ಸಂಪಾದಕೀಯ: ರಸ್ತೆ ಗುಂಡಿ ಸಮಸ್ಯೆ- ಬಿಬಿಎಂಪಿ ಇನ್ನಾದರೂ ಎಚ್ಚೆತ್ತುಕೊಳ್ಳುವುದೇ? ರಾಜ್ಯದ ರಾಜಧಾನಿಯ ಮುಖ್ಯ ರಸ್ತೆಗಳಲ್ಲಿ ಸದಾ ಬಾಯ್ದೆರೆದುಕೊಂಡಿರುವ ಗುಂಡಿಗಳು ನಮ್ಮ ಆಡಳಿತ ವ್ಯವಸ್ಥೆಯ ಬಗ್ಗೆ ಕುಹಕವಾಡುತ್ತಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ರಸ್ತೆಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳದಿರುವುದು ನಿರ್ಲಕ್ಷ್ಯದ ಪರಮಾವಧಿ. ಆರೇಳು ತಿಂಗಳುಗಳ ಅವಧಿಯಲ್ಲಿ ನಾಲ್ಕು ಮಂದಿ ರಸ್ತೆ ಗುಂಡಿಗಳಿಂದಾಗಿಯೇ ಜೀವ ಕಳೆದುಕೊಂಡ ಬಳಿಕವೂ ಬಿಬಿಎಂಪಿ ನಿದ್ದೆಯಿಂದ ಎಚ್ಚೆತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಸೂಚನೆ ನೀಡಿ, ಗಡುವುಗಳನ್ನು ವಿಧಿಸಿದ ಬಳಿಕವೂ ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ಅಧಿಕಾರಿಗಳು ಜವಾಬ್ದಾರಿಯನ್ನು ಅರಿತು ವರ್ತಿಸಿಲ್ಲ. ತೋರ್ಪಡಿಕೆಗೆ ಕೆಲವು ಕಡೆ ಗುಂಡಿಗಳನ್ನು ಮುಚ್ಚಿಸಿ ಸುಮ್ಮನಾದರು. ‘ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ರಸ್ತೆಗುಂಡಿಗಳ ಸಮಸ್ಯೆ ಬಿಗಡಾಯಿಸಿದೆ. ಮಳೆ ಬರುವಾಗ ಗುಂಡಿ ಮುಚ್ಚಿದರೂ ಕೆಲವೇ ದಿನಗಳಲ್ಲಿ ಡಾಂಬರು ಮತ್ತೆ ಕಿತ್ತು ಹೋಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ಸಬೂಬು ಹೇಳಿದ್ದರು. ಬೆಂಗಳೂರಿನಲ್ಲಿ ಮಳೆ ನಿಂತು ಒಂದೂವರೆ ತಿಂಗಳೇ ಕಳೆದಿದೆ. ಈಗಲೂ, ಗುಂಡಿಗಳಿಲ್ಲದ ರಸ್ತೆಗಳನ್ನು ದುರ್ಬೀನಿನಲ್ಲಿ ಹುಡುಕಬೇಕಾದ ಸ್ಥಿತಿ ಇದೆ. ಇವೆಲ್ಲ ವನ್ನೂ ಗಮನಿಸುತ್ತಿರುವ ಹೈಕೋರ್ಟ್‌, ರಸ್ತೆಗುಂಡಿ ಗಳಿಂದಾಗಿ ಜೀವಹಾನಿ ಆಗುತ್ತಿರುವ ಕುರಿತುಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಬಿ.ಎಸ್‌.ಪ್ರಹ್ಲಾದ್‌ ಅವರನ್ನು ಉದ್ದೇಶಿಸಿ, ‘ನಿಮ್ಮ ಕರ್ತವ್ಯ ನಿರ್ಲಕ್ಷ್ಯವನ್ನು ನೋಡಿಕೊಂಡು ಕೋರ್ಟ್‌ ಸುಮ್ಮನೆ ಕೂರಲಾಗುವುದಿಲ್ಲ. ಈಗಿಂದೀಗಲೇ ನಿಮ್ಮನ್ನು ಸೇವೆಯಿಂದ ಅಮಾನತು ಮಾಡಿ ಜೈಲಿಗೆ ಅಟ್ಟುವಂತೆ ಆದೇಶಿಸಲಾಗುವುದು’ ಎಂದು ಚಾಟಿ ಬೀಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ1,344 ಕಿ.ಮೀ.ಗಳಷ್ಟು ಉದ್ದದ ಮುಖ್ಯ ರಸ್ತೆಗಳು ಹಾಗೂ ಉಪಮುಖ್ಯ ರಸ್ತೆಗಳು ಸೇರಿ ಒಟ್ಟು 13,974 ಕಿ.