ರಾಜ್ಯದ ಕ್ರಮ ಬರೀ ಸಾಂಕೇತಿಕ ಆಗದಿರಲಿ ರಾಜ್ಯದಲ್ಲಿ ಒಂದರಿಂದ ಐದನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಕಡ್ಡಾಯ ಶಿಕ್ಷಣ ನೀಡುವ ಮತ್ತು ಎಲ್ಲಾ ಶಾಲೆಗಳಲ್ಲಿ ಹತ್ತನೇ ತರಗತಿಯವರೆಗೆ ಕನ್ನಡ ಕಲಿಕೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯಗೊಳಿಸುವ ಮಸೂದೆಗೆ ವಿಧಾನಮಂಡಲ ಅಂಗೀಕಾರ ನೀಡಿದೆ. ಈ ಮೂಲಕ ರಾಜ್ಯದಲ್ಲಿ ದುರ್ಬಲಗೊಳ್ಳುತ್ತಿರುವ ಕನ್ನಡದ ಹಿಡಿತವನ್ನು ಬಿಗಿಗೊಳಿಸುವ ಸ್ವಾಗತಾರ್ಹ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ವಿಧಾನಸಭೆಯಲ್ಲಿ ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಈ ಮಸೂದೆಯನ್ನು ಬೆಂಬಲಿಸಿದ್ದಾರೆ. ಮಾತೃಭಾಷೆ ಅಥವಾ ಪರಿಸರದ ಭಾಷೆಯಲ್ಲಿನ ಕಲಿಕೆ, ಗ್ರಹಿಕೆಗೆ ಸುಲಭವಾಗಿರುತ್ತದೆ. ಮಗುವಿನ ಪರಿಪೂರ್ಣ ವ್ಯಕ್ತಿತ್ವದ ವಿಕಾಸಕ್ಕೆ ಇದು ಅನುಕೂಲ ಎಂಬುದನ್ನು ತಜ್ಞರು ಸಾಬೀತುಪಡಿಸಿದ್ದಾರೆ. ಹೀಗಾಗಿ ಕನ್ನಡದಲ್ಲಿ ಕಲಿಸುವಂತಹದ್ದು ಸ್ವಾಗತಾರ್ಹ ನಿಲುವು. ಹಾಗೆಯೇ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಬೇಕಾದುದೂ ಇಂದಿನ ದಿನಗಳಲ್ಲಿ ಅವಶ್ಯ. ಆದರೆ ಪೋಷಕರು ಇದನ್ನು ಒಪ್ಪುವಂತಹ ಸ್ಥಿತಿಯಲ್ಲಿಲ್ಲ. ಜನಸಾಮಾನ್ಯರ ಮನಸ್ಸುಗಳಲ್ಲಿ ಇಂಗ್ಲಿಷ್ ಭೂತ ಹೊಕ್ಕಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರಷ್ಟೇ ಮಕ್ಕಳು ಉದ್ಧಾರವಾಗುವುದು ಎಂಬಂಥ ಭ್ರಮೆ ಆವರಿಸಿದೆ. ಆದರೆ ವಾಸ್ತವಿಕ ನೆಲೆಯಲ್ಲಿ ಗಮನಿಸಿದಲ್ಲಿ ಇದೇನೂ ಅಷ್ಟು ನಿಜವಲ್ಲ ಎಂಬುದನ್ನು ಜನರು ತಿಳಿಯಬೇಕು. ಇಂಗ್ಲಿಷನ್ನು ಭಾಷೆಯಾಗಿ ಚೆನ್ನಾಗಿಯೇ ಕಲಿಯುವುದರ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಕನ್ನಡಿಗರಾದರೂ ಓದುವಂತಹ ವ್ಯವಸ್ಥೆ ಇರಬೇಕು. ಇದಕ್ಕಾಗಿ ಮೂಲಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಕಡೆಗೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈಗ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿಯಿಂದ ಕನ್ನಡ ಭಾಷೆಯ ಕಲಿಕೆ ಆರಂಭವಾಗಲಿದ್ದು ಹತ್ತನೇ ತರಗತಿವರೆಗೆ ಕಡ್ಡಾಯವಾಗಲಿದೆ. ಕನ್ನಡ ಮಾಧ್ಯಮದ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ರಾಜ್ಯದಲ್ಲಿ ಸರ್ಕಾರದ ನಿಲುವನ್ನು ವಿರೋಧಿಸುತ್ತಿರುವ 1700ಕ್ಕೂ ಹೆಚ್ಚು ಖಾಸಗಿ ಶಾಲೆಗಳು ಕನ್ನಡ ಮಾಧ್ಯಮವನ್ನು ಅಳವಡಿಸುವ ಅನಿವಾರ್ಯ ಉಂಟಾಗುತ್ತದೆ. ಸರ್ಕಾರದ ಈ ನಿರ್ಧಾರ ಪ್ರಾಯೋಗಿಕವಾಗಿ ಕನ್ನಡಕ್ಕೆ ಎಷ್ಟರಮಟ್ಟಿಗೆ ನೆರವಾಗಬಹುದು ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಏಕೆಂದರೆ ಮಾತೃಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಹಿಂದಿನ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟಿನ ಸಂವಿಧಾನ ಪೀಠವೇ ತೀರ್ಪು ನೀಡಿದೆ. ಪೋಷಕರು ಬಯಸಿದ ಭಾಷಾ ಮಾಧ್ಯಮವನ್ನು ಶಾಲೆಗಳು ಅನುಸರಿಸಬಹುದು ಎಂದು ಆ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಈಗ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಖಾಸಗಿ ಶಾಲೆಗಳು ಮತ್ತೆ ಕೋರ್ಟ್‌ ಮೆಟ್ಟಿಲು ಹತ್ತಬಹುದು. ಸುಪ್ರೀಂಕೋರ್ಟಿನ ತೀರ್ಪನ್ನು ಮರುಪರಿಶೀಲಿಸಲು ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯೂ ತಿರಸ್ಕೃತವಾಗಿರುವ ಹಿನ್ನೆಲೆಯಲ್ಲಿ, ಈಗಿನ ಹೊಸ ನಿರ್ಧಾರದ ಜಾರಿ ಸುಲಭಸಾಧ್ಯವಲ್ಲ. ಕಾನೂನಿನ ಈ ತೊಡಕಿನ ಬಗ್ಗೆ ರಾಜ್ಯ ಸರ್ಕಾರಕ್ಕೂ ಅರಿವಿದ್ದಂತಿದೆ. ಹಾಗೆಂದೇ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷಾ ಮಾಧ್ಯಮ ಕಡ್ಡಾಯದ ಕುರಿತು ಸಂವಿಧಾನ ತಿದ್ದುಪಡಿ ಮಾಡಲು ಒತ್ತಾಯಿಸಿ ಪ್ರಧಾನಮಂತ್ರಿಯವರ ಬಳಿಗೆ ನಿಯೋಗ ಒಯ್ಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಸರಿಯಾದದ್ದು. ಈ ನಿಟ್ಟಿನಲ್ಲಿ ಇತರ ರಾಜ್ಯಗಳ ಮುಖ್ಯಮಂತ್ರಿಗಳನ್ನೂ ಸಂಪರ್ಕಿಸಿ ಕೇಂದ್ರದ ಮೇಲೆ ಒತ್ತಡ ಹೇರಲು ಅವರು ಯತ್ನಿಸಬೇಕು. ಸಂವಿಧಾನ ತಿದ್ದುಪಡಿ ತಕ್ಷಣಕ್ಕೆ ಆಗುವಂತಹದ್ದಲ್ಲ. ಅಲ್ಲಿಯವರೆಗೆ ಖಾಸಗಿ ಶಾಲೆಗಳು ಮತ್ತೆ ಕಾನೂನಿನ ಮೊರೆಹೊಕ್ಕು ಇಂಗ್ಲಿಷ್‌ ಪ್ರಭುತ್ವವನ್ನು ನಿರಾತಂಕವಾಗಿ ಮುಂದುವರಿಸುವ ಸಾಧ್ಯತೆ ಇದ್ದೇ ಇದೆ. ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಸುತ್ತಿರುವ ಶಾಲೆಗಳನ್ನು ಮೊದಲು ಸರಿದಾರಿಗೆ ತರಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಕಾರ್ಯತಂತ್ರಗಳನ್ನು ರೂಪಿಸಬೇಕು. ಅದಾಗದಿದ್ದಲ್ಲಿ ಸರ್ಕಾರದ ಈಗಿನ ನಿರ್ಧಾರ ಬರೀ ಸಾಂಕೇತಿಕವಾಗಿಯಷ್ಟೇ ಉಳಿಯುತ್ತದೆ. ಉದ್ಯೋಗದ ಭಾಷೆಯಾಗಿ ಇಂಗ್ಲಿಷ್‌ ಈಗಾಗಲೆ ಕನ್ನಡವನ್ನು ಹಿಂದಿಕ್ಕಿರುವುದರಿಂದ, ಪೋಷಕರೂ ಇಂಗ್ಲಿಷ್‌ ಶಾಲೆಗಳಿಗೆ ಮುಗಿಬೀಳುವುದು ಸಹಜ. ಕನ್ನಡವನ್ನು ಅನ್ನದ ಭಾಷೆಯಾಗಿ ಗಟ್ಟಿಗೊಳಿಸಲು ಸರ್ಕಾರ ಯತ್ನಿಸಬೇಕು. ಈಗ, ಜಾಗತೀಕರಣದ ಪರಿಣಾಮವಾಗಿ ಅವಕಾಶಗಳು ಪ್ರಜಾಸತ್ತಾತ್ಮಕವಾಗಿವೆ. ಆದರೆ ಎಲ್ಲೆಡೆ ಸಾಂಸ್ಕೃತಿಕ ಏಕರೂಪತೆ ಬಲವಾಗುತ್ತಿದೆ. ಜಾಗತೀಕರಣದ ಈ ಪ್ರಕ್ರಿಯೆಯಲ್ಲಿ ಇಂಗ್ಲಿಷ್ ಮಹತ್ವ ಹೆಚ್ಚಿರುವುದು ಸಹಜ. ಕನ್ನಡಿಗರು ಭಾಷಾ ಅಭಿಮಾನಶೂನ್ಯತೆಯಿಂದ ಹೊರಬರಬೇಕು. ಈ ನಿಟ್ಟಿನಲ್ಲಿ ನಾವು ನೆರೆಯ ತಮಿಳುನಾಡು ಮತ್ತು ಕೇರಳಿಗರಿಂದ ಕಲಿಯಬೇಕಾದದ್ದು ಬಹಳಷ್ಟಿದೆ. ಕನ್ನಡತನವನ್ನು ರೂಢಿಸಿಕೊಳ್ಳುವ ಮತ್ತು ಕನ್ನಡವನ್ನು ದುಡಿಮೆಯ ಭಾಷೆಯಾಗಿಸುವ ಕೆಲಸ ಒಟ್ಟೊಟ್ಟಿಗೇ ನಡೆಯಬೇಕಿದೆ. ಅದರ ಜತೆಗೆ ಸಂವಿಧಾನ ತಿದ್ದುಪಡಿಗೆ ಕೇಂದ್ರದ ಮೇಲೆ ಒತ್ತಡ ಹೇರುವ ಕೆಲಸವೂ ತುರ್ತಾಗಿ ಆಗಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.