ಸಂಪಾದಕೀಯ| ಬೆಂಗಳೂರು ‘ನಗರ ಮಹಾಪೂರ’: ಬಿಬಿಎಂಪಿ–ಬಿಡಿಎ ಪಾಪದ ಫಲ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಪೂರ್ವಭಾಗದ ಹಲವು ಪ್ರದೇಶಗಳು ಜಲಾವೃತ ಆಗಿವೆ. ರಸ್ತೆಗಳು ಹೊಳೆಯ ರೂಪವನ್ನು ತಾಳಿದ್ದರೆ, ಬಡಾವಣೆಗಳು ಕೆರೆಗಳಂತಾಗಿವೆ. ಬೆಳ್ಳಂದೂರು–ಸರ್ಜಾಪುರ ಮುಖ್ಯರಸ್ತೆಯ ಸುತ್ತಲಿನ ಕೆಲವು ಪ್ರಮುಖ ಬಡಾವಣೆ ಗಳಲ್ಲಿ ಸಹ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅಲ್ಲಿನ ವಿಲ್ಲಾಗಳು ಈಗ ಈಜುಕೊಳದ ರೂಪ ತಾಳಿವೆ. ಕೋಟ್ಯಂತರ ರೂಪಾಯಿ ಸುರಿದು ಕಟ್ಟಿದ ಮನೆಯನ್ನು ಸುರಿವ ಮಳೆಯಲ್ಲೇ ತೊರೆದು ಬರುವಂತಾಗಿದೆ. ತುತ್ತು ಅನ್ನ ಅರಸಿ ರಾಜಧಾನಿಗೆ ಬಂದ ವಲಸೆ ಕಾರ್ಮಿಕರ ಜೋಪಡಿಗಳೆಲ್ಲ ಮಳೆನೀರಿನಲ್ಲಿ ತೇಲಿಹೋಗಿವೆ. ಹಲವು ಬಡಾವಣೆಗಳಲ್ಲಿ ಜನರ ಬದುಕು ಮೂರಾಬಟ್ಟೆಯಾಗಿದೆ. ಮಳೆಯ ಹೊಡೆತಕ್ಕೆ ಸಿಲುಕಿ ಉಂಟಾದ ಆಘಾತದಿಂದ ಹೊರಬರಲು ಅವರಿಗೆ ಇನ್ನೂ ಸಾಧ್ಯವಾಗಿಲ್ಲ. ದೇಶದ ದೊಡ್ಡ ದೊಡ್ಡ ಐ.ಟಿ. ಕಂಪನಿಗಳು ಇದೇ ಭಾಗದಲ್ಲಿ ನೆಲೆ ಕಂಡುಕೊಂಡಿದ್ದು, ಮಳೆಯ ಹೊಡೆತವನ್ನು ಅವುಗಳೂ ಅನುಭವಿಸಿವೆ. ಕೆಲವು ಕಂಪನಿಗಳ ಉದ್ಯೋಗಿಗಳು ಕಚೇರಿಗೆ ದೋಣಿಯಲ್ಲಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿರುವುದು ಉತ್ಪ್ರೇಕ್ಷೆಯ ಮಾತಲ್ಲ. ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿಮಾಹಿತಿ ತಂತ್ರಜ್ಞಾನ ಸಂಸ್ಥೆಗಳ ಉದ್ಯೋಗಿಗಳು ಸಕಾಲಕ್ಕೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಇದರಿಂದಾಗಿ ಐ.ಟಿ. ಕಂಪನಿಗಳು ನೂರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಮಳೆನೀರಿನಲ್ಲಿ ಮುಳುಗಿ ಸಾವಿರಾರು ವಾಹನಗಳು ಹಾನಿಗೀಡಾಗಿವೆ.