ದೃಷ್ಟಿಕೋನ ಬದಲಾಗಬೇಕು ಕ್ರಿಕೆಟ್‌, ಫುಟ್‌ಬಾಲ್‌ನಂಥ ಬೆರಳೆಣಿಕೆಯಷ್ಟು ಕ್ರೀಡೆಗಳನ್ನು ಬಿಟ್ಟರೆ ಉಳಿದ ಆಟೋಟಗಳ ಬಗ್ಗೆ ನಮಗೆ ಅಂತಹ ಅಭಿಮಾನವೂ ಇಲ್ಲ, ಕಾಳಜಿಯೂ ಇಲ್ಲ. ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವಿಕಲಾಂಗರು ಮತ್ತು ದೈಹಿಕ ಅಸಮರ್ಥರಿಗಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಡು ಬಂದ ಅವ್ಯವಸ್ಥೆಗಳು ಇದನ್ನು ಮತ್ತೊಮ್ಮೆ ರುಜುವಾತು ಮಾಡಿವೆ. ಕಲುಷಿತ ಕುಡಿಯುವ ನೀರು ಪೂರೈಕೆ, ದುರ್ನಾತ ಬೀರುತ್ತಿದ್ದ ಶೌಚಾಲಯಗಳಿಂದ ಅಂಗವಿಕಲ ಕ್ರೀಡಾಪಟುಗಳು ಅಲ್ಲಿ ತೊಂದರೆಗೆ ಒಳಗಾಗಬೇಕಾಯಿತು. ಕನಿಷ್ಠ ಸೌಕರ್ಯಗಳನ್ನಾದರೂ ಒದಗಿಸಬೇಕು ಎನ್ನುವಂತಹ ಸಂವೇದನಾಶೀಲತೆ ಪ್ರದರ್ಶಿಸದ ಈ ಧೋರಣೆ ಖಂಡನಾರ್ಹ. ಅಂಗವಿಕಲರ ಅತಿ ಮುಖ್ಯ ಸಮಸ್ಯೆ ಎಂದರೆ ಸರಾಗ ಓಡಾಟ. ಕೈಕಾಲು ಸರಿ ಇರುವವರೇ ಎಷ್ಟೋ ಸಲ ಮಹಡಿ ಹತ್ತಲು ಕಷ್ಟ ಪಡುತ್ತಾರೆ. ಹೀಗಿರುವಾಗ ಲಿಫ್‌್ಟ, ರ್‍ಯಾಂಪ್‌ ವ್ಯವಸ್ಥೆ ಮಾಡದೆ ಅಂಗವಿಕಲರು ಅಲ್ಲಿ ಎರಡನೇ ಮಹಡಿ ಹತ್ತುವಂತೆ ಮಾಡಿದ್ದು ನಿರ್ಲಕ್ಷ್ಯ ಹಾಗೂ ಅಸೂಕ್ಷ್ಮತೆಯ ಪ್ರತೀಕ. ಗಾಲಿ ಕುರ್ಚಿಯನ್ನು ಅವಲಂಬಿಸಿದ ಅಂಗವಿಕಲರು ಎರಡನೇ ಮಹಡಿ ಹೇಗೆ ಹತ್ತಬೇಕು ಎಂಬುದು ಈ ಕ್ರೀಡಾಕೂಟ ಆಯೋಜಿಸಿದ್ದ ಭಾರತದ ಪ್ಯಾರಾಲಿಂಪಿಕ್‌ ಸಮಿತಿಯ ಉತ್ತರ ಪ್ರದೇಶ ಘಟಕದ ಪದಾಧಿಕಾರಿಗಳಿಗೆ ಅರ್ಥವಾಗಲಿಲ್ಲವೇ? ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸುಮಾರು 1200 ಅಂಗವಿಕಲ ಕ್ರೀಡಾಪಟುಗಳು ಅಲ್ಲಿ ಅನುಭವಿಸಿದ ಪಡಿಪಾಟಲು ಕೇಂದ್ರ ಕ್ರೀಡಾ ಸಚಿವರ ಗಮನಕ್ಕೂ ಬಂದಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಗಳೇನೋ ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಕೊಡಬಹುದು, ಸಂಘಟಕರನ್ನು ಹೊಣೆ ಮಾಡಲೂಬಹುದು. ಆದರೆ ಈ ಅವ್ಯವಸ್ಥೆಗೆ ಏನು ಕಾರಣ, ಯಾಕೆ ಹೀಗಾಯಿತು ಎನ್ನುವುದರ ಕಡೆಗೂ ಸರ್ಕಾರ ಲಕ್ಷ್ಯ ವಹಿಸಬೇಕು. ದೇಶದ ರಾಜಧಾನಿಯಿಂದ ಕೇವಲ 20 ಕಿ.