ತನಿಖಾ ಸಂಸ್ಥೆಗಳ ಸ್ವಾತಂತ್ರ್ಯ ವಿಶ್ವಾಸಾರ್ಹತೆ ಕುಸಿಯದಿರಲಿ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತರಾಗಿ ದಕ್ಷತೆಯಿಂದ ಕೆಲಸ ಮಾಡುತ್ತಿದ್ದ ಐಎಎಸ್‌ ಅಧಿಕಾರಿ ಡಿ.ಕೆ.ರವಿಯವರ ಅಸಹಜ ಸಾವಿನ ಪ್ರಕರಣದ ತನಿಖೆಯನ್ನು ಕೊನೆಗೂ ರಾಜ್ಯ ಸರ್ಕಾರ ಸಿಬಿಐಗೆ ಒಪ್ಪಿಸಿದೆ. ಸಾರ್ವಜನಿಕರ ಮತ್ತು ರವಿಯವರ ಕುಟುಂಬದ ಆಗ್ರಹಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರಾಜ್ಯದ ವಿವಿಧೆಡೆ ನಡೆದ ಬಂದ್‌, ಧರಣಿ, ಪ್ರತಿಭಟನೆಗಳಿಂದಾಗಿ ಒಂದು ವಾರದ ಕಾಲ ಅಹಿತಕರ ವಾತಾವರಣವೇ ನಿರ್ಮಾಣವಾಗಿತ್ತು. ಜನರ ಒತ್ತಡಕ್ಕೋ ಅಥವಾ ಹೈಕಮಾಂಡ್‌ನ ಸೂಚನೆಗೋ ಮಣಿದು ತನಿಖೆಯನ್ನು ಸಿಬಿಐಗೆ ಒಪ್ಪಿಸಿ ರಾಜ್ಯ ಸರ್ಕಾರ ಒಳ್ಳೆಯ ಕೆಲಸವನ್ನೇ ಮಾಡಿದೆ. ಸದ್ಯಕ್ಕೆ ಜನರು ಅತ್ಯಂತ ದಕ್ಷ ಎಂದು ನಂಬಿಕೊಂಡಿರುವ ಸಿಬಿಐ ಕ್ಷಿಪ್ರಗತಿಯಲ್ಲಿ ತನಿಖೆ ಮಾಡಿ, ರವಿಯವರ ಅಸಹಜ ಸಾವಿನ ನೈಜ ಕಾರಣಗಳನ್ನು ಜನರ ಮುಂದಿಡಬೇಕು. ಈ ಮೂಲಕ, ಅನ್ಯಾಯವಾಗಿದ್ದಲ್ಲಿ ನ್ಯಾಯ ಒದಗಿಸುವ ಹಾಗೂ ತನಿಖಾ ಸಂಸ್ಥೆಯ ಮೇಲೆ ಜನರಿಗಿರುವ ವಿಶ್ವಾಸವನ್ನು ದೃಢಪಡಿಸುವ ಕೆಲಸ ಏಕಕಾಲಕ್ಕೆ ಆಗಬೇಕು. ಈ ಪ್ರಕರಣ ರಾಜ್ಯದಲ್ಲಿ ಉಂಟು ಮಾಡಿರುವ ಕೋಲಾಹಲದ ಹಿಂದೆ ಜನಸಾಮಾನ್ಯರ ಆಕ್ರೋಶ ಇದ್ದಂತೆಯೇ, ರಾಜಕಾರಣಿಗಳ ಕೈವಾಡವೂ ಇತ್ತು ಎನ್ನುವುದನ್ನು ಅಲ್ಲಗಳೆಯಲಾಗದು. ಅದರಲ್ಲೂ ಬೀದಿಗಿಳಿದ ವಿರೋಧಪಕ್ಷಗಳ ನಾಯಕರು ಈ ಪ್ರಕರಣದಿಂದ ಅತ್ಯಧಿಕ ರಾಜಕೀಯ ಲಾಭ ಗಳಿಸಲು ನಡೆಸಿದ ಪ್ರಯತ್ನಗಳು ಕಣ್ಣಿಗೆ ರಾಚುವಂತೆಯೇ ಇದ್ದವು. ಕೊನೆಕೊನೆಗೆ ಇದೊಂದು ಜಾತಿ ಹೋರಾಟ ಎನ್ನುವಂತೆ ಬಿಂಬಿಸುವ ಯತ್ನಗಳೂ ನಡೆದದ್ದು ದುರದೃಷ್ಟಕರ. ಜನರ ಭಾವೋದ್ರೇಕವನ್ನು ಕೆರಳಿಸಿದ ವಿರೋಧಪಕ್ಷಗಳ ತಂತ್ರವನ್ನು ಎದುರಿಸಲು ಆಡಳಿತ ಯಂತ್ರವೂ ಸಿಐಡಿ ತನಿಖೆಯ ಆಯ್ದ ಭಾಗಗಳು ಸೋರಿಕೆಯಾಗುವಂತೆ ನೋಡಿಕೊಂಡಿತು. ಈ ತಂತ್ರ- ಪ್ರತಿತಂತ್ರಗಳ ಮೇಲಾಟದಲ್ಲಿ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆ ಕುಸಿಯುವಂತಾದದ್ದು ನಿಜಕ್ಕೂ ವಿಷಾದದ ಸಂಗತಿ. ರಾಜ್ಯದ ನಿಯಂತ್ರಣದಲ್ಲಿರುವ ಸಿಐಡಿ ಮತ್ತು ಕೇಂದ್ರದ ನಿಯಂತ್ರಣದಲ್ಲಿರುವ ಸಿಬಿಐ ಎರಡೂ ಸಂಸ್ಥೆಗಳಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಆಯಾ ರಾಜ್ಯಗಳಲ್ಲಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡಿದ ಹಿರಿಯ ಅಧಿಕಾರಿಗಳೇ ಸಿಬಿಐಗೆ ವರ್ಗಾವಣೆಯಾಗಿ ಹೋಗುತ್ತಾರೆ. ಕರ್ನಾಟಕದಿಂದಲೂ ಹೀಗೆ ದಕ್ಷ ಅಧಿಕಾರಿಗಳು ಸಿಬಿಐ ಸೇವೆಗೆ ತೆರಳಿದ್ದಾರೆ. ಯಾವುದೇ ಪ್ರಕರಣದ ತನಿಖೆಯನ್ನು ಸಿಬಿಐ ಮಾತ್ರ ಪರಿಣಾಮಕಾರಿಯಾಗಿ ಮತ್ತು ಕ್ಷಿಪ್ರವಾಗಿ ನಡೆಸಲಿದೆ ಎಂದು ನಿರ್ಧರಿಸುವುದು ಬಾಲಿಶತನ. ಹಾಗಿದ್ದರೆ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್‌ ಸರ್ಕಾರ, ಉಡುಪಿಯ ಆಗಿನ ಶಾಸಕ ರಘುಪತಿ ಭಟ್‌ ಅವರ ಪತ್ನಿಯ ಆತ್ಮಹತ್ಯೆ ಪ್ರಕರಣ ಮತ್ತು ಸಚಿವರಾಗಿದ್ದ ಎಚ್‌.ಹಾಲಪ್ಪ ಅವರ ಮೇಲಿನ ಅತ್ಯಾಚಾರ ಆರೋಪ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕಿತ್ತು. ಆಗೆಲ್ಲಾ ಸಿಬಿಐಯನ್ನು ಅತ್ಯಂತ ಅದಕ್ಷ ಮತ್ತು ಕೈಗೊಂಬೆ ಸಂಸ್ಥೆಯೆಂಬಂತೆ ಬಿಂಬಿಸಿದ ಬಿಜೆಪಿ ಈಗ ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರುತ್ತದೆ ಎನ್ನುತ್ತಿರುವುದು ತಮಾಷೆಯಾಗಿದೆ. ತಾನು ಅಧಿಕಾರದಲ್ಲಿದ್ದಾಗ ನಡೆದ ಛಾಪಾ ಕಾಗದ ಹಗರಣವನ್ನು ಸಿಬಿಐಗೆ ಒಪ್ಪಿಸಲು ಕಾಂಗ್ರೆಸ್ ಕೂಡಾ ಒಪ್ಪಿರಲಿಲ್ಲ. ಹಾಗೆಯೇ ಸಚಿವರಾಗಿದ್ದ ಜನಾರ್ದನ ರೆಡ್ಡಿಯವರ ಗಣಿ ಹಗರಣವನ್ನು ಸಿಬಿಐಗೆ ಒಪ್ಪಿಸಲು ಆಗಿನ ಬಿಜೆಪಿ ಸರ್ಕಾರವೂ ಒಪ್ಪಿರಲಿಲ್ಲ. ಇವೆರಡೂ ಪ್ರಕರಣಗಳು ಕೊನೆಗೆ ಸುಪ್ರೀಂಕೋರ್ಟ್‌ ಆದೇಶದಿಂದಾಗಿ ಸಿಬಿಐ ತನಿಖೆಗೆ ಒಳಪಟ್ಟವು. ಸಿಐಡಿ ಆಗಲೀ, ಸಿಬಿಐ ಆಗಲೀ, ತಮ್ಮ ಸರ್ಕಾರದ ನಿಯಂತ್ರಣದಲ್ಲಿ ಇದ್ದಾಗ ಮಾತ್ರ ದಕ್ಷ ಸಂಸ್ಥೆಗಳು ಎಂದು ಪಕ್ಷಭೇದವಿಲ್ಲದೆ ರಾಜಕಾರಣಿಗಳು ಪ್ರತಿಬಿಂಬಿಸುತ್ತಾ ಬಂದಿದ್ದಾರೆ. ರಾಜಕಾರಣಿಗಳ ಇಂತಹ ಕುಟಿಲ ನೀತಿಯಿಂದಾಗಿಯೇ ಎರಡೂ ತನಿಖಾ ಸಂಸ್ಥೆಗಳ ಮಾನ ಹರಾಜಾಗುತ್ತಿದೆ, ಅಧಿಕಾರಿಗಳ ನೈತಿಕ ಸ್ಥೈರ್ಯ ಕುಸಿಯುತ್ತದೆ. ಕ್ಷುಲ್ಲಕ ರಾಜಕೀಯ ಲಾಭಗಳಿಗಾಗಿ ತನಿಖಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹೀಗೆ ಕೆಡಿಸುವುದು ಎಳ್ಳಷ್ಟೂ ಸರಿಯಲ್ಲ. ತನಿಖಾ ಸಂಸ್ಥೆಗಳು ಹೆಚ್ಚು ದಕ್ಷತೆಯಿಂದ ಹಾಗೂ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಬೇಕಾದ ವಾತಾವರಣವನ್ನು ಉಂಟುಮಾಡುವುದು ಸರ್ಕಾರಗಳ ನೈತಿಕ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.