ಸಂಪಾದಕೀಯ | ವೈದ್ಯ ಸಿಬ್ಬಂದಿಯ ಸುರಕ್ಷತೆಗೆ ತುರ್ತು ಕ್ರಮ ಅನಿವಾರ್ಯ ಕೋಲ್ಕತ್ತದ ಆರ್‌.ಜಿ.ಕರ್‌ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಅವರ ಹತ್ಯೆಯು ಈ ವೃತ್ತಿಯಲ್ಲಿ ಇರುವವರು ಕೆಲಸದ ಸ್ಥಳದಲ್ಲಿ ಎದುರಿಸುತ್ತಿರುವ ಗಂಭೀರ ಅಪಾಯಗಳ ಕುರಿತು ಗಮನ ಹರಿಸುವಂತೆ ಮಾಡಿದೆ. ದೇಶದಾದ್ಯಂತ ಹಲವು ಆಸ್ಪತ್ರೆಗಳ ವೈದ್ಯರು ಘಟನೆಯನ್ನು ಖಂಡಿಸಿ ಮುಷ್ಕರ ನಡೆಸಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ಮಾಡುವ ಹೊತ್ತಿನಲ್ಲಿ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಗೆ ಹೆಚ್ಚಿನ ಭದ್ರತೆ ಬೇಕು ಎಂಬ ಬೇಡಿಕೆಯನ್ನು ಹಲವು ನಗರಗಳ ವೈದ್ಯರು ಮುಂದಿಟ್ಟಿದ್ದಾರೆ. ತಮಗೆ ಕೆಲಸ ಮಾಡಲು ಸುರಕ್ಷಿತ ವಾತಾವರಣ ಇರಬೇಕು ಎಂದು ವೈದ್ಯರು ಮಾಡುತ್ತಿರುವ ಆಗ್ರಹ ಸಮರ್ಪಕವಾಗಿದೆ. ವೈದ್ಯರು ಕೆಲಸದ ಸ್ಥಳದಲ್ಲಿ ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ರೋಗಿಗಳು ಮತ್ತು ಅವರ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ನಡೆಸಿದ ಹಲವು ಪ್ರಕರಣಗಳು ಈ ಹಿಂದೆ ನಡೆದಿವೆ. ಇಂತಹವು ಆಗಾಗ ನಡೆಯುತ್ತಲೇ ಇರುತ್ತವೆ. ಈಗ, ಅದರ ಜೊತೆ ಅತ್ಯಾಚಾರದಂತಹ ಅಪಾಯವೂ ಇದೆ ಎಂಬಂತಾಗಿದೆ. ಸ್ನಾತಕೋತ್ತರ ಟ್ರೈನಿಯಾಗಿದ್ದ ವೈದ್ಯೆಯ ಹತ್ಯೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ತಕ್ಷಣವೇ ವರ್ಗಾಯಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್‌ ಆದೇಶ ನೀಡಿದೆ. ಜೊತೆಗೆ, ಆಸ್ಪತ್ರೆಯ ಆಡಳಿತ ಮಂಡಳಿಯು ಘಟನೆಗೆ ಸ್ಪಂದಿಸಿದ ರೀತಿಯನ್ನು ತರಾಟೆಗೆ ತೆಗೆದುಕೊಂಡಿದೆ. ವೈದ್ಯ ಕಾಲೇಜಿನ ‍ಪ್ರಾಂಶು‍ಪಾಲರ ನಡವಳಿಕೆಯು ಸಮರ್ಪಕವಾಗಿರಲಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ತಮ್ಮ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ವೈದ್ಯರು ಈ ಹಿಂದೆಯೂ ಪ್ರತಿಭಟನೆ ಮಾಡಿದ್ದರು. ಹಿಂಸೆ ಕೊನೆಯಾಗಬೇಕು ಮತ್ತು ಅದನ್ನು ತಪ್ಪಿಸಲು ಇರುವ ಕ್ರಮಗಳು ಇನ್ನಷ್ಟು ಕಟ್ಟುನಿಟ್ಟಾಗಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ನವೆಂಬರ್‌ನಲ್ಲಿ ‘ರಾಜಘಾಟ್‌ ಚಲೋ’ವನ್ನು ವೈದ್ಯರು ನಡೆಸಿದ್ದರು. ದೌರ್ಜನ್ಯಕ್ಕೆ ಸಂಬಂಧಿಸಿ ಪ್ರತಿ ತಿಂಗಳು ಕನಿಷ್ಠ ಒಂದಾದರೂಪ್ರತಿಭಟನೆಯನ್ನು ವೈದ್ಯರು ನಡೆ ಸುತ್ತಲೇ ಇದ್ದಾರೆ. ವೈದ್ಯರ ಮೇಲೆ ಹಿಂಸಾಚಾರ ಸಾಮಾನ್ಯವಾಗಿದೆ ಎಂಬುದನ್ನು ಈ ಪ್ರತಿಭಟನೆಗಳು ಸೂಚಿಸುತ್ತವೆ. ಜೊತೆಗೆ, ಹಿಂಸೆ ತಡೆಯಲು ಈಗ ಇರುವ ವಿಧಾನಗಳು ಸಾಲುವುದಿಲ್ಲ ಎಂಬುದನ್ನೂ ಈ ಪ್ರತಿಭಟನೆಗಳು ತೋರಿಸುತ್ತವೆ. ಹಲವು ರಾಜ್ಯಗಳಲ್ಲಿ ಕಾಯ್ದೆ ತಂದು, ಆರೋಗ್ಯ ರಕ್ಷಣೆ ಸಿಬ್ಬಂದಿ ಮೇಲೆ ನಡೆಸುವ ದೌರ್ಜನ್ಯವನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲಾಗಿದೆ. ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಹಾಗಿದ್ದರೂ ಈ ಕಾಯ್ದೆಗಳ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು ಬಹಳ ಕಡಿಮೆ. ಆರೋಗ್ಯ ಕ್ಷೇತ್ರದ ಸಿಬ್ಬಂದಿ ಮೇಲೆ ಹಲ್ಲೆ ನಡೆಯುವುದನ್ನು ತಡೆಯುವುದಕ್ಕಾಗಿ ಕೇಂದ್ರ ಸರ್ಕಾರವೇ ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘವು (ಐಎಂಎ) ವೈದ್ಯರ ಸುರಕ್ಷತೆಯ ಅಭಿಯಾನವನ್ನು ಕಳೆದ ತಿಂಗಳು ನಡೆಸಿತ್ತು. ‘ನಮ್ಮ ಆಸ್ಪತ್ರೆಗಳಲ್ಲಿ ಇರುವ ವಾತಾವರಣವು ಭೀತಿ ಮತ್ತು ಅಪನಂಬಿಕೆಯಿಂದ ತುಂಬಿದೆ’ ಎಂದು ಐಎಂಎ ಹೇಳಿತ್ತು. ಕೆಲಸಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ವೈದ್ಯರ ವಿರುದ್ಧ ಕ್ರಿಮಿನಲ್‌ ಕ್ರಮ ಜರುಗಿಸುವುದನ್ನು ಐಎಂಎ ವಿರೋಧಿಸಿದೆ. ವೈದ್ಯರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗಲು ಮತ್ತು ವೈದ್ಯರಲ್ಲಿ ಅಭದ್ರತೆಯ ಭಾವನೆ ಹೆಚ್ಚಲು ಹಲವು ಕಾರಣಗಳು ಇವೆ. ಆರೋಗ್ಯ ರಕ್ಷಣೆ ಕ್ಷೇತ್ರದಲ್ಲಿ ಸಿಬ್ಬಂದಿಯ ಕೊರತೆ ಸದಾ ಇರುತ್ತದೆ; ಬೇಕಾದಷ್ಟು ಸೌಲಭ್ಯಗಳು ಇರುವುದಿಲ್ಲ; ರೋಗಿಗಳ ಸಂಖ್ಯೆಯು ನಿರಂತರವಾಗಿ ಏರುತ್ತಲೇ ಇದೆ. ವೈದ್ಯರು ಕೆಲವೊಮ್ಮೆ ರಿಸ್ಕ್‌ ತೆಗೆದುಕೊಳ್ಳಲು ಹಿಂಜರಿಯುವುದುಂಟು; ಬೆದರಿಕೆ ಮತ್ತು ಕಿರುಕುಳದ ಭೀತಿಯಿಂದಾಗಿ ಅವರು ಹೀಗೆ ಮಾಡಬೇಕಾಗುತ್ತದೆ ಎಂದು ಐಎಂಎ ಹೇಳಿದೆ. ಚಿಕಿತ್ಸೆಯಲ್ಲಿ ಲೋಪಗಳು ಆಗಿರಬಹುದು ಎಂಬ ಭಾವನೆಯು ರೋಗಿಗಳು ಮತ್ತು ಅವರ ಸಂಬಂಧಿಕರು ಕೆರಳುವಂತೆ ಮಾಡುತ್ತದೆ. ಕಾಯ್ದೆಗಳ ಜಾರಿಯನ್ನು ಇನ್ನಷ್ಟು ಬಲಪಡಿಸಬೇಕಿದೆ. ಆದರೆ, ಆಸ್ಪತ್ರೆಗಳಲ್ಲಿನ ಹಿಂಸೆಯನ್ನು ತಡೆಯಲು ಅದಷ್ಟೇ ಸಾಕಾಗುವುದಿಲ್ಲ. ಕೋಲ್ಕತ್ತದಲ್ಲಿ ನಡೆದಿರುವ ಘಟನೆಯು ಚಿಕಿತ್ಸೆ ಅಥವಾ ನಡವಳಿಕೆಗೆ ಸಂಬಂಧಿಸಿ \ದ್ದಲ್ಲ. ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಉಪಕ್ರಮಗಳನ್ನು ಹೆಚ್ಚಿಸಬೇಕಿದೆ ಎಂಬುದನ್ನು ಈ ಘಟನೆಯು ಸೂಚಿಸುತ್ತದೆ. ವೈದ್ಯಕೀಯ ಸಿಬ್ಬಂದಿಯು ಸುರಕ್ಷಿತ ವಾತಾವರಣದಲ್ಲಿ ಕೆಲಸ ಮಾಡುವುದಕ್ಕೆ ಸರ್ಕಾರ, ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಲೇಬೇಕಾದ ಅನಿವಾರ್ಯ ಇದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.