ಸಂಪಾದಕೀಯ: ಸಂಕ್ರಮಣದ ಘಟ್ಟದಲ್ಲಿ ವಿಐಎಲ್‌; ಕಾಯಬೇಕು ದೂರಸಂಪರ್ಕ ವಲಯದ ಹಿತ ದೂರಸಂಪರ್ಕ ಸೇವಾ ಕ್ಷೇತ್ರದ ಮಹತ್ವದ ಕಂಪನಿಗಳಲ್ಲಿ ಒಂದಾಗಿರುವ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ಸಂಕ್ರಮಣದ ಕಾಲಘಟ್ಟವೊಂದರಲ್ಲಿ ಇರುವಂತೆ ಕಾಣಿಸುತ್ತಿದೆ. ಕಂಪನಿಯು ಅಂದಾಜು ₹ 1.95 ಲಕ್ಷ ಕೋಟಿ ಸಾಲವನ್ನು ಹೊತ್ತುಕೊಂಡಿದೆ. ಇದು ಕೇಂದ್ರ ಸರ್ಕಾರಕ್ಕೆ ಬೇರೆ ಬೇರೆ ಬಾಕಿ ಮೊತ್ತಗಳನ್ನು ಕೊಡಬೇಕಿದೆ. ಈಗ ₹ 16 ಸಾವಿರ ಕೋಟಿ ಮೊತ್ತವನ್ನು ಕೊಡುವ ಬದಲು, ಕಂಪನಿಯ ಷೇರುಗಳನ್ನು ಕೇಂದ್ರ ಸರ್ಕಾರಕ್ಕೆ ಕೊಡಲು ತೀರ್ಮಾನಿಸಲಾಗಿದೆ. ಈ ತೀರ್ಮಾನವು ಕಾರ್ಯರೂಪಕ್ಕೆ ಬಂದ ನಂತರ ಕಂಪನಿಯಲ್ಲಿ ಕೇಂದ್ರ ಸರ್ಕಾರದ ಷೇರುಪಾಲು ಶೇಕಡ 35.8ರಷ್ಟು ಆಗಲಿದೆ. ಕಂಪನಿಯ ಪ್ರವರ್ತಕರ ಸ್ಥಾನದಲ್ಲಿ ಇರುವ ವೊಡಾಫೋನ್ ಸಮೂಹ ಮತ್ತು ಆದಿತ್ಯ ಬಿರ್ಲಾ ಸಮೂಹದ ಷೇರು‍ಪಾಲು ಗಣನೀಯವಾಗಿ ಇಳಿಕೆ ಆಗಲಿದ್ದು, ವೊಡಾಫೋನ್ ಮತ್ತು ಆದಿತ್ಯ ಬಿರ್ಲಾ ಸಮೂಹವು ಕ್ರಮವಾಗಿ ಶೇ 28.5 ಹಾಗೂ ಶೇ 17.8ರಷ್ಟು ಷೇರುಗಳನ್ನು ಹೊಂದಲಿವೆ. ಅಂದರೆ, ಪ್ರವರ್ತಕರ ತಲಾವಾರು ಷೇರು‍ಪಾಲು ಕಡಿಮೆ ಆಗಲಿದ್ದು ಕೇಂದ್ರ ಸರ್ಕಾರವೇ ಅತಿದೊಡ್ಡ ಷೇರುದಾರ ಆಗಲಿದೆ. ಕೇಂದ್ರ ದೂರಸಂಪರ್ಕ ಇಲಾಖೆಯು ದೂರಸಂಪರ್ಕ ಸೇವಾ ಕಂಪನಿಗಳಿಗೆ ಪರಿಹಾರ ಪ್ಯಾಕೇಜ್‌ ಒಂದನ್ನು ಹಿಂದಿನ ವರ್ಷದಲ್ಲಿ ಪ್ರಕಟಿಸಿತ್ತು. ಅದರ ಅಡಿಯಲ್ಲಿ, ಕೇಂದ್ರಕ್ಕೆ ಪಾವತಿಸಬೇಕಿರುವ ಶಾಸನಬದ್ಧ ಬಾಕಿಗಳನ್ನು ಕೊಡಲು ವಿಐಎಲ್‌ ನಾಲ್ಕು ವರ್ಷಗಳ ಕಾಲಾವಕಾಶ ಪಡೆದುಕೊಂಡಿತ್ತು. ಹೀಗೆ ಕಾಲಾವಕಾಶ ಪಡೆದುಕೊಂಡಿದ್ದು ಕಂಪನಿಯ ಪಾಲಿಗೆ ದೊಡ್ಡ ನೆರವಿನ ರೂಪದಲ್ಲಿ ಬಂದಿತ್ತು. ಬಾಕಿ ಮೊತ್ತಗಳಿಗೆ ಕಂಪನಿಗಳು ಬಡ್ಡಿಯನ್ನು ಕೂಡ ಪಾವತಿಸಬೇಕು. ಬಡ್ಡಿಯ ಬದಲು ಷೇರುಗಳನ್ನು ಕೇಂದ್ರ ಸರ್ಕಾರಕ್ಕೆ ನೀಡುವ ಆಯ್ಕೆಯನ್ನು ದೂರಸಂಪರ್ಕ ಇಲಾಖೆಯು ಕಂಪನಿಗಳಿಗೆ ನೀಡಿತ್ತು. ವಿಐಎಲ್‌ ಈ ಆಯ್ಕೆಯನ್ನು ಬಳಸಿಕೊಂಡಿದೆ. ವಾಣಿಜ್ಯ ವಹಿವಾಟು ನಡೆಸುವುದು ಸರ್ಕಾರದ ಕೆಲಸ ಅಲ್ಲ; ಖಾಸಗಿಯವರು ಮುಕ್ತವಾಗಿ ವಾಣಿಜ್ಯ ವಹಿವಾಟು ನಡೆಸಲು ಅಗತ್ಯವಿರುವ ವ್ಯವಸ್ಥೆಯನ್ನು ರೂಪಿಸಿಕೊಡುವುದು ಸರ್ಕಾರದ ಕೆಲಸ ಎಂದು ಈಗ ಕೇಂದ್ರದಲ್ಲಿ ಸರ್ಕಾರದ ಚುಕ್ಕಾಣಿ ಹಿಡಿದವರು ತಾಳಿರುವ ತಾತ್ವಿಕ ನಿಲುವು. ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಇದು ಸ್ವಾಗತಾರ್ಹ ನಿಲುವು ಕೂಡ ಹೌದು. ಈ ತಾತ್ವಿಕ ನಿಲುವಿನ ಭಾಗವಾಗಿಯೇ ಕೇಂದ್ರವು, ನಷ್ಟದಲ್ಲಿ ಇರುವ ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹಕ್ಕೆ ಮಾರಾಟ ಮಾಡಿದೆ. ‘ಪ್ರಮುಖವಲ್ಲದ’ ಕೆಲವು ಉದ್ಯಮ ವಲಯಗಳಲ್ಲಿನ ತನ್ನ ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡುವ ತೀರ್ಮಾನವನ್ನು ಕೈಗೊಂಡಿದೆ. ‘ಪ್ರಮುಖವಾಗಿರುವ’ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಸರ್ಕಾರಿ ಉದ್ದಿಮೆಗಳು ಇದ್ದರೆ ಸಾಕು ಎಂಬ ನಿಲುವನ್ನೂ ಅದು ತಾಳಿದೆ. ಆದರೆ, ಈಗ ಕೇಂದ್ರ ಸರ್ಕಾರವು ದೂರಸಂಪರ್ಕ ಸೇವಾ ವಲಯದ ಪ್ರಮುಖ ಕಂಪನಿಯೊಂದರ ಅತಿದೊಡ್ಡ ಷೇರುದಾರ ಆಗುವ ಹಂತಕ್ಕೆ ಬಂದು ನಿಂತಿದೆ. ದೇಶದ ದೂರಸಂಪರ್ಕ ಸೇವಾ ವಲಯದಲ್ಲಿ ಹಿಂದೆ ಹಲವು ಕಂಪನಿಗಳು ಹೂಡಿಕೆ ಮಾಡಿದ್ದವು. ಬದಲಾದ ಕಾಲಘಟ್ಟದಲ್ಲಿ ಅವುಗಳಲ್ಲಿ ಕೆಲವು ಕಂಪನಿಗಳು ವಹಿವಾಟಿನಿಂದ ಹಿಂದೆ ಸರಿದವು. ಇನ್ನು ಕೆಲವು ಕಂಪನಿಗಳು ವಿಲೀನಗೊಂಡವು. ವಿಐಎಲ್‌ ಕಂಪನಿಯು ಸಾಲದ ಸುಳಿಯಲ್ಲಿ ಸಿಲುಕಿದೆ. ದೇಶದಲ್ಲಿ ಮೊಬೈಲ್ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತಿರುವ ಕಂಪನಿಗಳು ಈಗ ನಾಲ್ಕು ಮಾತ್ರ. ಆ ಪೈಕಿ ಒಂದು ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌). 2016ರ ನಂತರದಲ್ಲಿ ಈ ಕ್ಷೇತ್ರದಲ್ಲಿ ಶುರುವಾದ ಅತಿಯಾದ ದರ ಸಮರದ ಪರಿಣಾಮವಾಗಿ, ಕಂಪನಿಗಳಿಗೆ ಪ್ರತೀ ಗ್ರಾಹಕನಿಂದ ಬರುವ ಆದಾಯದ (ಎಆರ್‌ಪಿಯು) ಮಟ್ಟವು ಸುಸ್ಥಿರ ಬೆಳವಣಿಗೆಗೆ ಸಾಕಾಗುವಂತೆ ಇಲ್ಲ ಎಂಬ ಮಾತನ್ನು ಉದ್ಯಮದ ಪ್ರಮುಖರು ಹಲವು ಬಾರಿ ಹೇಳಿದ್ದಾರೆ. ಅದಾದ ನಂತರದಲ್ಲಿ ಸೇವಾ ಶುಲ್ಕಗಳಲ್ಲಿ ತುಸು ಹೆಚ್ಚಳ ಮಾಡಲಾಗಿದೆಯಾದರೂ, ಅದು ಕಂಪನಿಗಳ ಪಾಲಿಗೆ ಆರ್ಥಿಕ ಬಿಕ್ಕಟ್ಟಿನಿಂದ ಬೇಗ ಹೊರಬರಲು ಅಗತ್ಯವಿರುವಷ್ಟು ಆದಾಯವನ್ನು ತಂದುಕೊಡುತ್ತಿರುವಂತೆ ಕಾಣುತ್ತಿಲ್ಲ. ಬಡ್ಡಿ ಪಾವತಿಯ ಬದಲು ಷೇರುಗಳನ್ನೇ ನೀಡಲು ವಿಐಎಲ್ ತೀರ್ಮಾನಿಸಿರುವುದು ಈ ಮಾತಿಗೆ ಒಂದು ಆಧಾರ. ಖಾಸಗಿ ಸೇವಾ ವಲಯದಲ್ಲಿನ ಶುಲ್ಕ ಎಷ್ಟಿರಬೇಕು ಎಂಬುದನ್ನು ಸರ್ಕಾರ ತೀರ್ಮಾನಿಸಬೇಕಾಗಿಲ್ಲ ಎನ್ನುವುದು ನಿಜವಾದರೂ, ಶುಲ್ಕವು ಸುಸ್ಥಿರ ಬೆಳವಣಿಗೆಗೆ ನೆರವಾಗುವ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳುವ ಕೆಲಸವನ್ನು ಕಂಪನಿಗಳು ಪರಸ್ಪರ ಮಾತುಕತೆಯ ಮೂಲಕವಾದರೂ ಮಾಡಲೇಬೇಕು. ಉದ್ಯಮದ ಆರೋಗ್ಯದ ದೃಷ್ಟಿಯಿಂದ ಅದು ಬಹಳ ಅಗತ್ಯ. ವಿಐಎಲ್ ಷೇರುಗಳನ್ನು ಪಡೆದುಕೊಂಡ ನಂತರದಲ್ಲಿ, ಕಂಪನಿಯ ವಹಿವಾಟು ನೋಡಿಕೊಳ್ಳುವ ಕೆಲಸವನ್ನು ತಾನು ಮಾಡುವುದಿಲ್ಲ. ಆ ಕೆಲಸವನ್ನು ಪ್ರವರ್ತಕರೇ ಮುಂದುವರಿಸಬಹುದು ಎಂಬ ಭರವಸೆಯು ವಿಐಎಲ್‌ಗೆ ಸರ್ಕಾರದ ಕಡೆಯಿಂದ ದೊರೆತಿದೆ ಎಂದು ವರದಿಯಾಗಿದೆ. ಕೇಂದ್ರವು ಈ ನಿಲುವನ್ನು ತಾಳಿದ್ದರೆ ಅದು ಸ್ವಾಗತಾರ್ಹ. ಕೇಂದ್ರವು ಈಗಾಗಲೇ ಒಂದು ಕಂಪನಿಯನ್ನು (ಬಿಎಸ್‌ಎನ್‌ಎಲ್‌) ನಡೆಸುತ್ತಿರುವಾಗ, ಇನ್ನೊಂದು ಕಂಪನಿಯ ಆಡಳಿತವನ್ನೂ ಹೊತ್ತುಕೊಂಡರೆ ಹಿತಾಸಕ್ತಿಗಳ ಸಂಘರ್ಷ ಉಂಟಾಗಬಹುದು. ಅದು ಕಂಪನಿ ಪಾಲಿಗೆ ಅಷ್ಟೇನೂ ಒಳ್ಳೆಯದಲ್ಲ. ಅದರ ಬದಲಿಗೆ, ಕೇಂದ್ರವು ದೂರಸಂಪರ್ಕ ವಲಯಕ್ಕೆ ಹೆಚ್ಚಿನ ಹೂಡಿಕೆಗಳು ಬರುವಂತಹ ವಾತಾವರಣವನ್ನು ಸೃಷ್ಟಿಸುವ ಕಡೆ ಗಮನ ನೀಡಬೇಕು. ದೇಶಿ ಹಾಗೂ ವಿದೇಶಿ ಹೂಡಿಕೆಗಳು ಈ ವಲಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿದುಬಂದಾಗ, ಕಂಪನಿಗಳ ಆರ್ಥಿಕ ಸ್ಥಿತಿ ಒಂದಿಷ್ಟು ಸುಧಾರಣೆ ಕಾಣಬಹುದು. ಈ ಕ್ಷೇತ್ರದಲ್ಲಿನ ದರಸಮರ ತೀವ್ರಗೊಳ್ಳದಂತೆಯೂ ನೋಡಿಕೊಳ್ಳಬೇಕು. ದರ ಸಮರದ ಬಿಸಿ ತಾಳಲಾರದೆ ಯಾವುದೇ ಕಂಪನಿ ಕುಸಿದುಬಿದ್ದರೆ, ಅದರ ನೇರ ಪರಿಣಾಮವು ದೇಶದ ಬ್ಯಾಂಕಿಂಗ್ ವಲಯದ ಮೇಲೆಯೂ ಕಂಪನಿಯ ಸಹಸ್ರಾರು ಉದ್ಯೋಗಿಗಳ ಮೇಲೆಯೂ ಆಗುತ್ತದೆ ಎಂಬುದನ್ನು ಮರೆಯುವಂತಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.