ಸಂಪಾದಕೀಯ: ಹೃದಯ ಕಲಕಿತು ವಿದ್ಯಾರ್ಥಿಯ ಸಾವು- ಸರ್ಕಾರದ ಯತ್ನ ತ್ವರಿತಗೊಳ್ಳಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಹಾವೇರಿ ಜಿಲ್ಲೆ ಚಳಗೇರಿಯ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಯುದ್ಧಪೀಡಿತ ಉಕ್ರೇನ್‌ನಲ್ಲಿ ರಷ್ಯನ್ನರ ಶೆಲ್‌ ದಾಳಿಯಿಂದ ಸಾವು ಕಾಣುವಂತಾಗಿದ್ದು ಅಂತಃಕರಣ ಕಲಕುವ ದುರಂತ. ವೈದ್ಯನಾಗುವ ಕನಸು ಕಾಣುತ್ತಿದ್ದ ಯುವಕನ ಬದುಕು ಈ ರೀತಿ ಕಮರಿಹೋದದ್ದು ಹೃದಯವನ್ನು ಹಿಂಡುವಂಥದ್ದು ಕೂಡ. ಉಕ್ರೇನ್‌ನ ಹಾರ್ಕಿವ್‌ನಲ್ಲಿ ಎಂಬಿಬಿಎಸ್‌ ಓದುತ್ತಿದ್ದ ನವೀನ್‌, ರಷ್ಯಾ–ಉಕ್ರೇನ್‌ ಸಂಘರ್ಷ ಶುರುವಾದೊಡನೆ ಇತರ ಸಾವಿರಾರು ವಿದ್ಯಾರ್ಥಿಗಳಂತೆ ಸ್ವದೇಶಕ್ಕೆ ಮರಳಲಾಗದೆ ಇದ್ದಲ್ಲಿಯೇ ಆಶ್ರಯವನ್ನು ಪಡೆಯಬೇಕಾಯಿತು. ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ ಆಹಾರದ ವ್ಯವಸ್ಥೆ ಮಾಡಿಕೊಳ್ಳಲು ಹೋಗಿದ್ದ ಸಂದರ್ಭದಲ್ಲೇ ಶೆಲ್‌ ದಾಳಿ ನಡೆದಿದ್ದರಿಂದ ಈ ದುರಂತ ಸಂಭವಿಸಿದೆ. ವೈದ್ಯನಾಗಿ ಮರಳಿ ಬಂದು, ಬಾಳಿ ಬದುಕಬೇಕಾಗಿದ್ದ ಮಗ ಹೀಗೆ ಕಣ್ಣೆದುರಿಗೆ ದುರಂತ ಅಂತ್ಯ ಕಾಣುವಂತಾದ ನೋವು–ಸಂಕಟವನ್ನು ಅವರ ತಂದೆ–ತಾಯಿ ಸಹಿಸಿಕೊಳ್ಳುವುದು ಬಲು ಕಷ್ಟ. ಯಾವುದೇ ತಂದೆ–ತಾಯಿಯ ಪಾಲಿಗೆ ಮಕ್ಕಳ ಈ ರೀತಿಯ ಅಗಲಿಕೆ ಹೃದಯವಿದ್ರಾವಕ ಕೂಡ. ಈ ಸಾವಿನ ಸುದ್ದಿಯ ಬೆನ್ನಿಗೇ ಉಕ್ರೇನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ತ್ವರಿತಗತಿಯ ಕಾರ್ಯಾಚರಣೆ ನಡೆಸುವಂತೆ ದೇಶದಾದ್ಯಂತ ಬಲವಾದ ಕೂಗು ಎದ್ದಿದೆ. ಸರ್ಕಾರವೇನೋ ಪ್ರಯತ್ನ ಮಾಡುತ್ತಿದೆ ನಿಜ. ಆದರೆ, ಆ ಪ್ರಯತ್ನದ ವೇಗ ಸಾಲದಾಗಿದೆ. ಏಕೆಂದರೆ ಉಕ್ರೇನ್‌ನಿಂದ ಹೊರಬರುವುದು ಎಷ್ಟೊಂದು ಪ್ರಯಾಸಕರ ಎನ್ನುವುದನ್ನು ಸ್ವದೇಶಕ್ಕೆ ಮರಳಿದ ವಿದ್ಯಾರ್ಥಿಗಳು ವಿವರಿಸಿದ್ದಾರೆ. ರೊಮೇನಿಯಾ ಗಡಿ ತಲುಪಿದರೂ ಗಡಿ ದಾಟಲು ಉಕ್ರೇನ್‌ನ ನಾಗರಿಕರಿಗೇ ಆದ್ಯತೆ ನೀಡುತ್ತಿರುವುದು, ಅತಿಯಾದ ಶೀತದ ವಾತಾವರಣದಲ್ಲಿ, ಅದೂ ಸುರಿಯುತ್ತಿರುವ ಹಿಮದ ನಡುವೆ ದಿನಗಟ್ಟಲೆ ಕಾಯಬೇಕಾದುದು ಮತ್ತು ಭಾರತೀಯ ವಿದ್ಯಾರ್ಥಿಗಳ ಮೇಲೆ ಕೆಲವೆಡೆ ಹಲ್ಲೆ ನಡೆದಿರುವುದು ಆತಂಕಕ್ಕೆ ಈಡುಮಾಡುವ ವಿದ್ಯಮಾನಗಳು. ಉಕ್ರೇನ್‌ನ ಯುದ್ಧಪೀಡಿತ ಪ್ರದೇಶ ಹೊರತುಪಡಿಸಿ ಇತರ ಪ್ರಾಂತಗಳಿಂದ ವಿದ್ಯಾರ್ಥಿಗಳ ಕೆಲವು ತಂಡಗಳನ್ನು ಸ್ವದೇಶಕ್ಕೆ ಕರೆತಂದಾಗ ಸ್ವತಃ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌, ಆ ತಂಡಗಳನ್ನು ಸ್ವಾಗತಿಸಿ, ಭಾಷಣ ಮಾಡಿದರು. ಅದಕ್ಕೆ ದೊಡ್ಡ ಪ್ರಚಾರ ಪಡೆಯುವ ಯತ್ನವನ್ನೂ ಮಾಡಿದರು. ಜಗತ್ತಿನಲ್ಲಿ ಎಲ್ಲಿಯೇ ಆಗಲಿ, ಇಂತಹ ದುರಂತಗಳು ಸಂಭವಿಸಿದಾಗ ಅಲ್ಲಿರುವ ತಮ್ಮ ಪ್ರಜೆಗಳ ರಕ್ಷಣೆಗೆ ಧಾವಿಸುವುದು ಸರ್ಕಾರದ ಹೊಣೆ. ಅದನ್ನೊಂದು ಸಾಧನೆ ಎಂಬಂತೆ ಬಿಂಬಿಸುವ ಅಗತ್ಯ ಇಲ್ಲ. ಅಂತೆಯೇ ಇಂತಹ ವಿಚಾರಗಳನ್ನು ಯಾವುದೇ ಪಕ್ಷ ಅಥವಾ ಮುಖಂಡ ರಾಜಕೀಯ ಪ್ರಯೋಜನಕ್ಕೆ ಬಳಸಿಕೊಳ್ಳಲೂಬಾರದು. ಇನ್ನು ಪರಿಸ್ಥಿತಿಯ ಗಾಂಭೀರ್ಯವನ್ನೇ ಅರಿಯದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ವಿದೇಶದಲ್ಲಿ ವೈದ್ಯ ಪದವಿ ಪಡೆದವರು ಇಲ್ಲಿ ಪಾಸಾಗುವುದಿಲ್ಲ’ ಎಂದು ಹೇಳುವ ಮೂಲಕ ತಾವು ಎಷ್ಟೊಂದು ಅಸೂಕ್ಷ್ಮ ಎಂಬುದನ್ನು ಎತ್ತಿ ತೋರಿದ್ದಾರೆ. ‘ಸಂಘರ್ಷದ ನಡುವೆ ಸಿಲುಕಿಕೊಂಡಿರುವ ಮಕ್ಕಳು ಹೇಗಾದರೂ ಮನೆಗೆ ಬಂದರೆ ಸಾಕು’ ಎಂದು ಪಾಲಕರೆಲ್ಲ ತುದಿಗಾಲ ಮೇಲೆ ಕಾಯುತ್ತಾ ನಿಂತಿರುವಾಗ ಸಚಿವರ ಈ ಪ್ರಲಾಪ ಅನಗತ್ಯವಾಗಿತ್ತು. ಯುದ್ಧ ನಡೆಯುವಾಗ ಆ ಪ್ರದೇಶದಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರುವುದು ಸುಲಭದ ಕೆಲಸವಲ್ಲ. ಅದಕ್ಕೆ ನೂರೆಂಟು ಅಡ್ಡಿಗಳು. ಅವುಗಳನ್ನೆಲ್ಲ ಯಶಸ್ವಿ ರಾಯಭಾರದ ಮೂಲಕ ಮೆಟ್ಟಿನಿಲ್ಲಬೇಕು. ಈ ವಿಷಯದಲ್ಲಿ ಕೆಲವು ದೇಶಗಳು ಮುನ್ನೆಚ್ಚರಿಕೆ ವಹಿಸಿ ತಮ್ಮ ದೇಶದ ಪ್ರಜೆಗಳನ್ನು ವಾಪಸು ಕರೆಸಿಕೊಂಡಿರುವುದು ವರದಿಯಾಗಿದೆ.ಭಾರತ ಸರ್ಕಾರವು ನಾಲ್ವರು ಸಚಿವರ ತಂಡಗಳನ್ನು ರಚಿಸಿ ಉಕ್ರೇನ್‌ ಗಡಿಗೆ ಕಳುಹಿಸಿಕೊಟ್ಟಿದೆ. ಆದರೆ, ಯುದ್ಧಪೀಡಿತ ಕೀವ್‌ ಮತ್ತು ಹಾರ್ಕಿವ್‌ ಭಾಗಗಳಿಂದ ವಿದ್ಯಾರ್ಥಿಗಳನ್ನು ಕರೆತರುವುದು ಇನ್ನೂ ಸಾಧ್ಯವಾಗಿಲ್ಲ. ಅಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಮುಂದಿನ 3–4 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಕಳುಹಿಸಿ, ವಿದ್ಯಾರ್ಥಿಗಳನ್ನೆಲ್ಲ ಕರೆತರುವುದಾಗಿ ಸರ್ಕಾರ ಪ್ರಕಟಿಸಿದೆ. ರಾಜತಾಂತ್ರಿಕ ಕೌಶಲವನ್ನು ಸಮರ್ಪಕವಾಗಿ ಬಳಸಿ, ರಷ್ಯಾದೊಂದಿಗಿನ ಗೆಳೆತನದ ಲಾಭವನ್ನೂ ಪಡೆದುಕೊಂಡು ಎಲ್ಲ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವುದೇ ಸರ್ಕಾರದ ಆದ್ಯತೆ ಆಗಬೇಕು. ಅಪಾಯದಲ್ಲಿ ಸಿಲುಕಿರುವ ಎಲ್ಲ ವಿದ್ಯಾರ್ಥಿಗಳು ಸುರಕ್ಷಿತವಾಗಿ ತವರಿಗೆ ಮರಳಲಿ ಎನ್ನುವುದೇ ದೇಶದ ಎಲ್ಲರ ಹಾರೈಕೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.