ಮುಕ್ತ ಅಭಿವ್ಯಕ್ತಿಗೆ ಜಯ ನಿಷೇಧ, ಬಹಿಷ್ಕಾರಗಳ ಈ ಕಾಲದಲ್ಲಿ ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮಾಹಿತಿ ತಂತ್ರಜ್ಞಾನ (ಐಟಿ) ಕಾಯಿದೆಯ ವಿವಾದಾತ್ಮಕ ಸೆಕ್ಷನ್ 66ಎ ಅನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿರುವುದು ಐತಿಹಾಸಿಕ ತೀರ್ಪು. ಯಾವುದೇ ಸಂವಹನ ಸಾಧನದ ಮೂಲಕ ‘ಅವಹೇಳನಕಾರಿ’ ಸಂದೇಶ ಪ್ರಸಾರ ಮಾಡಿದವರಿಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದ್ದ ಈ ಸೆಕ್ಷನ್ ಅನ್ನು ಈಗ ರದ್ದು ಮಾಡಲಾಗಿದೆ. ಈ ಸೆಕ್ಷನ್ ಅನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶಗಳು ಅಪಾರವಾಗಿವೆ ಎಂಬುದನ್ನು ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ಕೋರ್ಟ್ ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಕಾಯಿದೆಯೇ ಅಸ್ಪಷ್ಟ. ಏಕೆಂದರೆ ಇಲ್ಲಿ ಬಳಕೆಯಾಗಿರುವ ಪದಗಳು ವ್ಯಕ್ತಿಗತ ವ್ಯಾಖ್ಯಾನಗಳಿಗೆ ಅವಕಾಶ ಮಾಡಿಕೊಡುವಂತಹದ್ದಾಗಿವೆ. ಹೀಗಾಗಿ, ಅಂತರ್ಜಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಎತ್ತಿಹಿಡಿದಿರುವುದು ಸ್ವಾಗತಾರ್ಹ. ‘ಚಿಂತನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವೇ’ ಪ್ರಜಾಪ್ರಭುತ್ವದ ಮೂಲಧಾತು. ಈ ಅಂಶವನ್ನು ಕೋರ್ಟ್ ಎತ್ತಿ ಹಿಡಿದಿದೆ. ‘ಅವಹೇಳನಕಾರಿ’ ಎನ್ನುವಂತಹದ್ದೇ ಹಲ ಬಗೆಯ ವ್ಯಾಖ್ಯಾನಗಳಿಗೆ ತೆರೆದುಕೊಳ್ಳುವಂತ ಹದ್ದು. ಏನೇನೂ ಹಾನಿಕರವಲ್ಲ ಎನ್ನಿಸುವಂತಹ ವಿಚಾರ ಮತ್ತೊಬ್ಬರಿಗೆ ಅವಹೇಳನಕಾರಿ ಎನಿಸಬಹುದು. ಆದರೆ ಅಭಿಪ್ರಾಯ ನೀಡಿಕೆ, ವಿಮರ್ಶೆ, ಟೀಕೆಟಿಪ್ಪಣಿ ಅಥವಾ ವ್ಯಂಗ್ಯಚಿತ್ರ ಪೋಸ್ಟ್ ಮಾಡುವಂತಹದ್ದೂ ’ಅವಹೇಳನಕಾರಿ’ ಎಂದಾಗಿ ಬಂಧನದಂತಹ ತೀವ್ರತರ ಕ್ರಮಗಳಿಗೆ ಕಾರಣವಾಗಲು ಈ ಸೆಕ್ಷನ್ 66 ಎ ನಲ್ಲಿ ಅವಕಾಶ ಕಲ್ಪಿಸಿದ್ದಿದ್ದು ಅದರ ಕರಾಳತೆಗೆ ಸಾಕ್ಷಿ. 2012ರಲ್ಲಿ ಮುಂಬೈನಲ್ಲಿ ಈ ಕಾನೂನಿನ ಅನ್ವಯ ಇಬ್ಬರು ಯುವತಿಯರ ಬಂಧನವಾದಾ ಗ ಈ ಸೆಕ್ಷನ್ ಎಷ್ಟೊಂದು ಕರಾಳವಾದದ್ದು ಎಂಬುದು ಸಾರ್ವಜನಿಕರ ಅರಿವಿಗೆ ಬಂದಿತ್ತು. ಶಿವಸೇನಾ ವರಿಷ್ಠ ಬಾಳ ಠಾಕ್ರೆ ನಿಧನರಾದ ಸಂದರ್ಭದಲ್ಲಿ ಮುಂಬೈ ಏಕೆ ಬಂದ್ ಆಗಬೇಕು ಎಂದು ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಂದೇಶದಲ್ಲಿ ಪ್ರಶ್ನಿಸಿದ್ದು ಮತ್ತು ಆ ಪೋಸ್ಟ್ ಗೆ ಲೈಕ್ ಒತ್ತಿದ್ದಕ್ಕಾಗಿ ಇಬ್ಬರು ಯುವತಿಯರ ಬಂಧನವಾಗಿತ್ತು. ಇದೇ ರೀತಿ ರಾಜಕೀಯ ನೇತಾರರಾದ ಮಮತಾ ಬ್ಯಾನರ್ಜಿ, ಪಿ.ಚಿದಂಬರಂ ಪುತ್ರ ಕಾರ್ತಿ ಹಾಗೂ ಅಜಂ ಖಾನ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಅಥವಾ ಅಭಿಪ್ರಾಯಗಳ ಮಂಡನೆ ಬಂಧನ ದಂತಹ ತೀವ್ರ ಕ್ರಮಗಳಿಗೆ ಕಾರಣವಾಗಿತ್ತು. ವಾಸ್ತವವಾಗಿ ಸೈಬರ್ ಅಪರಾಧಗಳ ನಿಯಂತ್ರಣದ ಸೋಗಿನಲ್ಲಿ ಪ್ರತಿರೋಧದ ದನಿಯನ್ನು ಹತ್ತಿಕ್ಕಲು ಸೆಕ್ಷನ್ 66 ಎ ಅವಕಾಶ ಕಲ್ಪಿಸಿತ್ತು ಎನ್ನಬಹುದು. ಸೈಬರ್ ಲೋಕದಲ್ಲಿ ದ್ವೇಷದ ಮಾತುಗಳು, ಕಿರುಕುಳಗಳು ಒಂದೆಡೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ಮುಕ್ತ ಅಭಿವ್ಯಕ್ತಿ ಅಥವಾ ಪ್ರತಿರೋಧವನ್ನು ನಿಯಂತ್ರಿಸಲು ಈ ಸೆಕ್ಷನ್ 66 ಎ ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದ್ದದ್ದು ವಿಪರ್ಯಾಸ. ಇದರಿಂದಾಗಿ ಕಾನೂನು ಪರಿಪಾಲಿ ಸುವ ನಾಗರಿಕರೂ ಬಂಧನ, ವಿಚಾರಣೆ ಹಾಗೂ ಕೋರ್ಟ್ ಹಾಜರಿಗಳಂತಹ ಕೋಟಲೆಗಳಿಗೆ ಸಿಲುಕು ವಂತಾಗಬೇಕಾಯಿತಲ್ಲದೆ ಮುಕ್ತ ಅಭಿವ್ಯಕ್ತಿ, ದ್ವೇಷದ ಭಾಷಣ, ಹಿಂಸಾಚಾರಕ್ಕೆ ಪ್ರಚೋ ದನೆ,ಮಾನನಷ್ಟ ಮಾತುಗಳ ನಡುವಿನ ಗೆರೆಗಳೇ ಅಳಿಸಿಹೋಗುವಂತಾದದ್ದು ಸರಿಯಾದ ದಿಕ್ಕಿನಲ್ಲಿ ಸಾಗಿದ ಬೆಳವಣಿಗೆಯಾಗಿರಲಿಲ್ಲ. ಚರ್ಚೆ, ವಿಚಾರಗಳ ಪರವಾಗಿ ಮಾಡಲಾಗುವ ‘ವಕಾಲತ್ತು’ ಹಾಗೂ ‘ಪ್ರಚೋದನೆ’ ಮಧ್ಯದ ವ್ಯತ್ಯಾಸಗಳ ಕುರಿತಾದ ಸರಿಯಾದ ಗ್ರಹಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕುರಿತು ಅರ್ಥ ಮಾಡಿಕೊಳ್ಳುವಲ್ಲಿ ಮುಖ್ಯವಾದುದು ಎಂಬುನ್ನು ಸುಪ್ರೀಂಕೋರ್ಟ್ ಪ್ರತಿಪಾದಿಸಿದೆ. ಸಂವಿಧಾನದ ವಿಧಿ 19(2) ಅಭಿವ್ಯಕ್ತಿ ಸ್ವಾತಂತ್ರ್ಯ ಅನಿರ್ಬಂಧಿತವಲ್ಲ ಎಂಬುದನ್ನು ಪ್ರತಿಪಾದಿಸುತ್ತದೆ. ಎಂದರೆ ಚರ್ಚೆ ಹಾಗೂ ವಿಚಾರಗಳ ಮಂಡನೆ , ಜನರಿಗೆ ಇಷ್ಟವಾಗದಿದ್ದರೂ ನಿಯಂತ್ರಣಕ್ಕೆ ಒಳಪಡುವುದಿಲ್ಲ. ಆದರೆ ಸಾರ್ವಜನಿಕ ಹಿತಕ್ಕೆ ಧಕ್ಕೆ ತರಬಹುದಾದ ಪ್ರಚೋದನಕಾರಿ ಹಂತಕ್ಕೆ ಇದು ತಲುಪಿದಲ್ಲಿ 19(2) ವಿಧಿ ಅನ್ವಯವಾಗುತ್ತದೆ.ಈಗಾಗಲೇ ಧಾರ್ಮಿಕದ್ವೇಷ ಕೆರಳಿಸುವ ಮಾತುಗಳನ್ನು ನಿಯಂತ್ರಿಸಲು ಐಟಿ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯಲ್ಲೂ ಅವಕಾಶಗಳಿವೆ. ಹೀಗಾಗಿ ರಾಜಕೀಯ ಪ್ರತಿರೋಧ ಹತ್ತಿಕ್ಕಲು ದುರ್ಬಳಕೆಯಾಗುತ್ತಿದ್ದ ಸೆಕ್ಷನ್ 66ಎ ರದ್ದು ಮಾಡಿರುವ ಕ್ರಮ ಸರಿಯಾದ ದಿಕ್ಕಿನಲ್ಲಿ ಇರಿಸಿದ ಹೆಜ್ಜೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.