‌ ನಗರದ ಪ್ರವಾಹ ಪರಿಸ್ಥಿತಿಗೆ ಮಳೆಯ ಅಟಾಟೋಪವೇ ಕಾರಣವಾದರೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪಾಪದ ಪಾಲೂ ಅದರಲ್ಲಿದೆ. ನದಿ ಯಂತಹ ಜಲಮೂಲ­ದಿಂದ ಬಹುದೂರದಲ್ಲಿರುವ ನಗರ ಬೆಂಗಳೂರು. ಮಳೆ ನೀರನ್ನು ಸಂಗ್ರ­ ಹಿಸಲು ನಗರ ನಿರ್ಮಾತೃಗಳು ನೂರಾರು ಕೆರೆಗಳನ್ನು ನಿರ್ಮಿಸಿದ್ದರು. ಒಂದು ಕೆರೆ ತುಂಬಿ ಮತ್ತೊಂದು ಕೆರೆಗೆ ನೀರು ಹರಿಯಲು ‘ಸರಪಳಿ ರಾಜಕಾಲುವೆ’ಗಳ ವ್ಯವಸ್ಥೆಯನ್ನೂ ಮಾಡಿದ್ದರು. ಅಂತಹ ಕೆರೆ–ಕಟ್ಟೆ, ಕಾಲುವೆಗಳೆಲ್ಲ ಒತ್ತುವರಿ ಆಗುವಾಗ ಬಿಬಿಎಂಪಿ ಕಣ್ಮುಚ್ಚಿಕೊಂಡು ಕುಳಿತಿತ್ತು. ರಿಯಲ್‌ ಎಸ್ಟೇಟ್‌ ಮಾಫಿಯಾಕ್ಕೆ ಜಲಮೂಲಗಳನ್ನು ಅದು ಧಾರೆ ಎರೆದು ಕೊಟ್ಟಿದ್ದನ್ನು ಎ.ಟಿ. ರಾಮಸ್ವಾಮಿ ಸಮಿತಿ ವರದಿಯು ಎತ್ತಿತೋರಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 1,848 ಎಕರೆಯಷ್ಟು ಕೆರೆ ಅಂಗಳ ಪ್ರದೇಶ ಒತ್ತುವರಿಯಾಗಿದೆ ಎಂದು ಈ ವರದಿ ತಿಳಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಂತೂ ಪಾಪಕೃತ್ಯದಲ್ಲಿ ಒಂದು ಹೆಜ್ಜೆ ಮುಂದೆಹೋಗಿ ಕೆಲವು ಕೆರೆಗಳ ಪಾತ್ರದಲ್ಲೇ ಬಡಾವಣೆಗಳನ್ನು ನಿರ್ಮಿಸಿದೆ. ಅದರ ಪರಿಣಾಮವನ್ನು ನಗರದ ನಾಗರಿಕರು ಅನುಭವಿಸಬೇಕಿದೆ. ಬಡಾವಣೆ ಇರುವುದು ಕೆರೆ ಪಾತ್ರದಲ್ಲಿಯೋ ಇಲ್ಲವೆ ರಾಜಕಾಲುವೆಯ ಸಮಾಧಿಯ ಮೇಲೋ ಎನ್ನುವುದನ್ನು ಸರಿಯಾಗಿ ಪರಿಶೀಲನೆ ಮಾಡದೆ ನಿವೇಶನ ಖರೀದಿಸಿದವರು ಈಗ ದಂಡ ತೆರುತ್ತಿದ್ದಾರೆ. ಬೆಂಗಳೂರಿನ ಇಂದಿನ ದುಃಸ್ಥಿತಿಗೆ ಬಿಲ್ಡರ್‌ಗಳು, ಕಾರ್ಪೊರೇಟರುಗಳು, ಬಿಬಿಎಂಪಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಕೆಟ್ಟ ಮೈತ್ರಿಯೂ ಒಂದು ಮುಖ್ಯ ಕಾರಣ. ಈ ಮೈತ್ರಿಯನ್ನು ಕೊನೆಗಾಣಿಸದಿದ್ದರೆ ಬೆಂಗಳೂರಿನ ಸಮಸ್ಯೆಗಳು ನಿವಾರಣೆಯಾಗಲಿಕ್ಕಿಲ್ಲ. ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಇದೇ ಪೂರ್ವಭಾಗದಲ್ಲಿ ‘ನಗರ ಮಹಾಪೂರ’ ಕಾಣಿಸಿಕೊಂಡಾಗ ಬಿಬಿಎಂಪಿಯಿಂದ ಒತ್ತುವರಿ ತೆರವು ಕಾರ್ಯಾಚರಣೆಯ ನಾಟಕ ನಡೆದಿತ್ತು. ದಿನಗಳು ಕಳೆದಂತೆ, ವಿಷಯವೂ ತಣ್ಣಗಾದಂತೆ ಭೂಮಾಪಕರ ಕೊರತೆಯ ನೆಪವೊಡ್ಡಿ ಕಾರ್ಯಾಚರಣೆ ಯನ್ನು ಸಂಪೂರ್ಣ ಸ್ಥಗಿತಗೊಳಿಸಿತು. ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ ಆಗ ಕಾರ್ಯಾಚರಣೆ ಪೂರ್ಣ ಗೊಳಿಸಿದ್ದರೆ ಸಮಸ್ಯೆ ಈಗ ಇಷ್ಟೊಂದು ಗಂಭೀರ ಸ್ವರೂಪವನ್ನು ಪಡೆಯುತ್ತಿರಲಿಲ್ಲ. ಯಾವೆಲ್ಲ ಕೆರೆ, ಕಾಲುವೆಗಳು ಒತ್ತುವರಿಯಾಗಿವೆ ಎಂಬ ವಿವರ ಬಿಬಿಎಂಪಿ ಬಳಿ ಇದೆ. ಈಗಲಾದರೂ ಒತ್ತುವರಿ ತೆರವಿಗೆ ಇಚ್ಛಾಶಕ್ತಿ ಪ್ರದರ್ಶಿಸದಿದ್ದರೆ ಮುಂದೆ ಎದುರಾಗಬಹುದಾದ ಅನಾಹುತಗಳಿಗೆಲ್ಲ ಬಿಬಿಎಂಪಿಯೇ ಹೊಣೆ ಹೊರಬೇಕಾಗುತ್ತದೆ. ನಗರ ಮಹಾಪೂರದಿಂದ ಸಂಕಷ್ಟ ಹೆಚ್ಚಿದಷ್ಟೂ ಬ್ರ್ಯಾಂಡ್‌ ಬೆಂಗಳೂರು ಹಿರಿಮೆಗೆ ಪೆಟ್ಟು ಬೀಳಲಿದೆ ಎಂಬುದನ್ನು ಆಡಳಿತದ ಹೊಣೆ ಹೊತ್ತವರು ನೆನಪಿಡಬೇಕು. ಪ್ರತಿವರ್ಷ 15 ಟಿಎಂಸಿ ಅಡಿಯಷ್ಟು ಮಳೆನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಮಳೆನೀರು ಸಂಗ್ರಹದ ವ್ಯವಸ್ಥೆ ಮಾಡಿದರೆ ಮಹಾಪೂರದ ತೀವ್ರತೆ ಕಡಿಮೆ ಆಗುತ್ತದೆ. ಮಳೆನೀರು ಸಂಗ್ರಹ ಕಡ್ಡಾಯಗೊಳಿಸಿ ರೂಪಿಸಿರುವ ಕಾಯ್ದೆಯಿಂದ ನುಣುಚಿಕೊಳ್ಳಲು ಯತ್ನಿಸುವ ನಾಗರಿಕರೆಲ್ಲರೂ ಈ ದಿಸೆಯಲ್ಲಿ ಗಂಭೀರವಾಗಿ ಯೋಚಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.