ಸಂಪಾದಕೀಯ | ಆಶಾಭಾವ ಮೂಡಿಸುವ, ದ್ವೇಷ ಮರೆಸುವ ಹೊಸ ಭಾರತಕ್ಕಾಗಿ ಆಶಿಸೋಣವೇ? ವರ್ಷದ ಕೊನೆಯಲ್ಲಿ ನಿಂತು ಸಂದುಹೋದ ಇಡೀ ವರ್ಷವನ್ನು ಒಮ್ಮೆ ಅವಲೋಕಿಸಿದಾಗ, ಭಾರತದ ಮನಃಸ್ಥಿತಿಯಲ್ಲಿ ಆಗಿರುವ ಬದಲಾವಣೆಗಳ ವಿಚಾರವಾಗಿ ನಮಗೆ ಕಾಣುವುದು ಏನು? ಮುಂದಿನ ವರ್ಷದಲ್ಲಿ ನಾವು ನಿರೀಕ್ಷಿಸಬೇಕಾಗಿರುವುದು ಏನನ್ನು? ಜಗತ್ತು ಯಾವತ್ತೂ ಹೀಗೇ ಇರುತ್ತದೆ ಮತ್ತು ಅದು ಬದಲಾಗುವುದಿಲ್ಲ ಎಂಬ ವಿವೇಕವನ್ನು ತಲೆಮಾರುಗಳಿಂದ ದಾಟಿಸಲಾಗುತ್ತಿದೆ. ತಾತ್ವಿಕ ನೆಲೆಯಲ್ಲಿ ಈ ಮಾತು ಸರಿ ಆಗಿರಬಹುದು. ಅಥವಾ, ಮನುಷ್ಯನ ದೃಷ್ಟಿಯಿಂದ ದೀರ್ಘಾವಧಿಯಲ್ಲಿ ಜಗತ್ತು ಹೀಗೇ ಕಾಣಿಸಬಹುದು. ಆದರೆ, ಒಂದು ವರ್ಷದ ಕಿರು ಅವಧಿಯಲ್ಲಿಯೇ ದೇಶದ ಜನರ ಜೀವನದಲ್ಲಿ ಹಾಗೂ ಪರಿಸ್ಥಿತಿಗಳಲ್ಲಿ ಬದಲಾವಣೆಗಳು ಆಗಿರುವುದನ್ನು ಕಾಣಬಹುದು. ರಾಜಕೀಯ ಪಕ್ಷವೊಂದು ತಾನು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ಕಳೆದ ಎಂಟು ವರ್ಷಗಳಿಂದ ಎಲ್ಲವೂ ಒಳಿತಾಗಲು ಶುರುವಾಯಿತು ಎಂದು ಬಿಂಬಿಸತೊಡಗಿದೆ. ದೇಶವು ಈಗ ಹೊಸ ಇತಿಹಾಸವನ್ನು ಹೊಂದಿ ಹೊಸದೊಂದು ಯುಗದಲ್ಲಿದೆ. ಕಲ್ಪಿತ ಪ್ರಾಚೀನ ಕಾಲವು ಎಷ್ಟು ಸುಂದರವಾಗಿತ್ತೋ ದೇಶದ ಭವಿಷ್ಯವೂ ಅಷ್ಟೇ ಸುಂದರವಾಗಿರಲಿದೆ ಎಂದು ಅದು ಪ್ರತಿಪಾದಿಸುತ್ತಿದೆ. ಭಾರತವನ್ನು ಹಾಗೂ ಇಡೀ ವಿಶ್ವವನ್ನು ಸರಿಸುಮಾರು ಎರಡು ವರ್ಷಗಳ ಕಾಲ ಬೆದರಿಸಿದ ಒಂದು ವೈರಾಣುವಿನ ಪ್ರಭಾವ ಕಡಿಮೆಯಾಗುವುದರೊಂದಿಗೆ 2022 ಶುರುವಾಯಿತು. ಈಗ ವರ್ಷದ ಕೊನೆಯಲ್ಲಿ ಈ ವೈರಾಣು ಮತ್ತೆ ಸದ್ದು ಮಾಡತೊಡಗಿದೆ. ಕಾಲದ ಈ ಎರಡು ಬಿಂದುಗಳ ನಡುವೆ ಜನಜೀವನವು ಮನೆ ಗಳಲ್ಲಿ, ಕಚೇರಿಗಳಲ್ಲಿ, ಶಾಲೆಗಳಲ್ಲಿ, ಕೆಲಸ ಮಾಡುವ ಸ್ಥಳಗಳಲ್ಲಿ, ರಸ್ತೆಗಳಲ್ಲಿ, ಆಟದ ಮೈದಾನಗಳಲ್ಲಿ, ರಾಜಕೀಯದಲ್ಲಿ, ಕ್ರೀಡೆಗಳಲ್ಲಿ, ಸಮಾಜದಲ್ಲಿ ಬಹುತೇಕ ಸಹಜ ಸ್ಥಿತಿಗೆ ಮರಳಿತು. ಆದರೆ ಅದು ‘ಹೊಸ ಸಹಜ ಸ್ಥಿತಿ’. ವರ್ಷದುದ್ದಕ್ಕೂ ಒಳ್ಳೆಯದು ಮತ್ತು ಕೆಟ್ಟದ್ದು, ತಪ್ಪು ಮತ್ತು ಸರಿ, ಸ್ವೀಕಾರಾರ್ಹವಾಗಿದ್ದು ಹಾಗೂ ಸ್ವೀಕಾರಾರ್ಹವಲ್ಲದ್ದು ಇದ್ದವು. ದೇಶದ ಒಟ್ಟು ಚಟುವಟಿಕೆಗಳಲ್ಲಿ ರಾಜಕೀಯವು ಹೆಚ್ಚಿನ ಪ್ರಭಾವ ಬೀರಿತು. ಈಚಿನ ವರ್ಷಗಳಲ್ಲಿ ರಾಜಕೀಯವು ಜನಜೀವನದ ಹೆಚ್ಚೆಚ್ಚು ಕ್ಷೇತ್ರಗಳ ಮೇಲೆ ತನ್ನ ಹಿಡಿತವನ್ನು ಸಾಧಿಸುತ್ತಿದೆ. ರಾಜಕೀಯವು ಚುನಾವಣೆಗಳ ರೂಪದಲ್ಲಿ ಕಾಣಿಸುತ್ತದೆ. ಹಲವು ರಾಜ್ಯಗಳಲ್ಲಿ ನಡೆದ ಪ್ರಮುಖ ಚುನಾವಣೆಗಳಲ್ಲಿ ದೇಶದ ಪ್ರಧಾನ ರಾಜಕೀಯ ಪಕ್ಷ ಬಿಜೆಪಿ ತನ್ನ ಪ್ರಾಬಲ್ಯವನ್ನು ಮತ್ತೆ ತೋರಿಸಿತು. ಈ ಪಕ್ಷವು ಮಹಾರಾಷ್ಟ್ರ ರಾಜ್ಯದಲ್ಲಿ ಅಲ್ಲಿನ ಸರ್ಕಾರವನ್ನು ತೀರಾ ಪ್ರಶ್ನಾರ್ಹವಾದ ವಿಧಾನದ ಮೂಲಕ ಉರುಳಿಸಿ, ತಾನು ಅಧಿಕಾರ ಹಿಡಿಯಿತು. ಈ ಪಕ್ಷವು ಈ ಮಾದರಿಯಲ್ಲಿ ಬೇರೆ ರಾಜ್ಯಗಳಲ್ಲಿಯೂ ಹಿಂದೆ ಅಧಿಕಾರ ಹಿಡಿದ ನಿದರ್ಶನಗಳು ಇವೆ. ಬಿಹಾರ ರಾಜ್ಯದಲ್ಲಿ ಅಧಿಕಾರ ಹಂಚಿಕೊಂಡಿದ್ದ ಈ ಪಕ್ಷವು, ಅಧಿಕಾರ ಕಳೆದುಕೊಂಡಿತು. ಗತ ಇತಿಹಾಸದ ಪಕ್ಷ ಎಂದು ಕರೆಸಿಕೊಂಡಿದ್ದ ಕಾಂಗ್ರೆಸ್ ರಾಜ್ಯವೊಂದರಲ್ಲಿ ಮತ್ತೆ ಅಧಿಕಾರ ಹಿಡಿದು ತಾನು ಇನ್ನೂ ಇದ್ದೇನೆ ಎಂಬುದನ್ನು ತೋರಿಸಿಕೊಟ್ಟಿತು. ದೇಶದ ರಾಜಕೀಯ ಭೂಪಟದಲ್ಲಿ ಆಮ್‌ ಆದ್ಮಿ ಪಕ್ಷವು (ಎಎಪಿ) ಪ್ರವರ್ಧಮಾನಕ್ಕೆ ಬಂತು. ರಾಷ್ಟ್ರ ರಾಜಧಾನಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡು, ನೆರೆಯ ಪಂಜಾಬ್‌ ರಾಜ್ಯದಲ್ಲಿ ಗೆಲುವು ಸಾಧಿಸಿತು. ಗುಜರಾತ್‌ ರಾಜ್ಯದಲ್ಲಿ ತನ್ನ ಇರುವಿಕೆಯನ್ನು ತೋರಿಸಿತು. ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಪಕ್ಷಗಳು ಚುನಾವಣೆಯನ್ನು ಗೆಲ್ಲುತ್ತವೆ, ಸೋಲುತ್ತವೆ. ಉತ್ತುಂಗವನ್ನು ತಲುಪುತ್ತವೆ, ಕೆಳಕ್ಕೆ ಇಳಿಯುತ್ತವೆ. ಹುಟ್ಟಿಕೊಳ್ಳುತ್ತವೆ ಹಾಗೂ ಮಾಯವಾಗುತ್ತವೆ. ಆದರೆ ರಾಜಕೀಯ ಪಕ್ಷಗಳು ‍ಪ್ರಜಾತಂತ್ರ ವ್ಯವಸ್ಥೆಯ ಚೈತನ್ಯವನ್ನು, ಪ್ರಜಾತಾಂತ್ರಿಕ ಆಚರಣೆಗಳನ್ನು ಇನ್ನಷ್ಟು ವ್ಯಾಪಕವಾಗಿಸುತ್ತವೆ, ಮತ್ತಷ್ಟು ಆಳವಾಗಿಸುತ್ತವೆ. ಆದರೆ, ಈಚಿನ ವರ್ಷಗಳಲ್ಲಿ ದೇಶದಲ್ಲಿ ಹೆಚ್ಚೆಚ್ಚು ಬಲ ಪಡೆಯುತ್ತಿರುವ ರಾಜಕೀಯವು, ಪ್ರಜಾತಂತ್ರದ ವಿಸ್ತರಣೆಯನ್ನು ಕಾಣುತ್ತಿಲ್ಲ. ಬದಲಿಗೆ, ಇದರಿಂದಾಗಿ ಪ್ರಜಾತಂತ್ರ ಕುಗ್ಗುತ್ತಿದೆ. ಈ ಮಾತಿಗೆ 2022ನೆಯ ಇಸವಿ ಕೂಡ ಹೊರತಾಗಿ ಇರಲಿಲ್ಲ. ಪ್ರಜೆಗಳಿಗೆ ನೀಡಲಾಗಿರುವ ಹಕ್ಕುಗಳು ಹಾಗೂ ಆ ಹಕ್ಕುಗಳನ್ನು ರಕ್ಷಿಸಲು ಪ್ರಭುತ್ವಕ್ಕೆ ಇರುವ ಶಕ್ತಿ ಮತ್ತು ರಕ್ಷಿಸುವ ಮನಃಸ್ಥಿತಿಯ ಆಧಾರದಲ್ಲಿ ಯಾವುದೇ ಪ್ರಜಾತಂತ್ರ ಎಷ್ಟು ಚೆನ್ನಾಗಿದೆ ಎಂದು ಅಳೆಯಲಾಗುತ್ತದೆ. ವಿಶ್ವದ ಅತ್ಯುತ್ತಮ ಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಇರುವಂತೆಯೇ, ಭಾರತದ ಸಂವಿಧಾನವು ತನ್ನ ಪ್ರಜೆಗಳಿಗೆ ಜೀವಿಸುವ ಹಕ್ಕು, ಮುಕ್ತ ಅಭಿವ್ಯಕ್ತಿಯ ಹಕ್ಕು, ತಾನು ಬಯಸುವ ಆಹಾರ ಸೇವಿಸುವ ಹಾಗೂ ತಾನು ಬಯಸಿದ ರೀತಿಯಲ್ಲಿ ಉಡುಗೆ ತೊಡುವ ಹಕ್ಕುಗಳನ್ನು ನೀಡಿದೆ. ಮನುಷ್ಯನ ಜೀವನವನ್ನು ಅರ್ಥಪೂರ್ಣವಾಗಿಸಲು ಹಾಗೂ ಪರಿಪೂರ್ಣವಾಗಿಸಲು ಬೇಕಿರುವ ಇತರ ಹಕ್ಕುಗಳನ್ನೂ ಸಂವಿಧಾನ ನೀಡಿದೆ. ಈ ಹಕ್ಕುಗಳು ಅಪಾಯಕ್ಕೆ ಸಿಲುಕುವುದು ಹೆಚ್ಚುತ್ತಿದೆ. 