ದೂರುಗಳೇ ಹೆಚ್ಚಿರುವ ಬಿಬಿಎಂಪಿಯಲ್ಲಿ ಆಡಳಿತ ಸುಧಾರಣೆಗೆ ಸಕಾಲ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಆಡಳಿತ ಪುನರ್‌ ರಚನಾ ಅಧ್ಯಯನ ಸಮಿತಿ ಇದೀಗ ತನ್ನ ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ರಾಜಧಾನಿಯಲ್ಲಿ ಮೂರು ಹಂತಗಳ ಆಡಳಿತ ವ್ಯವಸ್ಥೆ ಜಾರಿಗೊಳಿಸುವಂತೆ ಶಿಫಾರಸು ಮಾಡಿದೆ. ನಗರದ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಮೇಲಿನ ಸ್ತರದಲ್ಲಿ ‘ಗ್ರೇಟರ್‌ ಬೆಂಗಳೂರು ಮುನಿಸಿಪಲ್‌ ಅಥಾರಿಟಿ’, ಆಡಳಿತ ವಿಕೇಂದ್ರೀಕರಣಕ್ಕಾಗಿ ಮಧ್ಯದ ಸ್ತರದಲ್ಲಿ ಐದು ಮಹಾನಗರ ಪಾಲಿಕೆಗಳು ಹಾಗೂ ಬಡಾವಣೆ ಮಟ್ಟದ ‘ಬೇಕು–ಬೇಡ’ಗಳನ್ನು ನಿರ್ಧರಿಸಲು ಕೆಳಸ್ತರದಲ್ಲಿ ವಾರ್ಡ್‌ ಸಮಿತಿಗಳು– ಇವೇ ಆ ಮೂರು ಹಂತಗಳು. ಮೇಯರ್‌ ಹುದ್ದೆಗೆ ಜನರಿಂದ ನೇರ ಆಯ್ಕೆ ನಡೆಯಬೇಕು ಮತ್ತು ಅವರ ಅಧಿಕಾರದ ಅವಧಿ ಐದು ವರ್ಷವಾಗಿರಬೇಕು ಎನ್ನುವುದು ಮತ್ತೊಂದು ಪ್ರಮುಖ ಶಿಫಾರಸು. 800 ಚದರ ಕಿ.ಮೀ.ಗಳಷ್ಟು ವಿಶಾಲವಾದ ವ್ಯಾಪ್ತಿಯನ್ನು ಹೊಂದಿರುವ ಬಿಬಿಎಂಪಿ, ಆರ್ಥಿಕ ಅಶಿಸ್ತಿಗೆ ಕುಖ್ಯಾತಿ ಗಳಿಸಿದೆ. ತ್ಯಾಜ್ಯ ವಿಲೇವಾರಿಯಲ್ಲಿ ವೈಫಲ್ಯ, ಫುಟ್‌ಪಾತ್‌–ಉದ್ಯಾನಗಳ ಅಸಮರ್ಪಕ ನಿರ್ವಹಣೆ, ಒಂದೇ ಕಾಮಗಾರಿಗೆ ಎರಡು ಬಿಲ್‌, ಬೋಗಸ್‌ ವೆಚ್ಚ, ವಿಶ್ವಾಸಾರ್ಹತೆ ಕೊರತೆ, ಕಳಪೆ ಸಾಧನೆ... ಹೀಗೆ ಆಡಳಿತ ವ್ಯವಸ್ಥೆ ಬಗ್ಗೆ ನಾಗರಿಕರು ಹೊಂದಿರುವ ದೂರುಗಳು ಹಲವು. ಪಾಲಿಕೆಯಿಂದ ನಗರದಲ್ಲಿ ಹಣದ ಬಳಕೆ ದೊಡ್ಡ ಪ್ರಮಾಣದಲ್ಲೇ ಆಗಿದ್ದರೂ ಅದಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳು ಗೋಚರಿಸುತ್ತಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸಂಪನ್ಮೂಲಗಳ ಲಭ್ಯತೆಯಿಂದ ಸೇವೆಯಲ್ಲಿ ಕ್ಷಮತೆ ತರಬಹುದು ಎನ್ನುವ ಆಶಯದಿಂದ 2007ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಹೊಸದಾಗಿ 98 ವಾರ್ಡ್‌ಗಳನ್ನು ಸೇರ್ಪಡೆ ಮಾಡಿ, ನಗರದ ಭೌತಿಕ ಗಡಿಯನ್ನು ವಿಸ್ತರಿಸಲಾಗಿದೆ. ಹೊಸ ವ್ಯವಸ್ಥೆ ಬಂದು ದಶಕದ ತರುವಾಯ ಹಿಂದಿರುಗಿ ನೋಡಿದಾಗ ನಿರೀಕ್ಷೆ ಹಾಗೂ ವಾಸ್ತವದ ನಡುವೆ ಅಂತರವಿರುವುದು ಸ್ಪಷ್ಟ. ಪಾಲಿಕೆಗೆ ಸೇರಿದ ಹೊಸ ಪ್ರದೇಶಗಳು, ಅದರಲ್ಲೂ ವಿಶೇಷವಾಗಿ ಗ್ರಾಮಗಳು, ಇಂದಿಗೂ ಮೂಲಸೌಕರ್ಯಗಳಿಗಾಗಿ ಹಂಬಲಿಸುತ್ತಿವೆ. ವಾರ್ಡ್‌ಗಳ ಜನಸಂಖ್ಯೆ ಪ್ರಮಾಣ ಕನಿಷ್ಠ 21 ಸಾವಿರದಿಂದ, ಗರಿಷ್ಠ ಲಕ್ಷದವರೆಗೆ ಇದ್ದರೆ, ಅವುಗಳ ವಿಸ್ತೀರ್ಣ ಕನಿಷ್ಠ 0.31 ಚದರ ಕಿ.ಮೀ.ದಿಂದ ಗರಿಷ್ಠ 28.4 ಚದರ ಕಿ.ಮೀ.ವರೆಗೆ ವ್ಯಾಪಿಸಿದೆ. ಈ ಅಂತರದ ಕಾರಣದಿಂದ ಸೇವೆ ಹಾಗೂ ಸೌಲಭ್ಯಗಳು ಸಮಾನವಾಗಿ ಹಂಚಿಕೆ ಆಗುತ್ತಿಲ್ಲ ಎನ್ನುವುದು ತಜ್ಞರ ನಿಲುವಾಗಿದೆ. ಆಡಳಿತ ಪುನರ್‌ ರಚನೆಗೆ ತಜ್ಞರ ಅಧ್ಯಯನ ಸಮಿತಿಯನ್ನು ರಚಿಸಿದ್ದು ಹಿಂದಿನ ಕಾಂಗ್ರೆಸ್‌ ಸರ್ಕಾರ. ಸಮಿತಿಯು ಅಧ್ಯಯನ ನಡೆಸಿ ಅಂತಿಮ ವರದಿಯನ್ನು ಕೊಡುವ ಮುನ್ನವೇ ಬಿಬಿಎಂಪಿ ಅಸ್ತಿತ್ವವನ್ನು ರದ್ದುಗೊಳಿಸಿ, ಆ ಸ್ಥಾನದಲ್ಲಿ ಎರಡು ಇಲ್ಲವೇ ಮೂರು ಪಾಲಿಕೆ ರಚಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ಮಸೂದೆ’ಗೆ 2015ರ ಏಪ್ರಿಲ್‌ 20ರಂದು ವಿಶೇಷ ಅಧಿವೇಶನ ಕರೆದು ಒಪ್ಪಿಗೆ ಪಡೆಯಲಾಗಿತ್ತು. ಮಸೂದೆಗೆ ಅಂಕಿತ ಹಾಕದ ರಾಜ್ಯಪಾಲರು, ಅದನ್ನು ರಾಷ್ಟ್ರಪತಿಯವರ ಅವಗಾಹನೆಗಾಗಿ ಕಳುಹಿಸಿದ್ದರು. ಪರಿಶೀಲನೆಯ ನೆಪದಲ್ಲಿ ಮೂರು ವರ್ಷಗಳಿಂದ ಕೇಂದ್ರ ನಗರಾಭಿವೃದ್ಧಿ ಇಲಾಖೆಯಲ್ಲಿ ಅದು ಕೊಳೆಯುತ್ತಾ ಬಿದ್ದಿದೆ. ಈ ನಡುವೆ ಅಧ್ಯಯನ ಸಮಿತಿಯ ಅಂತಿಮ ವರದಿ ಬಂದಿದೆ. ಹಾಗೆ ನೋಡಿದರೆ ರಾಜಧಾನಿಯ ಅಭಿವೃದ್ಧಿ ಕುರಿತಂತೆ ಅಧ್ಯಯನ ನಡೆಸಲು ಹಲವು ಸಮಿತಿ–ತಂಡಗಳು ರಚನೆಯಾಗಿವೆ. ಬೆಂಗಳೂರು ಅಜೆಂಡಾ ಕಾರ್ಯಪಡೆ (ಬಿಎಟಿಎಫ್‌), ಕಸ್ತೂರಿರಂಗನ್‌ ಸಮಿತಿ, ಅಬೈಡ್‌, ವಿಷನ್‌ ಗ್ರೂಪ್‌, ಮಹಾನಗರ ಯೋಜನಾ ಸಮಿತಿ ಹಾಗೂ ನೀಲನಕ್ಷೆ ಕ್ರಿಯಾ ತಂಡ ಅವುಗಳಲ್ಲಿ ಪ್ರಮುಖವಾದುವು. ಉತ್ತಮ ಆಡಳಿತ ವ್ಯವಸ್ಥೆಗಾಗಿ ಅವೆಲ್ಲವುಗಳಿಂದ ಹಲವು ಸಲಹೆಗಳು ಬಂದಿವೆ. ರಸ್ತೆಗಳು ಬಳಕೆಯೋಗ್ಯ ಸ್ಥಿತಿಯಲ್ಲಿರಬೇಕು, ಕುಡಿಯಲು ಪರಿಶುದ್ಧ ನೀರು ಪೂರೈಕೆಯಾಗಬೇಕು, ಬೀದಿದೀಪಗಳ ನಿರ್ವಹಣೆ ಚೆನ್ನಾಗಿರಬೇಕು, ಅರ್ಜಿ ಸಲ್ಲಿಸಿದ ಕೂಡಲೇ ಮಧ್ಯವರ್ತಿಗಳ ಕಿರಿಕಿರಿ ಇಲ್ಲದೆ ಕೇಳಿದ ದಾಖಲೆಗಳು ಸಿಗಬೇಕು, ಕೊಟ್ಟ ತೆರಿಗೆಯ ಪ್ರತಿಪೈಸೆಯೂ ಸದುದ್ದೇಶಕ್ಕೆ ಬಳಕೆ ಆಗಬೇಕು, ಆ ಮೂಲಕ ಒಟ್ಟಾರೆ ಜೀವನಮಟ್ಟ ಸುಧಾರಿಸಬೇಕು ಎನ್ನುವುದು ಜನಸಾಮಾನ್ಯರ ಆಕಾಂಕ್ಷೆ. ಸರ್ಕಾರ ವೃಥಾ ಕಾಲಹರಣ ಮಾಡದೆ ಅವರ ಅಭಿಲಾಷೆ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಂಡು, ಸಕಾರಾತ್ಮಕ ಹೆಜ್ಜೆಯನ್ನು ಇಡಬೇಕು. ಸ್ಥಳೀಯ ಆಡಳಿತಕ್ಕೆ ಹೊಸ ಸ್ಪರ್ಶ ನೀಡಿ, ‘ಬ್ರ್ಯಾಂಡ್‌ ಬೆಂಗಳೂರು’ ಜಾಗತಿಕ ಮಟ್ಟದಲ್ಲಿ ಹೊಳೆಯುವಂತೆ ಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.