ಸಂಪಾದಕೀಯ:ಚಿಂತನ ಶಿಬಿರದಲ್ಲಿ:ಪ್ರಧಾನಿಮಾತು ಅಪ್ರಜಾಸತ್ತಾತ್ಮಕ ಆಲೋಚನೆಗೆ ನಿದರ್ಶನ ಹರಿಯಾಣದ ಸೂರಜ್‌ಕುಂಡ್‌ನಲ್ಲಿ ಈಚೆಗೆ ನಡೆದ ರಾಜ್ಯಗಳ ಗೃಹ ಸಚಿವರ ‘ಚಿಂತನ ಶಿಬಿರ’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಇವು ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆಯ ಮೂಲ ತತ್ವಗಳಿಗೆ ವಿರುದ್ಧವಾಗಿವೆ. ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಚಾರಗಳ ಚರ್ಚೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಾಗಾಗಿ ಪ್ರಧಾನಿಯವರ ಗಮನ ಆಂತರಿಕ ಭದ್ರತೆಯ ಕಡೆ ಇತ್ತು. ಆದರೆ, ಈ ವಿಚಾರವಾಗಿ ಆಡಿದ ಮಾತುಗಳಲ್ಲಿ ವ್ಯಕ್ತವಾದ ಅವರ ಅಭಿಪ್ರಾಯಗಳು ಸರಿಯಲ್ಲ. ಅವು ಪ್ರಜಾಸತ್ತೆಗೆ ವಿರುದ್ಧ. ನಕ್ಸಲ್‌ವಾದವನ್ನು ಬೇರುಸಹಿತ ಕೀಳಬೇಕು ಎಂದು ಹೇಳಿದ ಅವರು, ‘ನಗರ ನಕ್ಸಲ’ರನ್ನು ನಾಶ ಮಾಡಬೇಕು, ದೇಶದ ಯುವಕರು ತಪ್ಪುದಾರಿಗೆ ಹೋಗುವುದನ್ನು ತಡೆಯಬೇಕು ಎಂದಾದರೆ ಪೆನ್ ಹಿಡಿದಿರುವ ಮಾವೊವಾದಿಗಳನ್ನು ನಾಶ ಮಾಡಬೇಕು ಎಂದರು. ಇಂತಹ ವ್ಯಕ್ತಿಗಳು ದೇಶದ ಏಕತೆ ಮತ್ತು ಸಮಗ್ರತೆಯನ್ನು ಹಾಳು ಮಾಡಬಲ್ಲರು, ಇಂಥವರನ್ನು ನಿಗ್ರಹಿಸುವ ವ್ಯವಸ್ಥೆಯನ್ನು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯಂಥವು (ಯುಎಪಿಎ) ಗಟ್ಟಿಗೊಳಿಸಿವೆ ಎಂದರು. ‘ನಗರ ನಕ್ಸಲರು’ ಅಂದರೆ ಯಾರು ಎಂಬುದನ್ನು ಪ್ರಧಾನಿಯವರು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ. ಆದರೆ ಅವರು ಪ್ರತಿನಿಧಿಸುವ ಪಕ್ಷದ ಮುಖಂಡರು, ಸರ್ಕಾರದ ಟೀಕಾಕಾರರನ್ನು ಹಾಗೂ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸುವವರನ್ನು ‘ನಗರವಾಸಿ ನಕ್ಸಲರು’ ಎಂದು ಕರೆದಿದ್ದಾರೆ. ಹೀಗೆ ಕರೆಸಿಕೊಂಡವರಲ್ಲಿ ಕೆಲವರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಲಾಗಿದೆ. ಅವರು ಜಾಮೀನು ಪಡೆಯುವುದು ಬಹಳ ಕಷ್ಟ. ಹಲವು ಸಂದರ್ಭಗಳಲ್ಲಿ ಜಾಮೀನು ಸಿಗುವುದೇ ಇಲ್ಲ. ಆದರೆ ಹೀಗೆ ಜೈಲಿಗೆ ತಳ್ಳಲಾದ ವ್ಯಕ್ತಿಗಳ ಪೈಕಿ ಶೇಕಡ 3ರಷ್ಟು ಮಂದಿಯ ವಿರುದ್ಧದ ಆರೋಪಗಳು ಮಾತ್ರ ಸಾಬೀತಾಗಿರುವುದು ಪ್ರಧಾನಿಯವರ ಹೇಳಿಕೆಯು ಎಷ್ಟು ಟೊಳ್ಳು ಎಂಬುದನ್ನು ಹೇಳುತ್ತಿದೆ. ಬಂಧಿತ ವ್ಯಕ್ತಿಗಳೆಲ್ಲ ದೇಶದ ಭದ್ರತೆಗೆ ಅಪಾಯ ತಂದೊಡ್ಡುವವರಾಗಿದ್ದರೆ, 100ರಲ್ಲಿ 97 ಮಂದಿ ನಿರ್ದೋಷಿಗಳು ಎಂದು ನ್ಯಾಯಾಲಯಗಳು ಹೇಳುತ್ತಿರಲಿಲ್ಲ. ಅಂದರೆ, ವ್ಯವಸ್ಥೆಯನ್ನು ಬಲ‍ಪಡಿಸುವಲ್ಲಿ ಯುಎಪಿಎ ಪರಿಣಾಮಕಾರಿ ಆಗಿಲ್ಲ. ಆದರೆ ಅದು ಟೀಕಾಕಾರರಿಗೆ ಕಿರುಕುಳ ನೀಡಲು ಆಡಳಿತಾರೂಢ ಪಕ್ಷಕ್ಕೆ ನೆರವಾಗಿದೆ. ಹಲವಾರು ಸಾಮಾಜಿಕ ಕಾರ್ಯಕರ್ತರು, ಅಕಾಡೆಮಿಕ್ ವಲಯದವರು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರು ಕಾನೂನಿಗೆ ಬಲಿಪಶುಗಳಂತೆ ಆಗಿದ್ದಾರೆ. ಪತ್ರಕರ್ತ ಸಿದ್ದಿಕ್ ಕಪ್ಪನ್, ವಿದ್ಯಾರ್ಥಿ ಕಾರ್ಯಕರ್ತೆಯರಾದ ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್ ಅವರಂತಹ ಕೆಲವರಿಗೆ ಜಾಮೀನು ದೊರೆತಿದೆ (ಕಪ್ಪನ್ ಅವರು ಇನ್ನೊಂದು ಪ್ರಕರಣದಲ್ಲಿ ಇನ್ನೂ ಜೈಲಿನಲ್ಲಿದ್ದಾರೆ). ಇನ್ನೂ ಹಲವರು ಜೈಲಿನಲ್ಲಿದ್ದು ಜಾಮೀನು ಪಡೆಯಲು ಹೋರಾಟ ನಡೆಸಿದ್ದಾರೆ. ಕೆಲವರಿಗೆ ಕಾನೂನು ಹೋರಾಟ ನಡೆಸಲು ಆಗುವುದಿಲ್ಲ. ಕಾಯಿಲೆಗೆ ತುತ್ತಾಗಿದ್ದ ಸ್ಟ್ಯಾನ್ ಸ್ವಾಮಿ ಅವರು ಜಾಮೀನು ನಿರೀಕ್ಷಣೆಯಲ್ಲಿಯೇ ಜೈಲಿನಲ್ಲಿ ಮೃತಪಟ್ಟರು. ಯುಎಪಿಎ ಕಾನೂನು ಪ್ರಭುತ್ವವನ್ನು ಶಕ್ತಗೊಳಿಸುವುದಿಲ್ಲ. ಬದಲಿಗೆ ಅದು ಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಸಾಂವಿಧಾನಿಕ ತತ್ವಗಳನ್ನು ಆಧರಿಸಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಅದು ದುರ್ಬಲವಾಗಿಸುತ್ತದೆ. ‘ಕಾನೂನಿಗೆ ಅನುಗುಣವಾಗಿ ಅಲ್ಲದೆ ಬೇರೆ ಯಾವ ರೀತಿಯಿಂದಲೂ ಯಾವುದೇ ವ್ಯಕ್ತಿಗೆ ವೈಯಕ್ತಿಕ ಸ್ವಾತಂತ್ರ್ಯದ ನಿರಾಕರಣೆಗೆ ಅವಕಾಶವಿಲ್ಲ’ ಎಂದು ಸಂವಿಧಾನವು ತಾಕೀತು ಮಾಡುತ್ತದೆ. ಆದರೆ ಈ ಕಾಯ್ದೆಯು ಸ್ಪಷ್ಟವಾಗಿ ಗೋಚರಿಸುವ ರೀತಿಯಲ್ಲಿ ಅಪ್ರಜಾಸತ್ತಾತ್ಮಕ ಮಾರ್ಗ ಅನುಸರಿಸಿ ಸಂವಿಧಾನದ ಈ ಸೂಚನೆಯನ್ನು ಉಲ್ಲಂಘಿಸುತ್ತದೆ. ಪ್ರಜೆಗಳ ಹಕ್ಕುಗಳನ್ನು ಗೌರವಿಸುವ ಮೂಲಕ, ಪ್ರಜಾತಾಂತ್ರಿಕ ನಿಯಮಗಳಿಗೆ ಬದ್ಧವಾಗಿರುವ ಮೂಲಕ ಪ್ರಭುತ್ವವು ಹೆಚ್ಚು ಶಕ್ತಿಯುತವಾಗುತ್ತದೆ. ಟೀಕಾಕಾರರ ವಿರುದ್ಧ ದ್ವೇಷದಿಂದ ಕಠಿಣ ಕಾನೂನು ಪ್ರಯೋಗಿಸುವುದರಿಂದ ಪ್ರಭುತ್ವ ಬಲಗೊಳ್ಳುವುದಿಲ್ಲ. ನಾಗರಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಹಾಗೂ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಯುಎಪಿಎ ಕಾನೂನು ವಾಸ್ತವದಲ್ಲಿ ದೇಶಕ್ಕೆ ಅಪಾಯಕಾರಿ. ದೇಶದ ಭದ್ರತೆ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಈ ಕರಾಳ ಶಾಸನವನ್ನು ರದ್ದುಮಾಡಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.