ತವಾಂಗ್‌ನಲ್ಲಿ ಬಿಕ್ಕಟ್ಟು: ಚೀನಾಕ್ಕೆ ರವಾನೆಯಾಗಲಿ ಸ್ಪಷ್ಟ ಸಂದೇಶ ಚೀನಾ ಸೈನಿಕರು ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಇದೇ 9ರಂದು ಭಾರತದ ಗಡಿಯೊಳಕ್ಕೆ ನುಸುಳಲು ಮುಂದಾಗಿದ್ದು ಕಳವಳ ಮೂಡಿಸುವ ಸಂಗತಿ. ವಿವಾದಿತ ಗಡಿ ಪ್ರದೇಶದ ಪೂರ್ವ ಭಾಗದಲ್ಲಿ ಚೀನೀಯರು ಭಾರತದ ಜೊತೆ ಮತ್ತೊಂದು ತಗಾದೆ ತೆಗೆಯಲು ಯತ್ನಿಸುತ್ತಿರಬಹುದು ಎಂಬ ಸೂಚನೆಯನ್ನು ಇದು ನೀಡುತ್ತಿದೆ. ಚೀನಾ ಮತ್ತು ಭಾರತದ ನಡುವಿನ ಗಡಿ ಪ್ರದೇಶದ ಪಶ್ಚಿಮ ಭಾಗದಲ್ಲಿನ ಬಿಕ್ಕಟ್ಟು ಇನ್ನೂ ಶಮನಗೊಂಡಿಲ್ಲ. ಲಡಾಖ್‌ನಲ್ಲಿ ಸಂಘರ್ಷಕ್ಕೆ ಕಾರಣವಾದ ವಿಚಾರಗಳು ಇನ್ನೂ ಬಗೆಹರಿದಿಲ್ಲ. ಇಂತಹ ಸಂದರ್ಭದಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್ ಆರ್ಮಿ (ಪಿಎಲ್‌ಎ) ಸೈನಿಕರು ತೀರಾ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಪಿಎಲ್‌ಎ ಸೈನಿಕರು ಬಿಕ್ಕಟ್ಟನ್ನು ಪೂರ್ವ ಭಾಗಕ್ಕೂ ವಿಸ್ತರಿಸುವ ಪ್ರಯತ್ನ ನಡೆಸಿದ್ದಾರೆ. ಲಡಾಖ್‌ನಲ್ಲಿನ ಗಡಿಯ ವಿಚಾರವಾಗಿ ಭಾರತವು ತನ್ನ ನಿಲುವನ್ನು ಇನ್ನಷ್ಟು ಸಡಿಲಗೊಳಿಸಲು ಒತ್ತಡ ತರುವ ಉದ್ದೇಶದಿಂದ ಚೀನೀ ಸೈನಿಕರು ಒಳನುಸುಳಲು ಯತ್ನಿಸಿರುವ ಸಾಧ್ಯತೆ ಇದೆ. ಚೀನಾ ದೇಶವು ಅರುಣಾಚಲ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಏಕಪಕ್ಷೀಯವಾಗಿ ಯತ್ನಿಸುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಲೋಕಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ. ಡಿಸೆಂಬರ್‌ 9ರ ಘಟನೆಗೆ ಭಾರತವು ಬಲವಾದ ಪ್ರತಿಕ್ರಿಯೆಯನ್ನು ನೀಡಬೇಕಿದೆ. 2020ರಲ್ಲಿ ಗಾಲ್ವನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದ ನಂತರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಎಡವಟ್ಟು ಹೆಜ್ಜೆ ಇರಿಸಿತು. ಚೀನಾ ಸೈನಿಕರು ಭಾರತದ ಗಡಿಯೊಳಗೆ ಇದ್ದರು ಎಂಬುದನ್ನು ಮೋದಿ ಅವರು ರಾಷ್ಟ್ರೀಯ ವಾಹಿನಿಗಳ ಮೂಲಕ ನಿರಾಕರಿಸಿದರು. ಇದು ಮಾತುಕತೆಗಳ ಸಂದರ್ಭದಲ್ಲಿ ಚೀನೀಯರಿಗೆ ಇಂಬು ಕೊಟ್ಟಿತು. ಆಗಿನ ಈ ನಡೆಯು ಭಾರತವನ್ನು ಈಗಲೂ ಕಾಡುತ್ತಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ಈಚೆಗಿನ ನೆಲವನ್ನು (ಭಾರತದ ನೆಲ) ಚೀನಾ ಆಕ್ರಮಿಸಿಕೊಂಡಾಗ ಅದನ್ನು ನಿಭಾಯಿಸುವ ವಿಚಾರದಲ್ಲಿ ಭಾರತವು ದುರ್ಬಲ ಹೆಜ್ಜೆಗಳನ್ನು ಇರಿಸುತ್ತಿರುವಂತೆ ಕಂಡುಬಂತು. ಇದರಿಂದಾಗಿ ಚೀನೀಯರಿಗೆ ಹಟಮಾರಿ ಧೋರಣೆ ತಳೆಯಲು ಉತ್ತೇಜನ ಸಿಕ್ಕಿತು. ಈ ಬಾರಿ ಭಾರತವು ತವಾಂಗ್‌ನಲ್ಲಿ ಚೀನೀಯರ ಆಕ್ರಮಣಕಾರಿ ವರ್ತನೆಯನ್ನು ಬಹಿರಂಗಪಡಿಸಲು ಹಿಂದೆ ಮುಂದೆ ಆಲೋಚಿಸಬಾರದು. ಆದರೆ ಮೋದಿ ನೇತೃತ್ವದ ಸರ್ಕಾರವು ಹಿಂದಿನ ತಪ್ಪುಗಳನ್ನು ಮತ್ತೆ ಮಾಡುತ್ತಿರುವ ಸೂಚನೆಗಳು ಇವೆ. ಭಾರತದ ಕಡೆ ಪ್ರಾಣಹಾನಿ ಆಗಿಲ್ಲ, ಯಾರಿಗೂ ಗಂಭೀರ ಗಾಯಗಳು ಆಗಿಲ್ಲ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ. ಆದರೆ ಗಂಭೀರ ಗಾಯಗಳಾಗಿರಬಹುದು ಎಂದು ರಕ್ಷಣಾ ತಜ್ಞರು ಹೇಳುತ್ತಿದ್ದಾರೆ. ನಿರಾಕರಣೆಯ ಧೋರಣೆಯಿಂದ ಭಾರತಕ್ಕೆ ಬಿಕ್ಕಟ್ಟನ್ನು ಗಂಭೀರವಾಗಿ ನಿಭಾಯಿಸಲು ಆಗುವುದಿಲ್ಲ. ಸಿಂಗ್ ಅವರು ಲೋಕಸಭೆಯಲ್ಲಿ ನೀಡಿದ ಹೇಳಿಕೆಯು ಐದು ನಿಮಿಷಗಳಿಗೂ ಕಡಿಮೆ ಅವಧಿಯದ್ದಾಗಿತ್ತು. ಬಿಕ್ಕಟ್ಟಿನ ಬಗ್ಗೆ ಚರ್ಚೆ ಇರಲಿಲ್ಲ. ಸಂಘರ್ಷದ ಬಗ್ಗೆ ಚರ್ಚೆಯಾಗಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದರೂ ಅದಕ್ಕೆ ಅವಕಾಶ ಸಿಗಲಿಲ್ಲ. ಬಹುಕಾಲದಿಂದ ಉಳಿದುಕೊಂಡು ಬಂದಿರುವ ಗಡಿ ಸಮಸ್ಯೆ, ರಾಷ್ಟ್ರದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ನಿಭಾಯಿಸುವಾಗ ನೀಡುವ ಪ್ರತಿಕ್ರಿಯೆಗಳು ಗಟ್ಟಿಯಾಗಿರಬೇಕು. ಅದರಲ್ಲೂ ಬಲಿಷ್ಠ ನೆರೆ ರಾಷ್ಟ್ರದ ಜೊತೆ ವ್ಯವಹರಿಸುವಾಗ ಇಂತಹ ಪ್ರತಿಕ್ರಿಯೆಗಳು ಬೇಕು. ಇಂತಹ ಸಂದರ್ಭಗಳಲ್ಲಿ ತೀರ್ಮಾನಗಳನ್ನು ಬೆರಳೆಣಿಕೆಯಷ್ಟು ಮಂದಿ ರಾಜಕಾರಣಿಗಳು ಮಾತ್ರ ಕೈಗೊಳ್ಳಬಾರದು. ಎಲ್ಲ ಪಕ್ಷಗಳು, ಹಲವು ಸಂಸ್ಥೆಗಳ ತಜ್ಞರು ಇದರಲ್ಲಿ ಭಾಗಿಯಾಗಬೇಕು. ಚೀನಾಕ್ಕೆ ಸಂಬಂಧಿಸಿದ ನೀತಿಗಳನ್ನು ರೂಪಿಸುವಾಗ ವಿರೋಧ ಪಕ್ಷಗಳನ್ನು ಹೊರಗೆ ಇರಿಸುವ ಮೂಲಕ ಮೋದಿ ನೇತೃತ್ವದ ಸರ್ಕಾರವು ರಾಜಕೀಯ ಒಗ್ಗಟ್ಟಿನ ಪ್ರಯೋಜನ ದೇಶಕ್ಕೆ ಸಿಗದಂತೆ ಮಾಡುತ್ತಿದೆ. ಚೀನಾ ದೇಶವು ಆಕ್ರಮಣಕಾರಿ ಧೋರಣೆಯನ್ನು ತಳೆಯಲು ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿಯನ್ನು ಭಾರತ ಸೃಷ್ಟಿಸಬೇಕು. ಗಡಿಯಲ್ಲಿ ಭಾರತವನ್ನು ಮತ್ತೆ ಮತ್ತೆ ಕೆಣಕುವುದಕ್ಕೆ ತೆರಬೇಕಾಗುವ ಬೆಲೆ ದೊಡ್ಡದು ಎಂಬುದನ್ನು ಸರ್ಕಾರವು ತೋರಿಸಬೇಕು. ಲಡಾಖ್‌ನಲ್ಲಿ ನಿಯೋಜನೆಗೊಂಡಿರುವ ಭಾರತದ ಯೋಧರು ಈಗ ಸತತ ಮೂರನೆಯ ವರ್ಷವೂ ಕೊರೆಯುವ ಚಳಿಯಲ್ಲಿ ಅಲ್ಲಿರಬೇಕಾಗಿದೆ. ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.