ಸಂಪಾದಕೀಯ | ಸ್ಟ್ಯಾನ್‌ ಸ್ವಾಮಿ ಪ್ರಕರಣ: ಸಂಚಿನತ್ತ ಬೊಟ್ಟು ಮಾಡುವ ವರದಿ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಯಾಗಿದ್ದ, ಜೈಲಿನಲ್ಲಿಯೇ ಕಳೆದ ವರ್ಷ ಮೃತಪಟ್ಟ ಸ್ಟ್ಯಾನ್‌ ಸ್ವಾಮಿ ಅವರ ಲ್ಯಾಪ್‌ಟಾಪ್‌ನಲ್ಲಿ ಅವರನ್ನು ಸಿಲುಕಿಸಲು ಬೇಕಾಗಿದ್ದ ದಾಖಲೆಗಳನ್ನು ಸೇರಿಸಲಾಗಿತ್ತು ಎಂಬುದು ವರದಿಯಾಗಿದೆ. ಸ್ವಾಮಿ ಅವರ ಮೇಲೆ ಹುಸಿ ಪ್ರಕರಣ ದಾಖಲಿಸಲು ಸಂಚು ನಡೆದಿತ್ತು ಮತ್ತು ಅದರ ಯೋಜನೆ ಹಾಗೂ ಅನುಷ್ಠಾನ ಅತ್ಯುನ್ನತ ಮಟ್ಟದಲ್ಲಿಯೇ ಆಗಿತ್ತು ಎಂಬುದರತ್ತ ಈ ವರದಿಯು ಬೊಟ್ಟು ಮಾಡುತ್ತಿದೆ. ‘ಕುತಂತ್ರಾಂಶ ಬಳಸಿ ಲ್ಯಾಪ್‌ಟಾಪ್‌ಗಳಲ್ಲಿ ದಾಖಲೆಗಳನ್ನು ಸೇರಿಸುವ ಅಭಿಯಾನವು ಸುಮಾರು ಐದು ವರ್ಷ ನಡೆದಿದೆ. 2019ರ ಜೂನ್‌ನಲ್ಲಿ ಸ್ಟ್ಯಾನ್‌ ಸ್ವಾಮಿ ಅವರ ಲ್ಯಾಪ್‌ಟಾಪ್‌ ಅನ್ನು ಪೊಲೀಸರು ವಶಕ್ಕೆ ಪಡೆಯುವವರೆಗೂ ಇದು ನಡೆದಿದೆ’ ಎಂದು ಮೆಸಾಚುಸೆಟ್ಸ್‌ನ ಡಿಜಿಟಲ್‌ ವಿಧಿವಿಜ್ಞಾನ ಸಂಸ್ಥೆ ಆರ್ಸೆನಲ್‌ ಕನ್ಸಲ್ಟಿಂಗ್‌ನ ವಿಶ್ಲೇಷಣೆಯು ಬಹಿರಂಗಪಡಿಸಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ದಿನಪತ್ರಿಕೆಯ ವರದಿಯು ಹೇಳಿದೆ. ಆ ಅವಧಿಯಲ್ಲಿ ಹ್ಯಾಕರ್‌ ಒಬ್ಬ ಸ್ವಾಮಿ ಅವರ ಕಂಪ್ಯೂಟರ್‌ಗೆ ಹತ್ತಾರು ದಾಖಲೆಗಳನ್ನು ಸೇರಿಸಿದ್ದಾನೆ. ಇವು ಅಗೋಚರ ಫೋಲ್ಡರ್‌ನಲ್ಲಿ ಇದ್ದವು. ಹಾಗಾಗಿ, ಸ್ವಾಮಿ ಅವರ ಗಮನಕ್ಕೆ ಇವು ಬಂದೇ ಇರಲಿಲ್ಲ. 2020ರ ಅಕ್ಟೋಬರ್‌ 8ರಂದು ಸ್ವಾಮಿ ಅವರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿತು. ಸ್ವಾಮಿ ಅವರ ಕಂಪ್ಯೂಟರ್‌ನಲ್ಲಿ ಸಿಕ್ಕ ಕಡತಗಳನ್ನು ಅವರ ವಿರುದ್ಧದ ದಾಖಲೆಯಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಅದೇ ಪ್ರಕರಣದಲ್ಲಿ ಬಂಧಿತರಾಗಿರುವ ಇನ್ನಿಬ್ಬರ ಕಂಪ್ಯೂಟರ್‌ಗಳನ್ನು ಕೂಡ ಇದೇ ರೀತಿಯಲ್ಲಿ ಹ್ಯಾಕ್‌ ಮಾಡಲಾಗಿದೆ ಮತ್ತು ಅವರ ಕಂಪ್ಯೂಟರ್‌ಗಳಿಗೂ ಕಡತಗಳನ್ನು ಸೇರಿಸಲಾಗಿದೆ. ಪ್ರಾಧ್ಯಾಪಕರು, ವಕೀಲರು, ಸಾಮಾಜಿಕ ಹೋರಾಟಗಾರರು ಮತ್ತು ಪತ್ರಕರ್ತರು ಸೇರಿದಂತೆ ಸ್ವಾಮಿ ಹಾಗೂ ಇತರ 15 ಮಂದಿಯನ್ನು ಎಲ್ಗಾರ್‌ ಪರಿಷತ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅವರಲ್ಲಿ ಕೆಲವರು ಈಗಲೂ ಕಠೋರ ಕಾನೂನಿನ ಅಡಿ ಜೈಲಿನಲ್ಲಿ ಇದ್ದಾರೆ. ಸ್ವಾಮಿ ಅವರಿಗೆ 80ಕ್ಕೂ ಹೆಚ್ಚು ವರ್ಷ ವಯಸ್ಸಾಗಿತ್ತು ಮತ್ತು ಅವರಿಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳು ಇದ್ದವು. ಮೂಲಭೂತ ಸೌಲಭ್ಯಗಳು ಮತ್ತು ಅಗತ್ಯ ವೈದ್ಯಕೀಯ ಆರೈಕೆ ಸಿಗದೆ ಅವರು ಮೃತಪಟ್ಟರು. ಪದೇ ಪದೇ ಅವರು ಜಾಮೀನಿಗೆ ಅರ್ಜಿ ಹಾಕಿದ್ದರೂ ಅದನ್ನು ನಿರಾಕರಿಸಲಾಗಿತ್ತು. ಈಗ ಬಯಲಾದ ಅಂಶಗಳ ಆಧಾರದಲ್ಲಿ, ಅವರ ಸಾವನ್ನು ಕೊಲೆ ಎಂದೇ ಪರಿಗಣಿಸಬೇಕಾಗುತ್ತದೆ. ಆರ್ಸೆನಲ್‌ ಕನ್ಸಲ್ಟಿಂಗ್‌ನ ವರದಿಯು ಕಟ್ಟುಕತೆ ಅಥವಾ ದುರುದ್ದೇಶಪೂರಿತ ಎಂದು ಹೇಳಿ ತಳ್ಳಿಹಾಕುವುದು ಸುಲಭವಲ್ಲ. ಈ ಸಂಸ್ಥೆಯು ತನಿಖೆ ನಡೆಸಿ ಈ ವರದಿಯನ್ನು ಸಿದ್ಧಪಡಿಸಿದೆ. ಈ ಕ್ಷೇತ್ರದಲ್ಲಿ ಸಂಸ್ಥೆಗೆ ಪರಿಣತಿ ಇದೆ. ಜೊತೆಗೆ, ಈ ಸಂಸ್ಥೆಗೆ ಬೇರೆ ಹಿತಾಸಕ್ತಿ ಇದೆ ಎಂದೂ ಹೇಳಲಾಗದು. ಈ ಸಂಸ್ಥೆ ಮತ್ತು ಅದರ ವರದಿಯನ್ನು ಪ್ರಕಟಿಸಿದ ಪತ್ರಿಕೆಯು ಅತ್ಯುನ್ನತ ಮಟ್ಟದ ವಿಶ್ವಾಸಾರ್ಹತೆಯನ್ನು ಹೊಂದಿವೆ. ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯಲ್ಲಿ ಪ್ರಕಟವಾದ ವರದಿಯು ತಪ್ಪು ಎಂದು ಎನ್‌ಐಎ ಈವರೆಗೆ ಹೇಳಿಲ್ಲ. ಕಂಪ್ಯೂಟರ್‌ಗಳಿಗೆ ಕಡತಗಳನ್ನು ಸೇರಿಸಿದವರು ಯಾರು ಮತ್ತು ಅದಕ್ಕೆ ಆದೇಶ ಕೊಟ್ಟವರು ಯಾರು? ದೇಶದಲ್ಲಿ ಅತ್ಯಂತ ಭಯಾನಕವಾದ ಪರಿಸ್ಥಿತಿ ಇದೆ ಎಂಬುದನ್ನು ಈ ಪ್ರಕರಣವು ಎತ್ತಿ ತೋರಿಸುತ್ತದೆ. ಪ್ರಜೆಯೊಬ್ಬನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಹುದು, ಹುಸಿ ಪುರಾವೆಗಳನ್ನು ಅವನ ವಿರುದ್ಧ ಸೃಷ್ಟಿಸಬಹುದು, ಅನಿರ್ದಿಷ್ಟ ಅವಧಿಗೆ ಜೈಲಿಗೆ ತಳ್ಳಬಹುದು. ಆರೈಕೆ ಮತ್ತು ಚಿಕಿತ್ಸೆ ಸಿಗದೆ ವ್ಯಕ್ತಿಯು ಜೈಲಿನಲ್ಲಿಯೇ ಸಾಯಬಹುದು. ನ್ಯಾಯಾಲಯ ಕೂಡ ‌ಆ ವ್ಯಕ್ತಿಯ ನೆರವಿಗೆ ಬರುವುದು ಸಾಧ್ಯವಾಗಲಿಲ್ಲ. ಕಾನೂನಿನ ಆಳ್ವಿಕೆ ಇಲ್ಲದ, ಪ್ರಜೆಗಳಿಗೆ ಮೂಲಭೂತ ಸ್ವಾತಂತ್ರ್ಯ ಮತ್ತು ಹಕ್ಕುಗಳು ಇಲ್ಲದ ನಿರಂಕುಶ ವ್ಯವಸ್ಥೆ ಇರುವ ದೇಶಗಳಲ್ಲಿ ಮಾತ್ರ ಇಂತಹುದು ನಡೆಯಲು ಸಾಧ್ಯ. ಆರ್ಸೆನಲ್‌ ಕನ್ಸಲ್ಟಿಂಗ್‌ನ ವರದಿಯು ನಿಜವಾಗಿದ್ದರೆ, ಇಂತಹುದು ಭಾರತದಲ್ಲಿಯೂ ನಡೆಯಬಹುದು ಎಂಬುದನ್ನು ಸ್ಟ್ಯಾನ್‌ ಸ್ವಾಮಿ ಅವರ ಪ್ರಕರಣವು ತೋರಿಸಿಕೊಟ್ಟಿದೆ. ಸರ್ಕಾರವು ಸ್ವೇಚ್ಛೆ ಮತ್ತು ದುರುದ್ದೇಶದಿಂದ ಕೈಗೊಳ್ಳುವ ಕ್ರಮಗಳಿಂದ ಪೌರರಿಗೆ ಇರುವ ರಕ್ಷಣೆ ಏನು? ಮೂಲಭೂತ ಹಕ್ಕುಗಳಲ್ಲಿಯೇ ಅತ್ಯಂತ ಮುಖ್ಯವಾದ ಜೀವಿಸುವ ಹಕ್ಕನ್ನು ಸ್ಟ್ಯಾನ್‌ ಸ್ವಾಮಿ ಅವರಿಗೆ ನಿರಾಕರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.