ಸಂಪಾದಕೀಯ: ತೂಗುಸೇತುವೆ ದುರಂತ: ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಗುಜರಾತ್‌ನ ಮೊರ್ಬಿ ಎಂಬಲ್ಲಿ ತೂಗುಸೇತುವೆ ಕುಸಿದು 136ಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದು ಇತ್ತೀಚಿನ ದಿನಗಳಲ್ಲಿ ಘಟಿಸಿದ ಅತ್ಯಂತ ದೊಡ್ಡ ದುರಂತ. ಭಾರತದಲ್ಲಿ ಮೂಲಸೌಕರ್ಯಗಳ ನಿರ್ಮಾಣ ಗುಣಮಟ್ಟ ಮತ್ತು ಅವುಗಳ ನಿರ್ವಹಣೆ ಎಷ್ಟು ಕಳಪೆಯಾಗಿದೆ ಎಂಬುದನ್ನು ಈ ದುರಂತವು ಬಯಲಾಗಿಸಿದೆ. ಹಾಗೆಯೇ, ಜನಸಂದಣಿಯನ್ನು ದಕ್ಷವಾಗಿ ನಿಭಾಯಿಸುವ ವ್ಯವಸ್ಥೆ ಇಲ್ಲದಿರುವುದು ಮತ್ತು ಎಲ್ಲ ಹಂತಗಳಲ್ಲಿಯೂ ಸರ್ಕಾರದ ವೈಫಲ್ಯಗಳಿಗೂ ಘಟನೆಯು ಬೆಳಕು ಚೆಲ್ಲಿದೆ. ದೇಶದ ವಿವಿಧ ಭಾಗಗಳಲ್ಲಿ ಹತ್ತಾರು ದುರಂತಗಳಿಗೆ ಇಂತಹ ಲೋಪಗಳೇ ಕಾರಣವೂ ಆಗಿವೆ. ಮೊರ್ಬಿಯಲ್ಲಿ ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರ ಸಂಖ್ಯೆಯು ಗಣನೀಯವೇ ಆಗಿದೆ. ಸೇತುವೆ ಕುಸಿಯುವುದಕ್ಕೆ ಅಪಘಾತ ಕಾರಣ ಅಲ್ಲ, ಬದಲಿಗೆ ಇದು ಮನುಷ್ಯನಿಂದಲೇ ಆಗಿರುವ ಕೃತ್ಯ. ವಿವಿಧ ಸಂಸ್ಥೆಗಳು ಪರಸ್ಪರ ರತ್ತ ಬೊಟ್ಟು ಮಾಡಿ ದೂಷಣೆಯಲ್ಲಿ ತೊಡಗಿವೆ. ಆದರೆ, ಹೀಗೆ ದೂಷಣೆಯಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳು ದುರಂತಕ್ಕೆ ಹೊಣೆಯಾಗಿವೆ ಎಂಬುದನ್ನು ಮರೆಯಬಾರದು. ಮೊರ್ಬಿ ಸೇತುವೆಯಂತಹ ಪ್ರಾಚೀನ ರಚನೆಗಳನ್ನು ಪಾರಂಪರಿಕ ಸೊತ್ತು ಎಂಬಂತೆ ನಿರ್ವಹಣೆ ಮಾಡಬೇಕೇ ವಿನಾ ಪ್ರತಿನಿತ್ಯದ ಬಳಕೆಗೆ ಮುಕ್ತವಾಗಿಸಬಾರದು. ಈ ಸೇತುವೆ ಪಕ್ಕದಲ್ಲಿಯೇ ಆಧುನಿಕ ಸೇತುವೆಯೊಂದನ್ನು ಜನರ ದಿನನಿತ್ಯದ ಬಳಕೆಗಾಗಿ ನಿರ್ಮಿಸಬಹುದಿತ್ತು. ಹಲವು ಸ್ಥಳಗಳಲ್ಲಿ ಹೀಗೆ ಮಾಡಲಾಗಿದೆ. ಸುಮಾರು 150 ವರ್ಷಗಳಷ್ಟು ಹಳೆಯದಾದ ಈ ಸೇತುವೆಯನ್ನು ದುರಸ್ತಿಗಾಗಿ ಏಳು ತಿಂಗಳು ಮುಚ್ಚಲಾಗಿತ್ತು. ವಾರದ ಹಿಂದಷ್ಟೇ ಜನರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಈ ಸೇತುವೆಯನ್ನು ದುರಸ್ತಿ ಮಾಡಿದ ಖಾಸಗಿ ಸಂಸ್ಥೆಗೆ ಸೇತುವೆ ದುರಸ್ತಿಯ ಪರಿಣತಿಯೇ ಇಲ್ಲ. ಅದಷ್ಟೇ ಅಲ್ಲದೆ, ಟೆಂಡರ್‌ ಕೂಡ ಕರೆಯದೆ ಈ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ದುರಸ್ತಿಯಾದ ಬಳಿಕ ಸೇತುವೆಯು ಬಳಕೆಗೆ ಯೋಗ್ಯವಾಗಿದೆ ಎಂಬ ಪ್ರಮಾಣಪತ್ರವನ್ನು ಸ್ಥಳೀಯಾಡಳಿತ ಸಂಸ್ಥೆಯು ನೀಡಿಲ್ಲ, ಸೇತುವೆಯ ಸುರಕ್ಷತೆಯ ಪರಿಶೀಲನೆಯೂ ನಡೆದಿಲ್ಲ. ನೂರು ಜನರನ್ನು ತಾಳಿಕೊಳ್ಳುವ ಶಕ್ತಿಯಷ್ಟೇ ಈ ಸೇತುವೆಗೆ ಇದೆ. ಆದರೆ, ಸೇತುವೆಯ ಮೇಲೆ ಹೋಗುವುದಕ್ಕಾಗಿ ನೂರಾರು ಜನರಿಗೆ ಟಿಕೆಟ್‌ ನೀಡಲಾಗಿತ್ತು. ಸೇತುವೆಯನ್ನು ಜನರ ಬಳಕೆಗೆ ಮುಕ್ತಗೊಳಿಸಿರುವ ಮಾಹಿತಿಯೇ ತನಗೆ ಇರಲಿಲ್ಲ ಎಂದು ಹೇಳುವ ಮೂಲಕ ಸ್ಥಳೀಯ ನಗರಪಾಲಿಕೆಯು ಜಾರಿಕೊಳ್ಳುವುದು ಸಾಧ್ಯವಿಲ್ಲ. ಸುರಕ್ಷತೆಯ ಪರಿಶೀಲನೆ ನಡೆಸದೆಯೇ, ಜನರ ಬಳಕೆಗೆ ಅವಕಾಶ ನೀಡಬಹುದು ಎಂಬ ಪ್ರಮಾಣಪತ್ರ ಇಲ್ಲದೆಯೇ ಸೇತುವೆಯನ್ನು ತೆರೆದದ್ದು ಏಕೆ? ಸುರಕ್ಷತೆಯ ಪರಿಶೀಲನೆ ನಡೆಸದೆ ಸೇತುವೆಯನ್ನು ಬಳಕೆಗೆ ಮುಕ್ತಗೊಳಿಸಿದ್ದೇ ಈಗ ಆಗಿರುವ ದುರಂತಕ್ಕೆ ಕಾರಣ. ಜನರು ಸೇತುವೆಯ ಸ್ಥಳಕ್ಕೆ ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದಾರೆ ಎಂಬ ಮಾಹಿತಿ ನಗರಪಾಲಿಕೆಗೆ ಇರಬೇಕಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಬೇಕಿತ್ತು ಮತ್ತು ಇತರ ವ್ಯವಸ್ಥೆಗಳನ್ನು ಮಾಡಬೇಕಿತ್ತು. ಜನರ ಗುಂಪು ನಿರ್ವಹಣೆ ಜಗತ್ತಿನ ವಿವಿಧ ಭಾಗಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ದೊಡ್ಡ ಸವಾಲಾಗುತ್ತಿದೆ. ಸೋಲ್‌ನಲ್ಲಿ ಕಳೆದ ವಾರವಷ್ಟೇ ಕಾಲ್ತುಳಿತವಾಗಿ 150 ಜನರು