ವಿಮಾನ ಪ್ರಯಾಣ ಸುರಕ್ಷತೆ ಹೆಚ್ಚಿಸಿ ಜರ್ಮನ್‌ ವಿಂಗ್ಸ್ ವಿಮಾನ ಅಪಘಾತಕ್ಕೆ ಕಾರಣವೇನು ಎಂಬುದು ಆರಂಭದಲ್ಲಿ ಅಸ್ಪಷ್ಟವಾಗಿತ್ತು. ನಂತರ ತಿಳಿದುಬಂದ ವಿಚಾರ, ನಾಗರಿಕ ಜಗತ್ತನ್ನು ಅಲುಗಾಡಿಸುವಂತಹದ್ದು. ಜರ್ಮನ್ ವಿಂಗ್ಸ್ ವಿಮಾನ 9525 ಅನ್ನು ವಿಮಾನದ ಸಹಪೈಲಟ್ ಆ್ಯಂಡ್ರಿಯಾಸ್ ಲುಬಿಟ್ಸ್ ಉದ್ದೇಶಪೂರ್ವಕವಾಗಿಯೇ ಅತಿವೇಗದಲ್ಲಿ ಆಲ್ಪ್ಸ್ ಪರ್ವತಶ್ರೇಣಿಯತ್ತ ಒಯ್ದಿದ್ದ ಎಂಬುದು ವಿಮಾನದ ಕಪ್ಪುಪೆಟ್ಟಿಗೆಯಲ್ಲಿ ದಾಖಲಾಗಿರುವ ಸಂಭಾಷಣೆಯ ಮೂಲಕ ವ್ಯಕ್ತವಾಗಿದೆ. ಮನುಕುಲಕ್ಕೆ ಭೀತಿ ಹುಟ್ಟಿಸುವ ಹೊಸ ಬಗೆಯ ಬೆದರಿಕೆಯಾಗಿದೆ ಇದು. ಜರ್ಮನ್ ವಿಂಗ್ಸ್ ವಿಮಾನದ ಪೈಲಟ್‌ ಹೊರಹೋದಾಗ ಲುಬಿಟ್ಸ್ ಕಾಕ್‌ಪಿಟ್ ಬಾಗಿಲನ್ನು ಮುಚ್ಚಿಕೊಂಡಿದ್ದ. ನಂತರ, ತನ್ನನ್ನು ಒಳ ಕರೆದುಕೊಳ್ಳುವಂತೆ ಕಾಕ್‌ಪಿಟ್‌ನಿಂದ ಹೊರಹೋಗಿದ್ದ ಪೈಲಟ್ ಯಾಚಿಸುತ್ತಿರುವುದು ಸಂಭಾಷಣೆಯಲ್ಲಿ ದಾಖಲಾಗಿದೆ. ಪೈಲಟ್‌ಗಳು ವಿವಿಧ ಕಾರಣಗಳಿಗಾಗಿ ಕಾಕ್‌ಪಿಟ್ ಬಿಟ್ಟು ಹೊರಗೆ ತೆರಳುವುದರಲ್ಲಿ ವಿಶೇಷ ಏನಿಲ್ಲ. ಇದೊಂದು ಮಾಮೂಲು ಸಂಗತಿ. ಆದರೆ ಈ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಆತ್ಮಹತ್ಯೆಯಾಗಿರಬಹುದು ಎಂಬ ಸಂಶಯ ಮೂಡುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಪೈಲಟ್‌ಗಳ ಈ ಬಗೆಯ ವರ್ತನೆ ವಿಮಾನಯಾನದಲ್ಲಿ ಹೊಸ ಬಗೆಯ ಬೆದರಿಕೆಯೊಂದನ್ನು ಹುಟ್ಟುಹಾಕುತ್ತಿರುವುದು ನಾಗರಿಕ ಜಗತ್ತನ್ನು ತಲ್ಲಣಗೊಳಿಸುವಂತಹದ್ದು. ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಪ್ರತಿದಿನ ಏನೆಲ್ಲಾ ಬೆಳವಣಿಗೆಗಳಾಗುತ್ತಿವೆ. ಆದರೆ ಈ ತರಹದ ಘಟನೆಗಳು ಎಲೆಕ್ಟ್ರಾನಿಕ್ಸ್ ವಲಯದಲ್ಲಿನ ಈ ಎಲ್ಲಾ ಪ್ರಗತಿಯನ್ನೂ ಶೂನ್ಯವಾಗಿಸುವಂಥದ್ದು. ಲುಬಿಟ್ಸ್‌ಗೆ ಖಿನ್ನತೆ ಇತ್ತು ಎಂದು ಹೇಳಲಾಗಿದೆ. ಇದಕ್ಕಾಗಿ ಆತ ಸೇವಿಸುತ್ತಿದ್ದ ಔಷಧಗಳು ಆತನ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿವೆ. ದೃಷ್ಟಿದೋಷಕ್ಕೂ ಆತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಈ ದೃಷ್ಟಿದೋಷಕ್ಕೂ ಮಾನಸಿಕ ಕಾಯಿಲೆಗೂ ಸಂಬಂಧವಿತ್ತೇ ಎಂಬುದು ತಿಳಿದುಬಂದಿಲ್ಲ. ಬಹಳ ಪ್ರಶ್ನೆಗಳಿಗೆ ಉತ್ತರ ಇಲ್ಲ. ಆತ ಅಸ್ಥಿರ ವ್ಯಕ್ತಿತ್ವದವನಾಗಿದ್ದ ಎಂದು ಆತನ ಮಾಜಿ ಗೆಳತಿಯೊಬ್ಬಳು ಹೇಳಿದ್ದಾಳೆ. ಆದರೆ ವಿಮಾನಯಾನ ಸಂಸ್ಥೆಯ ಪ್ರಕಾರ, ಆತ ಎಲ್ಲಾ ಬಗೆಯ ಅರ್ಹತಾ ಪರೀಕ್ಷೆಗಳಲ್ಲೂ ತೇರ್ಗಡೆಯಾಗಿದ್ದ. ಹೀಗಾಗಿ ಈಗ ವಿಮಾನ ಚಾಲಕರ ಆಯ್ಕೆಗಾಗಿ ಬಳಕೆಯಾಗುತ್ತಿರುವ ಎಲ್ಲಾ ವಿಧಾನಗಳನ್ನು ಮರುವಿಮರ್ಶೆಗೆ ಒಳಪಡಿಸಲು ಈ ದುರಂತ ಪಾಠವಾಗಬೇಕಿದೆ. ಉದ್ಯೋಗ ನೀಡುವ ಮುಂಚೆಯೇ ಸರಿಯಾದ ವಿಶ್ಲೇಷಣೆಗಳಾಗಬೇಕು. ಅನೇಕ ಪರೀಕ್ಷೆಗಳ ಸಮಿತಿಗಳಲ್ಲಿ ಮಾನಸಿಕ ತಜ್ಞರು ಇರುವುದಿಲ್ಲ. ಹೀಗಾಗಿ, ಆಯ್ಕೆ ಪ್ರಕ್ರಿಯೆಯೇ ಸುಧಾರಣೆಗೊಳಪಡಬೇಕಿದೆ. ಸಹ ವಿಮಾನಚಾಲಕನ ಅಕೃತ್ಯದಿಂದಾದ ಈ ವಿಮಾನ ದುರಂತದ ನಂತರ, ಕಾಕ್‌ಪಿಟ್ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಲಾಗಿದೆ. ಎಲ್ಲಾ ಸಮಯದಲ್ಲೂ ವಿಮಾನದ ಕಾಕ್‌ಪಿಟ್‌ನಲ್ಲಿ ಇಬ್ಬರು ವಿಮಾನ ಚಾಲಕರು ಇರಲೇಬೇಕೆಂಬುದನ್ನು ಯುರೋಪಿನ ಅನೇಕ ವಿಮಾನಯಾನ ಸಂಸ್ಥೆಗಳು ಈಗ ಕಡ್ಡಾಯ ಮಾಡಿವೆ. ಅಮೆರಿಕದಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ. ಅಂಕಿಅಂಶಗಳ ಪ್ರಕಾರ ವಿಮಾನಯಾನ ಈಗಲೂ ಅತ್ಯಂತ ಸುರಕ್ಷಿತವಾದ ಪ್ರಯಾಣ ವಿಧಾನವಾಗಿದೆ. ಈ ವಿಶ್ವಾಸ ಜನರಲ್ಲಿ ಮುಂದುವರಿಯಬೇಕು. ವಿಶಿಷ್ಟ ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಸಂಭವಿಸಿರುವ ವಿಮಾನ ಅಪಘಾತಗಳು ಈ ನಂಬಿಕೆಗೆ ಕುಂದು ತರುವಂತಹವು. ಉಕ್ರೇನ್‌ನಲ್ಲಿ ವಿಮಾನವನ್ನು ಹೊಡೆದುರುಳಿಸಿದ ಕ್ಷಿಪಣಿ, ಮಲೇಷ್ಯಾ ಏರ್‌ಲೈನ್ಸ್ ವಿಮಾನ 370ರ ಕಣ್ಮರೆ ಹಾಗೂ ಈಗ ಉದ್ದೇಶಪೂರ್ವಕವಾಗಿ ನಡೆದಿರುವಂತಹ ಜರ್ಮನ್ ವಿಂಗ್ಸ್ ವಿಮಾನದ ಪತನ ಜನರಲ್ಲಿ ಅಭದ್ರತೆ ಮೂಡಿಸುವಂತಾಗಬಾರದು. ಬದುಕು ಸಂಕೀರ್ಣವಾಗುತ್ತಿದೆ. ಭದ್ರತೆ, ಸುರಕ್ಷತೆ ವಿಚಾರವಷ್ಟೇ ಅಲ್ಲದೆ ಮಾನವ ಸಂಪನ್ಮೂಲದ ವಿಕೃತಿಗಳು ಒಡ್ಡುವ ಸವಾಲುಗಳನ್ನು ಎದುರಿಸುವ ಸ್ಥಿತಿಯೂ ಸೃಷ್ಟಿಯಾಗಿದೆ. ಇದರ ಸಮರ್ಥ ನಿರ್ವಹಣೆಗೆ ಕಾರ್ಯತಂತ್ರಗಳನ್ನು ರೂಪಿಸುವುದು ಅವಶ್ಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.