ಸಂಪಾದಕೀಯ:ಅದಾನಿ ಪ್ರಕರಣ- ಸರ್ಕಾರದ ಮೇಲಿನ ಆರೋಪಗಳಿಗೆ ಪ್ರಧಾನಿ ಉತ್ತರಿಸಬೇಕಿತ್ತು ರಾಷ್ಟ್ರಪತಿಯವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಬುಧವಾರ ಮತ್ತು ರಾಜ್ಯಸಭೆಯಲ್ಲಿ ಗುರುವಾರ ಉತ್ತರ ನೀಡಿದ್ದಾರೆ. ಈ ಭಾಷಣದಲ್ಲಿ ಅವರು ಏನನ್ನು ಹೇಳಿಲ್ಲ ಎಂಬುದೇ ಈ ಭಾಷಣದ ಅತ್ಯಂತ ಗಮನಾರ್ಹವಾದ ಅಂಶ. ಅಕ್ರಮಗಳನ್ನು ಎಸಗಿದೆ ಎಂಬ ಆರೋಪ ಹೊತ್ತಿರುವ ಗುಜರಾತ್‌ನ ಅದಾನಿ ಸಮೂಹಕ್ಕೆ ಪ್ರಧಾನಿ ಮತ್ತು ಅವರ ನೇತೃತ್ವದ ಸರ್ಕಾರವು ನ್ಯಾಯೋಚಿತವಲ್ಲದ ರೀತಿಯಲ್ಲಿ ಹಲವು ಅನುಕೂಲಗಳನ್ನು ಮಾಡಿಕೊಟ್ಟಿದೆ ಎಂಬ ಆರೋಪಕ್ಕೆ ಪ್ರಧಾನಿ ಉತ್ತರ ನೀಡಬಹುದು ಎಂಬ ನಿರೀಕ್ಷೆ ಇತ್ತು. ವಿರೋಧ ಪಕ್ಷಗಳ ಸದಸ್ಯರು, ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಅವರು ಈ ವಿಚಾರವನ್ನು ಸಂಸತ್ತಿನಲ್ಲಿ ಎತ್ತಿದ್ದರು. ಪ್ರಧಾನಿಯವರು ಈ ವಿಚಾರವನ್ನು ಪ್ರಸ್ತಾಪಿಸಲೇ ಇಲ್ಲ. ಬದಲಿಗೆ, ಜನರ ವಿಶ್ವಾಸದ ರಕ್ಷಾಕವಚ ಇರುವುದರಿಂದ ‘ವಿರೋಧ ಪಕ್ಷಗಳ ಸುಳ್ಳುಗಳು ಮತ್ತು ನಿಂದನೆಗಳು’ ತಮ್ಮನ್ನು ಬಾಧಿಸವು ಎಂದು ಹೇಳಿದರು. ಸರ್ಕಾರವು ಜನರಿಗಾಗಿ ರೂಪಿಸಿದ ಉಚಿತ ಆಹಾರಧಾನ್ಯ, ರೈತರಿಗೆ ಆರ್ಥಿಕ ನೆರವು ಮತ್ತು ಇತರ ಉಚಿತ ಕೊಡುಗೆಗಳಂತಹ ಜನಕಲ್ಯಾಣದ ಹಲವು ಯೋಜನೆಗಳಿಂದಾಗಿ ತಾವು ಈ ರಕ್ಷಾಕವಚವನ್ನು ಗಳಿಸಿಕೊಂಡಿದ್ದಾಗಿಯೂ ಮೋದಿ ಹೇಳಿದ್ದಾರೆ. ಜನಪ್ರಿಯತೆ ಇದೆ ಎಂಬುದನ್ನು ಆಧಾರವಾಗಿ ಇರಿಸಿಕೊಂಡು ರಾಜಕಾರಣಿಗೆ ಪ್ರಜಾಸತ್ತಾತ್ಮಕ ಉತ್ತರದಾಯಿತ್ವ ಮತ್ತು ಪ್ರಾಮಾಣಿಕತೆ ಇದೆ ಎಂದು ಹೇಳಲಾಗದು. ಸರ್ಕಾರದ ಯೋಜನೆಗಳಿಂದಾಗಿ ಪ್ರಧಾನಿಯು ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ ಎಂಬ ಕಾರಣವನ್ನು ಮುಂದೊಡ್ಡಿ ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿರಾಕರಿಸುವುದು ಸರಿಯಲ್ಲ. ಅದಾನಿ ಪ್ರಕರಣದ ಕುರಿತು ಎತ್ತಲಾದ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ವಿರೋಧ ಪಕ್ಷಗಳನ್ನು ಟೀಕಿಸಿದರು ಮತ್ತು ಈ ಹಿಂದೆ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವೈಫಲ್ಯಗಳ ಕುರಿತು ವಾಗ್ದಾಳಿ ನಡೆಸಿದರು. ಹೀಗೆ ನಡೆಸಿದ ವಾಗ್ದಾಳಿಯಿಂದಾಗಿ ಸರ್ಕಾರದ ಮೇಲೆ ಹೊರಿಸಲಾದ ಆರೋಪಗಳು ಮರೆಯಾಗುವುದಿಲ್ಲ. ಆದಾನಿ ಸಮೂಹವು ಪ್ರಧಾನಿ ಯವರಿಗೆ ಆಪ್ತವಾಗಿರುವುದರಿಂದ ಆ ಸಮೂಹಕ್ಕೆ ಅಪಾರ ಲಾಭ ದೊರೆತಿದೆ ಎಂಬುದೂ ಸೇರಿದಂತೆ ಆ ಸಮೂಹದ ಮೇಲೆ ಹೊರಿಸಲಾದ ಆರೋಪಗಳು ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿವೆ. ಹಾಗಾಗಿ, ವಿರೋಧ ಪಕ್ಷಗಳು ಮಾತ್ರವಲ್ಲದೆ ಇತರರು ಕೂಡ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ‘ನೀವು ಹಾಗೆ ಮಾಡಿಲ್ಲವೇ’ ಎಂದು ಕೇಳುವುದು, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವುದು, ಸ್ವಪ್ರತಿಷ್ಠೆ ತೋರುವುದು, ಟೊಳ್ಳು ಮಾತು ಆಡುವುದು ರಾಜಕೀಯ ವೇದಿಕೆಯೊಂದ ರಲ್ಲಿನ ಬೋಧನೆಗೆ ಸೂಕ್ತವಾಗಬಹುದೇನೋ. ಆದರೆ, ಸಂಸದೀಯ ವೇದಿಕೆಯಲ್ಲಿ ಇವು ನುಣುಚಿ ಕೊಳ್ಳುವಿಕೆ ಮತ್ತು ದಾರಿತಪ್ಪಿಸುವಿಕೆ ಎಂದೇ ಪರಿಗಣಿತವಾಗುತ್ತವೆ. ಸಂಸತ್ತು ಇರುವುದು ದೇಶ ಮತ್ತು ಜನರಿಗೆ ಮಹತ್ವದ್ದಾದ ವಿಚಾರಗಳ ಕುರಿತು ತರ್ಕಬದ್ಧವಾದ ಚರ್ಚೆ ಮತ್ತು ಸಂವಾದ ನಡೆಸುವುದಕ್ಕೆ. ಇಂತಹ ವಿಚಾರಗಳನ್ನು ಪ್ರಸ್ತಾಪಿಸುವ ಹೊಣೆಗಾರಿಕೆ ವಿರೋಧ ಪಕ್ಷಗಳಿಗೆ ಇದೆ; ಸರ್ಕಾರದಿಂದ ಆಗಿರಬಹುದಾದ ತಪ್ಪುಗಳು ಮತ್ತು ಲೋಪಗಳಿಗೆ ಆಡಳಿತ ನಡೆಸುತ್ತಿರುವವರನ್ನು ಹೊಣೆಗಾರರನ್ನಾಗಿ ಮಾಡುವುದೂ ವಿರೋಧ ಪಕ್ಷಗಳ ಕೆಲಸ. ತನ್ನ ನೀತಿಗಳು ಮತ್ತು ನಡವಳಿಕೆಗಳ ಬಗ್ಗೆ ಎತ್ತಲಾದ ಪ್ರಶ್ನೆಗಳಿಗೆ ಸರ್ಕಾರವು ಪ್ರಾಮಾಣಿಕವಾಗಿ ಮತ್ತು ನೇರವಾಗಿ ಉತ್ತರ ಹೇಳಬೇಕು. ಅದಾನಿ ಸಮೂಹಕ್ಕೆ ಸಂಬಂಧಿಸಿದಂತೆ ಆ ಸಮೂಹದ ವಹಿವಾಟು ಹಾಗೂ ರಾಜಕಾರಣ ಮತ್ತು ವ್ಯಾಪಾರದ ನಡುವಣ ನಂಟಿನ ಕುರಿತು ಕೇಳಲಾಗುತ್ತಿರುವ ಪ್ರಶ್ನೆಗಳು ಉತ್ತರಿಸಲು ಅರ್ಹವಲ್ಲ ಮತ್ತು ಪ್ರಧಾನಿಯವರು ಎಲ್ಲವನ್ನೂ ಮೀರಿದವರು ಎಂದು ಘೋಷಿಸಿ ತಳ್ಳಿಹಾಕುವುದು ಸರಿಯಲ್ಲ. ರಾಷ್ಟ್ರದ ಸ್ವತ್ತುಗಳನ್ನು ಪರಭಾರೆ ಮಾಡುವುದಕ್ಕಾಗಿ ನಡೆದ ಟೆಂಡರ್‌ಗಳಲ್ಲಿ ಅದಾನಿ ಸಮೂಹಕ್ಕೆ ಯಶಸ್ಸು ಸಿಕ್ಕಿದೆ; ಸಂಪತ್ತಿನ ಶ್ರೇಯಾಂಕದಲ್ಲಿ ಅದಾನಿ ಅವರ ಮೇಲೇರಿಕೆ ವಿಸ್ಮಯ ಮೂಡಿಸುವಂತಿದೆ; ಅದಾನಿ ಸಮೂಹದ ವ್ಯವಹಾರಗಳ ಕುರಿತು ಪರಿಶೀಲನೆ ನಡೆಸಬೇಕಿದ್ದ ನಿಯಂತ್ರಣ ಮತ್ತು ತನಿಖಾ ಸಂಸ್ಥೆಗಳು ಇತ್ತೀಚಿನ ವರ್ಷಗಳಲ್ಲಿ ಈ ಕೆಲಸಗಳನ್ನು ಮಾಡಿಲ್ಲ. ಮೋದಿ ಅವರು ಅದಾನಿ ಸಮೂಹದ ಹಿಂದೆ ಗಟ್ಟಿಯಾಗಿ ನಿಂತಿರುವುದೇ ಈ ಎಲ್ಲದಕ್ಕೂ ಕಾರಣ ಎಂಬ ಭಾವನೆ ಜನರಲ್ಲಿ ಬಲವಾಗಿ ನೆಲೆಯೂರಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದರಿಂದ ಮೋದಿ ಅವರು ಪಲಾಯನ ಮಾಡಬಾರದು. ಹಾಗೆ ಪಲಾಯನ ಮಾಡಿದರೆ ಅವರು ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.