ಮೀ ದೂರದ ಗಾಜಿಯಾಬಾದ್‌ನಲ್ಲಿಯೇ ಇಷ್ಟೊಂದು ಅವ್ಯವಸ್ಥೆ ಇರುವಾಗ ಬೇರೆಡೆ ಏನು ಸ್ಥಿತಿ ಇರಬಹುದು? ಇದಕ್ಕೆಲ್ಲ ಮುಖ್ಯ ಕಾರಣ ಅಂಗವಿಕಲರ ಬಗ್ಗೆ ಸಮಾಜ ತಳೆದಿರುವ ಉದಾಸೀನ ಧೋರಣೆ . ಅವರ ಬಗ್ಗೆ ಮೂಲತಃ ಸಮಾಜದ ದೃಷ್ಟಿಕೋನ ಬದಲಾಗಬೇಕು. ಕ್ರೀಡೆ ಮಾತ್ರವಲ್ಲದೆ ಬದುಕಿನ ಎಲ್ಲ ರಂಗಗಳಲ್ಲೂ ಅಂಗವಿಕಲರಿಗೆ ಸಮಾನ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಬೇಕು. ಆದರೆ ಅದು ‘ಅವರ ಬಗ್ಗೆ ತೋರುವ ಔದಾರ್ಯ ಅಲ್ಲ; ಅವರ ಮೂಲಭೂತ ಹಕ್ಕು’ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. 2001 ರ ಜನಗಣತಿ ಪ್ರಕಾರ ರಾಷ್ಟ್ರದಲ್ಲಿ 2 ಕೋಟಿ ಅಂಗವಿಕಲರಿದ್ದರು. ಈಗ 2011ರ ಜನಗಣತಿಯ ಅಂಕಿಅಂಶಗಳ ಪ್ರಕಾರ ರಾಷ್ಟ್ರದಲ್ಲಿ ಎರಡೂವರೆ ಕೋಟಿಗೂ ಹೆಚ್ಚು ಅಂಗವಿಕಲರಿದ್ದಾರೆ. ದೃಷ್ಟಿ, ಶ್ರವಣ ಸೇರಿದಂತೆ ವಿವಿಧ ಅಂಗಗಳ ವೈಕಲ್ಯಗಳ ಜೊತೆಗೆ ಶೇ 5.6ರಷ್ಟು ಮಂದಿ ಬುದ್ಧಿಮಾಂದ್ಯತೆ ಇರುವವರು. ಈ ವರ್ಗದವರನ್ನು 2011ರ ಜನಗಣತಿಯಲ್ಲಿ ಅಂಗವಿಕಲರ ಜನಗಣತಿಯಲ್ಲಿ ಸೇರ್ಪಡೆಗೊಂಡಿತ್ತು. ದೈಹಿಕ, ಮಾನಸಿಕ ಅಸಾಮರ್ಥ್ಯ ಎದುರಿಸುತ್ತಿರುವ ಇಷ್ಟೊಂದು ದೊಡ್ಡ ಜನವರ್ಗಕ್ಕೆ ಸೂಕ್ತ ಸವಲತ್ತು ಕಲ್ಪಿಸುವುದು ಸರ್ಕಾರ ಮತ್ತು ಸಮಾಜದ ಮೂಲಭೂತ ಕರ್ತವ್ಯ. ಈ ಉದ್ದೇಶದಿಂದಲೇ ರಾಜ್ಯಸಭೆಯಲ್ಲಿ 2014ರ ಫೆಬ್ರುವರಿಯಲ್ಲಿ ‘ಅಂಗವಿಕಲರ ಹಕ್ಕು ಮಸೂದೆ’ಯನ್ನು ಮಂಡಿಸಲಾಗಿದೆ. ಅದು ಇನ್ನೂ ಶಾಸನದ ರೂಪ ಪಡೆದಿಲ್ಲ . ಅಂಗವೈಕಲ್ಯದಿಂದ ಬಳಲುತ್ತಿರುವವರ ಹಕ್ಕುಗಳಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಘೋಷಣೆಗೆ ನಮ್ಮ ದೇಶ 2007ರಷ್ಟು ಹಿಂದೆಯೇ ಸಹಿ ಹಾಕಿದೆ. ಆದರೆ ಸರ್ಕಾರ ಮಂಡಿಸಿರುವ ಮಸೂದೆ ಈ ಘೋಷಣೆಗೆ ಅನುಗುಣವಾಗಿ ಇಲ್ಲ ಎಂಬುದು ಅಂಗವಿಕಲರ ಅನೇಕ ಸಂಘಟನೆಗಳ ದೂರು. ಇದನ್ನೆಲ್ಲ ಪರಿಗಣನೆಗೆ ತೆಗೆದುಕೊಂಡು ಸೂಕ್ತ ಬದಲಾವಣೆ ಮಾಡಿ ಆದಷ್ಟು ಬೇಗನೇ ಕಾನೂನಿನ ರೂಪ ಕೊಡಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಅಂಗವಿಕಲರು ಸೇರ್ಪಡೆಯಾಗಬೇಕು. ಸಾರ್ವಜನಿಕ ಕಟ್ಟಡಗಳು, ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳ ವಿನ್ಯಾಸಗಳು ಅಂಗವಿಕಲರ ಅಗತ್ಯಗಳಿಗೆ ತಕ್ಕಂತೆ ರೂಪುಗೊಳ್ಳುವುದು ಅವಶ್ಯ. ತಾರತಮ್ಯ ರಹಿತವಾದ ಸಾಮಾನ್ಯ ಜೀವನ ನಿರ್ವಹಣೆಗೆ ಅನುವು ಮಾಡಿಕೊಡಲು ಅಂಗವಿಕಲರ ಅಗತ್ಯಗಳಿಗೆ ಸ್ಪಂದಿಸುವುದು ನಾಗರಿಕ ಸಮಾಜದ ಜವಾಬ್ದಾರಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.