ಪುನರ್ವಿಮರ್ಶೆಗೆ ಬೇಕು ವೈಜ್ಞಾನಿಕ ಮಾನದಂಡ ಕರ್ನಾಟಕ ವಿಧಾನ ಮಂಡಲದಲ್ಲಿ ಇತ್ತೀಚೆಗೆ ಯಾವುದೇ ಚರ್ಚೆ ಇಲ್ಲದೆ ಸಚಿವರು ಮತ್ತು ಶಾಸಕರ ವೇತನ ಹೆಚ್ಚಿಸುವ ಮಸೂದೆ ಅಂಗೀಕಾರವಾಗಿದೆ. ಸಭಾಪತಿ, ಸಭಾಧ್ಯಕ್ಷ, ಸಚಿವರು, ಶಾಸಕರ ಸಂಬಳದಲ್ಲಿ ಗಣನೀಯ ಏರಿಕೆಯಾಗಿದೆ. ವಿವಿಧ ಭತ್ಯೆಗಳು ದುಪ್ಪಟ್ಟಾಗಿವೆ. ನಿವೃತ್ತಿ ವೇತನ ಕೂಡ ಹೆಚ್ಚಾಗಿದೆ. ಈ ಹಿಂದೆ ಇದ್ದ ನಿವೃತ್ತಿ ವೇತನ ₨ 25 ಸಾವಿರದಿಂದ ₨ 40 ಸಾವಿರಕ್ಕೆ ಏರಿದೆ. ಅಲ್ಲದೆ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ವರ್ಷಕ್ಕೆ ₨ 1 ಸಾವಿರದಂತೆ ಪ್ರತಿ ತಿಂಗಳೂ ಹೆಚ್ಚುವರಿ ನಿವೃತ್ತಿ ವೇತನ ನೀಡಬೇಕು ಎಂದೂ ಮಸೂದೆಯಲ್ಲಿ ಸೇರಿಸಲಾಗಿದೆ. ಜೊತೆಗೆ ಈ ಹಿಂದೆ ನಿವೃತ್ತಿ ವೇತನವನ್ನು ₨ 35 ಸಾವಿರಕ್ಕೆ ಮಿತಿಗೊಳಿಸಲಾಗಿತ್ತು. ಈಗ ಆ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ರಾಜ್ಯ ಸರ್ಕಾರದ ಮೇಲೆ ವಿಪರೀತ ಹೊರೆ ಬೀಳುತ್ತದೆ. ಆತಿಥ್ಯ ಭತ್ಯೆ, ಮನೆ ಬಾಡಿಗೆ, ಮನೆ ನಿರ್ವಹಣೆ, ಪ್ರವಾಸ ಭತ್ಯೆ, ವಾಸ್ತವ್ಯ ಭತ್ಯೆ, ಸಾರಿಗೆ ಭತ್ಯೆ, ಕ್ಷೇತ್ರ ಪ್ರಯಾಣ ಭತ್ಯೆ, ದೂರವಾಣಿ ವೆಚ್ಚ, ಪೆಟ್ರೋಲ್‌ ಸೌಲಭ್ಯ ಎಲ್ಲವೂ ಒಂದಕ್ಕೆ ಎರಡರಷ್ಟು ಹೆಚ್ಚಾಗಿದೆ. ಈ ಹೆಚ್ಚಳಕ್ಕೆ ಯಾವುದೇ ವೈಜ್ಞಾನಿಕ ಮಾನದಂಡ ಇದ್ದ ಹಾಗೆ ಅನ್ನಿಸುವುದಿಲ್ಲ. ನಮ್ಮ ದೇಶದಲ್ಲಿ ಸರ್ಕಾರಿ ನೌಕರರಿಂದ ಹಿಡಿದು ಎಲ್ಲ ಉದ್ಯೋಗಿಗಳಿಗೂ ವೇತನ ನಿಗದಿ ಅಥವಾ ಪುನರ್ವಿಮರ್ಶೆ ಮಾಡಲು ವೇತನ ಆಯೋಗ ಅಥವಾ ಒಂದು ನಿಯಂತ್ರಣ ವ್ಯವಸ್ಥೆ ಇದೆ. ಆದರೆ ಶಾಸಕರಿಗೆ ಸಂಬಂಧಿಸಿದಂತೆ ಇಂತಹ ಯಾವ ವ್ಯವಸ್ಥೆಯೂ ಇಲ್ಲ. ನಿಜಕ್ಕೂ ಇಂತಹದೊಂದು ನಿಯಂತ್ರಣ ವ್ಯವಸ್ಥೆಯೊಂದನ್ನು ಸೃಷ್ಟಿಸುವ ಅಗತ್ಯ ಇದೆ. 