2022ನೆಯ ಇಸವಿಯು ಈ ಹಕ್ಕುಗಳ ಮೇಲೆ ಇನ್ನಷ್ಟು ಒತ್ತಡಗಳು ಸೃಷ್ಟಿಯಾಗಿದ್ದಕ್ಕೆ ಹಾಗೂ ಹಕ್ಕುಗಳಿಗೆ ಇನ್ನಷ್ಟು ಅಪಾಯಗಳು ಎದುರಾಗಿದ್ದಕ್ಕೆ ಸಾಕ್ಷಿಯಾಯಿತು. ಕೃತಕ ಸಂದರ್ಭವನ್ನು ಸೃಷ್ಟಿಸಿ, ಮೇಲ್ನೋಟಕ್ಕೆ ಸರಿಯೆಂಬಂತೆ ಕಂಡರೂ ವಾಸ್ತವದಲ್ಲಿ ತಪ್ಪಾಗಿರುವ ನೆಲೆಗಳನ್ನು ಬಳಸಿ ಮೂಲಭೂತ ಹಕ್ಕುಗಳನ್ನು ಹೇಗೆ ಹತ್ತಿಕ್ಕಬಹುದು ಎಂಬುದನ್ನು 2022ರ ಫೆಬ್ರುವರಿಯಲ್ಲಿ ರಾಜ್ಯದಲ್ಲಿ ಭುಗಿಲೆದ್ದ ಹಿಜಾಬ್ ವಿವಾದವು ತೋರಿಸಿಕೊಟ್ಟಿತು. ವಾಸ್ತವದಲ್ಲಿ ಇಲ್ಲಿ ದಾಳಿಗೆ ಗುರಿಯಾಗಿದ್ದು ‘ಹಕ್ಕು’ ಅಲ್ಲ. ಬದಲಿಗೆ, ಆ ಹಕ್ಕನ್ನು ಪ್ರತಿಪಾದಿಸಲು ಮುಂದಾದ ವ್ಯಕ್ತಿಗಳು ದಾಳಿಗೆ ಗುರಿಯಾದರು. ಈ ವಿವಾದದ ಕುರಿತು ಅಂತಿಮ ತೀರ್ಮಾನವನ್ನು ನ್ಯಾಯಾಂಗ ಪ್ರಕಟಿಸಬೇಕಿದೆ, ಅದು ಎಲ್ಲ ಪ್ರಜೆಗಳ ಹಕ್ಕುಗಳನ್ನು ಹಾಗೂ ಸಂವಿಧಾನವನ್ನು ರಕ್ಷಿಸಬೇಕಿದೆ. ಆಹಾರದ ಹಕ್ಕಿಗೆ, ಪೂಜಿಸುವ ವಿಧಾನದ ಮೇಲೆ ಹಾಗೂ ಪೂಜಾ ಸ್ಥಳಗಳಿಗೆ ಬೆದರಿಕೆ ಎದುರಾಗಿದೆ. ನ್ಯಾಯಾಂಗದ ಸಾಧನೆ ಕೂಡ ಪರಿಶೀಲನೆಗೆ ಒಳಗಾಗಿದೆ. ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ ಈ ವರ್ಷದಲ್ಲಿ ಒಟ್ಟು ಮೂವರು ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಕಂಡಿದೆ. ವೈಯಕ್ತಿಕ ಸ್ವಾತಂತ್ರ್ಯದ ಮಹತ್ವವನ್ನು ಸಾರುವ ತೀರ್ಪುಗಳು ಕೋರ್ಟ್‌ನಿಂದ ಬಂದಿವೆ. ತನ್ನಲ್ಲಿ ಹಲವು ವರ್ಷಗಳಿಂದ ವಿಚಾರಣೆಯ ಹಂತದಲ್ಲಿಯೇ ಇದ್ದ ಕೆಲವು ಪ್ರಮುಖ ಪ್ರಕರಣಗಳನ್ನು ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ ವಿಚಾರಣೆಗೆ ಕೈಗೆತ್ತಿಕೊಂಡಿತು. ಇದು ಸ್ವಾಗತಾರ್ಹವಾಗಿತ್ತು. ಹಲವು ಪ್ರಕರಣಗಳಲ್ಲಿ ತೀರ್ಪು ಇನ್ನೂ ಬಂದಿಲ್ಲ. ಕೋರ್ಟ್‌ ತನ್ನ ತೀರ್ಪು ನೀಡಿದ ಒಂದು ಮಹತ್ವದ ಪ್ರಕರಣದಲ್ಲಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲ್ಯುಎಸ್‌) ಶೇಕಡ 10ರಷ್ಟು ಮೀಸಲಾತಿ ಕಲ್ಪಿಸುವ ಸರ್ಕಾರದ ಕ್ರಮವನ್ನು ಎತ್ತಿಹಿಡಿಯಿತು. ಈ ತೀರ್ಪು, ಈಗಾಗಲೇ ಜಾರಿಯಲ್ಲಿ ಇರುವ ಮೀಸಲಾತಿ ವ್ಯವಸ್ಥೆಯ ಮೇಲೆ ಹೊಸ ಮೀಸಲಾತಿ ವ್ಯವಸ್ಥೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿತು. ಈಗ ನ್ಯಾಯಮೂರ್ತಿಗಳ ನೇಮಕಕ್ಕೆ ಜಾರಿಯಲ್ಲಿ ಇರುವ ಕೊಲಿಜಿಯಂ ವ್ಯವಸ್ಥೆಯ ವಿಚಾರವಾಗಿ ಕೇಂದ್ರ ಸರ್ಕಾರದಿಂದ ಸ್ವತಃ ಸುಪ್ರೀಂ ಕೋರ್ಟ್‌ ಒತ್ತಡ ಎದುರಿಸುತ್ತಿದೆ. ನ್ಯಾಯಾಂಗ ಹಾಗೂ ಕಾರ್ಯಾಂಗದ ನಡುವೆ ಸಂಘರ್ಷ ಸೃಷ್ಟಿಯಾಗುವ ಸಾಧ್ಯತೆಯೂ ಇದೆ. 2022, ಕೇಂದ್ರದ ತನಿಖಾ ಸಂಸ್ಥೆಗಳ– ಜಾರಿ ನಿರ್ದೇಶನಾಲಯ (ಇ.ಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಇತ್ಯಾದಿ – ವರ್ಷವೂ ಹೌದು. ಈ ತನಿಖಾ ಸಂಸ್ಥೆಗಳು ವಿರೋಧ ಪಕ್ಷಗಳ ನಾಯಕರ ಬಗ್ಗೆ, ಸರ್ಕಾರದ ವಿರೋಧಿಗಳು ಹಾಗೂ ಟೀಕಾಕಾರರ ಬಗ್ಗೆ ಹೆಚ್ಚಿನ ಗಮನ ಹರಿಸಿದವು. ಹಲವರನ್ನು ಬಂಧಿಸಲಾಯಿತು. ಸಾಮಾನ್ಯ ಸಂದರ್ಭಗಳಲ್ಲಿ ಜಾಮೀನು ಕೊಡಬೇಕು, ಜಾಮೀನು ನಿರಾಕರಣೆಯು ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಇರಬೇಕು ಎಂಬ ಮಾತು ಇದೆಯಾದರೂ, ಬಂಧಿತರಾದವರಲ್ಲಿ ಬಹುತೇಕರು ಜಾಮೀನು ಪಡೆದು ಹೊರಬರಲು ಕಷ್ಟಪಟ್ಟರು. ಆಡಳಿತದ ಹೊಣೆ ಹೊತ್ತಿರುವ ಸಂಸ್ಥೆಗಳು ಹಾಗೂ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು ಕೂಡ ಒತ್ತಡ ಎದುರಿಸುತ್ತಿವೆ, ಅದೇ ರೀತಿಯಲ್ಲಿ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಗೂ ಒತ್ತಡ ಎದುರಾಗಿದೆ. ಕಾರ್ಯಾಂಗವು ಒಬ್ಬ ನಾಯಕನ ಸಂಪೂರ್ಣ ನಿಯಂತ್ರಣಕ್ಕೆ ಸಿಲುಕಿದೆ. 