ಸಂಪಾದಕೀಯ: ಬಿಜೆಪಿಯಲ್ಲಿ ಸಂಘಟನಾತ್ಮಕ ಬದಲಾವಣೆ– ಕೆಲವು ನೇಮಕ, ಹಲವು ಸಂದೇಶ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅತ್ಯುನ್ನತ ನೀತಿ ನಿರೂಪಣಾ ವ್ಯವಸ್ಥೆಗಳಲ್ಲಿ ಈಚೆಗೆ ತಂದಿರುವ ಬದಲಾವಣೆಗಳು ಕೆಲವು ರಾಜ್ಯಗಳನ್ನು ಕೇಂದ್ರವಾಗಿ ಇರಿಸಿಕೊಂಡಿವೆ. ಆ ಮೂಲಕ ಇಡೀ ಪಕ್ಷಕ್ಕೆ ಒಂದು ಸಂದೇಶ ರವಾನಿಸುವ ಉದ್ದೇಶ ಕೂಡ ಬದಲಾವಣೆಗಳ ಹಿಂದೆ ಇರುವಂತಿದೆ. ಸಂಸದೀಯ ಮಂಡಳಿ ಹಾಗೂ ಕೇಂದ್ರ ಚುನಾವಣಾ ಸಮಿತಿಯು ಬಿಜೆಪಿ ಪಾಲಿಗೆ ಅತ್ಯುನ್ನತ ನೀತಿ ನಿರೂಪಣಾ ವ್ಯವಸ್ಥೆಗಳು. ಪಕ್ಷದ ನಾಯಕತ್ವವು ಇವೆರಡನ್ನು ಪುನರ್‌ ರಚನೆ ಮಾಡಿದೆ. ಪಕ್ಷದ ತಕ್ಷಣದ ಅಗತ್ಯಗಳಿಗೆ ಸ್ಪಂದಿಸುವುದು ಹಾಗೂ ಈಗಿನ ನಾಯಕತ್ವದ ಪ್ರಾಬಲ್ಯವನ್ನು ಮತ್ತೆ ಒತ್ತಿ ಹೇಳುವುದು ಬದಲಾವಣೆಗಳ ಹಿಂದೆ ಇರುವ ಉದ್ದೇಶ. ಒಂದು ವರ್ಷದ ಹಿಂದೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಸಂಸದೀಯ ಮಂಡಳಿಗೆ ಹಾಗೂ ಕೇಂದ್ರ ಚುನಾವಣಾ ಸಮಿತಿಗೆ ನೇಮಿಸಲಾಗಿದೆ. ಇದರ ಅರ್ಥ, ರಾಜ್ಯದಲ್ಲಿ ಇನ್ನೊಂದು ವರ್ಷದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಯಡಿಯೂರಪ್ಪ ಅವರನ್ನು ನೆಚ್ಚಿಕೊಳ್ಳಲಿದೆ ಎಂಬುದು. ಪ್ರಬಲ ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಅನ್ನಿಸಿಕೊಂಡಿರುವ ಯಡಿಯೂರಪ್ಪ ಅವರ ಮುಂದಾಳತ್ವ ಇಲ್ಲದೆ ಚುನಾವಣೆಯನ್ನು ಎದುರಿಸುವುದು ಬಿಜೆಪಿ ಪಾಲಿಗೆ ಕಷ್ಟದ ಕೆಲಸ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ ಪ್ರಯೋಗ ವಿಫಲವಾಗಿದೆ ಎಂಬ ಸೂಚನೆಯೂ ಇದರ ಹಿಂದಿದೆ. ಪಕ್ಷದ ರಾಜ್ಯದ ವ್ಯವಹಾರಗಳಲ್ಲಿ ಸಮತೋಲನ ಸಾಧಿಸುವ ಉದ್ದೇಶ ಕೂಡ ಇದರ ಹಿಂದಿರಬಹುದು. ಬದಲಾವಣೆ ತರುವ ಸಂದರ್ಭದಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ಈಶಾನ್ಯ ರಾಜ್ಯಗಳ ಪ್ರದೇಶ ಮತ್ತು ತೆಲಂಗಾಣಕ್ಕೆ ವಿಶೇಷ ಆದ್ಯತೆ ದೊರೆತಿದೆ. ಈ ಪ್ರದೇಶಗಳಲ್ಲಿ ಪಕ್ಷಕ್ಕೆ ಈಗ ಇರುವ ಅಗತ್ಯಗಳ ಆಧಾರದಲ್ಲಿ ಬದಲಾವಣೆಗಳು ನಡೆದಿವೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವೀಸ್ ಅವರ ಹೆಸರನ್ನು ಗಟ್ಟಿಗೊಳಿಸುವ ಅಗತ್ಯ ಇದೆ. ಅದರಲ್ಲೂ ಮುಖ್ಯವಾಗಿ ಪ್ರಭಾವಿ ಮುಖಂಡ ಹಾಗೂ ಆರ್‌ಎಸ್‌ಎಸ್‌ಗೆ ಹತ್ತಿರದವರು ಎನ್ನಲಾಗುವ ಸಚಿವ ನಿತಿನ್ ಗಡ್ಕರಿ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಟ್ಟ ಕಾರಣಕ್ಕೆ ಕೂಡ ಫಡಣವೀಸ್ ಅವರನ್ನು ಚುನಾವಣಾ ಸಮಿತಿಗೆ ನೇಮಕ ಮಾಡಿರುವುದು