ಸಂಪಾದಕೀಯ: ವಿತ್ತೀಯ ಹೊಣೆಗಾರಿಕೆ ಕಾಯ್ದೆ ಆರ್ಥಿಕ ಶಿಸ್ತಿಗೆ ಸದ್ಬಳಕೆಯಾಗಲಿ ರಾಜ್ಯ ಸರ್ಕಾರದ ಬಜೆಟ್‌ ಮಂಡನೆಯಾದ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) 2022–23ನೇ ಸಾಲಿನ ಬಜೆಟ್‌ ಮಂಡಿಸುವುದಕ್ಕೆ ಬಿರುಸಿನ ತಯಾರಿ ನಡೆಸಿದೆ. ಬಿಬಿಎಂಪಿ ಬಜೆಟ್‌ನಲ್ಲಿ ಪ್ರತೀ ಸಲ ಅತಿಹೆಚ್ಚು ಚರ್ಚೆಗೆ ಗ್ರಾಸವಾಗುವುದು ಅದರ ಗಾತ್ರ. ಬಿಬಿಎಂಪಿ ಬಜೆಟ್‌ನಲ್ಲಿ ತೋರಿಸುವ ತೆರಿಗೆ ವರಮಾನಕ್ಕೂ ವಾಸ್ತವದಲ್ಲಿ ಸಂಗ್ರಹವಾಗುವ ತೆರಿಗೆಗೂ ತಾಳೆಯಾಗುವುದೇ ಇಲ್ಲ. ತೆರಿಗೆ ಸಂಗ್ರಹದ ಗುರಿ ತಲುಪಲು ಸಾಧ್ಯವಾಗದ ಕಾರಣಕ್ಕೆ ಬಿಬಿಎಂಪಿಯ ಆರ್ಥಿಕ ಹೊಣೆಗಾರಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. 2020–21ನೇ ಸಾಲಿನಲ್ಲಿ ಬಿಬಿಎಂಪಿ ₹ 11,972 ಕೋಟಿ ಗಾತ್ರದ ಬಜೆಟ್‌ ಅಂಗೀಕರಿಸಿತ್ತು. ವರ್ಷದ ಕೊನೆಯಲ್ಲಿ ಅದು ₹ 6,799 ಕೋಟಿಗೆ ಪರಿಷ್ಕೃತಗೊಂಡಿತ್ತು. ಪಾಲಿಕೆ ಬಜೆಟ್‌ನ ಒಟ್ಟು ಗಾತ್ರದಲ್ಲಿ ಇಷ್ಟೊಂದು ಬೃಹತ್ ಮೊತ್ತ ಕಡಿತಗೊಳ್ಳುವುದು ಸಣ್ಣ ವಿಚಾರವಲ್ಲ. 2021–22ನೇ ಸಾಲಿನಲ್ಲಿ ಬಿಬಿಎಂಪಿಯು ₹ 9,286 ಕೋಟಿ ಗಾತ್ರದ ಬಜೆಟ್ ಅನ್ನು ಅಂಗೀಕರಿಸಿತ್ತು. ಈ ಮೊತ್ತವನ್ನು ಪರಿಷ್ಕರಿಸಿದ್ದ ನಗರಾಭಿವೃದ್ಧಿ ಇಲಾಖೆಯು ಒಟ್ಟು ₹ 9,951 ಕೋಟಿ ಗಾತ್ರದ ಬಜೆಟ್‌ಗೆ ಅನುಮೋದನೆ ನೀಡಿತ್ತು. ಅದರ ಪ್ರಕಾರ, ಬಿಬಿಎಂಪಿಯು ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಮತ್ತು ಇತರ ಮೂಲಗಳಿಂದ ₹ 4 ಸಾವಿರ ಕೋಟಿಗೂ ಹೆಚ್ಚು ಸಂಪನ್ಮೂಲವನ್ನು ಸಂಗ್ರಹಿಸ ಬೇಕಿದೆ. ಆದರೆ, 2022ರ ಮಾರ್ಚ್‌ 5ರವರೆಗೆ ಬಿಬಿಎಂಪಿ ₹ 2,838 ಕೋಟಿಯಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹಿಸಲಷ್ಟೇ ಸಾಧ್ಯವಾಗಿದೆ. ಬಜೆಟ್‌ನಲ್ಲಿ ಮನಬಂದಂತೆ ಕಾರ್ಯಕ್ರಮಗಳನ್ನು ಪ್ರಕಟಿಸುವುದು, ನಂತರ ಅನುದಾನ ಹೊಂದಿಸಲಾಗದೇ ಅವುಗಳನ್ನು ಅನುಷ್ಠಾನಕ್ಕೆ ತಾರದಿರುವುದು ಬಿಬಿಎಂಪಿಗೆ ಶೋಭೆ ತರುವುದಿಲ್ಲ. ಇದನ್ನು ಮನಗಂಡೇ ಸರ್ಕಾರವು ಬಿಬಿಎಂಪಿಗೂ ‘ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ವಿತ್ತೀಯ ಹೊಣೆಗಾರಿಕೆ ಕಾಯ್ದೆ–2003’ ಅನ್ನು ಅನ್ವಯಗೊಳಿಸಿದೆ. ಈ ಕಾಯ್ದೆಯ ಆಶಯಗಳಿಗೆ ಅನುಗುಣವಾಗಿ, ‘ಬಿಬಿಎಂಪಿ (ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್‌ ನಿರ್ವಹಣೆ) ನಿಯಮಗಳು– 2021’ ಅನ್ನು ರೂಪಿಸಲಾಗಿದ್ದು, ಅವುಗಳು ಕೂಡಾ ಮಾರ್ಚ್‌ 10ರಿಂದ ಜಾರಿಗೆ ಬಂದಿವೆ. ಮುಂಬರುವ ಆರ್ಥಿಕ ವರ್ಷದ ಬಜೆಟ್‌ ತಯಾರಿ ನಡೆಯುತ್ತಿರುವಾಗಲೇ ಸರ್ಕಾರ ಇಂತಹದ್ದೊಂದು ಕ್ರಮ ಕೈಗೊಂಡಿದೆ. ಇನ್ನು ಮುಂದೆ ಬಿಬಿಎಂಪಿಯು ಬಜೆಟ್‌ ರೂಪಿಸುವಾಗ ಈ ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ. ಪಾಲಿಕೆಯು ‘ಮಧ್ಯಮಾವಧಿ ವಿತ್ತೀಯ ಯೋಜನೆ’ ರೂಪಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ವಾರ್ಷಿಕ ಬಜೆಟ್‌ ರೂಪಿಸುವುದಕ್ಕೆ ಇದರ ಅಂಕಿ–ಅಂಶಗಳನ್ನೇ ಆಧಾರವಾಗಿ ಬಳಸಬೇಕು. ವಿತ್ತೀಯ ಕೊರತೆಯೂ ಬಜೆಟ್‌ ಗಾತ್ರದ ಶೇಕಡ 3ಕ್ಕಿಂತ ಹೆಚ್ಚು ಇರುವಂತಿಲ್ಲ. ವರಮಾನ ಕೊರತೆ ನೀಗಿಸುವುದಕ್ಕೂ ಪಾಲಿಕೆ ಆದ್ಯತೆ ನೀಡಬೇಕು ಎಂದೂ ಸ್ಪಷ್ಟಪಡಿಸಲಾಗಿದೆ. ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ರೂಪಿಸುವುದಕ್ಕೆ ಇವೆಲ್ಲ ನೆರವಾಗಬಲ್ಲವು. ರಾಜ್ಯ ಸರ್ಕಾರವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಎಸ್‌ಡಿಪಿ) ಹಾಗೂ ಕೇಂದ್ರ ಸರ್ಕಾರವು ದೇಶದ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ಆಧರಿಸಿ ವಿತ್ತೀಯ ಹೊಣೆಗಾರಿಕೆ ನಿಯಮಗಳನ್ನು ರೂಪಿಸಿಕೊಂಡಿವೆ. ಬೆಂಗಳೂರಿನ ಒಟ್ಟು ಆಂತರಿಕ ಉತ್ಪನ್ನ ಆಧರಿಸಿ ನಿಯಮ ರೂಪಿಸಲು ಬಿಬಿಎಂಪಿಗೆ ಅವಕಾಶ ಇರಲಿಲ್ಲ. ಹಾಗಾಗಿ, ಸಂಯುಕ್ತ ವಾರ್ಷಿಕ ಬೆಳವಣಿಗೆ ದರದ (ಸಿಎಜಿಆರ್‌) ಆಧಾರದಲ್ಲಿ ವಿತ್ತೀಯ ಹೊಣೆಗಾರಿಕೆ ನಿಯಮಗಳನ್ನು ರೂಪಿಸಿರುವುದು ಸೂಕ್ತವಾಗಿದೆ. ಇನ್ನು ಪಾಲಿಕೆಯು