ಸಂಪಾದಕೀಯ: ನಕ್ಸಲರ ದಾಳಿ ಖಂಡನೀಯ– ಸುರಕ್ಷತೆಯ ನಿರ್ಲಕ್ಷ್ಯ ಅಕ್ಷಮ್ಯ ಛತ್ತೀಸಗಢದ ದಾಂತೇವಾಡ ಜಿಲ್ಲೆಯ ಅರನ್‌ಪುರ ಎಂಬಲ್ಲಿ ಪೊಲೀಸರು (ಜಿಲ್ಲಾ ಮೀಸಲು ಪಡೆ) ಸಂಚರಿಸುತ್ತಿದ್ದ ವಾಹನವನ್ನು ನಕ್ಸಲರು ಕಚ್ಚಾ ಬಾಂಬ್‌ ‍ಬಳಸಿ ಸ್ಫೋಟಿಸಿದ್ದಾರೆ. ವಾಹನದಲ್ಲಿದ್ದ 10 ಪೊಲೀಸರು ಮತ್ತು ವಾಹನದ ಚಾಲಕ ಮೃತಪಟ್ಟಿದ್ದಾರೆ. ಇದು ಅತ್ಯಂತ ಹೇಡಿತನದ ಹೀನಾಯ ಕೃತ್ಯ. ನಕ್ಸಲ್‌ ಚಟುವಟಿಕೆ ತಡೆ ಕಾರ್ಯಾಚರಣೆ ಮುಗಿಸಿಕೊಂಡು ನಾಲ್ಕು ವಾಹನಗಳು ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಲಾಗಿದೆ. ನಕ್ಸಲ್‌ ಬಾಧಿತವಾದ ಈ ಪ್ರದೇಶದಲ್ಲಿ ಪೊಲೀಸರ ಸಂಚಾರದ ಸಂದರ್ಭದಲ್ಲಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿರಲಿಲ್ಲ ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ. ನಕ್ಸಲರು ಅಥವಾ ಭಯೋತ್ಪಾದಕರು ಇಂತಹ ಕೃತ್ಯ ಎಸಗಿದಾಗ ಸುರಕ್ಷಾ ಕ್ರಮಗಳನ್ನು ಅನುಸರಿಸಿರಲಿಲ್ಲ ಎಂಬ ಚರ್ಚೆ ನಡೆಯುವುದು ಸಾಮಾನ್ಯವಾಗುತ್ತಿದೆ. ಆದರೆ, ಅದರಿಂದ ಸರ್ಕಾರ ಮತ್ತು ಪೊಲೀಸ್‌ ಇಲಾಖೆಯು ಪಾಠ ಕಲಿತುಕೊಂಡಂತೆ ಕಾಣುತ್ತಿಲ್ಲ. ಖಾಸಗಿ ಮಿನಿವ್ಯಾನ್‌ನಲ್ಲಿ ಪೊಲೀಸರು ಸಂಚರಿಸಿದ್ದು ಸರಿಯಾದ ನಡೆ ಅಲ್ಲ. ನಕ್ಸಲರು ಕಚ್ಚಾ ರಸ್ತೆಯಲ್ಲಿ ಕಚ್ಚಾ ಬಾಂಬ್‌ ಅನ್ನು ಮೊದಲೇ ಹೂತಿಟ್ಟಿದ್ದರು ಮತ್ತು ಪೊಲೀಸರಿದ್ದ ವಾಹನ ಸಂಚರಿಸುತ್ತಿದ್ದಾಗ ರಿಮೋಟ್ ಬಳಸಿ ಬಾಂಬ್‌ ಸ್ಫೋಟಗೊಳ್ಳುವಂತೆ ಮಾಡಿದ್ದಾರೆ. ಪೊಲೀಸರು ಸಂಚರಿಸುವ ಮುನ್ನ ರಸ್ತೆಯ ಸುರಕ್ಷತೆಯ ಪರಾಮರ್ಶೆ ನಡೆದಿರಲಿಲ್ಲ ಎಂಬುದು ಕಳವಳವಕಾರಿ. ಹಾಗೆಯೇ ಅರನ್‌ಪುರ ಪೊಲೀಸ್‌ ಶಿಬಿರದ ಸಮೀಪದಲ್ಲಿಯೇ ಈ ಕೃತ್ಯ ನಡೆದಿದೆ ಎಂಬುದು ಆತಂಕವನ್ನು ಇನ್ನಷ್ಟು ಹೆಚ್ಚಿಸುವ ವಿಚಾರ. ಪೊಲೀಸರು ಸಂಚರಿಸುವುದಕ್ಕೂ ಮುನ್ನ ರಸ್ತೆ ಸುರಕ್ಷತೆ ಪರಿಶೀಲನಾ ತಂಡವು ರಸ್ತೆಯ ಎರಡೂ ಭಾಗಗಳಲ್ಲಿ ಅಪಾಯಕಾರಿಯಾದ ಯಾವುದೇ ಚಲನವಲನ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕೆಲಸ ಆಗಿಲ್ಲ ಎಂಬುದು ಚಿಂತೆಯ ವಿಷಯ. ಮಾರ್ಚ್‌–ಜೂನ್‌ ಅವಧಿಯಲ್ಲಿ ಭದ್ರತಾ ಪಡೆಗಳ ಮೇಲೆ ಗರಿಷ್ಠ ಪ್ರಮಾಣದಲ್ಲಿ ದಾಳಿ ನಡೆಸುವ ಕಾರ್ಯತಂತ್ರವನ್ನು (ಟ್ಯಾಕ್ಟಿಕಲ್‌ ಕೌಂಟರ್‌ ಒಫೆನ್ಸಿವ್‌ ಕ್ಯಾಂಪೇನ್‌) ನಕ್ಸಲರು ಕೈಗೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಈ ಅವಧಿಯಲ್ಲಿ ಹೆಚ್ಚಿನ ದಾಳಿ ನಡೆಸಲು ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ, ಈ ಬಾರಿ ನಕ್ಸಲ್‌ ಚಟುವಟಿಕೆ ತೀವ್ರವಲ್ಲದ ಅರನ್‌ಪುರ ಪ್ರದೇಶದಲ್ಲಿ ನಕ್ಸಲರು ದಾಳಿ ನಡೆಸಿದ್ದಾರೆ. ನಕ್ಸಲ್‌ ಚಟುವಟಿಕೆಯ ಕೇಂದ್ರವಾಗಿರುವ ಸುಕ್ಮಾ ಅಥವಾ ಬಿಜಾಪುರವನ್ನು ಬಿಟ್ಟು ಬೇರೆಡೆ ದಾಳಿ ನಡೆಸಿದ್ದಾರೆ. ನಕ್ಸಲ್‌ ಚಟುವಟಿಕೆ ಹೆಚ್ಚಾಗಿರುವ ಪ್ರದೇಶದಲ್ಲಿ ಭದ್ರತಾ ಪಡೆಗಳು ಹೆಚ್ಚು ಜಾಗರೂಕವಾಗಿರುತ್ತವೆ ಎಂಬುದು ಅರನ್‌ಪುರವನ್ನು ಆಯ್ದುಕೊಳ್ಳಲು ಕಾರಣ ಆಗಿರಬಹುದು. ತಮ್ಮ ಇರುವಿಕೆ ತೋರಿಸಿಕೊಳ್ಳವುದಕ್ಕಾಗಿ ನಕ್ಸಲರು ಈ ದಾಳಿ ಎಸಗಿರಬಹುದು. ಆದರೆ, ಅವರು ತೀರಾ ದುರ್ಬಲವಾಗಿದ್ದಾರೆ ಮತ್ತು ಹತಾಶೆಯಿಂದ ಈ ದಾಳಿ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ನಕ್ಸಲ್‌ ಪ್ರಾಬಲ್ಯವಿರುವ ಪ್ರದೇಶದ ವಿಸ್ತೀರ್ಣವು ದಿನ ಕಳೆದಂತೆ ಕುಗ್ಗುತ್ತಿದೆ. ಈ ಬಾರಿ ದಾಳಿ ನಡೆಯಬಹುದು ಎಂಬ ಗುಪ್ತಚರ ಮಾಹಿತಿ ಇತ್ತು. ಆದರೆ, ಅವರು ದಾಳಿ ನಡೆಸಬಹುದಾದ ಸ್ಥಳ ಮತ್ತು ಸಮಯದ ಕುರಿತು ತಿಳಿದಿರಲಿಲ್ಲ. ಹಾಗಿದ್ದರೂ ಭದ್ರತಾ ಪಡೆಗಳ ಸಂಚಾರದ ಸಂದರ್ಭದಲ್ಲಿ ಗರಿಷ್ಠ ಎಚ್ಚರ ವಹಿಸದೇ ಇದ್ದುದು ಅಕ್ಷಮ್ಯ. ನಕ್ಸಲ್‌ ಚಟುವಟಿಕೆಗಳನ್ನು ಮಟ್ಟ ಹಾಕುವ ಭದ್ರತಾ ಪಡೆಗಳ ಪ್ರಯತ್ನ ಇತ್ತೀಚಿನ ವರ್ಷಗಳಲ್ಲಿ ಫಲಪ್ರದವಾಗುತ್ತಿದೆ. ಸರ್ಕಾರ ಕೂಡ ಹಿಂದುಳಿದ ಮತ್ತು ನಕ್ಸಲರ ಪ್ರಭಾವ ಇರುವ ಪ್ರದೇಶಗಳಲ್ಲಿ ಅಭಿವೃದ್ಧಿಯ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಹೀಗಾಗಿ, ನಕ್ಸಲರ ಪ್ರಾಬಲ್ಯದ ಪ್ರದೇಶ ಗಣನೀಯವಾಗಿ ಕುಗ್ಗಿದೆ. ನಕ್ಸಲ್‌ ನಿಯಂತ್ರಣದಲ್ಲಿ ಭದ್ರತಾ ಪಡೆಗಳ ಪಾತ್ರವು ಶ್ಲಾಘನೀಯ. ಜೀವದ ಹಂಗು ತೊರೆದು ಹೋರಾಟ ನಡೆಸುವ ಭದ್ರತಾ ಸಿಬ್ಬಂದಿಯ ಜೀವದ ಬಗ್ಗೆ ಅಸಡ್ಡೆ ತೋರಿದ್ದು ಸರಿಯಲ್ಲ. ಅರನ್‌ಪುರ ದಾಳಿಯ ಕುರಿತು ಸಮಗ್ರವಾದ ತನಿಖೆ ನಡೆಯಬೇಕು. ಭದ್ರತಾ ಲೋಪ ಆಗಿದೆಯೇ, ಗುಪ್ತಚರ ಮಾಹಿತಿಯನ್ನು ಲಘುವಾಗಿ ಪರಿಗಣಿಸಲಾಗಿದೆಯೇ ಎಂಬ ಕುರಿತೂ ತನಿಖೆ ಆಗಬೇಕು. ಭದ್ರತಾ ಲೋಪವಾಗಿದ್ದರೆ ಅದಕ್ಕೆ ಕಾರಣರಾದವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕು. ಇಂತಹ ದಾಳಿಗಳಿಗೆ ಮುಂದೆಂದೂ ಅವಕಾಶ ಸಿಗಬಾರದು. ಅಂತಹ ಕ್ರಮ ಕೈಗೊಳ್ಳಬೇಕು. ಯಾವುದೇ ಲೋಪಗಳಿಗೆ ಅವಕಾಶವಿರದ ರೀತಿಯಲ್ಲಿ ಕಾರ್ಯಾಚರಣೆ ನಿಯಮ ರೂಪಿಸಬೇಕು ಮತ್ತು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.