ಸಂಪಾದಕೀಯ | ಗುಜರಾತ್‌ ಚುನಾವಣೆ: ದಿನಾಂಕ ಘೋಷಿಸದೇ ಇರಲು ಕಾರಣವೇನು? ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿ, ಗುಜರಾತ್ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಚುನಾವಣಾ ಆಯೋಗವು ಪ್ರಕಟಿಸದೇ ಇರುವುದು ಆಯೋಗದ ನಡೆಯ ಕುರಿತು ಹಲವು ಪ್ರಶ್ನೆಗಳು ಏಳುವಂತೆ ಮಾಡಿದೆ. ಹಿಮಾಚಲ ಪ್ರದೇಶದಲ್ಲಿ ನವೆಂಬರ್‌ 13ರಂದು ಮತದಾನ ನಡೆದು ಡಿಸೆಂಬರ್‌ 8ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್ ವಿಧಾನಸಭೆಗೂ ಕೆಲವೇ ವಾರಗಳಲ್ಲಿ ಚುನಾವಣೆ ನಡೆಯಬೇಕಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಅವಧಿಯು ಮುಂದಿನ ವರ್ಷ ಜನವರಿಯಲ್ಲಿ ಪೂರ್ಣಗೊಳ್ಳಲಿದೆ. ಗುಜರಾತ್‌ ವಿಧಾನಸಭೆಯ ಅವಧಿಯು ಫೆಬ್ರುವರಿಯಲ್ಲಿ ಕೊನೆಗೊಳ್ಳಲಿದೆ. ವಿಧಾನಸಭೆಗಳ ಅವಧಿಯು ಆರು ತಿಂಗಳೊಳಗೆ ಪೂರ್ಣಗೊಳ್ಳುವುದಿದ್ದರೆ ಮತದಾನದ ದಿನಾಂಕಗಳು ಬೇರೆ ಬೇರೆ ಇದ್ದರೂ ಚುನಾವಣೆಯ ವೇಳಾಪಟ್ಟಿಯನ್ನು ಒಟ್ಟಾಗಿಯೇ ಪ್ರಕಟಿಸುವ ಕ್ರಮವನ್ನು ಅನುಸರಿಸಿಕೊಂಡು ಬರಲಾಗಿದೆ. ಆದರೆ, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ಚುನಾವಣೆಯ ವಿಚಾರದಲ್ಲಿ ಈ ಕ್ರಮವನ್ನು ಅನುಸರಿಸಿಲ್ಲ ಏಕೆ? ಈ ಕ್ರಮವನ್ನು ಅನುಸರಿಸದೇ ಇರುವುದಕ್ಕೆ ಆಯೋಗವು ಕೊಟ್ಟ ಕಾರಣವು ತೃಪ್ತಿಕರ ಅಲ್ಲವೇ ಅಲ್ಲ. ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆಗೆ ಅವಧಿ ಪೂರ್ಣಗೊಳ್ಳುವುದರ ನಡುವೆ 40 ದಿನಗಳ ಅಂತರ ಇದೆ. ಹಾಗಾಗಿ, ಯಾವುದೇ ನಿಯಮವನ್ನು ಆಯೋಗವು ಉಲ್ಲಂಘಿಸಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಹೇಳಿದ್ದಾರೆ. ಒಂದು ರಾಜ್ಯದ ಫಲಿತಾಂಶವು ಇನ್ನೊಂದರ ಮೇಲೆ ಪರಿಣಾಮ ಬೀರದೇ ಇರಲು ಕನಿಷ್ಠ 30 ದಿನಗಳ ಅಂತರ ಇರಬೇಕು. ಇದೊಂದು ತಾಂತ್ರಿಕವಾದ ವಾದ ಮಾತ್ರ. ಉತ್ತರಪ್ರದೇಶ, ಪಂಜಾಬ್‌, ಗೋವಾ, ಮಣಿಪುರ ಮತ್ತು ಉತ್ತರಾಖಂಡ ಚುನಾವಣಾ ದಿನಾಂಕಗಳನ್ನು ಈ ವರ್ಷದ ಆರಂಭದಲ್ಲಿ ಒಮ್ಮೆಲೇ ಘೋಷಿಸಲಾಗಿತ್ತು. ಕೆಲವು ವಿಧಾನಸಭೆಗಳ ಅವಧಿ ಪೂರ್ಣಗೊಳ್ಳುವ ನಡುವಣ ಅಂತರವು 60 ದಿನಗಳಿದ್ದವು. ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ 2017ರಲ್ಲಿ ಚುನಾವಣೆ ನಡೆದಾಗಲೂ ಚುನಾವಣಾ ಆಯೋಗವು ಹೀಗೆಯೇ ಮಾಡಿ ಟೀಕೆಗೆ ಗುರಿಯಾಗಿತ್ತು. ಜನರಿಗೆ ಹೆಚ್ಚು ಕೊಡುಗೆಗಳನ್ನು ಪ್ರಕಟಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಗುಜರಾತ್ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿಲ್ಲ ಎಂಬ ಟೀಕೆ ಆಗ ಕೇಳಿಬಂದಿತ್ತು. ಚುನಾವಣಾ ಆಯೋಗವು ಈ ಬಾರಿ ನಡೆದುಕೊಂಡ ರೀತಿಗೂ ಇದೇ ಟೀಕೆ ಅನ್ವಯ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಹಲವು ಯೋಜನೆಗಳನ್ನು ಈಗಾಗಲೇ ಪ್ರಕಟಿಸಿದ್ದಾರೆ. ರಾಜ್ಯ ಸರ್ಕಾರವೂ ಹಲವು ಯೋಜನೆಗಳನ್ನು ಘೋಷಿಸಿದೆ. ಇನ್ನಷ್ಟು ಯೋಜನೆಗಳು ಮುಂದಿನ ದಿನಗಳಲ್ಲಿ ಘೋಷಣೆ ಆಗುವುದರಲ್ಲಿ ಅನುಮಾನವೇನೂ ಇಲ್ಲ. ಮತದಾನದ ದಿನಾಂಕ ಪ್ರಕಟವಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಹೊಸ ಯೋಜನೆಗಳನ್ನು ಘೋಷಿಸಲು ಅವಕಾಶ ಇರುವುದಿಲ್ಲ. ಮತದಾನ ನಡೆದು ಫಲಿತಾಂಶ ತಿಳಿಯಲು ಹಿಮಾಚಲ ಪ್ರದೇಶದ ಜನರು ಮೂರು ವಾರಗಳಿಗೂ ಹೆಚ್ಚು ಕಾಲ ಕಾಯಬೇಕು. ಇದು ಸಮಂಜಸ ಅಲ್ಲವೇ ಅಲ್ಲ. ಏಕೆಂದರೆ, ಇಷ್ಟು ದಿನಗಳ ಕಾಲ ಅಲ್ಲಿ ಸರ್ಕಾರವೇ ಇಲ್ಲದಂತಹ ಸ್ಥಿತಿ ನಿರ್ಮಾಣ ಆಗುತ್ತದೆ. ಗುಜರಾತ್‌ ಚುನಾವಣೆಯ ದಿನಾಂಕವನ್ನು ಪ್ರಕಟಿಸುವುದಕ್ಕೆ ಅವಕಾಶ ಬೇಕು ಎಂಬ ಕಾರಣಕ್ಕಾಗಿ ಹಿಮಾಚಲ ಪ್ರದೇಶದ ಮತದಾನ ಮತ್ತು ಮತ ಎಣಿಕೆ ನಡುವೆ ಮೂರು ವಾರಕ್ಕೂ ಹೆಚ್ಚು ಅಂತರ ಉಳಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ವಿಳಂಬಕ್ಕೆ ಬೇರೇನೂ ಕಾರಣ ಇಲ್ಲದಿರುವುದರಿಂದ ಇದು ನಿಜವೇ ಆಗಿರಬಹುದು. ಚುನಾವಣಾ ಆಯೋಗವು ಎಲ್ಲ ಪಕ್ಷಗಳನ್ನು ಸಮಾನವಾಗಿ ಕಾಣಬೇಕು ಮತ್ತು ಅದು ಎಲ್ಲರಿಗೂ ಮನವರಿಕೆಯೂ ಆಗುವಂತಿರಬೇಕು. ಆದರೆ, ಆಯೋಗದ ನಡೆಯನ್ನು ಗಮನಿಸಿದರೆ ಅದು ಬಿಜೆಪಿಯ ಪರವಾಗಿ ಇದ್ದಂತೆ ಕಾಣುತ್ತದೆ. ಇಂತಹ ನಡವಳಿಕೆಯು ಚುನಾವಣಾ ಆಯೋಗ ಮತ್ತು ಚುನಾವಣಾ ವ್ಯವಸ್ಥೆಯ ಬಗ್ಗೆ ಇರುವ ವಿಶ್ವಾಸಾರ್ಹತೆಯೇ ಕುಸಿಯುವಂತೆ ಮಾಡುತ್ತದೆ. ಇದಕ್ಕೆ ಸಂಬಂಧಿಸಿದ ಟೀಕೆಗಳಿಗೆ ಆಯೋಗದಿಂದ ಯಾವ ಸ್ಪಂದನವೂ ಬಂದಿಲ್ಲ. ತನ್ನ ನಡವಳಿಕೆಯನ್ನು ಸರಿಪಡಿಸಿಕೊಳ್ಳುವ ಯಾವ ಪ್ರಯತ್ನವನ್ನೂ ಆಯೋಗ ನಡೆಸಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.