ಅಪಥ್ಯವಾಗಿದೆ. ಕೋಮು ಸಾಮರಸ್ಯ ಕದಡುವ ಇಂಥ ಹೇಳಿಕೆಗಳಿಗೆ ಕಡಿವಾಣ ಹಾಕಬೇಕಾದುದು ಸರ್ಕಾರದ ಮುಖ್ಯಸ್ಥರಾಗಿ ನರೇಂದ್ರ ಮೋದಿ ಅವರ ಕರ್ತವ್ಯವಾಗಿದೆ. ಭಾರತದಲ್ಲಿ ಕೋಮು ದ್ವೇಷವನ್ನು ಉದ್ದೀಪಿಸುವ ಪ್ರಯತ್ನಗಳನ್ನು ವಿಶ್ವವೇ ಗಮನಿಸುತ್ತಿದ್ದು, ದುಷ್ಕೃತ್ಯಗಳನ್ನು ಹತ್ತಿಕ್ಕುವ ಪ್ರಾಮಾಣಿಕ ಇಚ್ಛಾಶಕ್ತಿಯನ್ನು ಸರ್ಕಾರ ಸಾಬೀತುಪಡಿಸಬೇಕಾಗಿದೆ. ತೊಟ್ಟಿಲನ್ನು ತೂಗುತ್ತ, ಮಗುವನ್ನೂ ಚಿವುಟುವ ಚಾಳಿಯಿಂದ ಕೇಂದ್ರ ಸರ್ಕಾರ ಹೊರಬರದೆ ಹೋದಲ್ಲಿ ವಿಶ್ವದ ಎದುರು ಭಾರತದ ಜಾತ್ಯತೀತ ತತ್ವ ನಗೆಪಾಟಲಿಗೆ ತುತ್ತಾಗುವ ದಿನ ದೂರವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.