ಸಂಪಾದಕೀಯ: ಬಿಬಿಎಂಪಿ- ಟೆಂಡರ್‌ ಪ್ರಕ್ರಿಯೆಯಿಂದ ನುಣುಚಿಕೊಳ್ಳುವ ಪರಿಪಾಟ ಸಲ್ಲದು‌ ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಕ್ರಿಯೆ ಪೈಪೋಟಿದಾಯಕವಾಗಿರಬೇಕು ಹಾಗೂ ಆಡಳಿತ ವ್ಯವಸ್ಥೆಯಲ್ಲಿಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬ ಉದ್ದೇಶದಿಂದ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ–1999’ (ಕೆಟಿಪಿಪಿ ಕಾಯ್ದೆ) ಅನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಈ ಕಾಯ್ದೆ ಜಾರಿಗೆ ಬಂದ ದಿನದಿಂದ ಟೆಂಡರ್‌ ಕರೆಯದೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ. ಆದರೆ, ತುರ್ತು ಹಾಗೂ ವಿಪತ್ತಿನ ಸಂದರ್ಭಕ್ಕೆ ಮಾತ್ರ ಅನ್ವಯವಾಗುವಂತೆ ಈ ಕಾಯ್ದೆಯ ಸೆಕ್ಷನ್‌ 4ರ ಅಡಿ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಥವಾ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಟೆಂಡರ್‌ ಕರೆಯದೇ ಕಾಮಗಾರಿ ನಡೆಸಲು ಈ ಕಾಯ್ದೆಯ ಸೆಕ್ಷನ್‌ 4 (ಎ) ಅವಕಾಶ ಕಲ್ಪಿಸುತ್ತದೆ. ಸರ್ಕಾರವು ಕಾಲಕಾಲಕ್ಕೆ ಪ್ರಕಟಿಸುವ ಅಧಿಸೂಚನೆಗೆ ಅನ್ವಯವಾಗಿ ನಿರ್ದಿಷ್ಟ ಕಾಮಗಾರಿಗೆ ಅಥವಾ ಖರೀದಿಗೆ ಟೆಂಡರ್‌ ಕರೆಯುವ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಲು ಈ ಕಾಯ್ದೆಯ ಸೆಕ್ಷನ್‌ 4 (ಜಿ) ಅಡಿ ಅವಕಾಶ ಕಲ್ಪಿಸಲಾಗಿದೆ. ಈ ವಿನಾಯಿತಿಗಳನ್ನೇ ದುರ್ಬಳಕೆ ಮಾಡಿಕೊಂಡು ಟೆಂಡರ್‌ ಕರೆಯದೇ ಕಾಮಗಾರಿ ನಡೆಸುವ ಪ್ರಯತ್ನಗಳು ಪದೇ ಪದೇ ನಡೆಯುತ್ತಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಒಟ್ಟು ₹ 1,171 ಕೋಟಿ ಮೊತ್ತದ ಕಾಮಗಾರಿಗಳ ಅನುಷ್ಠಾನಕ್ಕೆ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯುವ ಪ್ರಯತ್ನವು ಇದಕ್ಕೆ ಇತ್ತೀಚಿನ ಸೇರ್ಪಡೆ. ಬಿಬಿಎಂಪಿಯು ವಿಪತ್ತು ಪರಿಹಾರ ನಿಧಿ ಅಡಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳು ತುರ್ತಾಗಿ ಕೈಗೊಳ್ಳುವ ಕಾಮಗಾರಿಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬ ಕಾರಣಕ್ಕೆ ಹಣಕಾಸು ಇಲಾಖೆಯು ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲು ನಿರಾಕರಿಸಿರುವುದು ಸಮಂಜಸವಾಗಿಯೇ ಇದೆ. ಟೆಂಡರ್‌ ಕರೆಯದೇ ಕಾಮಗಾರಿ ನಡೆಸಲು ಬಿಬಿಎಂಪಿ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ನವ ನಗರೋತ್ಥಾನ ಯೋಜನೆಯ ಕಾಮಗಾರಿಗಳು, ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ಅಭಿವೃದ್ಧಿ ಕಾಮಗಾರಿಗಳು, ಕಸ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿಗಳು ಹಾಗೂ ಪಶ್ಚಿಮ ಕಾರ್ಡ್ ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಸಂಬಂಧಿಸಿದಂತೆಯೂ ಟೆಂಡರ್‌ ಪ್ರಕ್ರಿಯೆಯಿಂದ ನುಣುಚಿಕೊಳ್ಳಲು ಬಿಬಿಎಂಪಿ ಯತ್ನಿಸಿತ್ತು. ಈ ಎಲ್ಲ ಪ್ರಯತ್ನಗಳಿಗೂ ಹಣಕಾಸು ಇಲಾಖೆ ಸೊಪ್ಪು ಹಾಕಿಲ್ಲ ಎಂಬುದು ಸಮಾಧಾನದ ಸಂಗತಿ. ಟೆಂಡರ್‌ ಪ್ರಕ್ರಿಯೆಯಿಂದ ಪದೇ ಪದೇ ನುಣುಚಿಕೊಳ್ಳಲು ಪ್ರಯತ್ನಿಸುವ ಪರಿಪಾಟವನ್ನು ಬಿಬಿಎಂಪಿ ಇನ್ನಾದರೂ ಕೈಬಿಡಬೇಕು. ಈ ಹಿಂದೆ ಪೂರ್ಣಾವಧಿ ಟೆಂಡರ್‌ಗೆ ಅರ್ಜಿ ಸಲ್ಲಿಸುವುದಕ್ಕೆ ಕನಿಷ್ಠ 60 ದಿನಗಳ ಕಾಲಾವಕಾಶ ನೀಡಲಾಗುತ್ತಿತ್ತು. ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತಂದು ಅದನ್ನು 30 ದಿನಗಳಿಗೆ ಇಳಿಸಲಾಗಿದೆ. ಟೆಂಡರ್‌ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸಲೆಂದೇ ಪ್ರತ್ಯೇಕ ಪೋರ್ಟಲ್‌ ಅನ್ನು ಕೂಡ ಸರ್ಕಾರ ನಿರ್ವಹಿಸುತ್ತಿದೆ. ತುರ್ತು ಸಂದರ್ಭಗಳಲ್ಲಿ ಅನಿವಾರ್ಯ ಇದ್ದರೆ ಅಲ್ಪಾವಧಿ ಟೆಂಡರ್‌ ಕರೆಯುವುದಕ್ಕೂ ಕೆಟಿಪಿಪಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಪಾವಧಿ ಟೆಂಡರ್‌ನಲ್ಲಿ ಭಾಗವಹಿಸುವವರು ಅರ್ಜಿ ಸಲ್ಲಿಸಲು ಬರೀ ಏಳು ದಿನಗಳ ಕಾಲಾವಕಾಶ ನೀಡಿದರೂ ಸಾಕು. ಕೆಟಿಪಿಪಿ ಕಾಯ್ದೆಯ 4 ಜಿ ಸೆಕ್ಷನ್‌ ಅಡಿ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಬೇಕಾದರೆ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯಬೇಕು. ಈ ಪ್ರಕ್ರಿಯೆಗೆ ಏನಿಲ್ಲವೆಂದರೂ ನಾಲ್ಕು ವಾರಗಳು ಬೇಕಾಗುತ್ತವೆ. ಅಲ್ಪಾವಧಿ ಟೆಂಡರ್‌ ಕರೆದು ಕಾಮಗಾರಿ ನಿರ್ವಹಿಸಲು ಕಾಯ್ದೆಯಲ್ಲೇ ಅವಕಾಶ ಕಲ್ಪಿಸಿದ ಬಳಿಕವೂ ಕಾಮಗಾರಿಗಳ ನಿರ್ವಹಣೆಗೆ 4 ಜಿ ಸೆಕ್ಷನ್‌ ಅಡಿ ವಿನಾಯಿತಿ ಪಡೆಯವ ಪ್ರಯತ್ನ ಮತ್ತಷ್ಟು ಕಾಲಹರಣಕ್ಕೆ ದಾರಿಯಾಗುತ್ತದೆಯೇ ವಿನಾ ಅದರಿಂದ ಕಾಮಗಾರಿಯನ್ನು ತ್ವರಿತವಾಗಿ ನಿರ್ವಹಿಸುವ ಉದ್ದೇಶ ಈಡೇರದು. ಕೆಟಿಪಿಪಿ ಕಾಯ್ದೆಯ ಸೆಕ್ಷನ್‌ 4ಜಿ ಅಡಿ ಕಲ್ಪಿಸಲಾದ ಅವಕಾಶವು ಸದುದ್ದೇಶಕ್ಕೆ ಬಳಕೆ ಆಗುವ ಬದಲು, ದುರುದ್ದೇಶಕ್ಕೆ ಬಳಕೆಯಾಗುತ್ತಿರುವುದೇ ಜಾಸ್ತಿ. ಈ ಸೆಕ್ಷನ್‌ ಅಡಿ ಟೆಂಡರ್‌ ಪ್ರಕ್ರಿಯೆಯಿಂದ ವಿನಾಯಿತಿ ನೀಡುವುದಕ್ಕೆ ನಿರ್ದಿಷ್ಟ ಮಾನದಂಡಗಳನ್ನೂ ನಿಗದಿಪಡಿಸಿಲ್ಲ. ಸರ್ಕಾರದ ವಿವೇಚನೆಯಡಿ ಕೈಗೊಳ್ಳುವ ಇಂತಹ ತೀರ್ಮಾನ ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರುವುದೇ ಅಪರೂಪ. ಹೆಚ್ಚಿನ ಸಂದರ್ಭಗಳಲ್ಲಿ ರಾಜಕಾರಣಿಗಳು ಅಥವಾ ಅಧಿಕಾರಿಗಳು ಸರ್ಕಾರದ ಮೇಲೆ ಒತ್ತಡ ಹೇರಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿಯನ್ನು ವಹಿಸುವುದಕ್ಕೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಚುನಾವಣೆ ಸಮೀಪಿಸಿದಾಗ ರಾಜಕಾರಣಿಗಳು ತಮ್ಮ ಬೆಂಬಲಿಗರಿಗೆ ಅನುಕೂಲ ಮಾಡಿಕೊಡಲು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಪಾಟವೂ ಹೆಚ್ಚುತ್ತಿದೆ. ಈ ಕಾಯ್ದೆಯ ಮೂಲ ಆಶಯಗಳಿಗೆ ಸೆಕ್ಷನ್‌ 4ಜಿಯು ವಿರುದ್ಧವಾಗಿದೆ. ಟೆಂಡರ್‌ ಕರೆಯದೇ ಕಾಮಗಾರಿ ನಿರ್ವಹಿಸಲು ಅವಕಾಶ ಕಲ್ಪಿಸುವ ಈ ಸೆಕ್ಷನ್‌ ಇದ್ದಷ್ಟು ದಿನವೂ ಅದನ್ನು ದುರ್ಬಳಕೆ ಮಾಡುವ ಪ್ರಯತ್ನಗಳು ನಿಲ್ಲುವುದಿಲ್ಲ. ಟೆಂಡರ್‌ ಕರೆಯಬೇಕೇ ಬೇಡವೇ ಎನ್ನುವುದನ್ನು ಸರ್ಕಾರದ ವಿವೇಚನೆಗೆ ಬಿಡುವ 4 ಜಿ ಸೆಕ್ಷನ್‌ ಅನ್ನು ರದ್ದುಪಡಿಸುವುದೇ ಸೂಕ್ತ. ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡು ಪಾರದರ್ಶಕ ಆಡಳಿತದ ಆಶಯಗಳನ್ನು ಎತ್ತಿಹಿಡಿಯಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.