ಮೃತಪಟ್ಟಿರುವುದು ಇದಕ್ಕೆ ಉದಾಹರಣೆಯಾಗಿದೆ. ಆದರೆ, ಮೊರ್ಬಿಯ ದುರಂತಕ್ಕೆ ಕಾರಣ ಜನರ ಗುಂಪಿನ ನಿರ್ವಹಣೆ ಸರಿಯಾಗಿ ಆಗಿಲ್ಲ ಎಂಬುದಷ್ಟೇ ಅಲ್ಲ. ಸಂಬಂಧಿಸಿದ ಎಲ್ಲ ವಿಷಯಗಳ ನಿರ್ವಹಣೆಯಲ್ಲಿಯೂ ವಿಫಲ ವಾಗಿರುವುದು ಇದಕ್ಕೆ ಕಾರಣ. ದುರಂತದ ಬಗ್ಗೆ ಸಮಗ್ರವಾದ, ನಿಷ್ಪಕ್ಷಪಾತವಾದ, ದಕ್ಷವಾದ ತನಿಖೆ ನಡೆಯಬೇಕು. ತಮ್ಮ ಕರ್ತವ್ಯದಲ್ಲಿ ಲೋಪ ಎಸಗಿದವರು ಯಾರು ಎಂಬುದನ್ನು ಪತ್ತೆ ಮಾಡಿ, ಅವರ ಮೇಲೆ ಹೊಣೆಗಾರಿಕೆ ಹೊರಿಸಬೇಕು. ಗುಜರಾತ್ ವಿಧಾನಸಭೆಗೆ ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆ ಆಗಲಿದೆ. ಹಾಗಾಗಿ, ಲೋಪಗಳು ಮತ್ತು ವೈಫಲ್ಯಗಳನ್ನು ಮುಚ್ಚಿಡುವ ಪ್ರಯತ್ನ ನಡೆಯಬಹುದು ಎಂಬುದನ್ನು ಅಲ್ಲಗಳೆಯಲಾಗದು. ಆದರೆ, ಹಾಗೆ ಮಾಡುವುದು ಪ್ರಮಾದವಾಗಲಿದೆ. ಲೋಪ ಮತ್ತು ವೈಫಲ್ಯಗಳನ್ನು ಮುಚ್ಚಿಟ್ಟರೆ ತಪ್ಪಿತಸ್ಥರು ತಪ್ಪಿಸಿಕೊಳ್ಳುತ್ತಾರೆ.ಈಗಾಗಲೇ ಆಗಿರುವ ನೋವು ಸಾಲದು ಎಂಬಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದಾರೆ ಎಂಬ ಕಾರಣಕ್ಕೆ ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದದ್ದು ಸಂತ್ರಸ್ತರಿಗೆ ಮತ್ತು ಅವರು ಕುಟುಂಬದವರಿಗೆ ಮಾಡಿದ ಅವಮಾನ. ಈ ದುರಂತಕ್ಕೆ ಸಂಬಂಧಿಸಿ ಕೈಗೊಳ್ಳುವ ಕ್ರಮವು ಗುಜರಾತ್‌ನ ಸಂಸ್ಥೆಗಳಿಗೆ ಮಾತ್ರವಲ್ಲದೆ ದೇಶದ ಇತರೆಡೆಯ ಸಂಸ್ಥೆಗಳಿಗೂ ಪಾಠವಾಗಬೇಕು. ಈ ಮೂಲಕ ಸೇತುವೆಗಳು, ಅಣೆಕಟ್ಟೆಗಳು ಮತ್ತು ಇತರ ಸಾರ್ವಜನಿಕ ಕಟ್ಟಡಗಳ ನಿರ್ವಹಣೆಯು ಸಮರ್ಪಕವಾಗುವಂತೆ ಖಾತರಿಪಡಿಸಿಕೊಳ್ಳಬೇಕು. ದೇಶದಲ್ಲಿರುವ ಇಂತಹ ಹಲವಾರು ರಚನೆಗಳು ದುರಂತಕ್ಕೆ ಆಹ್ವಾನ ನೀಡುವ ರೀತಿಯಲ್ಲಿ ಇವೆ ಎಂಬುದು ಬಹಳ ಕಳಕಳಿಯ ವಿಚಾರವಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.