ಭಿನ್ನರ ದಮನ: ಎಎಪಿಯಲ್ಲಿ ಇಷ್ಟು ಬೇಗ ಹೀಗಾಗಬಾರದಿತ್ತು ಭ್ರಷ್ಟಾಚಾರ, ಸರ್ಕಾರಗಳ ಜನವಿರೋಧಿ ನೀತಿಗಳು, ಜನಪ್ರತಿನಿಧಿಗಳ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ, ಲೋಕಪಾಲ ಆಂದೋಲನದ ಅಡಿಪಾಯದ ಮೇಲೆ ಹುಟ್ಟಿಕೊಂಡ ಆಮ್ ಆದ್ಮಿ ಪಾರ್ಟಿಯ (ಎಎಪಿ) ನಿಜ ಬಣ್ಣ ಈಗ ಬಯಲಾಗಿದೆ. ಅದರ ಸಂಚಾಲಕ ಅರವಿಂದ ಕೇಜ್ರಿವಾಲ್ ನಡೆದುಕೊಳ್ಳುತ್ತಿರುವ ರೀತಿ, ಮುಖಂಡರು ಎನಿಸಿಕೊಂಡವರ ವರ್ತನೆಗಳನ್ನು ನೋಡಿದರೆ, ಈಗಾಗಲೆ ಅಸ್ತಿತ್ವದಲ್ಲಿ ಇರುವ ರಾಜಕೀಯ ಪಕ್ಷಗಳು ಮತ್ತು ಜನನಾಯಕರಿಗಿಂತ ಇವರೇನೂ ಕಮ್ಮಿಯಿಲ್ಲ ಎಂಬುದು ಸಾಬೀತಾಗುತ್ತದೆ. ದೇಶದಲ್ಲಿ ಮೌಲ್ಯಾಧಾರಿತ, ಪರ್ಯಾಯ ರಾಜಕಾರಣದ ಶಕೆ ಎಎಪಿಯೊಂದಿಗೆ ಆರಂಭವಾಗುತ್ತಿದೆ ಎಂದು ಜನ ಕನಸು ಕಂಡಿದ್ದರು. ಯುವಜನರು, ಮಧ್ಯಮ ವರ್ಗದವರು, ಸುಶಿಕ್ಷಿತರಂತೂ ಅದರ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಈಗ ಅಲ್ಲಿ ನಡೆಯುತ್ತಿರುವ ಪ್ರಹಸನ ಎಲ್ಲರಲ್ಲೂ ಭ್ರಮನಿರಸನ ಉಂಟು ಮಾಡಿದೆ. ಆ ಪಕ್ಷದಲ್ಲಿ ಆಂತರಿಕ ಪ್ರಜಾಸತ್ತೆಗೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿಗೆ ಬೆಲೆಯೇ ಇದ್ದಂತಿಲ್ಲ. ಅಧಿಕಾರ ಮತ್ತು ಕೀರ್ತಿ, ಈ ಎರಡರಿಂದಲೂ ಉಬ್ಬಿ ಹೋಗಿರುವ ಕೇಜ್ರಿವಾಲ್ ಅವರಂತೂ ಸರ್ವಾಧಿಕಾರದ ಅಪಾಯಕಾರಿ ದಾರಿ ತುಳಿಯುತ್ತಿದ್ದಾರೆ. ತಮ್ಮನ್ನು ವಿರೋಧಿಸುವವರನ್ನು ಪಕ್ಷದ ವಿವಿಧ ಹುದ್ದೆಗಳಿಂದ ಉಚ್ಚಾಟಿಸುವಲ್ಲಿ ಸಫಲರಾಗಿದ್ದಾರೆ. ಪಕ್ಷದ ಸೈದ್ಧಾಂತಿಕ ಮುಖವಾಗಿದ್ದ ಯೋಗೇಂದ್ರ ಯಾದವ್ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟದ ದನಿಯಾಗಿದ್ದ ಪ್ರಶಾಂತ್ ಭೂಷಣ್ ಅವರನ್ನು ಹೊರ ಹಾಕಿದ ವಿಧಾನ ಎಎಪಿಯ ಮೂಲ ಆಶಯಕ್ಕೆ ವಿರುದ್ಧ. ಮುಂದಿನ ದಿನಗಳಲ್ಲಿ ಭಿನ್ನಮತೀಯರನ್ನೆಲ್ಲ ಪಕ್ಷದಿಂದಲೇ ಹೊರಹಾಕಲು ವೇದಿಕೆ ಸಜ್ಜಾಗುತ್ತಿದೆ. ಕೇಜ್ರಿವಾಲ್ ಅವರನ್ನು ಟೀಕಿಸಿ ಪತ್ರ ಬರೆದಿದ್ದಕ್ಕಾಗಿ ನಿವೃತ್ತ ಅಡ್ಮಿರಲ್ ರಾಮದಾಸ್ ಅವರನ್ನು ಪಕ್ಷದ ಆಂತರಿಕ ಲೋಕಪಾಲ ಹುದ್ದೆಯಿಂದ ಕಿತ್ತು ಹಾಕಿರುವುದು ಒಳ್ಳೆಯ ಬೆಳವಣಿಗೆಯಲ್ಲ. ತಮ್ಮ ವಿರುದ್ಧ ಸೊಲ್ಲೆತ್ತಿದವರಿಗೆ ಪಾಠ ಕಲಿಸಿ, ಭಟ್ಟಂಗಿಗಳನ್ನು ಇಟ್ಟುಕೊಂಡು ಪಕ್ಷವನ್ನು ಅಡಿಯಾಳು ಮಾಡಿಕೊಳ್ಳಲು ಹೊರಟಂತಿದೆ ಕೇಜ್ರಿವಾಲ್‌ ಕಾರ್ಯವೈಖರಿ. ಪಕ್ಷದ ಕಾರ್ಯಕಾರಿಣಿಯಲ್ಲಿ ತಮಗಿದ್ದ ಬೆಂಬಲ ಬಳಸಿ ಬಂಡುಕೋರರನ್ನು ನಿಯಂತ್ರಿಸುವ ಅವಕಾಶವನ್ನು ಅವರು ಕಳೆದುಕೊಂಡಿದ್ದಾರೆ. ಸಭೆಯೊಳಗೆ ನಡೆದ ಗೂಂಡಾಗಿರಿಯಂತೂ ಯಾವ ರೀತಿಯಲ್ಲೂ ಎಎಪಿಗೆ ಶೋಭೆ ತರುವುದಿಲ್ಲ. ಭಿನ್ನಮತ ಜನತಂತ್ರದ ತಿರುಳಿದ್ದಂತೆ. ಆದರೆ ಹಾಗೆಂದು ತಾವೇ ಬೆಳೆಸಿ ಪೋಷಿಸಿದ ಮರವನ್ನೇ ಭಿನ್ನಮತದ ಕೊಡಲಿಯಿಂದ ಕಡಿಯುವುದೂ ಸರಿಯಲ್ಲ. ಎಎಪಿಯ ಇತ್ತೀಚಿನ ಇಡೀ ಬೆಳವಣಿಗೆಗಳನ್ನು ನೋಡಿದರೆ ತಪ್ಪು ಎರಡೂ ಕಡೆ ಇದೆ. ಎರಡೂ ಕಡೆಯ ಬೆರಳೆಣಿಕೆಯಷ್ಟು ಮುಖಂಡರ ಒಣ ಪ್ರತಿಷ್ಠೆಯಿಂದಾಗಿ ಇಡೀ ಪಕ್ಷದ ಮಾನ- ಮರ್ಯಾದೆ ಬೀದಿಯಲ್ಲಿ ಹರಾಜಾಗುತ್ತಿದೆ. ‘ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸಿಕ್ಕ ಚಾರಿತ್ರಿಕ ಜಯ ತಮ್ಮ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ, ಜನರ ಆಶೋತ್ತರಗಳನ್ನು ಈಡೇರಿಸಬೇಕಾಗಿದೆ’ ಎಂಬ ಪ್ರಜ್ಞೆ ಇವರೆಲ್ಲರಲ್ಲೂ ಇರಬೇಕಾಗಿತ್ತು. ‘ಪಕ್ಷದ ಆಂತರಿಕ ಸಮಸ್ಯೆಯನ್ನು ಬಹಿರಂಗ ಮಾಡುವುದು ಸರಿಯಲ್ಲ, ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು’ ಎಂಬ ವಿವೇಚನೆ ಭಿನ್ನರಿಗೂ ಬೇಕಿತ್ತು. ಆದರೆ ಒಂದು ಮಾತಂತೂ ನಿಜ. ಎಲ್ಲರೂ ಗಂಭೀರವಾಗಿ ಗಮನ ಹರಿಸಲೇಬೇಕಾದ ಪ್ರಶ್ನೆಗಳನ್ನು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್‌ ಎತ್ತಿದ್ದಾರೆ. ಎಎಪಿಯ 44 ಶಾಸಕರು ಕೋಟ್ಯಧೀಶರು, 23 ಶಾಸಕರು ಕ್ರಿಮಿನಲ್ ಹಿನ್ನೆಲೆಯವರು ಎಂಬುದನ್ನು ಬೆಳಕಿಗೆ ತಂದಿದ್ದಾರೆ. ದೆಹಲಿ ಚುನಾವಣೆಯಲ್ಲಿ ಯಥೇಚ್ಛವಾಗಿ ಸುರಿದ ಹಣದ ಮೂಲ ಬಹಿರಂಗಪಡಿಸಬೇಕು ಎಂದು ಕೇಳಿದ್ದಾರೆ. ಅದಕ್ಕೆ ಸಮರ್ಥ ಸಮಜಾಯಿಷಿ ಕೊಡದೆ ಕೇಜ್ರಿವಾಲ್‌ ಅವರು ಉಚ್ಚಾಟನೆಯ ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ಕಾರ್ಯಕಾರಿಣಿ ಸಭೆಯಲ್ಲಿ, ‘ನಿಮಗೆ ನಾನು ಬೇಕೋ, ಅವರಿಬ್ಬರು (ಯಾದವ್, ಭೂಷಣ್) ಬೇಕೋ ಎಂಬುದನ್ನು ತೀರ್ಮಾನಿಸಿ’ ಎಂದು ಹೇಳಿದ್ದಂತೂ ಅವರೊಬ್ಬ ಮುತ್ಸದ್ದಿಯಲ್ಲ; ಎಲ್ಲರಂತೆ ಮಾಮೂಲಿ ರಾಜಕಾರಣಿ ಎಂಬ ಅನುಮಾನ ಮೂಡಿಸುತ್ತಿದೆ. ಅವರಲ್ಲಿ ಪ್ರಬುದ್ಧತೆ, ಸಂಯಮದ ಕೊರತೆ ಎದ್ದು ಕಾಣುತ್ತಿದೆ. ಶುದ್ಧ ರಾಜಕಾರಣದ ನವ ಪ್ರಯೋಗವೊಂದು ಇಷ್ಟು ಅಲ್ಪಾವಧಿಯಲ್ಲಿ ನೆಲಕಚ್ಚುವುದರಿಂದ ಎಎಪಿಗೆ ಮಾತ್ರವಲ್ಲ, ದೇಶಕ್ಕೂ ನಷ್ಟ. ಆದರೆ ಇದು ಕೇಜ್ರಿವಾಲ್‌ಗೆ ಅರ್ಥವಾಗುವುದು ಯಾವಾಗ? ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.