ಸಂಪಾದಕೀಯ: ಕೇಶವಾನಂದ ಭಾರತಿ ಪ್ರಕರಣಕ್ಕೆ ಐವತ್ತು– ಜನಹಿತವನ್ನು ಕಾಯ್ದ ಸ್ಮರಣೀಯ ತೀರ್ಪು ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರವು ಸಂಸತ್ತಿಗೆ ಇದೆಯಾದರೂ, ಆ ಅಧಿಕಾರಕ್ಕೆ ಹಲವು ಮಿತಿಗಳು ಇವೆ ಎಂಬುದನ್ನು ಹೇಳುವ ‘ಸಂವಿಧಾನದ ಮೂಲ ಸ್ವರೂಪ’ ಸಿದ್ಧಾಂತಕ್ಕೆ ಸುಪ್ರೀಂ ಕೋರ್ಟ್‌ ಸ್ಪಷ್ಟ ರೂಪವನ್ನು ನೀಡಿದ್ದಕ್ಕೆ ಈಗ ಐವತ್ತು ವರ್ಷಗಳು ತುಂಬಿವೆ. ಈ ಹೊತ್ತಿನಲ್ಲಿ ಈ ಸಿದ್ಧಾಂತವು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಸಂವಿಧಾನಕ್ಕೆ ಮೂಲಸ್ವರೂಪ ಇದೆ, ಸಂಸತ್ತು ಯಾವ ಕಾರಣಕ್ಕೂ ಆ ಮೂಲ ಸ್ವರೂಪಕ್ಕೆ ತಿದ್ದುಪಡಿ ತರುವ ಅಧಿಕಾರವನ್ನು ಹೊಂದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಹೇಳಿದ್ದು ಕೇಶವಾನಂದ ಭಾರತಿ ಪ್ರಕರಣದಲ್ಲಿ. ಈ ತೀರ್ಪು ಬಂದು ಐವತ್ತು ವರ್ಷಗಳಾಗಿರುವ ಕಾರಣ, ಪ್ರಕರಣದ ಬಗ್ಗೆ ವಿಸ್ತೃತ ಮಾಹಿತಿ ನೀಡುವ ವೆಬ್‌ಪುಟವೊಂದನ್ನು ಸುಪ್ರೀಂ ಕೋರ್ಟ್ ಈಚೆಗೆ ಅನಾವರಣಗೊಳಿಸಿದೆ. ಯಾವೆಲ್ಲ ಅಂಶಗಳು ಸಂವಿಧಾನದ ಮೂಲಸ್ವರೂಪದ ವ್ಯಾಖ್ಯಾನದ ಅಡಿಯಲ್ಲಿ ಬರುತ್ತವೆ ಎಂಬುದನ್ನು ಕೋರ್ಟ್‌ ಕಾಲಕಾಲಕ್ಕೆ ಹೇಳುತ್ತ ಬಂದಿದೆ. ಪ್ರಜಾತಂತ್ರ ವ್ಯವಸ್ಥೆ, ಕಾನೂನಿನ ಅನ್ವಯ ಆಡಳಿತ ವ್ಯವಸ್ಥೆ ಮುನ್ನಡೆಯುವುದು, ಮೂಲಭೂತ ಹಕ್ಕುಗಳು, ಧರ್ಮನಿರಪೇಕ್ಷ ತತ್ವ, ನ್ಯಾಯಾಂಗಕ್ಕೆ ಇರುವ ಪರಾಮರ್ಶೆಯ ಅಧಿಕಾರ, ಒಕ್ಕೂಟ ವ್ಯವಸ್ಥೆ... ಇವೆಲ್ಲ ಸಂವಿಧಾನದ ಮೂಲ ಸ್ವರೂಪಗಳ ಭಾಗ ಎಂದು ಕೋರ್ಟ್‌ ಹೇಳಿದೆ. ಸಂವಿಧಾನಕ್ಕೆ ಮೂಲ ಸ್ವರೂಪವೊಂದು ಇದೆ, ಯಾವುದೇ ಸಂದರ್ಭದಲ್ಲಿ ಮೂಲಸ್ವರೂಪಕ್ಕೆ ಬದಲಾವಣೆ ತರಲು ಅವಕಾಶ ಇಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌, ಅದರಲ್ಲೂ ನಿರ್ದಿಷ್ಟವಾಗಿ ಕೇಶವಾನಂದ ಭಾರತಿ ಪ್ರಕರಣವು, ಸಂವಿಧಾನವನ್ನು ರಕ್ಷಿಸುವ ಕೆಲಸ ಮಾಡಿದೆ. ಶಾಸಕಾಂಗವು ಅನುಮೋದನೆ ನೀಡಿದ ಹಲವು ಮಸೂದೆಗಳು ಎಷ್ಟರಮಟ್ಟಿಗೆ ಸಾಂವಿಧಾನಿಕ ಎಂಬುದನ್ನು ನ್ಯಾಯಾಂಗವು ನಂತರದ ದಿನಗಳಲ್ಲಿ, ಕೇಶವಾನಂದ ಭಾರತಿ ಪ್ರಕರಣದ ತೀರ್ಪಿನ ಆಧಾರದಲ್ಲಿ ಪರಾಮರ್ಶೆ ನಡೆಸಿದೆ. ‘ಪರಿಸ್ಥಿತಿಯು ಬಹಳ ಸಂಕೀರ್ಣವಾದ ಸಂದರ್ಭಗಳಲ್ಲಿ, ಸಂವಿಧಾನದ ವ್ಯಾಖ್ಯಾನಕಾರರಿಗೆ ಹಾಗೂ ಸಂವಿಧಾನವನ್ನು ಅನುಷ್ಠಾನಕ್ಕೆ ತರುವವರಿಗೆ ಮುಂದಿನ ದಾರಿ ಹೇಗಿರಬೇಕು ಎಂಬುದನ್ನು ಹೇಳುವ ದಿಗ್ದರ್ಶಕ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮೂಲ ಸ್ವರೂಪ ಸಿದ್ಧಾಂತದ ಬಗ್ಗೆ ಹೇಳಿದ್ದಾರೆ. ಭಾರತದ ಸುಪ್ರೀಂ ಕೋರ್ಟ್‌ ಮೂಲ ಸ್ವರೂಪದ ಬಗ್ಗೆ ತೀರ್ಪು ನೀಡಿದ ನಂತರದಲ್ಲಿ, ಬೇರೆ ದೇಶಗಳಲ್ಲಿನ ನ್ಯಾಯಾಂಗ ವ್ಯವಸ್ಥೆಗಳು ತಮ್ಮಲ್ಲಿಯೂ ಈ ತೀರ್ಪಿನಲ್ಲಿರುವ ಚಿಂತನೆಗಳನ್ನು ಅಳವಡಿಸಿಕೊಂಡಿವೆ. ಇದು ಈ ತೀರ್ಪಿನ ಮಹತ್ವವನ್ನು ಹೇಳುವ ಒಂದು ಅಂಶ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲವಾದ ಅಡಿಪಾಯವೊಂದನ್ನು ಹಾಕಿಕೊಟ್ಟಿರುವ ತೀರ್ಪು ಇದು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಸ್ಥಿರತೆ ದಕ್ಕಿರುವುದರಲ್ಲಿ ಈ ತೀರ್ಪಿನ ಕೊಡುಗೆಯೂ ಇದೆ. ಸಂವಿಧಾನವನ್ನು ಸಂಸತ್ತು ಅನಿರ್ಬಂಧಿತವಾಗಿ ಬದಲಾಯಿಸುವಂತೆ ಇಲ್ಲ ಎಂಬ ನಿಲುವು ಸುಪ್ರೀಂ ಕೋರ್ಟ್‌ 1967ರಲ್ಲಿ ಗೋಲಕನಾಥ್ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿಯೂ ವ್ಯಕ್ತವಾಗಿದೆ. ಮೂಲಸ್ವರೂಪ ಸಿದ್ಧಾಂತ ತರ್ಕಬದ್ಧವಾಗಿಯೇ ಇದೆ. ಏಕೆಂದರೆ, ಸಂವಿಧಾನದ ಕಾರಣದಿಂದಾಗಿ ಸೃಷ್ಟಿಯಾಗಿರುವ ಸಂಸತ್ತಿಗೆ, ಸಂವಿಧಾನದ ಮೂಲಸ್ವರೂಪವನ್ನೇ ಬದಲಾಯಿಸುವ ಅಧಿಕಾರ ಇರುವುದು ಸರಿಯಲ್ಲ. ದೇಶದ ಸಂವಿಧಾನವು ಹಿಂದಿಗಿಂತಲೂ ಇಂದು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ಉಪರಾಷ್ಟ್ರಪತಿ ಹುದ್ದೆಯು ಸಾಂವಿಧಾನಿಕವಾಗಿ ಬಹಳ ಮಹತ್ವದ್ದು. ಆ ಹುದ್ದೆಯಲ್ಲಿರುವ ಜಗದೀಪ್ ಧನಕರ್ ಅವರೇ ಮೂಲಸ್ವರೂಪ ಸಿದ್ಧಾಂತವನ್ನು ಪ್ರಶ್ನಿಸಿದ್ದಾರೆ. ಸಂವಿಧಾನಕ್ಕೆ ಸಂಸತ್ತು ತರುವ ತಿದ್ದುಪಡಿಗಳ ವಿಚಾರವಾಗಿ ತೀರ್ಮಾನ ಕೊಡುವ ಅಧಿಕಾರವು ಸುಪ್ರೀಂ ಕೋರ್ಟ್‌ಗೆ ಇಲ್ಲ ಎಂಬ ಅರ್ಥ ಬರುವ ಮಾತುಗಳನ್ನು ಕೂಡ ಧನಕರ್ ಅವರು ಆಡಿದ್ದಾರೆ. ಸಂವಿಧಾನಕ್ಕೆ ಬೇರೆ ಬೇರೆ ದಿಕ್ಕುಗಳಿಂದ ಸವಾಲುಗಳು ಎದುರಾಗಿದ್ದರೂ, ಉಪರಾಷ್ಟ್ರಪತಿ ಹುದ್ದೆಯಲ್ಲಿ ಇರುವವರಿಂದ ಇಂತಹ ಸವಾಲು ಎದುರಾಗಿರಲಿಲ್ಲ. ಹೀಗಾಗಿ, ಮೂಲಸ್ವರೂಪ ಸಿದ್ಧಾಂತಕ್ಕೆ ಬೆಂಬಲವಾಗಿ ಮಾತನಾಡುವುದು ಹಾಗೂ ಅದರ ಮಹತ್ವವನ್ನು ಮತ್ತೆ ಸಾರಿ ಹೇಳುವುದು ಈ ಹೊತ್ತಿನಲ್ಲಿ ಪ್ರಮುಖವಾಗುತ್ತದೆ. ಸಂವಿಧಾನದ ಮೂಲಸ್ವರೂಪವನ್ನು ರಕ್ಷಿಸುವ ಹೊಣೆ ಇರುವುದು ಸುಪ್ರೀಂ ಕೋರ್ಟ್‌ ಮೇಲೆ ಮಾತ್ರವೇ ಅಲ್ಲ ಎಂಬುದು ಮುಖ್ಯವಾಗಿ ನೆನಪಿಡಬೇಕಾದ ಅಂಶ. ಸಂವಿಧಾನ ಸಂರಕ್ಷಣೆಗೆ ಬಹುದೊಡ್ಡ ಹೊಣೆ ಇರುವುದು ದೇಶದ ಜನರ ಮೇಲೆ. ಏಕೆಂದರೆ ಸಂವಿಧಾನವು ಅಭಿವ್ಯಕ್ತಿಸುವುದು ಜನರ ಸಾಮೂಹಿಕ ಇಚ್ಛೆಯನ್ನು. ಸಂವಿಧಾನದ ಮೂಲಸ್ವರೂಪವು ಕಾಪಾಡುವುದು ಜನರ ಹಿತವನ್ನು. ಜನಹಿತವನ್ನು ಕಾಯುವ ಕೆಲಸ ಮಾಡಿರುವ ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಸದಾ ಸ್ಮರಣೀಯ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.