ಮಹತ್ವ ಪಡೆಯುತ್ತದೆ. ಶಿವರಾಜ್ ಸಿಂಗ್ ಚೌಹಾಣ್ ಅವರನ್ನೂ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ನರೇಂದ್ರ ಮೋದಿ ಅವರು ಪಕ್ಷದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರವರ್ಧಮಾನಕ್ಕೆ ಬರುವ ಮೊದಲಿನಿಂದಲೂ ಚೌಹಾಣ್ ಅವರು ಪ್ರಮುಖ ಸ್ಥಾನ ಹೊಂದಿದ್ದವರು. ಮಧ್ಯಪ್ರದೇಶದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೇರೊಬ್ಬ ನಾಯಕನನ್ನು ಮುನ್ನೆಲೆಗೆ ತರಬೇಕಾಗಬಹುದು. ಬುಡಕಟ್ಟು ಸಮುದಾಯದ ನಾಯಕ ಸರ್ವಾನಂದ ಸೊನೊವಾಲ್ ಅವರಿಗೆ ಪ್ರಮುಖ ಹುದ್ದೆ ನೀಡಿರುವುದರ ಹಿಂದೆ ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ವರ್ಚಸ್ಸು ವೃದ್ಧಿಯ ಲೆಕ್ಕಾಚಾರ ಇದೆ. ದಕ್ಷಿಣ ಭಾರತದಲ್ಲಿ ಮುಂದಿನ ಹಂತದಲ್ಲಿ ಬಿಜೆಪಿಯು ತೆಲಂಗಾಣ ರಾಜ್ಯದ ಮೇಲೆ ಕಣ್ಣಿಟ್ಟಿದ್ದು, ಆ ರಾಜ್ಯದ ಕೆ. ಲಕ್ಷ್ಮಣ್ ಅವರಿಗೆ ಪ್ರಮುಖ ಸ್ಥಾನ ನೀಡಿದೆ. ಪಕ್ಷದ ಪ್ರಮುಖ ಮಂಡಳಿ, ಸಮಿತಿಗಳಲ್ಲಿ ಈಗ ಹಿಂದುಳಿದ ಸಮುದಾಯಗಳಿಗೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಕೂಡ ಬಿಜೆಪಿಯ ಕಾರ್ಯತಂತ್ರವನ್ನು ಸೂಚಿಸುತ್ತಿದೆ. ಸಾಮಾಜಿಕ ವಾಸ್ತವಗಳು ಹಾಗೂ ಚುನಾವಣಾ ಅಗತ್ಯಗಳನ್ನು ಪಕ್ಷವು ಗುರುತಿಸಿದೆ. ಅಷ್ಟೇ ಅಲ್ಲ, ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ತನ್ನ ಕಾರ್ಯತಂತ್ರವನ್ನು ಕೂಡ ಅದು ಬದಲಿಸಿಕೊಳ್ಳುತ್ತಿದೆ. ಈಗ ತಂದಿರುವ ಸಂಘಟನಾತ್ಮಕ ಬದಲಾವಣೆಗಳಲ್ಲಿ ಇರುವ ಅತಿ ಮಹತ್ವದ ಸಂದೇಶ ಎಂದರೆ, ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಪ್ರಾಬಲ್ಯವು ಪಕ್ಷದೊಳಗೆ ಮುಂದುವರಿಯಲಿದೆ ಎಂಬುದು. ಸಚಿವರಾಗಿ ದಕ್ಷ ಎಂದು ಕರೆಸಿಕೊಂಡಿರುವ ಗಡ್ಕರಿ ಅವರನ್ನು ಹಾಗೂ ಚೌಹಾಣ್ ಅವರನ್ನು ಕೈಬಿಟ್ಟಿರುವುದು ಇದಕ್ಕೆ ಸಾಕ್ಷಿ. ಇವರಿಬ್ಬರೂ ತಾವು ಈಗ ಹೊಂದಿರುವ ಸ್ಥಾನದ ಆಚೆಗೂ ಮಹತ್ವಾಕಾಂಕ್ಷೆ ಬೆಳೆಸಿಕೊಂಡಿದ್ದರು ಎಂಬ ಮಾತು ಇದೆ. ಕಟ್ಟರ್ ಹಿಂದುತ್ವವಾದಿಗಳ ಪೈಕಿ ಹಲವರು ‘ಹಿಂದೂ ಹೃದಯ ಸಾಮ್ರಾಟ’ ಎಂದು ಭಾವಿಸಿರುವ, ಮುಂದೊಂದು ದಿನ ಪ್ರಧಾನಿ ಆಗುವ ನಾಯಕ ಎಂದು ಬಿಂಬಿತವಾಗಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸ್ಥಾನ ಕಲ್ಪಿಸದಿರುವುದರ ಹಿಂದೆಯೂ ಒಂದು ಸಂದೇಶ ಇದೆ. ಈಗ ಹಾಗೂ ಸದ್ಯೋಭವಿಷ್ಯತ್ತಿನಲ್ಲಿ ಅತ್ಯುನ್ನತ ಹುದ್ದೆ ಇತರರಿಗೆ ಇಲ್ಲ ಎಂಬುದು ಆ ಸಂದೇಶ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.