ಮೀ. ಉದ್ದದ ರಸ್ತೆ ಜಾಲ ಇದೆ. ರಸ್ತೆಗಳನ್ನು ನಿರ್ಮಿಸಿದ ಬಳಿಕ ಅವುಗಳ ನಿರ್ವಹಣೆಗೂ ವ್ಯವಸ್ಥೆ ಕಲ್ಪಿಸಬೇಕಾದುದು ಬಿಬಿಎಂಪಿಯ ಹೊಣೆ. ಅಭಿವೃದ್ಧಿಪಡಿಸಿದ ರಸ್ತೆಗಳಲ್ಲಿ ಕನಿಷ್ಠಪಕ್ಷ ಎರಡು ವರ್ಷಗಳ ಕಾಲ ಯಾವುದೇ ಸಮಸ್ಯೆ ಕಾಣಿಸದಂತೆ ಆಯಾ ಗುತ್ತಿಗೆದಾರರೇ ನೋಡಿಕೊಳ್ಳಬೇಕು. ಅವರು ಆ ಕಾರ್ಯವನ್ನು ಸರಿಯಾಗಿ ನಿಭಾಯಿಸುವಂತೆ ಮೇಲ್ವಿಚಾರಣೆ ಮಾಡಬೇಕಾದುದು ಬಿಬಿಎಂಪಿ ಅಧಿಕಾರಿಗಳ ಕರ್ತವ್ಯ.ರಸ್ತೆಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ಅತೀವ ನಿರ್ಲಕ್ಷ್ಯ ತೋರುತ್ತಿರುವ ಬಿಬಿಎಂಪಿಯನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿರುವುದು ಸರಿಯಾಗಿಯೇ ಇದೆ. ಪಾಲಿಕೆಯಿಂದ ಕೆಲಸ ಮಾಡಿಸುವುದಕ್ಕೆ ಇಂತಹದ್ದೊಂದು ಕಠಿಣ ಕ್ರಮದ ಅಗತ್ಯವಿತ್ತು. ರಸ್ತೆಗಳಲ್ಲಿ ಗುಂಡಿ ಕಾಣಿಸಿಕೊಂಡರೆ ತಕ್ಷಣವೇ ಅವುಗಳನ್ನು ಮುಚ್ಚಿಸುವ ಉದ್ದೇಶದಿಂದಲೇ ಬಿಬಿಎಂಪಿಯು ಬೆಂಗಳೂರಿನ ಹೊರವಲಯದ ಕಣ್ಣೂರಿನಲ್ಲಿ ಬಿಸಿ ಡಾಂಬರು– ಜಲ್ಲಿ ಮಿಶ್ರಣ ಘಟಕವನ್ನು₹ 7.5 ಕೋಟಿ ವೆಚ್ಚದಲ್ಲಿ ಸ್ಥಾಪಿಸಿದೆ. ಈ ಘಟಕ ಕೆಲಸ ಆರಂಭಿಸಿದ ಬಳಿಕ ನಗರದಲ್ಲಿ ರಸ್ತೆಗುಂಡಿಗಳ ಸಮಸ್ಯೆ ಇರುವುದಿಲ್ಲ ಎಂದು ಬಿಬಿಎಂಪಿ ಭರವಸೆ ನೀಡಿತ್ತು. ಈ ಘಟಕ ಕಾರ್ಯಾರಂಭ ಮಾಡಿಎರಡು ವರ್ಷಗಳು ಉರುಳಿದ ಬಳಿಕ ನಗರದಲ್ಲಿ ರಸ್ತೆಗುಂಡಿಗಳ ಸಮಸ್ಯೆ ಹಿಂದಿಗಿಂತಲೂ ಬಿಗಡಾಯಿಸಿದೆ. ಇದು ವಿಪರ್ಯಾಸವೇ ಸರಿ. ಈ ಘಟಕವನ್ನು ಸಮರ್ಥವಾಗಿ ಬಳಸಿಕೊಂಡು, ಸಮ ರೋಪಾದಿಯಲ್ಲಿ ಗುಂಡಿ ಮುಚ್ಚುವ ಕೆಲಸ ಕೈಗೊಂಡರೆ, ನಗರದ ಎಲ್ಲ ರಸ್ತೆಗಳಲ್ಲದಿದ್ದರೂ ಕಡೇಪಕ್ಷ ಮುಖ್ಯ ರಸ್ತೆಗಳಲ್ಲಿರುವ ಗುಂಡಿಗಳನ್ನಾದರೂ ಒಂದೆರಡು ವಾರಗಳಲ್ಲಿ ದುರಸ್ತಿಪಡಿಸಬಹುದು. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ದೃಢ ನಿರ್ಧಾರ ಕೈಗೊಳ್ಳುವ ಛಾತಿ ಇರಬೇಕು. ನಾಲ್ಕು ಅಮೂಲ್ಯ ಜೀವಗಳು ಬಲಿಯಾದ ಬಳಿಕವೂ, ಎಲ್ಲ ಸೌಕರ್ಯಗಳಿದ್ದರೂ, ನಗರದ ರಸ್ತೆಗುಂಡಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದೇ ಇರುವ ಅಸಡ್ಡೆಗೆ ಕ್ಷಮೆ ಇಲ್ಲ. ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಐದು ವರ್ಷಗಳಲ್ಲಿ ₹ 20,060 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿಯವರೇ ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದ್ದರು. ಅಂದರೆ, ಪ್ರತೀ ಕಿಲೊಮೀಟರ್‌ ರಸ್ತೆಗೆ ಐದು ವರ್ಷಗಳಲ್ಲಿ ತಲಾ ₹ 1.44 ಕೋಟಿ ವ್ಯಯಿಸಲಾಗಿದೆ. ಇಷ್ಟೊಂದು ವೆಚ್ಚ ಮಾಡಿದ ಬಳಿಕವೂ ಗುಂಡಿಗಳಿಲ್ಲದ 1 ಕಿ.