ಸಂಪಾದಕೀಯ: ಸಿಬಿಐ ಮೇಲೆ ರಾಜ್ಯಗಳ ನಿರ್ಬಂಧ ದುರ್ಬಳಕೆ ತಡೆಯಲು ಸಕಾರಣದ ನಡೆ ಕೆಲವು ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಮುಕ್ತ ಅನುಮತಿಯನ್ನು ಹಿಂದಕ್ಕೆ ಪಡೆದಿವೆ. ರಾಜ್ಯ ಸರ್ಕಾರಗಳ ಈ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಪ್ರಶ್ನಿಸಿದೆ. ಈ ವಿದ್ಯಮಾನವು ಸಿಬಿಐ ವಿಚಾರವಾಗಿ ರಾಜ್ಯಗಳು ಹೊಂದಿರುವ ಅಧಿಕಾರದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಗಡಿಯೊಳಗೆ ತನಿಖೆ ನಡೆಸಲು ಹಾಗೂ ಕ್ರಮ ಜರುಗಿಸಲು ನೀಡಿದ್ದ ಮುಕ್ತ ಅನುಮತಿಯನ್ನು ಹಿಂದಕ್ಕೆ ಪಡೆದಿರುವುದರಿಂದ ತನ್ನ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ಕೋರ್ಟ್‌ಗೆ ಸಿಬಿಐ ವಿವರಿಸಿದೆ. ಕೇಂದ್ರ ಸರ್ಕಾರವು ಸಿಬಿಐ ವಾದಕ್ಕೆ ಬೆಂಬಲವಾಗಿ ನಿಂತಿದೆ. ಸಿಬಿಐಗೆ ತನಿಖೆ ನಡೆಸಲು ಇರುವ ಅನುಮತಿಯನ್ನು ಹಿಂದಕ್ಕೆ ಪಡೆದುಕೊಳ್ಳುವ ಪ್ರಶ್ನಾತೀತ ಅಧಿಕಾರವು ರಾಜ್ಯ ಸರ್ಕಾರಗಳಿಗೆ ಇಲ್ಲ ಎಂದು ಕೇಂದ್ರವು ಕೋರ್ಟ್‌ಗೆ ಹೇಳಿದೆ. ಪಶ್ಚಿಮ ಬಂಗಾಳ ಸರ್ಕಾರವು ಸಿಬಿಐ ವಿರುದ್ಧ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯೊಂದರ ವಿಚಾರಣೆ ವೇಳೆ ಈ ವಿಷಯಗಳು ಪ್ರಸ್ತಾಪ ಆಗಿವೆ. ಸಿಬಿಐನ ಕಾರ್ಯಚಟುವಟಿಕೆಗಳು ದೆಹಲಿ ವಿಶೇಷ ಪೊಲೀಸ್ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಸೇರಿದಂತೆ ಕೆಲವು ರಾಜ್ಯಗಳು ಸಿಬಿಐಗೆ ನೀಡಿದ್ದ ಮುಕ್ತ ಅನುಮತಿಯನ್ನು ಹಿಂದಕ್ಕೆ ಪಡೆದಿವೆ. ಹೀಗೆ ಅನುಮತಿ ಹಿಂಪಡೆದ ನಂತರದಲ್ಲಿ ಸಿಬಿಐ, ಆ ರಾಜ್ಯ ಸರ್ಕಾರದ ಕಡೆಯಿಂದ ನಿರ್ದಿಷ್ಟ ಪ್ರಕರಣವೊಂದರ ತನಿಖೆಗೆ ಕೋರಿಕೆ ಬಂದರೆ ಅಥವಾ ನ್ಯಾಯಾಲಯದ ಆದೇಶ ಬಂದರೆ ಮಾತ್ರ ತನಿಖೆ ನಡೆಸಬಹುದು. ಕಾನೂನಿನ ಈ ಅಂಶವು ನಮ್ಮ ಒಕ್ಕೂಟವ್ಯವಸ್ಥೆಯಲ್ಲಿ ಪ್ರಮುಖವಾದುದು. ಇದು ರಾಜ್ಯಗಳ ಅಧಿಕಾರವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನು ಮನಸೋಇಚ್ಛೆ ಬಳಸಿ ಕೊಳ್ಳುವುದನ್ನು ತಡೆಯುತ್ತದೆ. ಪೊಲೀಸ್ ವ್ಯವಸ್ಥೆಯನ್ನು ನಿರ್ವಹಿಸುವುದು ಹಾಗೂ ಆ ವ್ಯವಸ್ಥೆಯ ಮೂಲಕ ಆಗಬೇಕಿರುವ ಕೆಲಸಗಳನ್ನು ನಿಯಂತ್ರಿ ಸುವುದು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿದೆ. ಹೀಗಾಗಿ, ರಾಜ್ಯಗಳ ವ್ಯಾಪ್ತಿಯಲ್ಲಿ ಸಿಬಿಐ ಕಾರ್ಯಾಚರಣೆಗಳ ಮೇಲೆ ನಿಯಂತ್ರಣ ಹೇರಿರುವುದು ತರ್ಕ ಬದ್ಧವಾಗಿಯೇ ಇದೆ. ಅಲ್ಲದೆ, ಒಕ್ಕೂಟ ವ್ಯವಸ್ಥೆಯ ನಿಯಮಗಳಿಗೆ ಅನುಗುಣವಾಗಿಯೇ ಇದೆ. ಸುಪ್ರೀಂ ಕೋರ್ಟ್‌ ಈ ಹಿಂದೆ ಹೇಳಿದಂತೆ ಸಿಬಿಐ ‘ಪಂಜರದ ಗಿಣಿ’ ಯಂತೆ ಇದೆ. ಅದು ಕೇಂದ್ರ ಸರ್ಕಾರ ಹೇಳಿದಂತೆ ಕೇಳುತ್ತಿದೆ. ಈ ತನಿಖಾ ದಳವನ್ನು ಕೇಂದ್ರ ಸರ್ಕಾರವು ದುರ್ಬಳಕೆ ಮಾಡಿಕೊಂಡಿರುವ ಹತ್ತು ಹಲವು ನಿದರ್ಶನಗಳು ಇವೆ. ವಿರೋಧ ಪಕ್ಷಗಳಿಗೆ ಸೇರಿದ ನಾಯಕರನ್ನು ಬೆದರಿಸಲು ಇದನ್ನು ಬಳಸಿಕೊಳ್ಳಲಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರಗಳಿಗೆ ತೊಂದರೆ ಕೊಡಲು ಈ ತನಿಖಾ ದಳವನ್ನು ಬಳಸಿಕೊಂಡಿರುವುದೂ ಇದೆ. ಕೇಂದ್ರದ ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರ ಬಂಧನ, ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಿದ್ದು, ತೃಣಮೂಲ ಕಾಂಗ್ರೆಸ್ಸಿನ ಕೆಲವು ನಾಯಕರ ವಿರುದ್ಧದ ಪ್ರಕರಣಗಳು, ಮಹಾರಾಷ್ಟ್ರದಲ್ಲಿ ಎನ್‌ಸಿ‍ಪಿಯ ಕೆಲವು ನಾಯಕರ ವಿರುದ್ಧದ ಪ್ರಕರಣಗಳು, ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ಅವರ ಮೇಲಿನ ಪ್ರಕರಣ ಕೂಡ ಕೆಲವು ಉದಾಹರಣೆಗಳು. ಸಿಬಿಐಗೆ ನೀಡಿದ್ದ ಮುಕ್ತ ಅನುಮತಿಯನ್ನು ಹಿಂದಕ್ಕೆ ಪಡೆದಿರುವ ರಾಜ್ಯಗಳಲ್ಲಿ ಹೆಚ್ಚಿನ ಕಡೆ ಬಿಜೆಪಿಯೇತರ ಪಕ್ಷಗಳು ಸರ್ಕಾರದ ಚುಕ್ಕಾಣಿ ಹಿಡಿದಿವೆ. ಕೇಂದ್ರ ಸರ್ಕಾರವು ಈ ತನಿಖಾ ದಳವನ್ನು ತಮ್ಮ ವಿರುದ್ಧ ದುರ್ಬಳಕೆ ಮಾಡಿಕೊಳ್ಳದಿರಲಿ ಎಂಬ ಉದ್ದೇಶದಿಂದಲೇ ಈ ರಾಜ್ಯ ಸರ್ಕಾರಗಳು ಈ ರೀತಿ ಮಾಡಿವೆ ಎಂಬುದು ಸ್ಪಷ್ಟ. ಈ ರೀತಿಯ ಕ್ರಮಕ್ಕೆ ಮುಂದಾಗುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಕಾನೂನು ನೀಡಿದೆ. ಕೇಂದ್ರವು ಸಿಬಿಐ ಅನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳು ತ್ತಿರುವುದು ಇಂಥದ್ದೊಂದು ಕಾನೂನಿನ ಅಗತ್ಯವನ್ನು ಇನ್ನಷ್ಟು ಒತ್ತಿ ಹೇಳುತ್ತಿದೆ. ಇದು ಒಕ್ಕೂಟವ್ಯವಸ್ಥೆಯಲ್ಲಿ ಅಂತರ್ಗತವಾಗಿ ಇರುವ, ಅಧಿಕಾರದ ಸಮತೋಲನದ ಒಂದು ಭಾಗ. ಕೆಲವು ರಾಜ್ಯ ಸರ್ಕಾರಗಳು ಸಿಬಿಐ ಮೇಲೆ ಅಥವಾ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ತೋರಿಸಿಲ್ಲ ಎಂದಾದರೆ, ಅದಕ್ಕೆ ದೂಷಣೆಯನ್ನು ಬೇರೆಯವರ ಮೇಲೆ ಹೊರಿಸಲು ಆಗದು. ತಾವು ಹೊಂದಿರುವ ಶಾಸನಾತ್ಮಕ ಅಧಿಕಾರವೊಂದನ್ನು ರಾಜ್ಯ ಸರ್ಕಾರಗಳು ಬಿಟ್ಟುಕೊಡಬೇಕು ಎಂದು ನಿರೀಕ್ಷಿಸಲಾಗದು. ತಮ್ಮ ಅಧಿಕಾರವನ್ನು ಬಳಸಿಕೊಂಡಿರುವುದಕ್ಕೆ ಅವುಗಳನ್ನು ದೂಷಿಸಲು ಕೂಡ ಸಾಧ್ಯವಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.