ಭಾರತ ಕ್ರೀಡಾಲೋಕಕ್ಕೆ ಸೈನಾ ಅಗ್ರಪಟ್ಟದ ಹೊಳಪು ಸೈನಾ ನೆಹ್ವಾಲ್‌ ವಿಶ್ವ ಬ್ಯಾಡ್ಮಿಂಟನ್‌ ಕ್ರಮಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೆ ಏರಿರುವುದರ ಹಿಂದೆ ಅವರ ಅಪಾರ ಶ್ರಮ ಅಡಗಿದೆ. ಶ್ರೇಷ್ಠವಾದ ವೃತ್ತಿಪರತೆ ಇದೆ. ಚೀನಾ, ಥಾಯ್ಲೆಂಡ್‌, ಡೆನ್ಮಾರ್ಕ್‌ ಸೇರಿದಂತೆ ಜಗತ್ತಿನಲ್ಲಿ ಬ್ಯಾಡ್ಮಿಂಟನ್‌ ಶಕ್ತಿಕೇಂದ್ರಗಳ ಆಟಗಾರ್ತಿಯರ ಸವಾಲುಗಳನ್ನು ಮೆಟ್ಟಿ ನಿಂತ ಸೈನಾ ಸಾಹಸ ನಮ್ಮ ದೇಶದ ಯುವ ಪೀಳಿಗೆಗೆ ಮಾದರಿಯಾಗಿದೆ. ಒಂಬತ್ತು ವರ್ಷಗಳ ಹಿಂದೆ 19 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್‌ನಲ್ಲಿ ಇವರು ರಾಷ್ಟ್ರೀಯ ಚಾಂಪಿಯನ್‌ ಪಟ್ಟಕ್ಕೇರಿದರು. ಮುಂದೊಂದು ದಿನ ಇವರು ವಿಶ್ವದ ಅಗ್ರಮಾನ್ಯ ಆಟಗಾರ್ತಿಯಾಗುತ್ತಾರೆಂದು ಯಾರೂ ಕಲ್ಪಿಸಿಕೊಂಡಿರಲಿಲ್ಲ. ಆದರೆ ಸೈನಾ ಅಂದೇ ವಿಶ್ವಮಟ್ಟದ ಹೆಗ್ಗುರಿ ಇರಿಸಿಕೊಂಡಿದ್ದರು. ಅದಕ್ಕೆ ಅವರ ತಂದೆ, ತಾಯಿ ಪ್ರೋತ್ಸಾಹದ ನೀರೆರೆದರು. ಗೋಪಿಚಂದ್‌, ವಿಮಲ್‌ ಕುಮಾರ್‌ ಅವರಂತಹ ಶ್ರೇಷ್ಠ ಕೋಚ್‌ಗಳ ಮಾರ್ಗದರ್ಶನವೂ ಸಿಕ್ಕಿತು. ಸೈನಾ ವಿರಮಿಸಲಿಲ್ಲ. ಬ್ಯಾಡ್ಮಿಂಟನ್‌ ಹೊರತು ಇನ್ನೇನನ್ನೂ ಅವರು ಯೋಚಿಸಲಿಲ್ಲ. ಒಂದು ದಶಕದಲ್ಲಿ ಅವರಿಗೆ ಬದುಕು ಎಂಬುದು ಬ್ಯಾಡ್ಮಿಂಟನ್‌ ಧ್ಯಾನವೇ ಆಗಿದೆ. ಪುಣೆಯಲ್ಲಿ ನಡೆದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌, ಯುವ ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಸಿಂಗಲ್ಸ್‌ನಲ್ಲಿ ‍ಪ್ರಶಸ್ತಿ ಗೆದ್ದರು. ದೆಹಲಿಯಲ್ಲೇ ನಡೆದ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿಯೂ ಬಂಗಾರದ ಪದಕ ಪಡೆದರು. ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಾಗ ಭಾರತವೇ ಸಂಭ್ರಮಿಸಿತ್ತು. ಈ ದೇಶ ಇವರನ್ನು ಅಭಿಮಾನದಿಂದ ಕಂಡಿದೆ. ಕ್ರೀಡಾಲೋಕದ ತಾರೆಯಂತೆ ನಡೆಸಿಕೊಂಡಿದೆ. ಅರ್ಜುನ ಪ್ರಶಸ್ತಿ, ಪದ್ಮಶ್ರೀ, ರಾಜೀವ್‌ ಗಾಂಧಿ ಖೇಲ್‌ರತ್ನದಂತಹ ಪ್ರಶಸ್ತಿಗಳೂ ಸೈನಾ ಮುಡಿಗೇರಿವೆ. ಇವರಿಗೆ ಇದೀಗ 25ರ ಹರೆಯ. ತಾರಾಪಟ್ಟವೇ ಆಗಲಿ, ದೇಶದ ಉನ್ನತ ಗೌರವಗಳೇ ಇರಲಿ ಸೈನಾ ಧ್ಯಾನವನ್ನು ವಿಚಲಿತಗೊಳಿಸಿಲ್ಲ. ಮುಂಬರುವ ರಿಯೊ ಡಿ ಜನೈರೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮಹಾಗುರಿಯತ್ತ ನಡೆದಿರುವ ಅವರ ಪಯಣದಲ್ಲಿ ಬಿಡುವೆಂಬುದೇ ಇಲ್ಲ. ಆ ಗುರಿಯ ಹಾದಿಯಲ್ಲಿ ಸಾಗಿರುವ ಅವರಿಗೆ ಇದೀಗ ಸಿಕ್ಕಿರುವ ಅಗ್ರಸ್ಥಾನವೂ ಒಂದು ಮಹತ್ತರ ಮೈಲುಗಲ್ಲು. ಭಾರತದಲ್ಲಿ ಕ್ರಿಕೆಟ್‌ನಷ್ಟು ಜನಪ್ರಿಯ ಕ್ರೀಡೆ ಇನ್ನೊಂದಿಲ್ಲ. ದೇಶದ ತಂಡದಲ್ಲಿ ಆಡಲು ಅವಕಾಶ ಗಿಟ್ಟಿಸಿದವರಂತೂ ಒಮ್ಮೊಮ್ಮೆ ಜನಪ್ರಿಯತೆಯಲ್ಲಿ ಚಲನಚಿತ್ರ ನಟರನ್ನೂ ಮೀರಿಸಿರುತ್ತಾರೆ. ಈ ನಾಡಿನ ಜನ ಕ್ರಿಕೆಟ್‌ ಬಿಟ್ಟು ಇತರ ಕ್ರೀಡೆಗಳ ಬಗ್ಗೆ ಗಾಢವಾಗಿ ಯೋಚಿಸುವುದೂ ಕಡಿಮೆಯೇ. ಇಂತಹ ವಾತಾವರಣದಲ್ಲಿ ಸೈನಾ, ಸಾನಿಯಾ, ಮೇರಿ ಕೋಮ್‌ ಮುಂತಾದವರು ಏರಿದ ಎತ್ತರದ ಜತೆಗೇ, ಏರಲು ಪಟ್ಟ ಪರಿಶ್ರಮ ಮತ್ತು ಪಡಿಪಾಟಲುಗಳ ಬಗ್ಗೆ ಈ ನಾಡಿನ ಮಂದಿ ಅರಿತುಕೊಳ್ಳಬೇಕಿದೆ. ಈ ನೆಲದ ಹೆಣ್ಣುಮಕ್ಕಳಿಗೆಲ್ಲಾ ಸೈನಾ, ಸಾನಿಯಾ, ಮೇರಿ ಕೋಮ್‌ ನಡೆದ ಹಾದಿ ಆದರ್ಶಪೂರ್ಣ. ‘ಗೆಲ್ಲಬೇಕಾದ ಪದಕ ಅಥವಾ ಗಳಿಸಬೇಕಾದ ಕ್ರಮಾಂಕದ ಬಗ್ಗೆ ನಾನು ಹೆಚ್ಚು ಕನಸು ಕಾಣುವುದಿಲ್ಲ. ಕ್ರೀಡಾಂಗಣದಲ್ಲಿ ನಿರಂತರ ಬೆವರು ಹರಿಸುವುದಷ್ಟೇ ನನ್ನ ಕಾಯಕ. ಪದಕ, ಕ್ರಮಾಂಕಗಳೆಲ್ಲಾ ಅದರಷ್ಟಕ್ಕೆ ಬರುತ್ತವೆ’ ಎಂದು ಸೈನಾ ಹಿಂದೊಮ್ಮೆ ಹೇಳಿದ್ದರು. ಅವರ ಮಾತು ನಿಜವಾಗಿದೆ. ಇದೀಗ ಅಗ್ರಸ್ಥಾನಕ್ಕೂ ಏರಿದ್ದಾರೆ ಮತ್ತು ಇಂತಹದ್ದೊಂದು ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಾದಿಯಲ್ಲಿ ಅವರು ಚೀನಾದ ವಿಶ್ವ ಚಾಂಪಿಯನ್‌ ಮತ್ತು ಒಲಿಂಪಿಕ್‌ ಚಾಂಪಿಯನ್‌ ಆಟಗಾರ್ತಿಯರನ್ನೆಲ್ಲಾ ಸೋಲಿಸಿದ್ದಾರೆ. ತಮ್ಮ ಆಕ್ರಮಣಕಾರಿ ಆಟದಂತೆಯೇ ಅವರು ನೇರ ನಡೆನುಡಿಗೂ ಹೆಸರಾದವರು. ಪದ್ಮಭೂಷಣ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸದಿದ್ದಾಗ ಕ್ರೀಡಾ ಆಡಳಿತಗಾರರ ವಿರುದ್ಧ ಅವರು ಕಿಡಿಕಾರಿದ್ದು ವಿವಾದ ಹುಟ್ಟುಹಾಕಿತ್ತು. ಕೆಲವೇ ತಿಂಗಳ ಹಿಂದೆ ಅವರು ಹೈದರಾಬಾದ್‌ನಲ್ಲಿರುವ ಗೋಪಿಚಂದ್‌ ಅಕಾಡೆಮಿಯನ್ನು ತೊರೆದರು. ಬೆಂಗಳೂರಿಗೆ ಬಂದು ವಿಮಲ್‌ ಕುಮಾರ್‌ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೂ ವಿವಾದಕ್ಕೆ ಗ್ರಾಸ ನೀಡಿತ್ತು. ಕೋಚ್‌ನ ಆಯ್ಕೆಗೆ ಸಂಬಂಧಿಸಿದಂತೆ ತಮ್ಮ ನಿರ್ಧಾರ ಸರಿ ಎಂಬುದನ್ನು ಇದೀಗ ಸೈನಾ ಸಾಬೀತುಪಡಿಸಿದ್ದಾರೆ. ಬೆಂಗಳೂರಿನಲ್ಲಿ ತರಬೇತು ಪಡೆಯುತ್ತಿರುವ ಸಂದರ್ಭದಲ್ಲಿಯೇ ಅವರು ಅಗ್ರ ಕ್ರಮಾಂಕ ಗಳಿಸಿದ್ದಾರೆ. ಇದು ಕನ್ನಡಿಗರೆಲ್ಲರಿಗೂ ಹೆಮ್ಮೆ ತರುವಂತಹ ಸಂಗತಿಯಾಗಿದೆ. ಸೈನಾ ಇದೀಗ ತಾವು ಗಳಿಸಿದ ಅಗ್ರಪಟ್ಟವನ್ನು ಬಹುಕಾಲ ಉಳಿಸಿಕೊಳ್ಳುವಂತಾಗಲಿ. ಭಾರತದ ಚರಿತ್ರೆಯಲ್ಲಿ ಸದಾ ಹೊಳೆಯುವಂತಹ ಇನ್ನಷ್ಟು ಎತ್ತರದ ಸಾಧನೆಗಳು ಅವರಿಂದ ಮೂಡಿಬರಲಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.