ಮೀ. ಉದ್ದದ ರಸ್ತೆಯೂ ಇಲ್ಲ ಎಂಬ ವಿಚಾರವನ್ನೂ ಮುಖ್ಯಮಂತ್ರಿ ವಿಧಾನ ಪರಿಷತ್ತಿನಲ್ಲಿ ಒಪ್ಪಿಕೊಂಡಿದ್ದರು. ಭಾರಿ ಪ್ರಮಾಣದಲ್ಲಿ ಜನರ ತೆರಿಗೆ ದುಡ್ಡನ್ನು ವ್ಯಯಿಸಿದ ಬಳಿಕವೂ ರಸ್ತೆಗಳನ್ನು ಸುಸ್ಥಿತಿಯಲ್ಲಿಡಲು ಸಾಧ್ಯವಾಗದಿರುವುದನ್ನು ಆಡಳಿತ ಯಂತ್ರದ ವೈಫಲ್ಯ ಎಂದೇ ಪರಿಗಣಿಸಬೇಕಾಗುತ್ತದೆ. ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಲುಎಷ್ಟರ ಮಟ್ಟಿಗೆ ಶಕ್ತರಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಅಷ್ಟೇಅಲ್ಲ, ರಸ್ತೆ ಗುಂಡಿಗಳನ್ನು ಮುಚ್ಚಲು ಸೂಚನೆ ನೀಡಿ ಆರೇಳು ತಿಂಗಳುಗಳ ನಂತರವೂ ಈ ಕೆಲಸವನ್ನು ಮಾಡಿಸಲು ಸಾಧ್ಯವಾಗದ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೂ ಈ ವಿಚಾರದಲ್ಲಿ ಢಾಳಾಗಿ ಕಾಣಿಸುತ್ತಿದೆ. ‘ರಸ್ತೆಗಳು ಗುಣಮಟ್ಟದಿಂದ ಕೂಡಿರಬೇಕು. ಈ ದಿಸೆಯಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ, ರಸ್ತೆಗುಂಡಿ ಮುಚ್ಚಲು ಯಾವ ತಂತ್ರಜ್ಞಾನ ಅನುಸರಿಸಲಾಗುತ್ತಿದೆ ಎಂಬುದರ ಕುರಿತೂ ಮಾಹಿತಿ ನೀಡಬೇಕು. ಮುಂದಿನ ವಿಚಾರಣೆ ವೇಳೆಗೆ ಯಾವುದೇ ಸಬೂಬುಗಳನ್ನು ಹೇಳಬಾರದು’ ಎಂದೂ ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗೆ ಹೈಕೋರ್ಟ್‌ ಕಟ್ಟಾಜ್ಞೆ ವಿಧಿಸಿದೆ. ಪ್ರತೀ ಕಿ.ಮೀ. ರಸ್ತೆಗೆ ಐದು ವರ್ಷ ಗಳಲ್ಲಿ ₹ 1.44 ಕೋಟಿಗೂ ಅಧಿಕ ದುಡ್ಡು ಖರ್ಚು ಮಾಡಿದ ಬಳಿಕವೂ ಅವುಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿಲ್ಲ ಎಂದಾದರೆ, ಆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗುವುದು ಸಹಜ. ರಸ್ತೆಗುಂಡಿಗಳನ್ನು ಮುಚ್ಚುವುದು ಕಣ್ಣೊರೆಸುವ ತಂತ್ರ ಆಗಬಾರದು. ರಸ್ತೆ ಗುಂಡಿ ಸಮಸ್ಯೆ ನೀಗಿಸಲು ಸಮರೋಪಾದಿಯಲ್ಲಿ ಕೆಲಸ ಆಗಬೇಕು. ಮುಖ್ಯಮಂತ್ರಿ ಬರೀ ಹೇಳಿಕೆ ನೀಡಿ ಸುಮ್ಮನಾದರೆ ಸಾಲದು. ಬಿಬಿಎಂಪಿ ಅಧಿಕಾರಿಗಳಿಂದ ಕೆಲಸ ಮಾಡಿಸುವ ಬದ್ಧತೆಯನ್ನೂ ಪ್ರದರ್ಶಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.