ಸಂಪಾದಕೀಯ: ಕನ್ನಡ– ತೋರುಗಾಣಿಕೆ ಮಾತು ಸಾಕು ಸಂಕಲ್ಪಶಕ್ತಿಯ ಪ್ರಯತ್ನಗಳು ಬೇಕು ಕನ್ನಡ ಸಂಭ್ರಮವನ್ನು ಜನಸಮೂಹಕ್ಕೆ ತಲುಪಿಸುವ ಪ್ರಯತ್ನವಾದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮದ ಮೂಲಕ 67ನೇ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರ ಅರ್ಥಪೂರ್ಣ ಮುನ್ನುಡಿ ಬರೆದಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿರುವ ನಿರ್ಧಾರವೂ ಕನ್ನಡ ಹಬ್ಬದ ಸಂಭ್ರಮ ಹೆಚ್ಚಿಸಿದೆ. ನಾಡು–ನುಡಿಯ ಹಿರಿಮೆಯನ್ನು ಸಾರ್ವಜನಿಕ ಸಂಭ್ರಮವಾಗಿಸುವ ಹಾಗೂ ಯುವ ತಲೆಮಾರಿನಲ್ಲಿ ಕನ್ನಡ ಪ್ರೀತಿಯನ್ನು ಮೂಡಿಸುವ ದಿಸೆಯಲ್ಲಿ ಇಂಥ ಕಾರ್ಯಕ್ರಮಗಳು ಅಗತ್ಯ. ಆದರೆ, ಕೋಟಿ ಕಂಠ ಗಾಯನ ಅಥವಾ ಜನಪ್ರಿಯ ನಾಯಕನಟರಿಗೆ ಪ್ರಶಸ್ತಿ ಪ್ರದಾನದಂತಹ ಭಾವುಕ ಕಾರ್ಯಕ್ರಮಗಳಿಂದ ನಾಡುನುಡಿಯ ನಿಜವಾದ ಹಿತಾಸಕ್ತಿ ಸಾಧ್ಯವಾಗುವುದಿಲ್ಲ. ವಾಸ್ತವ ನೆಲೆಗಟ್ಟಿನ ರಚನಾತ್ಮಕ ಕಾರ್ಯಕ್ರಮಗಳಿಂದಷ್ಟೇ ಕನ್ನಡದ ಹಿತಾಸಕ್ತಿ ಸಾಧ್ಯ. ಜನಪ್ರಿಯ ನಿರ್ಧಾರಗಳ ಜೊತೆಗೆ ಕನ್ನಡದ ನಾಳೆಗಳನ್ನು ಬಲಪಡಿಸಲಿಕ್ಕಾಗಿ ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುವ ಇಚ್ಛಾಶಕ್ತಿಯನ್ನೂ ಸರ್ಕಾರ ಪ್ರದರ್ಶಿಸಬೇಕಾಗಿದೆ. ಆಡಳಿತ ಭಾಷೆಯನ್ನಾಗಿ, ಜ್ಞಾನದ ಭಾಷೆಯನ್ನಾಗಿ ಹಾಗೂ ಉದ್ಯೋಗದ ಭಾಷೆಯನ್ನಾಗಿ ಕನ್ನಡವನ್ನು ಸಬಲಗೊಳಿಸುವ ದಿಸೆಯಲ್ಲಿ ಸರ್ಕಾರ ಸ್ಪಷ್ಟವಾದ ಕ್ರಿಯಾಯೋಜನೆ ರೂಪಿಸಿಕೊಂಡು ಮುನ್ನಡೆಯಬೇಕಾಗಿದೆ. ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸಲು ಶಾಸನಾತ್ಮಕ ಬಲ ತುಂಬುವ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ಯನ್ನು ಕಳೆದ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಮಸೂದೆಯು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಒದಗಿಸಿಕೊಡುವುದು ಸೇರಿದಂತೆ, ಕನ್ನಡದ ಸಮಗ್ರ ಅಭಿವೃದ್ಧಿಗೆ ವಿವಿಧ ಹಂತಗಳಲ್ಲಿ ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ. ಸ್ಥಳೀಯರಿಗೆ ಉದ್ಯೋಗ ನೀಡುವ ಕೈಗಾರಿಕೆಗಳ ಉತ್ತೇಜನಕ್ಕೂ ಅವಕಾಶ ದೊರಕಿಸಿಕೊಡಲಿದೆ. ರಾಜ್ಯ ಮತ್ತು ಸ್ಥಳೀಯ ಪ್ರಾಧಿಕಾರಗಳು ತಮ್ಮ ಎಲ್ಲ ಅಧಿಕೃತ ಹಾಗೂ ಆಡಳಿತಾತ್ಮಕ ಪತ್ರ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸುವುದನ್ನು ಕಡ್ಡಾಯಗೊಳಿಸಲಿದೆ. ಆದರೆ, ವಿಧಾನಸಭೆಯ ಮುಂದೆ ಮಂಡನೆಯಾಗಿರುವ ಮಸೂದೆಯ ಪರಿಪೂರ್ಣತೆಯ ಬಗ್ಗೆ ಸರ್ಕಾರದ ಜೊತೆಗೂಡಿ ಕೆಲಸ ಮಾಡುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಮಸೂದೆಯನ್ನು ಕೆಲವು ಬದಲಾವಣೆಗಳೊಂದಿಗೆ ವಿಧಾನಮಂಡಲದ ಮುಂದೆ ಮತ್ತೆ ತರಬೇಕೆಂದು ಅವರು ಆಗ್ರಹಿಸಿದ್ದಾರೆ. ಉದ್ದೇಶಿತ ಮಸೂದೆಯನ್ನು ಸಶಕ್ತಗೊಳಿಸುವ ದಿಸೆಯಲ್ಲಿ ಸರ್ಕಾರ ಮುಕ್ತ ಮನಸ್ಸಿನಿಂದ ವರ್ತಿಸಬೇಕಾಗಿದೆ, ವ್ಯಾಪಕ ಚರ್ಚೆಗೆ ಅವಕಾಶ ಕಲ್ಪಿಸಬೇಕಾಗಿದೆ. ಕನ್ನಡ ಸಾಂಸ್ಕೃತಿಕ ಲೋಕವನ್ನು ಕ್ರಿಯಾಶೀಲಗೊಳಿಸುವ ಉದ್ದೇಶದಿಂದ ರೂಪಿಸಲಾಗಿರುವ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಕುರಿತಂತೆಯೂ ಸರ್ಕಾರ ತನ್ನ ಗೊಂದಲದ ಕಾರ್ಯವೈಖರಿಯಿಂದ ಹೊರಬರಬೇಕಾಗಿದೆ. ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರನ್ನು ಅಧಿಕಾರಾವಧಿ ಮುಗಿದ ಕಾರಣಕ್ಕಾಗಿ ಕರ್ತವ್ಯದಿಂದ ತೆರವುಗೊಳಿಸಲಾಗಿದ್ದು, ಆ ಹುದ್ದೆಗಳನ್ನು ತುಂಬುವ ಬದಲು ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದ ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಕಳೆದ ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ, ಇದ್ದಕ್ಕಿದ್ದಂತೆ ಆ ಪಟ್ಟಿಯನ್ನು ಹಿಂದಕ್ಕೆ ತೆಗೆದುಕೊಂಡಿತು. ಅಕಾಡೆಮಿ ಮತ್ತು ಪ್ರಾಧಿಕಾರಗಳಿಗೆ ನೀಡುವ ಅನುದಾನ ಕೂಡ ಕಳೆದ ಕೆಲವು ವರ್ಷಗಳಿಂದ ಕಡಿಮೆಯಾಗುತ್ತಿದೆ. ಈ ನೇಮಕ ಮತ್ತು ವಾಪಸಾತಿಗಳು ಹಾಗೂ ಅನುದಾನದ ಕೊರತೆ, ಸರ್ಕಾರಕ್ಕೆ ಸ್ಪಷ್ಟವಾದ ಸಾಂಸ್ಕೃತಿಕ ನೀತಿ ಇಲ್ಲದಿರುವುದನ್ನು ಸೂಚಿಸುವಂತಿವೆ. ರಾಷ್ಟ್ರಮಟ್ಟದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿ ವಿಫಲವಾಗಿರುವ ಸರ್ಕಾರ, ಹಿಂದಿ ಹೇರಿಕೆಯ ವಿಷಯ ಪ್ರಸ್ತಾಪವಾದಾಗಲೆಲ್ಲ ತನ್ನ ಕನ್ನಡಪ್ರೀತಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವಲ್ಲಿ ಸೋತಿದೆ. ಪಕ್ಷದ ನಿಲುವು ಏನೇ ಇದ್ದರೂ, ನಾಡುನುಡಿಯ ಪ್ರಶ್ನೆ ಬಂದಾಗ ರಾಜಕೀಯದ ಒಲವು– ನಿಲುವುಗಳು ಗೌಣವಾಗಿ ಕನ್ನಡದ ಹಿತಾಸಕ್ತಿಯಷ್ಟೇ ಮುಖ್ಯವಾಗಬೇಕು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸಂಬಂಧಿಸಿದಂತೆಯೂ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ. ವರ್ಷದಿಂದ ವರ್ಷಕ್ಕೆ ಮುಚ್ಚುತ್ತಿರುವ ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರಿಂದ ಪ್ರತೀ ತಿಂಗಳು ನೂರು ರೂಪಾಯಿ ದೇಣಿಗೆ ಪಡೆಯುವ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ಹೊರಡಿಸಿ, ಸಾರ್ವಜನಿಕರ ವಿರೋಧದ ನಂತರ ಹಿಂಪಡೆದಿತ್ತು. ಈ ಗೊಂದಲವು ಪ್ರಾಥಮಿಕ ಶಿಕ್ಷಣದ ಬಗ್ಗೆ ಸರ್ಕಾರ ಎಷ್ಟು ಗಂಭೀರವಾಗಿದೆ ಎನ್ನುವ ಪ್ರಶ್ನೆಗೆ ಆಸ್ಪದ ಕಲ್ಪಿಸುವಂತಿದೆ. ಆಡಳಿತ ಹಾಗೂ ಉದ್ಯೋಗದ ಭಾಷೆಯನ್ನಾಗಿ ಕನ್ನಡವನ್ನು ಸಶಕ್ತವಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇನ್ನಾದರೂ ತನ್ನ ಜಡ ಮನೋಭಾವದಿಂದ ಹೊರಬರಬೇಕು. ಹೊಸ ಕಾಲ ಹಾಗೂ ತಂತ್ರಜ್ಞಾನಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಸಜ್ಜುಗೊಳಿಸುವ ದಿಸೆಯಲ್ಲಿ ಸರ್ಕಾರ ತನ್ನ ಮಾತುಗಳನ್ನು ಕೃತಿರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.