ಟೂರ್ನಿಯಲ್ಲಿ ಅತ್ಯುತ್ತಮವಾಗಿ ಆಡಿದರೂ ಕೈತಪ್ಪಿದ ವಿಶ್ವಕಪ್‌ ಭಾರತ ತಂಡ ಈ ಸಲದ ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಟ್ರೋಫಿಯನ್ನು ಮರಳಿ ತರಲು ಸಾಧ್ಯವಾಗಿಲ್ಲ, ನಿಜ. ಆದರೆ ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆ. ನಾಲ್ಕರ ಘಟ್ಟದಲ್ಲಿ ಆತಿಥೇಯ ಆಸ್ಟ್ರೇಲಿಯಾದ ಎದುರು ಸೋತಾಗ ಭಾರತದ ಕ್ರಿಕೆಟ್‌ ಪ್ರಿಯರೆಲ್ಲರೂ ನಿರಾಸೆಗೊಂಡಿದ್ದಾರೆ. ಕ್ರಿಕೆಟ್‌ ನಮ್ಮ ದೇಶದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ. ಈ ಆಟದ ಅಂಕಿಅಂಶಗಳೆಲ್ಲಾ ನಮ್ಮ ಯುವಜನರ ತುದಿನಾಲಿಗೆಯಲ್ಲಿರುತ್ತವೆ. ದೇಶ ವಿದೇಶಗಳ ಆಟಗಾರರ ತಂತ್ರ, ಶೈಲಿಗಳೆಲ್ಲವೂ ಈ ದೇಶದ ಕ್ರಿಕೆಟ್‌ಪ್ರಿಯರಿಗೆ ಚಿರಪರಿಚಿತ. ನಾಲ್ಕು ವರ್ಷಗಳ ಹಿಂದೆ ಗೆದ್ದಿದ್ದ ಟ್ರೋಫಿಯನ್ನು ಉಳಿಸಿಕೊಳ್ಳುವ ಹಾದಿಯಲ್ಲಿ ಭಾರತ ಎಡವಿದಾಗ ಅಭಿಮಾನಿಗಳಿಗೆ ನೋವಾಗುವುದು ಸಹಜ. ಆದರೆ ಅದು ಕೋಪಕ್ಕೆ ತಿರುಗಬಾರದು. ಕ್ರೀಡೆಯಲ್ಲಿ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ನಾವು ಬೆಳೆಸಿಕೊಳ್ಳಬೇಕು. ನಾಲ್ಕರ ಘಟ್ಟದಲ್ಲಿ ಸೋತ ತಕ್ಷಣ ತಂಡವನ್ನು ಹೀಗಳೆಯುವ ವರ್ತನೆ ಸರಿಯಲ್ಲ. ಇದೇ ವಿಶ್ವಕಪ್‌ನಲ್ಲಿ ಭಾರತದ ಆಟಗಾರರು ಸತತ ಏಳು ಪಂದ್ಯಗಳಲ್ಲಿ ಅತ್ಯುತ್ತಮವಾಗಿ ಆಡಿ ಗೆದ್ದಿದ್ದಾರೆ. ಎಪ್ಪತ್ತು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಜಗತ್ತಿನಲ್ಲಿ ಪ್ರಬಲ ಶಕ್ತಿ. ಈ ಸಲ ಸೆಮಿಫೈನಲ್‌ನಲ್ಲಿ ಆ ತಂಡದ ಆಟಗಾರರು ಅತ್ಯಂತ ಗುಣಮಟ್ಟದ ಆಟವಾಡಿದರು. ಆ ತಂಡ ಗೆಲ್ಲಲು ಎಲ್ಲಾ ರೀತಿಯಿಂದಲೂ ಅರ್ಹತೆ ಹೊಂದಿದೆ. ಜಗತ್ತಿನ ಶ್ರೇಷ್ಠ ತಂಡದ ಎದುರು ಭಾರತ ಸೋತಿದೆ ಎಂಬ ತೃಪ್ತಿ ನಮ್ಮದು. ಮಹೇಂದ್ರ ಸಿಂಗ್‌ ದೋನಿ ಈ ಟೂರ್ನಿಯಲ್ಲಿ ತಂಡವನ್ನು ಅತ್ಯಂತ ತಾಳ್ಮೆಯ ನಡೆ ಮತ್ತು ಚಾಣಾಕ್ಷ ನಿರ್ಧಾರಗಳಿಂದ ಸರಿದಿಕ್ಕಿನಲ್ಲಿಯೇ ಮುನ್ನಡೆಸಿದ್ದಾರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಅಂಗಳಗಳಲ್ಲಿ ಭಾರತ ಆಡುವಾಗ, ನಮ್ಮ ಆಟಗಾರರಿಗೆ ತವರಿನ ಕ್ರೀಡಾಂಗಣದಲ್ಲಿದ್ದೇವೇನೋ ಎಂಬ ಭಾವನೆ ಮೂಡಿತ್ತು. ಅಲ್ಲಿ ನೆಲೆಸಿರುವ ಭಾರತೀಯರು ಭಾರೀ ಸಂಖ್ಯೆಯಲ್ಲಿ ಕ್ರೀಡಾಂಗಣಕ್ಕೆ ತೆರಳಿ ಭಾರತದ ಆಟಗಾರರಿಗೆ ಸ್ಫೂರ್ತಿ ನೀಡಿದ್ದು ಸಂಭ್ರಮದ ಸಂಗತಿ. ಸೆಮಿಫೈನಲ್‌ನಲ್ಲಿ ಸ್ಟೀವನ್‌ ಸ್ಮಿತ್‌ ಶ್ರೇಷ್ಠ ಮಟ್ಟದ ಆಟ ಆಡಿದರು. ಅವರು ಗಳಿಸಿದ ಶತಕ ಭಾರತದ ಆತ್ಮವಿಶ್ವಾಸವನ್ನೇ ಅಲ್ಲಾಡಿಸಿಬಿಟ್ಟಿತು. ಮಿಷೆಲ್‌ ಜಾನ್ಸನ್‌ ಮತ್ತು ಜೇಮ್ಸ್‌ ಫಾಕ್ನರ್‌ ಅವರು ಆಸ್ಟ್ರೇಲಿಯಾ ಇನಿಂಗ್ಸ್‌ನ ಕೊನೆಯ ಐದು ಓವರುಗಳಲ್ಲಿ ವೇಗವಾಗಿ ಪೇರಿಸಿದ ರನ್‌ಗಳು ಆ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದವು. ಇಡೀ ಟೂರ್ನಿಯಲ್ಲಿ ಉತ್ತಮವಾಗಿ ಆಡಿ 17 ವಿಕೆಟ್‌ ಉರುಳಿಸಿದ ಮಹಮ್ಮದ್‌ ಶಮಿ ಆಸ್ಟ್ರೇಲಿಯಾದ ಒಂದೂ ವಿಕೆಟ್‌ ಉರುಳಿಸಲಾಗಲಿಲ್ಲ. ಸಾಮಾನ್ಯವಾಗಿ ದೊಡ್ಡ ಮೊತ್ತವನ್ನು ಬೆನ್ನುಹತ್ತುವಲ್ಲಿ ಎತ್ತಿದ ಕೈ ಎನಿಸಿರುವ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಸಂಪೂರ್ಣ ವಿಫಲರಾದರು. ಟಾಸ್‌ ಕೂಡಾ ಭಾರತಕ್ಕೆ ಒಲಿಯಲಿಲ್ಲ. ಅತ್ಯುತ್ತಮ ಬೌಲಿಂಗ್‌ ಪಡೆಯನ್ನು ಹೊಂದಿರುವ ಬಲಿಷ್ಠ ತಂಡವೊಂದರ ಎದುರು ದೊಡ್ಡ ಮೊತ್ತದ ಬೆನ್ನು ಹತ್ತುವುದು ಸುಲಭದ ಕೆಲಸವೇನಲ್ಲ. ಇಂತಹ ಸವಾಲು ಎದುರಿಸುವಲ್ಲಿ ದೋನಿ ಪಡೆ ಎಡವಿದೆ. ತವರಿನ ಪ್ರೇಕ್ಷಕರ ಎದುರು, ತಮಗೆ ಚಿರಪರಿಚಿತವಾದ ಪಿಚ್‌ನಲ್ಲಿ ಮೈಕಲ್‌ ಕ್ಲಾರ್ಕ್‌ ಬಳಗ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ಹಿಂದೆ ನಾಲ್ಕು ಸಲ ವಿಶ್ವಕಪ್‌ ಗೆದ್ದಿರುವ ಉನ್ನತ ಪರಂಪರೆಯನ್ನು ಹೊಂದಿದೆ. ಇಂತಹ ಅನುಭವಿಗಳ ತಂಡ, ಭಾರತೀಯ ಆಟಗಾರರು ಎಸಗಿದ ಸಣ್ಣಪುಟ್ಟ ತಪ್ಪುಗಳನ್ನೂ ತಮ್ಮ ಗೆಲುವಿನ ಸೋಪಾನವಾಗಿಸಿಕೊಂಡಿತು. ಭಾರತ, ಪಾಕಿಸ್ತಾನ, ಶ್ರೀಲಂಕಾ ತಂಡಗಳು ಈ ಕ್ರೀಡೆಯಲ್ಲಿ ಏಷ್ಯಾದ ಪ್ರಬಲ ಶಕ್ತಿಗಳಾಗಿವೆ. ಕಳೆದ ಆರು ವಿಶ್ವಕಪ್‌ ಕೂಟಗಳಲ್ಲಿ ಈ ಮೂರು ದೇಶಗಳಲ್ಲಿ ಒಂದಂತೂ ಫೈನಲ್‌ನಲ್ಲಿ ಇದ್ದೇ ಇರುತ್ತಿತ್ತು. ಆದರೆ ಈ ಸಲ ಫೈನಲ್‌ನಲ್ಲಿ ಏಷ್ಯಾದ ಸದ್ದು ಇಲ್ಲ. ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ತಂಡವೇ ಆಗಿರುವ ದಕ್ಷಿಣ ಆಫ್ರಿಕ ಈ ಸಲವೂ ಫೈನಲ್‌ ತಲುಪುವಲ್ಲಿ ವಿಫಲವಾಯಿತು. ಜಗತ್ತಿಗೇ ಕ್ರಿಕೆಟ್‌ ಪಾಠ ಕಲಿಸಿದ ಇಂಗ್ಲೆಂಡ್‌ ಒಮ್ಮೆಯೂ ಈ ಟ್ರೋಫಿಯನ್ನು ಎತ್ತಿಕೊಳ್ಳಲು ಆಗಿಲ್ಲ. ಈ ಸಲವಂತೂ ಈ ತಂಡ ಲೀಗ್‌ ಹಂತದಲ್ಲಿಯೇ ನಿರ್ಗಮಿಸಿತು. ಹಿಂದೆ ಪ್ರಶಸ್ತಿ ಗೆದ್ದ ಹೆಗ್ಗಳಿಕೆಯ ಪಾಕಿಸ್ತಾನ, ಶ್ರೀಲಂಕಾ ತಂಡಗಳೂ ಎಂಟರ ಘಟ್ಟದಲ್ಲೇ ನಿರಾಸೆ ಕಂಡವು. ಈ ದೇಶಗಳ ತಂಡಗಳಿಗೆ ಹೋಲಿಸಿದರೆ ಭಾರತೀಯ ಆಟಗಾರರ ಸಾಮರ್ಥ್ಯ ಶ್ಲಾಘನಾರ್ಹ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.