ಸಂಪಾದಕೀಯ: ರಾಷ್ಟ್ರಪತಿ ಭವನದಲ್ಲಿ ದ್ರೌಪದಿ ಮುರ್ಮು- ಸಾಂಕೇತಿಕ ಮಹತ್ವ ಹೆಚ್ಚು ರಾಷ್ಟ್ರಪತಿ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಗೆಲ್ಲುವುದು ಮೊದಲೇ ಗೊತ್ತಿದ್ದ ವಿಚಾರ. ಆದರೆ, ಮತ ಎಣಿಕೆ ನಡೆದು ಫಲಿತಾಂಶ ಪ‍್ರಕಟವಾದಾಗ ನಿರೀಕ್ಷೆಗಿಂತಲೂ ಹೆಚ್ಚು ಮತಗಳನ್ನು ಪಡೆದು ಅವರು ಗೆದ್ದಿದ್ದಾರೆ. ಎನ್‌ಡಿಎಯಲ್ಲಿರುವ ಪಕ್ಷಗಳು, ಬಿಜೆಪಿಯ ಮಿತ್ರ ಪಕ್ಷಗಳು, ಸಂಸತ್ತಿನಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಿರುವ ಪಕ್ಷಗಳು ಮಾತ್ರವಲ್ಲದೆ, ಬಿಜೆಪಿಯ ಜತೆ ಸ್ನೇಹ ಇಲ್ಲದ ಮತ್ತು ಬಿಜೆಪಿಯನ್ನು ವಿರೋಧಿಸುವ ಪಕ್ಷಗಳ ಪ್ರತಿನಿಧಿಗಳು ಕೂಡ ಮುರ್ಮು ಅವರಿಗೆ ಮತ ಹಾಕಿದ್ದು ಫಲಿತಾಂಶದಿಂದ ವ್ಯಕ್ತವಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕುವ ಹಕ್ಕು ಹೊಂದಿರುವ ವಿಧಾನಸಭೆಗಳು ಮತ್ತು ಸಂಸತ್ತಿನ ಕೆಲವು ಸದಸ್ಯರು ತಮ್ಮ ಪಕ್ಷಗಳ ಇಚ್ಛೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದರಿಂದಾಗಿ, ನೂತನ ರಾಷ್ಟ್ರಪತಿಗೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ವ್ಯಾಪಕ ಬೆಂಬಲ ಸಿಕ್ಕಂತಾಗಿದೆ. ಇದು ಹೀಗೆ ಇರುವುದೇ ಸೊಗಸು. ಏಕೆಂದರೆ, ದೇಶದ ಅತ್ಯುನ್ನತ ಹುದ್ದೆಯು ರಾಜಕೀಯಮುಕ್ತವಾಗಿ ಇರುವುದೇ ಉತ್ತಮ. ಆದಿವಾಸಿ ಸಮುದಾಯದಿಂದ ದೇಶದ ಮೊದಲ ಪ್ರಜೆ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಮುರ್ಮು. ದೇಶದ ಮಹಿಳೆಯರು ಮತ್ತು ಆದಿವಾಸಿ ಸಮುದಾಯದ ಸ್ಥಿತಿಯು ಇನ್ನೂ ಬಹಳ ಉತ್ತಮಗೊಳ್ಳಬೇಕಿರುವುದರಿಂದ ಈಗಿನ ಆಯ್ಕೆಗೆ ಬಹುದೊಡ್ಡ ಸಾಂಕೇತಿಕ ಮಹತ್ವ ಇದೆ. ರಾಷ್ಟ್ರಪತಿ ಸ್ಥಾನವು ಬಹುವಾಗಿ ನಾಮಮಾತ್ರದ ಹಾಗೂ ಶಿಷ್ಟಾಚಾರದ ಹುದ್ದೆ. ಎನ್‌ಡಿಎ ಅಭ್ಯರ್ಥಿಗೆ ತೀವ್ರ ಸವಾಲು ಒಡ್ಡುವಂತಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಇದ್ದ ಅವಕಾಶವನ್ನು ವಿರೋಧ ಪಕ್ಷಗಳು ಕಳೆದುಕೊಂಡವು. ವಿರೋಧ ಪಕ್ಷಗಳು ಕಣಕ್ಕೆ ಇಳಿಸಿದ್ದ ಯಶವಂತ ಸಿನ್ಹಾ ಅವರು ಈಹಿಂದೆ ಉನ್ನತ ಹುದ್ದೆಗಳು, ಸಚಿವ ಸ್ಥಾನವನ್ನು ನಿಭಾಯಿಸಿದ್ದಾರೆ. ಆದರೆಮುರ್ಮು ಅವರಿಗೆಯಾವ ರೀತಿಯಲ್ಲಿಯೂ ಕಠಿಣ ಸ್ಪರ್ಧೆ ಒಡ್ಡಲು ಅವರಿಗೆ ಆಗಲಿಲ್ಲ. ಬಿಜೆಪಿಯ ಜತೆಗೆ ಸುದೀರ್ಘ ಕಾಲ ಇದ್ದ ಸಿನ್ಹಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಟೀಕಾಕಾರರಾಗಿ ಬದಲಾಗಿದ್ದು ಇತ್ತೀಚೆಗೆ. ಹಾಗಾಗಿಯೇ ಬಿಜೆಪಿ ತನ್ನ ಅಭ್ಯರ್ಥಿ ಮೂಲಕ ಮುಂದಿಟ್ಟ ರಾಜಕೀಯ ತಂತ್ರಗಾರಿಕೆಗೆ ಎದುರೇಟು ನೀಡುವುದು ಸಿನ್ಹಾ ಅವರಿಗೆ ಸಾಧ್ಯವಾಗಲಿಲ್ಲ. ವಿರೋಧ ಪಕ್ಷಗಳ ಜತೆಗೆ ಗುರುತಿಸಿಕೊಂಡಿದ್ದ ಕೆಲವು ಪಕ್ಷಗಳು ಮುರ್ಮು ಅವರಿಗೆ ಬಹಿರಂಗವಾಗಿಯೇ ಬೆಂಬಲ ಘೋಷಿಸಿದ್ದು ಸಿನ್ಹಾ ಅವರಿಗೆ ಮುಜುಗರ ಉಂಟು ಮಾಡಿರಬಹುದು. ಸಿನ್ಹಾ ಅವರ ಹೆಸರನ್ನು ಸೂಚಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷವೇ ಅವರಿಂದ ಅಂತರ ಕಾಯ್ದುಕೊಳ್ಳುವ ಯತ್ನ ಮಾಡಿತು. ಸಿನ್ಹಾ ಅವರು ಪಶ್ಚಿಮ ಬಂಗಾಳಕ್ಕೆ ಪ್ರಚಾರಕ್ಕೆ ಹೋಗುವುದನ್ನೂ ಆ ಪಕ್ಷ ಬಯಸಲಿಲ್ಲ. ವಿರೋಧ ಪಕ್ಷಗಳ ಸಹಮತದ ಅಭ್ಯರ್ಥಿ ಯಾರೇ ಆಗಿದ್ದರೂ ಅವರು ಸೋಲುವುದು ಖಚಿತವೇ ಇತ್ತು. ಆದರೆ ಸೋಲಿನಲ್ಲಿಯೂ ರಾಜಕೀಯ ಸಂದೇಶವೊಂದನ್ನು ರವಾನಿಸುವ ಅವಕಾಶ ದೊರೆಯುತ್ತಿತ್ತು. ರಾಷ್ಟ್ರಪತಿ ಚುನಾವಣೆಯೊಂದಿಗೆ 2024ರ ಸಾರ್ವತ್ರಿಕ ಚುನಾವಣೆಯ ಪ್ರಚಾರವೂ ಆರಂಭಗೊಂಡಿದೆ ಎಂದು ಕೆಲವು ಮುಖಂಡರು ಹೇಳಿದ್ದರು. ರಾಷ್ಟ್ರಪತಿ ಚುನಾವಣೆಯು ಲೋಕಸಭೆಗೆ 2024ರಲ್ಲಿ ನಡೆಯಲಿರುವ ಚುನಾವಣಾ ಪ್ರಚಾರದ ಮುನ್ನುಡಿಯೇ ಆಗಿದ್ದರೆ, ವಿರೋಧ ಪಕ್ಷಗಳದ್ದು ಅತಿ ಕಳಪೆ ಪ್ರದರ್ಶನ ಎನ್ನದೆ ವಿಧಿಯಿಲ್ಲ. ಸುದೀರ್ಘ ಕಾಲದಿಂದ ಬಿಜೆಪಿ ನಿಷ್ಠರಾಗಿಯೇ ಇರುವ ಜಗದೀಪ್‌ ಧನಕರ್ ಅವರನ್ನು ಉಪ ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಕೂಡ ಯೋಚಿಸಿ ಕೈಗೊಂಡ ತೀರ್ಮಾನ. ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿರುವ ಅವರು ಜಾಟ್‌ ಸಮುದಾಯವನ್ನು ಪ್ರತಿನಿಧಿಸುವವರು. ಈ ಸಮುದಾಯವು ಉತ್ತರಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಕೆಲವು ಭಾಗಗಳಲ್ಲಿ ಪ್ರಭಾವಿಯಾಗಿದೆ. ಈ ಸಮುದಾಯದಲ್ಲಿ ಬಿಜೆಪಿಗೆ ಗಣನೀಯವಾದ ಬೆಂಬಲ ಇದೆ. ಧನಕರ್ ಆಯ್ಕೆಯು ಈ ಬೆಂಬಲವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಬಹುದು. ಕಾಂಗ್ರೆಸ್‌ ನಾಯಕಿ ಮಾರ್ಗರೇಟ್ ಆಳ್ವ ಅವರು ವಿರೋಧ ಪಕ್ಷಗಳ ಅಭ್ಯರ್ಥಿ. ಉಪರಾಷ್ಟ್ರಪತಿ ಚುನಾವಣೆಯೂ ಕಠಿಣ ಸ್ಪರ್ಧೆಯೇ ಇಲ್ಲದೆ ಮುಗಿದು ಹೋಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.