ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಅದ್ವಿತೀಯರ ದಾಪುಗಾಲು ಭಾರತದ ಆಟಗಾರರು ಕ್ರಿಕೆಟ್‌ ಲೋಕದಲ್ಲಿ ಅದ್ವಿತೀಯರು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಇದೀಗ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಈವರೆಗೆ ತಾನು ಆಡಿರುವ ಪಂದ್ಯಗಳಲ್ಲೆಲ್ಲಾ ಭಾರತ ಗೆದ್ದಿದೆ. ಎಂಟರ ಘಟ್ಟದ ಪಂದ್ಯವೂ ಸೇರಿದಂತೆ ಏಳೂ ಪಂದ್ಯಗಳಲ್ಲಿ ಎಪ್ಪತ್ತು ವಿಕೆಟ್‌ಗಳನ್ನು ಉರುಳಿಸಿ ಆತ್ಮವಿಶ್ವಾಸದಿಂದ ಸೆಮಿಫೈನಲ್‌ ತಲುಪಿದೆ. ಭಾರತ ಒಂದು ತಂಡವಾಗಿ ಅತ್ಯುತ್ತಮವಾಗಿ ಆಡುತ್ತಿದೆ. ಯಾರೇ ಒಬ್ಬ ವ್ಯಕ್ತಿಯನ್ನು ತಂಡ ಅವಲಂಬಿಸಿಲ್ಲ. ಒಂದೊಂದು ಪಂದ್ಯದಲ್ಲಿ ಒಬ್ಬೊಬ್ಬರು ಅತ್ಯುತ್ತಮವಾಗಿ ಆಡಿದ್ದಾರೆ. ರೋಹಿತ್‌ ಶರ್ಮ, ಶಿಖರ್‌ ಧವನ್‌, ಸುರೇಶ್‌ ರೈನಾ, ವಿರಾಟ್‌ ಕೊಹ್ಲಿ ಶತಕ ಗಳಿಸಿದ್ದಾರೆ. ಮಹಮ್ಮದ್‌ ಶಮಿ, ಉಮೇಶ್‌ ಯಾದವ್‌, ಅಶ್ವಿನ್‌ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಸಿಂಹಸ್ವಪ್ನವಾಗಿ ಕಾಡಿದ್ದಾರೆ. ಎಂ.ಎಸ್. ದೋನಿಯವರಂತೂ ಸಮರ್ಥ ನಾಯಕತ್ವ ನೀಡಿದ್ದಾರೆ. ಭಾರತ ತಂಡದಲ್ಲಿರುವ ಬಹುತೇಕ ಆಟಗಾರರು ನಾಲ್ಕು ತಿಂಗಳ ಹಿಂದೆಯೇ ಆಸ್ಟ್ರೇಲಿಯಕ್ಕೆ ತೆರಳಿದ್ದಾರೆ. ಅಲ್ಲಿ ನಾಲ್ಕು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಭಾರತ ಒಂದರಲ್ಲಿಯೂ ಗೆಲ್ಲಲಿಲ್ಲ. ಆಸ್ಟ್ರೇಲಿಯ, ಇಂಗ್ಲೆಂಡ್‌ ಜತೆಗಿನ ತ್ರಿಕೋನ ಸರಣಿಯಲ್ಲಿಯೂ ಭಾರತ ಗೆಲ್ಲಲಿಲ್ಲ. ಆಗ ದೋನಿ ಮತ್ತು ತಂಡದ ಇತರ ಆಟಗಾರರ ವಿರುದ್ಧ ಟೀಕಾಪ್ರವಾಹವೇ ಹರಿಯಿತು. ಆದರೆ ದೋನಿಯವರು ಸ್ಥಿತಪ್ರಜ್ಞರಾಗಿದ್ದುಕೊಂಡೇ ಎಲ್ಲವನ್ನೂ ನಿಭಾಯಿಸಿದರು. ವಿಶ್ವಕಪ್‌ ಟೂರ್ನಿಗಿಂತ ನಾಲ್ಕು ತಿಂಗಳು ಮೊದಲೇ ಭಾರತದ ಆಟಗಾರರು ಆಸ್ಟ್ರೇಲಿಯ ಪ್ರವಾಸಕ್ಕೆ ಹೋಗಿದ್ದು ಅನುಕೂಲವೇ ಆಯಿತು. ಅಲ್ಲಿನ ವಾತಾವರಣಕ್ಕೆ ಭಾರತದ ಆಟಗಾರರು ಚೆನ್ನಾಗಿ ಹೊಂದಿಕೊಂಡರು. ಇಡೀ ತಂಡ ಕ್ಷೇತ್ರರಕ್ಷಣೆಯಲ್ಲಿ ತೋರಿದ ಚುರುಕುತನ, ಜಾಣ್ಮೆ ವಿಶ್ವದಾದ್ಯಂತ ಈಗ ಕ್ರಿಕೆಟ್‌ಪ್ರಿಯರ ಮನಗೆದ್ದಿದೆ. ಸರಿಯಾಗಿ ನಾಲ್ಕು ದಶಕಗಳ ಹಿಂದೆ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಮೊದಲ ವಿಶ್ವಕಪ್‌ನಲ್ಲಿ ಭಾರತ ಲೀಗ್‌ ಹಂತದಲ್ಲಿಯೇ ಹೊರಬಿದ್ದಿತ್ತು. ಆಗ ವೆಸ್ಟ್‌ಇಂಡೀಸ್‌, ಆಸ್ಟ್ರೇಲಿಯ, ಇಂಗ್ಲೆಂಡ್‌, ನ್ಯೂಜಿಲೆಂಡ್‌ ತಂಡಗಳು ಗಮನ ಸೆಳೆದಿದ್ದವು. ನಾಲ್ಕು ವರ್ಷಗಳಿಗೆ ಒಮ್ಮೆ ನಡೆಯುವ ಈ ಕೂಟದಲ್ಲಿ ಏಷ್ಯಾದ ದೇಶಗಳೂ ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದವು. ಭಾರತದ ಕಪಿಲ್‌ ಬಳಗ 1983ರಲ್ಲಿ ವಿಶ್ವಕಪ್‌ ಗೆದ್ದ ನಂತರ ಈ ಕ್ರೀಡೆ ಭಾರತದಾದ್ಯಂತ ಹೊಸ ಆಯಾಮ ಕಂಡುಕೊಂಡಿತು. ಅಂದಿನಿಂದ ಈವರೆಗೂ ಈ ನಾಡಿನಲ್ಲಿ ಈ ಕ್ರೀಡೆ ಧರ್ಮದ ಸ್ವರೂಪ ಪಡೆದುಕೊಂಡಿದೆ. ಯುವಜನರ ಮೇಲೆ ಕ್ರಿಕೆಟ್‌ ಅಪಾರ ಪ್ರಭಾವ ಬೀರಿದೆ. ಭಾರತದಲ್ಲಷ್ಟೇ ಅಲ್ಲ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶಗಳಲ್ಲೂ ಈ ಕ್ರೀಡೆ ಜನಪ್ರಿಯ. ಈ ದೇಶಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಟಿ.ವಿ.ಯಲ್ಲಿ ಕ್ರಿಕೆಟ್‌ ನೋಡುತ್ತಾರೆ. ಹೀಗಾಗಿ ಟೆಲಿವಿಷನ್‌ ಪ್ರಸಾರದ ಹಕ್ಕುಗಳ ಮಾರಾಟದ ಮೂಲಕವೇ ಅಪಾರ ಹಣ ಗಳಿಸಿರುವ ಭಾರತ ಕ್ರಿಕೆಟ್‌ ಮಂಡಳಿಯು ಜಗತ್ತಿನ ಶ್ರೀಮಂತ ಕ್ರೀಡಾಡಳಿತ ಸಂಘಟನೆಯಾಗಿ ಬೆಳೆದು ನಿಂತಿದೆ. ಈ ದೇಶದಲ್ಲಿ ಕ್ರಿಕೆಟಿಗರು ತಾರಾಮೌಲ್ಯ ಪಡೆದುಕೊಂಡಿದ್ದಾರೆ. ಇಂತಹ ಕ್ರಿಕೆಟ್‌ ಸಂಸ್ಕೃತಿಯ ನಾಡಿನ ಆಟಗಾರರು 2011ರಲ್ಲಿ ಎರಡನೇ ಸಲ ವಿಶ್ವಕಪ್‌ ಗೆದ್ದಾಗ ಇಡೀ ದೇಶವೇ ಹೆಮ್ಮೆಯಿಂದ ಬೀಗಿತ್ತು. ಇದೀಗ ಮತ್ತೆ ಭಾರತ ಪ್ರಶಸ್ತಿಯ ಹೆಬ್ಬಾಗಿಲಿನತ್ತ ನಡೆದಿದೆ. ಭಾರತ ಈ ಸಲ ಟ್ರೋಫಿಯನ್ನು ಎತ್ತಿಕೊಂಡರೆ ಅದು ಭಾರತದಲ್ಲಷ್ಟೇ ಅಲ್ಲ, ಏಷ್ಯಾದಲ್ಲೇ ಕ್ರಿಕೆಟ್‌ಗೆ ನವಚೈತನ್ಯ ತುಂಬಿದಂತಾಗುತ್ತದೆ. ಭಾರತದ ನೆರೆಯ ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶಗಳ ತಂಡಗಳೂ ಎಂಟರ ಘಟ್ಟ ತಲುಪಿ ಸವಾಲು ಒಡ್ಡಿದ್ದನ್ನು ಏಷ್ಯಾದ ಹೆಗ್ಗಳಿಕೆ ಎಂದೇ ಪರಿಗಣಿಸಬೇಕಾಗುತ್ತದೆ. ಅದರೆ ಕ್ರಿಕೆಟ್‌ನ ತವರು ಇಂಗ್ಲೆಂಡ್‌ ಮಾತ್ರ ಈ ಸಲವೂ ನಿರಾಸೆಗೊಂಡಿದೆ. ಹಿಂದೆ ಮೂರು ಸಲ ಫೈನಲ್‌ ತಲುಪಿ ಸೋತಿದ್ದ ಇಂಗ್ಲೆಂಡ್‌ ಈ ಸಲ ಲೀಗ್‌ ಹಂತದಲ್ಲಿಯೇ ಸೋತು ವಾಪಸಾಗಿದೆ. ಕಳೆದ ಸಲ ಗೆದ್ದಾಗ ಭಾರತಕ್ಕೆ ಸಚಿನ್‌ ತೆಂಡೂಲ್ಕರ್‌ ಜತೆಗಿದ್ದರೆಂಬ ಧೈರ್ಯವಿತ್ತು. ಆದರೆ ಈ ಸಲ ಸಚಿನ್‌ ತಂಡದಲ್ಲಿಲ್ಲ. ಇದು ಭಾರತದ ಆತ್ಮವಿಶ್ವಾಸವನ್ನೇನೂ ಕುಂದಿಸಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ನಾಲ್ಕರ ಘಟ್ಟದಲ್ಲಿ ಆಸ್ಟ್ರೇಲಿಯದ ವಿರುದ್ಧ ಆಡುವುದಕ್ಕೆ ಭಾರತದ ಆಟಗಾರರು ಒಂದಿನಿತೂ ದಿಗಿಲುಗೊಳ್ಳಬೇಕಿಲ್ಲ. ಈವರೆಗಿನ ಪಂದ್ಯಗಳನ್ನೇ ನೋಡಿದರೆ ಆತಿಥೇಯ ತಂಡಕ್ಕಿಂತ ಭಾರತವೇ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠವಾಗಿದೆ. ಭಾರತ ಟ್ರೋಫಿಯನ್ನು ಉಳಿಸಿಕೊಳ್ಳಲು ಇನ್ನು ಎರಡು ಹೆಜ್ಜೆಗಳಷ್ಟೇ ಬಾಕಿ ಇವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.