2022ರಲ್ಲಿ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿತು. ಆದರೆ, ತುರ್ತು ಪರಿಸ್ಥಿತಿಯ ಸಂದರ್ಭವನ್ನು ಹೊರತುಪಡಿಸಿದರೆ ಬೇರೆ ಯಾವ ಸಂದರ್ಭ ದಲ್ಲಿಯೂ ದೇಶದಲ್ಲಿ ಸ್ವಾತಂತ್ರ್ಯದ ಪರಿಕಲ್ಪನೆಯು ಈಗಿನಷ್ಟು ಒತ್ತಡಕ್ಕೆ, ಸಂಕಟಕ್ಕೆ ಸಿಲುಕಿರಲಿಲ್ಲ. ಬಹುಸಂಖ್ಯಾತವಾದಿ ಭಾವನೆಗಳು ಹೆಚ್ಚುತ್ತಿವೆ, ಅವು ವಿಸ್ತರಣೆ ಕಾಣುತ್ತಿವೆ. ಅವುಗಳಿಗೆ ಸರ್ಕಾರಗಳಿಂದ ಬೆಂಬಲ ಕೂಡ ಸಿಗುತ್ತಿದೆ. ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ವೈಯಕ್ತಿಕ ನೆಲೆಯಲ್ಲಿಯೂ, ಸಾಮುದಾಯಿಕ ನೆಲೆಯಲ್ಲಿಯೂ ದಾಳಿಗಳು ನಡೆಯುತ್ತಿವೆ. ಅವರನ್ನು ಮುಖ್ಯವಾಹಿನಿಯಿಂದ ಹೊರಗಿಡಲಾಗುತ್ತಿದೆ. ದ್ವೇಷ ಭಾಷಣಗಳು ಎಗ್ಗಿಲ್ಲದೆ ನಡೆಯುತ್ತಿವೆ. ಜನಾಂಗೀಯ ಹತ್ಯಾಕಾಂಡಕ್ಕೆ ಕರೆ ನೀಡುವ ಮಾತುಗಳನ್ನೂ ಕೆಲವರು ಆಡಿದ್ದಾರೆ. ತಾರತಮ್ಯದ ಕೃತ್ಯಗಳಿಗೆ ಹೊಸ ಹೆಸರುಗಳು, ನಾಜೂಕಿನ ನುಡಿಗಟ್ಟುಗಳು ಸಿಗುತ್ತಿವೆ. ತಾರತಮ್ಯವನ್ನು ಸಮರ್ಥಿಸಿಕೊಳ್ಳಲು ನ್ಯಾಯಸಮ್ಮತವಲ್ಲದ ನೆಲೆಗಳ ಮೊರೆ ಹೋಗಲಾಗಿದೆ. ಪೂರ್ವಗ್ರಹಗಳು ವ್ಯಾಪಕವಾಗಿವೆ, ಮುಸ್ಲಿಂ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಕರೆಯಲಾಗಿದೆ, ದ್ವೇಷ ಭಾಷಣವು ಚಾಕುವಿನಂತಾಗಿದೆ, ಹಗೆಯು ಬುಲ್ಡೋಜರ್‌ನ ರೂಪ ತಾಳಿ ಮನೆ ಗಳನ್ನು ಧ್ವಂಸಗೊಳಿಸುತ್ತಿದೆ. ಈ ವರ್ಷದಲ್ಲಿ ದೇಶದ ಅರ್ಥವ್ಯವಸ್ಥೆಯು ಇತರ ಪ್ರಮುಖ ಅರ್ಥವ್ಯವಸ್ಥೆಗಳಿಗಿಂತ ಹೆಚ್ಚು ಉತ್ತಮ ವಾಗಿತ್ತು. ಆದರೆ, ನಿರುದ್ಯೋಗದ ಪ್ರಮಾಣ ಜಾಸ್ತಿಯಾಗಿದ್ದುದು ಹಾಗೂ ಹಣದುಬ್ಬರವು ಮಿತಿ ಮೀರಿದ್ದು ಎಲ್ಲರಿಗೂ ತೊಂದರೆ ಉಂಟುಮಾಡಿತು. ಅದರಲ್ಲೂ ಮುಖ್ಯವಾಗಿ, ದುರ್ಬಲ ವರ್ಗಗಳಿಗೆ ಸೇರಿದವರು ಹಾಗೂ ಕೂಲಿ ಕಾರ್ಮಿಕರು ಹೆಚ್ಚು ಕಷ್ಟ ಅನುಭವಿಸಿದರು. ಆರ್ಥಿಕತೆಯ ಮುನ್ನೋಟದಲ್ಲಿ ಅನಿಶ್ಚಿತತೆ ಕಾಣುತ್ತಿದೆ. ಏಕೆಂದರೆ, ವೈರಾಣು ಮತ್ತೆ ದಾಳಿ ನಡೆಸುವ ಹವಣಿಕೆಯಲ್ಲಿದೆ. ಯುರೋಪಿನಲ್ಲಿ ನಡೆದಿರುವ ಯುದ್ಧವು ಪರಿಣಾಮ ಉಂಟುಮಾಡಲಿದೆ. ಇವೆಲ್ಲ ಏನೇ ಇದ್ದರೂ, ಮನುಷ್ಯನ ಸ್ವಭಾವವು ಉತ್ತಮ ಜಗತ್ತಿಗಾಗಿ ಹಾತೊರೆಯುತ್ತದೆ. ಹೊಸ ವರ್ಷ ಬಂದಾಗ, ಅದು ಉತ್ತಮ ವರ್ಷವೂ ಆಗಿರುತ್ತದೆ ಎಂಬ ಆಶಾಭಾವ ಇರಬೇಕು. ಬಹುಶಃ ಮನೆಯ ಬಾಗಿಲಿನಲ್ಲಿ ನಿಂತಿರಬಹುದಾದ ವೈರಾಣುವಿನ ವಿರುದ್ಧದ ಹೋರಾಟಕ್ಕೆ ನಾವು ಸಿದ್ಧರಾಗಬೇಕು, ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ನಾವು ಈ ವೈರಾಣುವಿನ ವಿರುದ್ಧ ನಡೆಸಿದ ಹೋರಾಟದಲ್ಲಿ ಗಳಿಸಿದ ಅನುಭವವು ನೆರವಿಗೆ ಬರಬೇಕು. ಆದರೆ ನಾವು ಮನಸ್ಸುಗಳಲ್ಲಿ ವಿಕಾಸ ಹೊಂದುತ್ತಿರುವ ಇನ್ನೂ ಹೆಚ್ಚು ಅಪಾಯಕಾರಿಯಾದ ವೈರಾಣುವಿನ ವಿರುದ್ಧವೂ ಹೋರಾಡಬೇಕು. ಈ ವೈರಾಣು ಇನ್ನಷ್ಟು ಹೊಸ ರೂಪಾಂತರಗಳನ್ನು ಕಾಣುತ್ತಿದೆ, ದೇಶದ ರಾಜಕಾರಣ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಹಾಳಾದ ಅರ್ಥ ವ್ಯವಸ್ಥೆಗಳನ್ನು ರಿಪೇರಿ ಮಾಡಬಹುದು, ಅವುಗಳನ್ನು ಸುಧಾರಿಸಬಹುದು. ಆದರೆ, ದ್ವೇಷದ ಹಾಗೂ ಸಂಘರ್ಷದ ವೈರಾಣುವಿನಿಂದ ಹಾನಿಗೆ ಒಳಗಾಗಿರುವ ಸಮಾಜಗಳನ್ನು ಸರಿಪಡಿಸಲು ಬಹುದೀರ್ಘ ಸಮಯ ಬೇಕು, ಹೆಚ್ಚಿನ ಪ್ರಯತ್ನವೂ ಬೇಕು. ನಾವು ಈ ವೈರಾಣುವಿನಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.