ಸಿಎಜಿಆರ್‌ ಆಧಾರದಲ್ಲೇ ಬಜೆಟ್‌ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ. ಈ ನಿಯಮಗಳಿಗೆ ಬದ್ಧವಾಗುವ ಮೂಲಕ ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ರೂಪಿಸಲು ಅಧಿಕಾರಿಗಳು ಕಟಿಬದ್ಧರಾಗಬೇಕು. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು2021ರಲ್ಲಿ ಬಿಡುಗಡೆ ಮಾಡಿರುವ ‘ಸುಲಲಿತ ಜೀವನ ನಿರ್ವಹಣೆ ಸೂಚ್ಯಂಕ’ ಪಟ್ಟಿಯಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನ ಪಡೆದಿತ್ತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ನಗರಗಳು ಆರ್ಥಿಕ ಸಾಮರ್ಥ್ಯಕ್ಕೆ ಪಡೆದ ಅಂಕಗಳ ಸರಾಸರಿ 13.52ರಷ್ಟಿದ್ದರೆ, ಬೆಂಗಳೂರು ನಗರ 78.83 ಅಂಕ ಪಡೆದಿತ್ತು. ಸೂಚ್ಯಂಕ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನಕ್ಕೇರಲು ಈ ಅಂಕಗಳೇ ಕಾರಣ. ಬೆಂಗಳೂರಿನಲ್ಲಿ ಆರ್ಥಿಕ ಸಂಪನ್ಮೂಲ ಹೇರಳ ವಾಗಿದ್ದರೂ ಅದನ್ನು ಬಳಸಿಕೊಳ್ಳುವ ಮಾರ್ಗೋಪಾಯ ಹುಡುಕುವಲ್ಲಿ ಬಿಬಿಎಂಪಿ ವಿಫಲವಾಗಿದ್ದನ್ನು ಇದು ಬೊಟ್ಟುಮಾಡುತ್ತದೆ. ಕೆಲ ವರ್ಷಗಳ ಹಿಂದೆ ನಗರದಲ್ಲಿರುವ ಕೆಲವು ಬಹುಮಹಡಿ ವಾಣಿಜ್ಯ ಸಂಕೀರ್ಣಗಳ ಟೋಟಲ್‌ ಸ್ಟೇಷನ್‌ ಸರ್ವೇ ನಡೆಸಲಾಗಿತ್ತು. ಅವುಗಳ ಮಾಲೀಕರು ಪ್ರತಿವರ್ಷ ಆಸ್ತಿ ತೆರಿಗೆ ಕಟ್ಟುವಾಗ ಒಟ್ಟು ವಿಸ್ತೀರ್ಣವನ್ನು ತಪ್ಪಾಗಿ ತೋರಿಸಿ ನೂರಾರು ಕೋಟಿ ರೂಪಾಯಿ ತೆರಿಗೆ ವಂಚನೆ ನಡೆಸುತ್ತಿದ್ದುದು ಇದರಿಂದ ಬೆಳಕಿಗೆ ಬಂದಿತ್ತು. ಪಾಲಿಕೆಗೆ ನ್ಯಾಯೋಚಿತವಾಗಿ ಬರಬೇಕಾದ ವರಮಾನ ಈ ರೀತಿ ಸೋರಿಕೆ ಆಗುತ್ತಿರುವುದು ವಿಪರ್ಯಾಸವೇ ಸರಿ. ಇಂತಹ ಅಕ್ರಮಗಳು ಪತ್ತೆಯಾದ ಬಳಿಕವೂ ವಂಚನೆಗಳನ್ನು ಪರಿಣಾಮಕಾರಿಯಾಗಿ ತಡೆಯುವ ಬಿಗಿ ಕ್ರಮಗಳನ್ನು ಪಾಲಿಕೆ ಕೈಗೊಂಡಿಲ್ಲ. ಈ ನಿಟ್ಟಿನಲ್ಲೂ ಗಮನಹರಿಸಿ ಬಿಬಿಎಂಪಿಯನ್ನು ಆರ್ಥಿಕವಾಗಿಯೂ ಸಶಕ್ತಗೊಳಿಸುವ ಪ್ರಯತ್ನ ನಡೆಯ ಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.