ಸಂಪಾದಕೀಯ: ಕುಸ್ತಿಪಟುಗಳ ದೂರುಗಳಿಗೆ ಸ್ಪಂದಿಸದ ಸರ್ಕಾರದ ಧೋರಣೆ ಅಕ್ಷಮ್ಯ ಒಲಿಂಪಿಕ್ ಕೂಟದಲ್ಲಿ ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುವಂತಹ ಸಾಧನೆ ಮಾಡಿರುವ ಭಾರತದ ಕುಸ್ತಿಪಟುಗಳು ಸ್ವದೇಶದಲ್ಲಿಯೇ ತಮಗಾದ ಅನ್ಯಾಯದ ವಿರುದ್ಧ ಧ್ವನಿಯೆತ್ತಿ ಬೀದಿಗಿಳಿದಿದ್ದಾರೆ. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್‌ ಸಿಂಗ್ ಮತ್ತು ಕೆಲವು ಕೋಚ್‌ಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದೆಹಲಿಯಲ್ಲಿ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಇಷ್ಟಾಗಿಯೂ ಬ್ರಿಜ್‌ ಭೂಷಣ್‌ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್‌ ಕೂಡ ದಾಖಲಿಸಿಲ್ಲ. ಕೇಂದ್ರದ ಆಡಳಿತಾರೂಢ ಬಿಜೆಪಿ ಸಂಸದರೂ ಆಗಿರುವ ಬ್ರಿಜ್‌ ಭೂಷಣ್ ಪ್ರಭಾವಕ್ಕೆ ಪೊಲೀಸರು ಮಣಿದಿದ್ದಾರೆ ಎನ್ನುವ ಅನುಮಾನಗಳು ವ್ಯಕ್ತವಾಗಿವೆ. ವಿಶ್ವ ಚಾಂಪಿಯನ್‌ಷಿಪ್, ಒಲಿಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟಗಳಲ್ಲಿ ಪದಕ ಜಯಿಸಿರುವ ಪೈಲ್ವಾನರು ನೀಡಿರುವ ದೂರು ಹಾಗೂ ಮಾಡಿರುವ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಇದರಿಂದಾಗಿ ಜಗತ್ತಿನ ಮುಂದೆ ದೇಶ ತಲೆತಗ್ಗಿಸುವಂತಾಗಿದೆ. ಅಷ್ಟಕ್ಕೂ ಪೈಲ್ವಾನರ ಬಳಗವು ಈ ರೀತಿ ಧರಣಿ ಕುಳಿತಿರುವುದು ಇದು ಎರಡನೇ ಸಲ. ಮೂರು ತಿಂಗಳ ಹಿಂದೆ ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಸಾಕ್ಷಿ ಮಲಿಕ್, ರವಿ ದಹಿಯಾ, ಬಜರಂಗ್ ಪೂನಿಯಾ ಸೇರಿದಂತೆ ಹಲವು ಪೈಲ್ವಾನರು ದೆಹಲಿಯ ಜಂತರ್‌ ಮಂತರ್‌ನಲ್ಲಿ ಮೂರು ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಿದ್ದರು. ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಆಗ ಪ್ರಕರಣಗಳ ತನಿಖೆಗೆ ಕೇಂದ್ರ ಕ್ರೀಡಾ ಇಲಾಖೆಯು ಒಲಿಂಪಿಯನ್ ಬಾಕ್ಸಿಂಗ್ ಪಟು ಮೇರಿ ಕೋಮ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಅಲ್ಲದೆ ಆರೋಪಿ ಬ್ರಿಜ್ ಭೂಷಣ್ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿಯೂ ಹೇಳಿತ್ತು. ಆದರೆ ಹೇಳಿದ ರೀತಿ ಸರ್ಕಾರ ನಡೆದುಕೊಳ್ಳಲಿಲ್ಲ. ಸಮಿತಿಯು ನೀಡಿದ ವರದಿಯನ್ನೂ ಬಹಿರಂಗಪಡಿಸಿಲ್ಲ. ಇದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಆರೋಪಿಗಳು ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾರೆ, ಅಲ್ಲದೆ ಸಾಕ್ಷ್ಯ ನಾಶಗೊಳಿಸಲು ಯತ್ನಿಸಿದ್ದಾರೆ ಮತ್ತು ದೂರು ಹಿಂಪಡೆಯಲು ಸಂತ್ರಸ್ತರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದೂ ಧರಣಿನಿರತ ಕುಸ್ತಿಪಟುಗಳು ದೂರಿದ್ದಾರೆ. ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳು ತಮ್ಮ ಬಳಿ ಇವೆ ಎಂದೂ ಕ್ರೀಡಾಪಟುಗಳು ಹೇಳಿದ್ದಾರೆ. ಆದರೂ ಕ್ರಮ ಜರುಗಿಸಿಲ್ಲ ಎಂಬುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಸಿಂಗ್ ಒಂದು ದಶಕದಿಂದ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾರೆ. ಸರ್ಕಾರ ಮತ್ತು ಕ್ರೀಡಾಕ್ಷೇತ್ರದಲ್ಲಿ ಬಹಳ ಪ್ರಭಾವ ಹೊಂದಿದ್ದಾರೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ ಕುಸ್ತಿಪಟುಗಳಲ್ಲಿ ಹೆಚ್ಚಿನವರು ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವವರು. ಇದೀಗ ಕೆಲವು ವಿರೋಧ ಪಕ್ಷಗಳು ಕುಸ್ತಿಪಟುಗಳ ಹೋರಾಟಕ್ಕೆ ಬೆಂಬಲ ಸೂಚಿಸಿವೆ. ಇದರಿಂದಾಗಿ ಈ ವಿಷಯವು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಆದರೆ, ಯಾರದೋ ಬೆಂಬಲ ಅಥವಾ ರಾಜಕಾರಣಿಗಳ ಆರೋಪ– ಪ್ರತ್ಯಾರೋಪಗಳಿಗಿಂತ ಕ್ರೀಡೆ ಹಾಗೂ ದೇಶದ ಗೌರವ ಪ್ರಮುಖವಾದುದು. ಕುಸ್ತಿ, ಅಥ್ಲೆಟಿಕ್ಸ್‌ ಸೇರಿದಂತೆ ಬಹಳಷ್ಟು ಕ್ರೀಡೆಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳ ಹೆಣ್ಣುಮಕ್ಕಳು ಪದಕ ಸಾಧನೆಗಳನ್ನೂ ಮಾಡುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಸುರಕ್ಷಿತ ವಾತಾವರಣ ಸೃಷ್ಟಿಸಿಕೊಡುವುದು ಸರ್ಕಾರ ಹಾಗೂ ಸಮಾಜದ ಕರ್ತವ್ಯ. ಆದರೆ ಖ್ಯಾತನಾಮ ಕುಸ್ತಿಪಟುಗಳು ಎರಡು ಬಾರಿ ರಸ್ತೆಗಿಳಿದು ಧರಣಿ ಮಾಡಿದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಆಳುವವರ ಇಂತಹ ಧೋರಣೆಯು ದುಷ್ಟಶಕ್ತಿಗಳಿಗೆ ಮತ್ತಷ್ಟು ಬಲ ತುಂಬುತ್ತದೆ. ಅಪರಾಧಗಳು ಹೆಚ್ಚಿದಂತೆ ಹೆಣ್ಣುಮಕ್ಕಳು ಕ್ರೀಡೆಗಳಿಂದ ವಿಮುಖರಾಗುವ ಅಪಾಯವಿದೆ. ಇದರಿಂದಾಗಿ ಕ್ರೀಡಾರಂಗದಲ್ಲಿ ಹೆಣ್ಣುಮಕ್ಕಳ ಸಾಧನೆಯ ಓಟಕ್ಕೆ ತಡೆ ಬೀಳುತ್ತದೆ. ಇದು ದೇಶಕ್ಕೆ ಶೋಭೆಯಲ್ಲ. ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಣ್ಣುಮಕ್ಕಳು ಧೈರ್ಯದಿಂದ ಕ್ರೀಡಾಸಾಧನೆ ಮಾಡುವಂತಹ ವಾತಾವರಣ ನಿರ್ಮಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.