2005ರಲ್ಲಿ ಶಾಸಕರ ಮೂಲ ವೇತನ ₨ 8 ಸಾವಿರ ಇತ್ತು. ಅದನ್ನು 2009ರಲ್ಲಿ ₨ 10 ಸಾವಿರಕ್ಕೆ ಹೆಚ್ಚಿಸಲಾಯಿತು. 2011ರಲ್ಲಿ ಶಾಸಕರ ವೇತನವನ್ನು ₨ 20 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಈಗ ಅದು ₨ 25 ಸಾವಿರಕ್ಕೆ ಏರಿದೆ. ತೆರಿಗೆ ವಿಧಿಸಬಹುದಾದ ವೇತನವನ್ನು ಅಲ್ಪ ಪ್ರಮಾಣದಲ್ಲಿ ಏರಿಸಿ ತೆರಿಗೆ ವಿಧಿಸಲು ಸಾಧ್ಯವಿಲ್ಲದ ಭತ್ಯೆಯ ಪ್ರಮಾಣವನ್ನು ಬೇಕಾಬಿಟ್ಟಿ ಏರಿಸಿಕೊಂಡಿರುವುದು ಜಾಣ ನಡೆ. ಶಾಸಕ ಸ್ಥಾನ ಎನ್ನುವುದು ಸೇವೆ ಮಾಡಲು ಇರುವ ಅವಕಾಶ. ಜನರ ಸೇವೆ ಮಾಡುವವರಿಗೆ ಘನತೆ, ಗೌರವದಿಂದ ಬದುಕಲು ಅಗತ್ಯವಾದಷ್ಟು ವೇತನವನ್ನು ನೀಡಬೇಕು ಎನ್ನುವುದರಲ್ಲಿ ಯಾರ ಆಕ್ಷೇಪವೂ ಇಲ್ಲ. ಜನಪ್ರತಿನಿಧಿಗಳಾದವರು ಭ್ರಷ್ಟಾಚಾರದ ಆಮಿಷ ಗಳಿಗೆ ಒಳಗಾಗದಿರಲು ಇದು ಅವಶ್ಯ ಕೂಡ. ಆದರೆ ಅದಕ್ಕೊಂದು ಮಿತಿ ಬೇಕು. ವೇತನ ಹೆಚ್ಚಳಕ್ಕೆ ಒಂದು ಮಾನದಂಡವೂ ಇರಬೇಕು. ಚುನಾವಣೆಗೆ ನಿಲ್ಲುವಾಗ ಎಲ್ಲ ಅಭ್ಯರ್ಥಿಗಳೂ ತಮ್ಮ ಆಸ್ತಿಯ ವಿವರವನ್ನು ಆಯೋಗಕ್ಕೆ ಸಲ್ಲಿಸಿರುತ್ತಾರೆ. ಇದರ ಪ್ರಕಾರ ವಿಧಾನ ಮಂಡಲದಲ್ಲಿ ಇರುವ ಬಹುತೇಕರು ಕೋಟ್ಯಧಿಪತಿಗಳೇ ಆಗಿದ್ದಾರೆ. ಅಲ್ಲದೆ ಈಗ ರಾಜಕಾರಣ ಎನ್ನುವುದು ಜನ ಸೇವಾ ಕ್ಷೇತ್ರವಾಗಿ ಉಳಿದಿಲ್ಲ. ಚುನಾವಣೆಯಲ್ಲಿ ಬಂಡವಾಳ ಹೂಡಿ ಮುಂದಿನ ಐದು ವರ್ಷದಲ್ಲಿ ಬಂಡವಾಳವನ್ನು ಬಡ್ಡಿ ಸಹಿತ ವೃದ್ಧಿಸಿಕೊಳ್ಳುವ ವೃತ್ತಿ ಎನ್ನುವಂತಾಗಿದೆ. ಇದರಿಂದ ರಾಜಕಾರಣಿಗಳ ಬಗ್ಗೆ ಜನರಲ್ಲಿ ಗೌರವವೂ ಕಡಿಮೆಯಾಗಿದೆ. ಜನೋಪಯೋಗಿಯಾದ ಶಾಸನ ರೂಪಿಸುವುದು ಶಾಸಕರ ಮುಖ್ಯ ಕರ್ತವ್ಯ. ಆದರೆ ವಿಧಾನ ಮಂಡಲದಲ್ಲಿ ಶಾಸನಗಳ ಬಗ್ಗೆ ಗಂಭೀರವಾದ ಚರ್ಚೆಗಳಲ್ಲಿ ಶಾಸಕರು ತೊಡಗಿಕೊಳ್ಳುವುದೂ ಕಡಿಮೆಯಾಗುತ್ತಿದೆ. ಈ ಪ್ರಾಥಮಿಕ ಕರ್ತವ್ಯದಿಂದಲೂ ಶಾಸಕರು ದೂರ ಉಳಿಯುತ್ತಿರುವುದು ದುರದೃಷ್ಟಕರ. ವಿಧಾನಮಂಡಲದ ಅಧಿವೇಶನದ ಕೊನೆಯ ಹಂತದಲ್ಲಿ ಮಸೂದೆಗಳನ್ನು ಮಂಡಿಸಲಾಗುತ್ತದೆ. ಎಲ್ಲ ಮಸೂದೆಗಳೂ ಅವಸರದಲ್ಲಿಯೇ ಅಂಗೀಕಾರವಾಗುತ್ತವೆ. ಗುಣಮಟ್ಟದ ಚರ್ಚೆಗಳಿಗಿಂತ ಕೂಗಾಟ, ಧರಣಿ, ಸಭಾತ್ಯಾಗಗಳೇ ಹೆಚ್ಚಾಗಿವೆ. ಇದನ್ನೆಲ್ಲಾ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಶಾಲಾ ಕಾಲೇಜುಗಳ ಬೋಧಕರಿಗೆ 3–4 ತಿಂಗಳಿನಿಂದ ವೇತನ ನೀಡಿಲ್ಲ. ಪೌರ ಕಾರ್ಮಿಕರು ವೇತನವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ವೇತನ ಹೆಚ್ಚಳ ಮಾಡುವಂತೆ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ಸರ್ಕಾರಿ ಆಸ್ಪತ್ರೆಗಳ ವೈದ್ಯರಿಗೂ ಸೂಕ್ತವಾದ ವೇತನ ನೀಡದೇ ಇರುವುದರಿಂದ ಅಲ್ಲಿ ಸೇವೆ ಸಲ್ಲಿಸಲು ವೈದ್ಯರು ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಶಾಸಕರು, ಸಚಿವರು ತಮ್ಮ ಸಂಬಳ ಹೆಚ್ಚಳ ಮಾಡಿಕೊಂಡಿರುವುದು ಸಮರ್ಥನೀಯ ಎನ್ನಿಸುವುದಿಲ್ಲ. ಬಸವರಾಜ ರಾಯರೆಡ್ಡಿ ಮಾತ್ರ ಸಂಬಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇದು ಇತರ ಶಾಸಕರಿಗೂ ಮಾದರಿಯಾಗಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.