ಇಬ್ಬಣ, ದಿಬ್ಬಣ ಬದಿಗಿಡಿ; ಆಡಳಿತಕ್ಕೆ ನಿಷ್ಠೆ ಪ್ರದರ್ಶಿಸಿ ರಾಜ್ಯದಲ್ಲಿ ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ಸಮ್ಮಿಶ್ರ ಸರ್ಕಾರದ ತೊಡಕುಗಳನ್ನು ಇನ್ನೂ ಬಗೆಹರಿಸಿಕೊಂಡಂತೆ ಕಂಡು ಬರುತ್ತಿಲ್ಲ. ಆಡಳಿತದ ಆರಂಭದ ತೊಡಕುಗಳು ಇನ್ನೂ ಎದ್ದು ಕಾಣಿಸುತ್ತಿವೆ. ಇದು, ರಾಜ್ಯದ ಹಿತದ ದೃಷ್ಟಿಯಿಂದ ಸರ್ವಥಾ ಸಲ್ಲ. ಚುನಾವಣೆ ಫಲಿತಾಂಶ ಬಂದ ಕೆಲವು ದಿನ ರೆಸಾರ್ಟ್ ರಾಜಕೀಯ ನಡೆಯಿತು. ಹೊಸ ಸರ್ಕಾರ ಬಂತು. ಇನ್ನೇನು ಎಲ್ಲಾ ಸುಗಮವಾಗಿ ನಡೆಯಬಹುದು ಎನ್ನುವಾಗ ಹೊಸದಾಗಿ ಬಜೆಟ್ ಮಂಡಿಸಬೇಕೋ ಬೇಡವೋ ಎಂಬ ಬಗ್ಗೆ ವಿವಾದ ಆರಂಭವಾಗಿದೆ. ಹೊಸ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಯಾರಿ ನಡೆಸುತ್ತಿದ್ದರೆ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ‘ಹೊಸ ಬಜೆಟ್ ಅಗತ್ಯವಿಲ್ಲ. ಪೂರಕ ಬಜೆಟ್ ಸಾಕು’ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವರು ಮುಖ್ಯಮಂತ್ರಿಯನ್ನು ಬೆಂಬಲಿಸಿದರೆ, ಇನ್ನು ಕೆಲವರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಈ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಭವಿಷ್ಯದ ಬಗ್ಗೆಯೇ ಅನುಮಾನ ಹುಟ್ಟಿಸುತ್ತಿವೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹೊಸದಾಗಿ ಬಜೆಟ್ ಮಂಡಿಸುವುದು ವಾಡಿಕೆ. ಅದು ತಪ್ಪಲ್ಲ. ಆದರೆ ರಾಜ್ಯದಲ್ಲಿ ಈಗ ಇರುವುದು ಸಮ್ಮಿಶ್ರ ಸರ್ಕಾರ. ಹಾಗಾಗಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ನಿಗದಿಯಾಗದೆ ಬಜೆಟ್ ಮಂಡಿಸುವುದು ಬೇಡ ಎನ್ನುವ ವಾದದಲ್ಲಿಯೂ ಹುರುಳಿದೆ. ಆದರೆ ತಿಕ್ಕಾಟ ಹೀಗೇ ಮುಂದುವರಿದರೆ ಅದು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ. ಜನ ಸೇವೆ ಗೌಣವಾಗುತ್ತದೆ. ಇದನ್ನು ತಕ್ಷಣ ಬಗೆಹರಿಸಿಕೊಳ್ಳಬೇಕು. ಆಡಳಿತ ಸುಗಮವಾಗಿ ನಡೆಯಲು ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಚುನಾವಣೆಗೆ ಮೊದಲು ಒಂದು ತಿಂಗಳಿನಿಂದಲೂ ರಾಜ್ಯದಲ್ಲಿ ಆಡಳಿತ ಸುರಳೀತ ಇಲ್ಲ. ಹೊಸ ಸರ್ಕಾರ ಬಂದ ನಂತರದ ಇಡೀ ಒಂದು ತಿಂಗಳು ಆಡಳಿತ ಸ್ಥಗಿತವಾಗುವುದು ಯಾವುದೇ ರಾಜ್ಯಕ್ಕೂ ಒಳ್ಳೆಯದಲ್ಲ. ಸರ್ಕಾರ ನಡೆಸುತ್ತಿರುವವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು. ಜೆಡಿಎಸ್ ಪಕ್ಷಕ್ಕಿಂತ ಕಾಂಗ್ರೆಸ್ ಪಕ್ಷದಲ್ಲಿಯೇ ಹೆಚ್ಚಿನ ತೊಳಲಾಟ ಇರುವ ಹಾಗೆ ಕಾಣುತ್ತಿದೆ. ಒಂದಿಷ್ಟು ಶಾಸಕರು ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಮುನಿಸಿಕೊಂಡಿದ್ದಾರೆ. ಸಚಿವ ಸ್ಥಾನ ಪಡೆಯುವುದಕ್ಕಾಗಿಯೇ ಕಸರತ್ತು ನಡೆಸಿದ್ದಾರೆ. ಇನ್ನೊಂದೆಡೆ ಸಮ್ಮಿಶ್ರ ಸರ್ಕಾರದ ಮೇಲೆ ಹಿಡಿತ ಸಾಧಿಸಲು ಕೆಲವು ಮುಖಂಡರು ಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಸ್ಥಾನ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರೂ ಶಕ್ತಿ ಕೇಂದ್ರ ತಾವೇ ಆಗಬೇಕು ಎಂಬ ಹಂಬಲ ಹಲವರಲ್ಲಿದೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೂ ಇದಕ್ಕೆ ಹೊರತಾಗಿಲ್ಲ. ಉಜಿರೆ ಸಮೀಪದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದರೂ ತಮ್ಮ ಬೆಂಬಲಿಗರನ್ನು ಅಲ್ಲಿಗೇ ಕರೆಸಿಕೊಂಡು ರಾಜಕೀಯ ಚರ್ಚೆಯನ್ನೂ ನಡೆಸಿದ್ದಾರೆ. ಇವೆಲ್ಲವೂ ಸಮ್ಮಿಶ್ರ ಸರ್ಕಾರದ ಮೇಲೆ ಭಾರಿ ಪರಿಣಾಮವನ್ನು ಬೀರಿವೆ. ಈ ಎಲ್ಲ ಮೇಲಾಟಗಳನ್ನು ಬಿಟ್ಟು, ಪಕ್ಷದೊಳಗೆ ಇರುವ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೆ ಒತ್ತಿ ರಾಜ್ಯದ ಜನರ ಕಲ್ಯಾಣದತ್ತ ಎಲ್ಲರೂ ಗಮನ ಹರಿಸಬೇಕು. ಸಮನ್ವಯ ಸಮಿತಿ ಸಭೆ ಜುಲೈ 1ಕ್ಕೆ ನಿಗದಿಯಾಗಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಪಟ್ಟಿಯನ್ನು ತ್ವರಿತವಾಗಿ ರೂಪಿಸುವ ಕಡೆ ಎರಡೂ ಪಕ್ಷಗಳ ನಾಯಕರು ನಿಗಾ ವಹಿಸಬೇಕು. ಭಿನ್ನಾಭಿಪ್ರಾಯಗಳಿದ್ದರೆ ಬಗೆಹರಿಸಿಕೊಳ್ಳಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಆಧಾರದಲ್ಲಿ ಉತ್ತಮ ಆಡಳಿತ ನಡೆಸುವುದಕ್ಕೆ ಮುಂದಾಗಬೇಕು. ಇಲ್ಲವಾದರೆ ಜನನಾಯಕರು ಎಂದೆನಿಸಿಕೊಂಡವರು ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುವುದಿಲ್ಲ. ಇದು ಸಾಧ್ಯವಾಗದಿದ್ದರೆ ಜನರು ಕ್ಷಮಿಸುವುದೂ ಇಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.